ಉಡುಪಿ: ವಿಜಯದಶಮಿಯ ಸುಮುಹೂರ್ತದಲ್ಲಿ ಉಡುಪಿಯ ಐತಿಹಾಸಿಕ ಶ್ರೀ ಕೃಷ್ಣ ಮಠದಲ್ಲಿ ಸಾಂಪ್ರದಾಯಿಕ 'ತೆನೆಪೂಜೆ' ಉತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿತು. ಪರಂಪರೆಯಂತೆ ಸೋದೆ ಮಠದ ಮುಂಭಾಗದಲ್ಲಿ ಪ್ರಥಮವಾಗಿ ಭತ್ತದ ತೆನೆಯನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ, ಪೂಜಿಸಲ್ಪಟ್ಟ ಭತ್ತದ ತೆನೆಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ, ಮಂಗಳವಾದ್ಯಗಳ ದಿವ್ಯ ನಾದದೊಂದಿಗೆ ರಥಬೀದಿಯಲ್ಲಿ ವೈಭವದ ಮೆರವಣಿಗೆಯ ಮೂಲಕ ಶ್ರೀ ಕೃಷ್ಣ ಮಠಕ್ಕೆ ತರಲಾಯಿತು.
ವರ್ಷಕ್ಕೊಮ್ಮೆ ತೆರೆಯುವ ಪೂರ್ವದ ಬಾಗಿಲು:
ಈ ಮಹೋತ್ಸವದ ವಿಶೇಷತೆಯೆಂದರೆ, ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುವ ಶ್ರೀ ಕೃಷ್ಣ ಗರ್ಭಗೃಹದ ಪೂರ್ವ ದಿಕ್ಕಿನ ಬಾಗಿಲನ್ನು ತೆರೆದು, ಪವಿತ್ರ ಭತ್ತದ ತೆನೆಯನ್ನು ಶ್ರೀ ಕೃಷ್ಣದೇವರಿಗೆ ಸಮರ್ಪಿಸಿ ಮಹಾಪೂಜೆ ನೆರವೇರಿಸಲಾಯಿತು. ನಂತರ ಮಠದ ಮುಂಭಾಗದ ಲಕ್ಷ್ಮೀ ಮಂಟಪದಲ್ಲಿ ಅಷ್ಟಮಠಗಳ ಹಾಗೂ ಇತರ ಉಪಮಠಗಳ ಪ್ರತಿನಿಧಿಗಳಿಗೆ ತೆನೆ ವಿತರಿಸಲಾಯಿತು. ಅಲ್ಲಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಬಡಗುಮಾಳಿಗೆಗೆ ತೆನೆಯನ್ನು ತಂದು, ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರರಾದ ಶ್ರೀಶ ಭಟ್ ಕಡೆಕಾರು, ಶ್ರೀ ಮಠದ ಪ್ರಮುಖರು, ಸಿಬ್ಬಂದಿವರ್ಗ ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು ಸ್ವಾಮಿಯ ಕೃಪೆಗೆ ಪಾತ್ರರಾದರು.

