ಮಾಣಿ: ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿಮಾನ ಬೆಳೆಸುವುದು ಮತ್ತು ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಅರಿವು ಮೂಡಿಸುವುದು ಸರ್ವಶ್ರೇಷ್ಠ ಕೆಲಸವಾಗಿದೆ. ಸಮಾಜದ ಆಗುಹೋಗುಗಳಿಗೆ ತಮ್ಮ ಭಾವನೆಗಳ ಬರಹದ ಮೂಲಕ ರೂಪ ನೀಡಿ ಸಾಹಿತ್ಯ ಕೃಷಿ ಮಾಡುವ ಆಹ್ವಾನಿತ ಕವಿಗಳಿಗೆ ನಮ್ಮ ಶಾಲಾ ವೇದಿಕೆ ಯಾವತ್ತೂ ಮುಕ್ತ ಸ್ವಾಗತ ನೀಡುತ್ತದೆ ಎಂದು ವಿದ್ಯಾಭಿವರ್ಧಕ ಸಂಘ (ರಿ) ಮಾಣಿಯ ಅಧ್ಯಕ್ಷರಾದ ರೊಟೆರಿಯನ್ ಕಿರಣ್ ಹೆಗ್ಡೆ ನುಡಿದರು.
ಅವರು ಕರ್ನಾಟಕ ಪ್ರೌಢಶಾಲೆ ಮಾಣಿ ಇಲ್ಲಿ, ಕರ್ನಾಟಕ ರಾಜ್ಯ ಬರಹಗಾರರ ವೇದಿಕೆ ಹೂವಿನಹಡಗಲಿ (ರಿ) ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಘಟಕ, ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ- ಬಂಟ್ವಾಳ ತಾಲೂಕು ಸಮಿತಿ, ಲಯನ್ಸ್ ಕ್ಲಬ್ ಮಾಣಿ ಹಾಗೂ ಕರ್ನಾಟಕ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ರಚನಾ ಕಮ್ಮಟ ಹಾಗೂ ಆಹ್ವಾನಿತ ಕವಿಗಳ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಮಾಣಿಯ ಉಪಾಧ್ಯಕ್ಷರಾದ ನಾರಾಯಣ ಸಾಲಿಯಾನ್ ನೆರವೇರಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರು ಹಾಗೂ ಬರಹಗಾರರ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಜಯಾನಂದ ಪೆರಾಜೆ, "ನಮ್ಮ ಭಾವನೆಗಳನ್ನು ಕವಿತೆಯಾಗಿ, ಕಥೆಯಾಗಿ, ಚುಟುಕಾಗಿ, ಪ್ರಬಂಧವಾಗಿ ಅಥವಾ ಕಾದಂಬರಿಯಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಳವಡಿಸಿದಾಗಲೇ ಭಾಷೆ ಉಳಿಯಲು ಸಾಧ್ಯ. ಇಲ್ಲವಾದರೆ ಭಾಷೆಯ ಜೊತೆಗೆ ಒಂದು ಸಂಸ್ಕೃತಿಯೇ ನಾಶವಾಗಬಹುದು" ಎಂದು ಅಭಿಪ್ರಾಯಪಟ್ಟರು.
