ಸೇವಾಧಾಮದಲ್ಲಿ ಸಂಭ್ರಮದ ದೀಪಾವಳಿ: ದಿವ್ಯಾಂಗರ ಬದುಕಿನಲ್ಲಿ ಬೆಳಕಾದ ಹಬ್ಬದ ಆಚರಣೆ

Shreya Hegde
0



ಸೌತಡ್ಕ: ಕತ್ತಲೆಯನ್ನು ಕಳೆದು ಬೆಳಕನ್ನು ಹರಡುವ ದೀಪಾವಳಿ ಹಬ್ಬವು ಕೇವಲ ಹಣತೆಗಳ ಬೆಳಕಿಗೆ ಸೀಮಿತವಾಗದೆ, ಬದುಕಿನಲ್ಲಿ ಹೊಸ ಭರವಸೆ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕತೆಯನ್ನು ತುಂಬುವ ಹಬ್ಬವಾಗಿದೆ. ಈ ಆಶಯದೊಂದಿಗೆ ಬೆನ್ನುಮೂಳೆ ಅಪಘಾತದಿಂದ ಅಂಗವೈಕಲ್ಯಕ್ಕೊಳಗಾದವರಲ್ಲಿ ಸಂತಸ, ಮನೋಬಲ ಮತ್ತು ಜೀವನೋತ್ಸಾಹವನ್ನು ಹೆಚ್ಚಿಸುವ ಉದ್ದೇಶದಿಂದ ಸೌತಡ್ಕದ ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರದಲ್ಲಿ ದೀಪಾವಳಿ ಹಬ್ಬವನ್ನು ಸಡಗರ - ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರಾದ ಕೊಕ್ಕಡದ ಕುಞ್ಞಪ್ಪ ಗೌಡ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಕೃಷ್ಣ ಭಟ್ ಮತ್ತು ಸೇವಾಧಾಮದ ಸಂಸ್ಥಾಪಕರಾದ  ವಿನಾಯಕ್ ರಾವ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಮಹತ್ವ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತು ಮಾತನಾಡಿದರು.


ಬೆನ್ನುಮೂಳೆ ಅಪಘಾತಕ್ಕೊಳಗಾದ ದಿವ್ಯಾಂಗರು ದೈಹಿಕ ಸವಾಲುಗಳ ಜೊತೆಗೆ, ಮಾನಸಿಕ ಒತ್ತಡ ಹಾಗೂ ಸಾಮಾಜಿಕವಾಗಿ ಪ್ರತ್ಯೇಕತೆಯ ಭಾವನೆಯನ್ನೂ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ಆರೈಕೆಯಷ್ಟೇ ಅಲ್ಲದೆ, ಪ್ರೀತಿ, ಆತ್ಮೀಯತೆ, ಬೆಂಬಲ ಹಾಗೂ ಸಾಮಾಜಿಕ ಸಂಪರ್ಕವೂ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಫಲಾನುಭವಿಗಳಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಸೇವಾಧಾಮವು ಇಂತಹ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡುತ್ತಿದೆ.


ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಬೆನ್ನುಮೂಳೆ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಮತ್ತು ಅವರ ಆರೈಕೆದಾರರು ಹಾಗೂ ಸಿಬ್ಬಂದಿ ವರ್ಗದವರಿಗೆ ವಿವಿಧ ಮನೋರಂಜನ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ನೃತ್ಯ ಪ್ರದರ್ಶನ, ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರಲ್ಲೂ ಹೊಸ ಉತ್ಸಾಹ ಮೂಡಿಸಿದವು. ಎಲ್ಲರೂ ಒಟ್ಟಾಗಿ ಹಣತೆಗಳನ್ನು ಬೆಳಗಿಸುವ ಮೂಲಕ ದೀಪಾವಳಿಯ ಸಂಭ್ರಮವನ್ನು ಹಂಚಿಕೊಂಡರು. ಪ್ರತಿಯೊಬ್ಬರ ಮುಖದಲ್ಲೂ ಮೂಡಿದ ನಗು, ಸಂತಸ ಹಾಗೂ ಉತ್ಸಾಹವು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.


ಈ ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್.ಎಂ ಹಾಗೂ ದಾಖಲೀಕರಣ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಂಯೋಜಕರಾದ ಕು.ಸುಮನರವರು ಬಹಳ ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ದಾನಿಗಳು, ಹಿತೈಷಿಗಳು, ಟ್ರಸ್ಟಿಗಳು, ಫಲಾನುಭವಿಗಳು, ಆರೈಕೆದಾರರು, ಸ್ವಯಂಸೇವಕರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದಿವ್ಯಾಂಗರ ಬದುಕಿನಲ್ಲಿ ಕೇವಲ ದೈಹಿಕ ಪುನರ್ವಸತಿಯಷ್ಟೇ ಅಲ್ಲದೆ, ಮಾನಸಿಕ ಸಂತೋಷ, ಸಾಮಾಜಿಕ ಬೆಂಬಲ ಹಾಗೂ ಆತ್ಮವಿಶ್ವಾಸವೂ ಮುಖ್ಯ ಎಂಬ ಸಂದೇಶವನ್ನು ಸಾರಿದ ದೀಪಾವಳಿ ಆಚರಣೆಯು ಎಲ್ಲರ ಮನದಲ್ಲಿ ಸ್ಮರಣೀಯ ಕ್ಷಣಗಳನ್ನು ಮೂಡಿಸಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top