ಅಡಿಕೆ ಭಾರತದ ಪ್ರಮುಖ ವಾಣಿಜ್ಯ ತೋಟಗಾರಿಕಾ ಬೆಳೆ. ಕರ್ನಾಟಕ ಸೇರಿದಂತೆ ಕೇರಳ ಮತ್ತು ಈಶಾನ್ಯ ಭಾರತದ ಹಲವು ರಾಜ್ಯಗಳ ಗ್ರಾಮೀಣ ಆರ್ಥಿಕತೆಯಲ್ಲಿ ಇದರ ಪಾತ್ರ ಮಹತ್ವದ್ದು. ಇತ್ತೀಚಿನ ದಿನಗಳಲ್ಲಿ ಅಡಿಕೆಯ ಆರೋಗ್ಯ ಸಂಬಂಧಿತ ಪರಿಣಾಮಗಳ ಕುರಿತು ಚರ್ಚೆಗಳು ಹೆಚ್ಚಾಗಿದ್ದು, ಅದರ ಕೃಷಿಯನ್ನೇ ನಿಷೇಧಿಸಬಹುದು ಎಂಬ ಊಹಾಪೋಹಗಳು ಬೆಳೆಗಾರರಲ್ಲಿ ಆತಂಕ ಮೂಡಿಸಿವೆ. ಆದರೆ ಅಡಿಕೆ ಸೇವನೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳು ಮತ್ತು ಅಡಿಕೆ ಕೃಷಿಯನ್ನು ನಿಷೇಧಿಸುವ ಪ್ರಶ್ನೆ ಎರಡೂ ವಿಭಿನ್ನ ವಿಷಯಗಳಾಗಿವೆ. ಸಾರ್ವಜನಿಕ ಆರೋಗ್ಯದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ, ಈ ಬೆಳೆಯ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಜನರ ಜೀವನೋಪಾಯವನ್ನೂ ಗಮನಿಸುವುದು ಅಗತ್ಯವಾಗಿದೆ.
ಜಾಗತಿಕ ಅಡಿಕೆ ಉತ್ಪಾದನೆಯಲ್ಲಿ ಭಾರತವು ಸುಮಾರು ಶೇ. 63ರಷ್ಟು ಪಾಲನ್ನು ಹೊಂದಿದ್ದು, ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. 2025–26ನೇ ಸಾಲಿನಲ್ಲಿ ಭಾರತದಲ್ಲಿ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 15 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದೆ. ಇದರಲ್ಲಿ ಕರ್ನಾಟಕವು ಸುಮಾರು 7.98 ಲಕ್ಷ ಹೆಕ್ಟೇರ್ ಪ್ರದೇಶದಿಂದ 11.32 ಲಕ್ಷ ಟನ್ ಉತ್ಪಾದಿಸುವ ಮೂಲಕ ಪ್ರಮುಖ ಸ್ಥಾನ ಪಡೆದಿದೆ. ದೇಶದ ಅಡಿಕೆ ಉತ್ಪಾದನೆಯ ಮಾರುಕಟ್ಟೆ ಮೌಲ್ಯ ಸುಮಾರು ₹58,664 ಕೋಟಿಗಳೆಂದು ಅಂದಾಜಿಸಲಾಗಿದ್ದು, ಸುಮಾರು 60 ಲಕ್ಷ ಜನರು ಈ ಕ್ಷೇತ್ರಕ್ಕೆ ಅವಲಂಬಿತರಾಗಿದ್ದಾರೆ.
ಅಡಿಕೆ ಕೃಷಿಯು ರೈತರ ಆದಾಯ, ಗ್ರಾಮೀಣ ಉದ್ಯೋಗ, ಸಂಸ್ಕರಣಾ ಕೈಗಾರಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಸಹಕಾರಿ ಮಾರುಕಟ್ಟೆ ವ್ಯವಸ್ಥೆಗಳ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಆದ್ದರಿಂದ ಅಡಿಕೆಯ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ನೀತಿ ನಿರ್ಧಾರವು ಅದರ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ಪರಿಗಣಿಸಬೇಕಾಗಿದೆ.
ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವುದು ಕೃಷಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆರೋಗ್ಯದ ದೃಷ್ಟಿಯಿಂದ ಅಡಿಕೆ ಮಿಶ್ರತ ಕೆಲವು ವಸ್ತುಗಳ ಬಳಕೆಯನ್ನು ನಿಯಂತ್ರಿಸುವುದು ಮತ್ತು ಕೃಷಿ ಉತ್ಪಾದನೆಯನ್ನೇ ನಿಷೇಧಿಸುವುದು ಒಂದೇ ಅರ್ಥವನ್ನು ನೀಡುವುದಿಲ್ಲ. 18 ಮಾರ್ಚ್ 2025ರಂದು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರವು ಅಡಿಕೆಯನ್ನು ನಿಷೇಧಿಸುವ ಯಾವುದೇ ಪ್ರಸ್ತಾವನೆಯು ತನ್ನ ಪರಿಗಣನೆಯಲ್ಲಿಲ್ಲ ಎಂದು ತಿಳಿಸಿತ್ತು. ಹೀಗಾಗಿ ನಿಷೇಧದ ಕುರಿತ ಊಹಾಪೋಹಗಳನ್ನು ಅಧಿಕೃತ ಸರ್ಕಾರಿ ನಿರ್ಧಾರವೆಂದು ಪರಿಗಣಿಸುವುದು ಸೂಕ್ತವಲ್ಲ.
ದೇಶೀಯ ಬೆಳೆಗಾರರ ಹಿತಾಸಕ್ತಿ ಮತ್ತು ಅಡಿಕೆ ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ದೇಶೀಯ ಉತ್ಪಾದಕರನ್ನು ಕಡಿಮೆ ಬೆಲೆಯ ಆಮದುಗಳಿಂದ ರಕ್ಷಿಸಲು ಅಡಿಕೆ ಆಮದಿನ ಮೇಲೆ ಶೇ. 100ರಷ್ಟು ಆಮದು ಸುಂಕ ವಿಧಿಸಲಾಗಿದೆ. ಅಲ್ಲದೆ, 2023ರ ಫೆಬ್ರವರಿಯಲ್ಲಿ ಕನಿಷ್ಠ ಆಮದು ಬೆಲೆಯನ್ನು (MIP) ಪ್ರತಿ ಕೆ.ಜಿ.ಗೆ ₹251ರಿಂದ ₹351ಕ್ಕೆ ಹೆಚ್ಚಿಸಲಾಗಿದೆ. ಅಕ್ರಮ ಆಮದು ತಡೆ, ಕಸ್ಟಮ್ಸ್ ನಿಗಾ ಮತ್ತು ಗುಣಮಟ್ಟದ ಮಾನದಂಡಗಳ ಜಾರಿಯೂ ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳಾಗಿವೆ.
20 ಅಕ್ಟೋಬರ್ 2022ರಂದು ಅಡಿಕೆ ರಾಷ್ಟ್ರೀಯ ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿದ್ದು, ಹಳದಿ ಎಲೆ ರೋಗ (YLD), ಎಲೆ ಚುಕ್ಕೆ ರೋಗ (LSD) ಸೇರಿದಂತೆ ಅಡಿಕೆ ತೋಟಗಳ ಉತ್ಪಾದನಾ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಿಗೆ ಒತ್ತು ನೀಡಲಾಗಿದೆ.
ಅಡಿಕೆ ಮತ್ತು ಮಾನವ ಆರೋಗ್ಯದ ಕುರಿತು ಸಾಕ್ಷ್ಯಾಧಾರಿತ ಸಂಶೋಧನೆ ನಡೆಸಲು ಸಮಗ್ರ ಯೋಜನೆಯನ್ನು 2025ರಲ್ಲಿ ಆರಂಭಿಸಲಾಗಿದೆ. ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ (MIDH) ಅಡಿಯಲ್ಲಿ ಈ ಯೋಜನೆಗೆ ₹9.99 ಕೋಟಿ ಅನುದಾನ ಮೀಸಲಿಡಲಾಗಿದೆ. ಇದರ ಮೂಲಕ ಅಡಿಕೆಯ ಆರೋಗ್ಯ ಪರಿಣಾಮಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.
