ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ಹವ್ಯಕ ಸಭಾ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಕವಿ ಹಾಗೂ ವಾಗ್ಮಿ ಎಚ್. ದುಂಡಿರಾಜ್ ಅವರ ಜನಪ್ರಿಯ ಆತ್ಮಕಾದಂಬರಿ 'ದುಂಡಿ ಯಾತ್ರೆ' ಕೃತಿ ಪರಿಚಯ ಮತ್ತು ಸಂವಾದ ಕಾರ್ಯಕ್ರಮವಾದ 'ದುಂಡಿರಾಜರ ದಂಡಯಾತ್ರೆ' ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವು ಅಕ್ಟೋಬರ್ 25, 2026ರ ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಂತೂರಿನ ಶ್ರೀ ಭಾರತೀ ಕಾಲೇಜಿನ ಶಂಕರಶ್ರೀ ಸಭಾಭವನದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಹನಿಗವನಗಳ ಸರದಾರರಾದ ಎಚ್. ದುಂಡಿರಾಜ್ ಅವರು ಉಪಸ್ಥಿತರಿರಲಿದ್ದು, ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ಅವರು ಸಂವಾದ ನಡೆಸಿಕೊಡಲಿದ್ದಾರೆ. ಕ.ಸಾ.ಪ. ಮಂಗಳೂರು ತಾಲೂಕು ಅಧ್ಯಕ್ಷರಾದ ಮಂಜುನಾಥ ಎಸ್. ರೇವಣಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹವ್ಯಕ ಸಭಾ ಮಂಗಳೂರು ಅಧ್ಯಕ್ಷರಾದ ದಿವಾಣ ಗೋವಿಂದ ಭಟ್, ಕಸಾಪ ದ.ಕ. ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಕಸಾಫ ಗಡಿನಾಡು ಕಾಸರಗೋಡು ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜೊತೆಗೆ, ಕಸಾಪ ಮಂಗಳೂರು ತಾಲೂಕಿನ ಕಾರ್ಯದರ್ಶಿ ಡಾ. ಮುರಲೀ ಮೋಹನ ಚೂಂತಾರು, ಕೋಶಾಧಿಕಾರಿ ಸುಬ್ರಾಯ ಭಟ್ ಹಾಗೂ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸೇರಿದಂತೆ ಸಂಘಟಕ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