ವಿಶೇಷ ಕಾರ್ಯಾಗಾರ ಮತ್ತು ಸ್ಪರ್ಧೆ:
ಬಂಟ್ವಾಳ ತಾಲೂಕು ಕಚುಸಾಪ ಅಧ್ಯಕ್ಷರಾದ ರವೀಂದ್ರ ಕುಕ್ಕಾಜೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆ ಕುರಿತು ಕಾರ್ಯಾಗಾರ ನಡೆಸಿ, ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಸಮಾರಂಭದಲ್ಲಿ ಬಾಲ ವಿಕಾಸ ವಿದ್ಯಾ ಸಂಸ್ಥೆಯ ಸಂಚಾಲಕರಾದ ಜೆ. ಪ್ರಹ್ಲಾದ ಶೆಟ್ಟಿ, ಲಯನ್ಸ್ ಕ್ಲಬ್ ಕೋಶಾಧಿಕಾರಿ ರೊನಾಲ್ಡ್ ಮೊನೀಸ್, ಸದಸ್ಯರಾದ ಸಚ್ಚಿದಾನಂದ ರೈ ಪಾಳ್ಯ, ಶಾಲಾ ಸಂಚಾಲಕರಾದ ಹಾಜಿ ಇಬ್ರಾಹಿಂ ಕೆ. ಹಾಗೂ ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕವನ ವಾಚಿಸಿದರು. ಬರಿಮಾರು ಶಾಲೆಯ ಲಕ್ಷಿತಾ, ಅಂಶಿಕ, ಅನಂತಾಡಿ ಶಾಲೆಯ ಪುಣ್ಯಶ್ರೀ, ಸೃಷ್ಟಿ, ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ತನ್ವಿ ಪೂಜಾರಿ, ಜಾಹ್ನವಿ ಹಾಗೂ ಕರ್ನಾಟಕ ಪ್ರೌಢಶಾಲೆಯ ಶ್ರುತಿಜ, ಸ್ವಸ್ತಿಕ, ಅನ್ವಿತ, ಲೋಲಾಕ್ಷಿ, ಸಂಭ್ರಮ್, ಕೌಶಿಕ್ ಮತ್ತು ಚೇತನ ಕವನ ವಾಚನ ಮಾಡಿದರು. ಹಾಗೆಯೇ ಆಹ್ವಾನಿತ ಕವಿಗಳಾದ ಆನಂದ ರೈ ಅಡ್ಕಸ್ಥಳ, ಮಲ್ಲಿಕಾ ಜೆ. ರೈ, ಪೂರ್ಣಿಮಾ ಪೆರ್ಲಂಪಾಡಿ, ನಾರಾಯಣ ಕುಂಬ್ರ, ರೋಹಿಣಿ ಆಚಾರ್ಯ, ಆಯಿಷಾ ಪೆರ್ನೆ, ಹರ್ಷಿತಾ ಕಡೇ ಶಿವಾಲಯ, ಪೂವಪ್ಪ ನೇರಳಕಟ್ಟೆ, ಜಯಶ್ರೀ ಶೆಣೈ ಬಿಸಿರೋಡು, ಶಾಂತಾ ಪುತ್ತೂರು ಮತ್ತು ರವೀಂದ್ರ ಕುಕ್ಕಾಜೆ ತಮ್ಮ ಸುಂದರ ಕವನಗಳನ್ನು ವಾಚಿಸಿ ರಂಜಿಸಿದರು.
ಸನ್ಮಾನ ಹಾಗೂ ಗೌರವ ಸಮರ್ಪಣೆ:
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಜಯಾನಂದ ಪೆರಾಜೆ ಹಾಗೂ ಕಾರ್ಯಕ್ರಮದ ಸಂಘಟಕ, ತಾಲೂಕು ಬರಹಗಾರರ ವೇದಿಕೆಯ ಅಧ್ಯಕ್ಷರಾದ ಶಿಕ್ಷಕ ಜಯರಾಮ್ ಕಾಂಚನ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು ಹಾಗೂ ಪತ್ರಕರ್ತ ಪ್ರದೀಪ್ ಅವರನ್ನು ಗೌರವಿಸಲಾಯಿತು. ಶಿಕ್ಷಕ ಜಯರಾಮ್ ಕಾಂಚನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕ.ಚು.ಸಾ.ಪ. ರಾಜ್ಯ ಮಹಿಳಾ ಘಟಕ ಮತ್ತು ಬರಹಗಾರರ ವೇದಿಕೆಯ ಉಪಾಧ್ಯಕ್ಷೆಯೂ ಆದ ಶಿಕ್ಷಕಿ ಡಾ. ಶಾಂತಾ ಪುತ್ತೂರು ವಂದಿಸಿದರು. ವಿದ್ಯಾರ್ಥಿಗಳಾದ ಮೊಹಮ್ಮದ್ ಶಫೀರ್, ಪ್ರತೀಕ್, ಪ್ರಣಾಮ್, ದಿಶಾನ್ ಅಕ್ಷಯ್, ರೋಹಿತ್ ಹಾಗೂ ಚಿಂತನ್ ಕಾರ್ಯಕ್ರಮದ ನಿರ್ವಹಣೆಗೆ ಸಹಕರಿಸಿದರು.