2024–25ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಅಡಿಕೆ ರೋಗ ನಿಯಂತ್ರಣಕ್ಕಾಗಿ ₹37 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. 2025–26ರಲ್ಲಿ ವಿಶೇಷ ಪಾಕೇಜ್ ಕಾರ್ಯಕ್ರಮದಡಿ ₹8.6065 ಕೋಟಿ ನೆರವು ನೀಡಲಾಗಿದೆ. ಅಲ್ಲದೆ, 2024–27ರ ಅವಧಿಯಲ್ಲಿ 10 ತಾಲ್ಲೂಕುಗಳ 50 ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣದ ಪ್ರಾತ್ಯಕ್ಷಿಕೆಗಳಿಗೆ ಸುಮಾರು ₹6.316 ಕೋಟಿ ವೆಚ್ಚದ ಯೋಜನೆ ಕೈಗೊಳ್ಳಲಾಗಿದೆ.
2026–27ನೇ ಸಾಲಿನಲ್ಲಿಯೂ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯವು (DASD) ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ, ರೈತ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಕಾರ್ಯಕ್ರಮಗಳನ್ನು ಮುಂದುವರಿಸಿದೆ. ಈ ಕ್ರಮಗಳು ಅಡಿಕೆ ಕ್ಷೇತ್ರದ ಅಭಿವೃದ್ಧಿಗೆ ದೊರೆಯುತ್ತಿರುವ ಸಾಂಸ್ಥಿಕ ಬೆಂಬಲವನ್ನು ಪ್ರತಿಬಿಂಬಿಸುತ್ತವೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳು ಭಾರತದ ಅಡಿಕೆ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ಅಡಿಕೆ ಉತ್ಪಾದನೆಯ ಪ್ರಮುಖ ಕೇಂದ್ರಗಳಾಗಿವೆ. ಕೇರಳದ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿಯೂ ಅಡಿಕೆ ಕೃಷಿ ವ್ಯಾಪಕವಾಗಿದೆ.
ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ICAR-CPCRI) ಸುಧಾರಿತ ತಳಿಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು ಮತ್ತು ರೋಗ ನಿಯಂತ್ರಣ ತಂತ್ರಜ್ಞಾನಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಅಡಿಕೆ ಮಾರುಕಟ್ಟೆಯ ಸಂಘಟಿತ ಬೆಳವಣಿಗೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ. 1973ರಲ್ಲಿ ಸ್ಥಾಪನೆಯಾದ CAMPCO ಅಡಿಕೆ ಖರೀದಿ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕದ ಸಿರಸಿಯ TSS, ಶಿವಮೊಗ್ಗದ MAMCOS ಮತ್ತು ತೀರ್ಥಹಳ್ಳಿಯ TUMCOS ಮುಂತಾದ ಸಂಸ್ಥೆಗಳು ರೈತರಿಗೆ ಸಂಘಟಿತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಮೂಲಕ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಿವೆ.
ಹಾಗಾಗಿ ಸರಕಾರಕ್ಕೆ ಅಡಿಕೆ ನಿಷೇಧದ ಬಗ್ಗೆ ಒಲವಿರುತ್ತಿದ್ದರೆ, ಅಡಿಕೆಗೆ ಸಂಬಂಧಿಸಿದ ಇಷ್ಟೊಂದು ಸಮಿತಿಗಳು, ವೈಜ್ಞಾನಿಕ ಸಂಶೋಧನೆಗೆ ಅನುದಾನ ಹಾಗೂ ಆಮದು ನಿಯಂತ್ರಣ ಮಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ಉಧ್ಭವವಾಗುತ್ತದೆ.
