ಸುರತ್ಕಲ್: "ಕನ್ನಡ ನಮ್ಮ ಭಾವನೆಗಳಿಗೆ, ನಡೆ-ನುಡಿ ಮತ್ತು ರೀತಿ-ನೀತಿಗಳಿಗೆ ಜೀವ ಕೊಡುವ ಭಾಷೆಯಾಗಿದೆ. ನಮ್ಮ ನಾಡಿನ ಇತಿಹಾಸ, ಸಾಹಿತ್ಯ, ಕಲೆ ಹಾಗೂ ಶಿಕ್ಷಣವು ಬಹುಮುಖಿ ನೆಲೆಗಳಲ್ಲಿ ಅನನ್ಯತೆಯನ್ನು ಹೊಂದಿದ್ದು, ಇದನ್ನು ನಾವು ಅಭಿಮಾನದಿಂದ ಮುನ್ನಡೆಸಬೇಕು" ಎಂದು ಗೋವಿಂದದಾಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಲೇಖಕರಾದ ಪ್ರೊ. ಕೃಷ್ಣಮೂರ್ತಿ ಪಿ. ಅವರು ನುಡಿದರು.
ಅವರು ಸುರತ್ಕಲ್ ಶ್ರೀನಿವಾಸ ನಗರದ ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣಗೈದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟ್ ಕಾರ್ಯದರ್ಶಿ ಡಾ. ನಾಗೇಂದ್ರಪ್ಪ, "ಕನ್ನಡ ನುಡಿ ಬಲು ಸೊಗಸಾಗಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಕಲಿಕೆಗೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ" ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬಹುಮಾನ ವಿತರಣೆ:
ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಕನ್ನಡ ಪರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ನಡೆದ ಭಾಷಣ, ಭಾವಗೀತೆಗಳು ಹಾಗೂ ಕರ್ನಾಟಕದ ಇತಿಹಾಸವನ್ನು ಬಿಂಬಿಸುವ ಆಕರ್ಷಕ ನೃತ್ಯ ರೂಪಕಗಳು ನೆರೆದವರ ಗಮನ ಸೆಳೆದವು.
ವೇದಿಕೆಯಲ್ಲಿ ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲಾ ಟ್ರಸ್ಟ್‌ನ ಸದಸ್ಯರಾದ ಡಾ. ಪ್ರದೀಪ್ ಡಿ. ಹಾಗೂ ಶಾಲಾ ಪ್ರಾಂಶುಪಾಲೆ ಪ್ರಮೀಳಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪ ಪ್ರಾಂಶುಪಾಲೆ ಡಿಂಪಲ್ ಜೋಯ್ಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