ಅಡಿಕೆ ಬೆಳೆಯ ಸುಸ್ಥಿರ ಅಭಿವೃದ್ಧಿಗೆ ವೈಜ್ಞಾನಿಕ ಕೃಷಿ, ಉತ್ಪಾದಕತೆ ಹೆಚ್ಚಳ ಮತ್ತು ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು. ರೋಗ ನಿರೋಧಕ ಹಾಗೂ ಅಧಿಕ ಇಳುವರಿ ನೀಡುವ ತಳಿಗಳ ಅಭಿವೃದ್ಧಿ, ಕೋಕೋ, ಕಾಳುಮೆಣಸು ಮತ್ತು ಬಾಳೆಯಂತಹ ಅಂತರ ಬೆಳೆಗಳ ಪ್ರೋತ್ಸಾಹ, ಕೊಯ್ಲಿನ ನಂತರದ ನಿರ್ವಹಣೆ, ಸಂಸ್ಕರಣಾ ತಂತ್ರಜ್ಞಾನ ಮತ್ತು ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಅಲ್ಲದೆ, ರೈತ ಉತ್ಪಾದಕ ಸಂಸ್ಥೆಗಳು (FPOs) ಮತ್ತು ಸಹಕಾರಿ ಸಂಘಗಳನ್ನು ಬಲಪಡಿಸುವುದು, ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ಒದಗಿಸುವುದು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಗಳನ್ನು ಕಾಪಾಡುವ ನಿಯಮಗಳಿಗೆ ಒಳಪಟ್ಟು ಪರ್ಯಾಯ ಬಳಕೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಂಶೋಧನೆಯನ್ನೂ ಪ್ರೋತ್ಸಾಹಿಸಬಹುದು.
ಅಡಿಕೆ ಕೇವಲ ಒಂದು ವಾಣಿಜ್ಯ ಬೆಳೆಯಲ್ಲ; ಅದು ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯ, ಗ್ರಾಮೀಣ ಉದ್ಯೋಗ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರವಾಗಿದೆ. ಪಾಶ್ಚಾತ್ಯ ದೇಶಗಳ ಬೆದರಿಕೆಗಳಿಗೆ ಬಗ್ಗದೆ, ಅಡಿಕೆ ಆರೋಗ್ಯ ವರ್ಧಕ ಎಂಬುದರ ಕುರಿತಾಗಿ ವೈಜ್ಞಾನಿಕ ಸಂಶೋಧನೆ, ಜನಜಾಗೃತಿ ಮತ್ತು ಸೂಕ್ತ ಕ್ರಮಗಳ ಮೂಲಕ ಸರಕಾರ ಈ ಗೊಂದಲಗಳಿಗೆ ತೆರೆಯೆಳೆಯಬೇಕಾಗಿದೆ. ಇದೇ ಸಂದರ್ಭದಲ್ಲಿ ರೈತರ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ನೀತಿಯ ಪ್ರಮುಖ ಉದ್ದೇಶವಾಗಿರಬೇಕು.
ಅಡಿಕೆಯ ಭವಿಷ್ಯವು ನಿಷೇಧದ ಆತಂಕದಲ್ಲಿ ಅಲ್ಲ; ವೈಜ್ಞಾನಿಕ ಸಂಶೋಧನೆ, ಜವಾಬ್ದಾರಿಯುತ ನೀತಿ, ಮಾರುಕಟ್ಟೆ ರಕ್ಷಣೆ ಮತ್ತು ರೈತರ ಬದುಕಿನ ಭದ್ರತೆಯಲ್ಲಿ ಅಡಗಿದೆ.
- ಗಣರಾಜ ಕೆ
ಅರ್ಥಶಾಸ್ತ್ರ ಉಪನ್ಯಾಸಕರು,
ಎಸ್. ಡಿ. ಎಂ. ಕಾಲೇಜು, ಉಜಿರೆ



