ಉಜಿರೆ SDM ಕಾಲೇಜಿನಲ್ಲಿ ಮಂಗಳೂರು ವಿ.ವಿ. ವಲಯ ಮಟ್ಟದ NSS ನೃತ್ಯ ಸ್ಪರ್ಧೆ

Shreya Hegde
0


ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ (NSS) ಬೆಳ್ತಂಗಡಿ ವಲಯ ಮಟ್ಟದ ಅಂತರ್ ಕಾಲೇಜು ನೃತ್ಯ ಸ್ಪರ್ಧೆಯು ಅಕ್ಟೋಬರ್ 7 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ 'ಸಮ್ಯಗ್ದರ್ಶನ' ಸಭಾಂಗಣದಲ್ಲಿ ವೈಭವದಿಂದ ಜರುಗಿತು. ಕಾಲೇಜಿನ ಎನ್.ಎಸ್.ಎಸ್. ಘಟಕವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.


ಜಾನಪದ ಕಲೆ ಸಂಸ್ಕೃತಿಯ ಪ್ರತಿಬಿಂಬ: ಡಾ. ಮಹೇಶ್ ಕುಮಾರ್ ಶೆಟ್ಟಿ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್., "ಜಾನಪದವು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಜನಜೀವನದ ನೈಜ ಪ್ರತಿಬಿಂಬವಾಗಿದೆ. ತಲೆತಲಾಂತರಗಳಿಂದ ಬಂದಿರುವ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು. ಸೇವೆ, ಸರಳತೆ ಹಾಗೂ ಸಮಾಜದೊಂದಿಗೆ ಬೆರೆಯುವ ಎನ್.ಎಸ್.ಎಸ್. ತತ್ವಗಳು ಜಾನಪದದ ಮೂಲ ಆಶಯಕ್ಕೆ ಹತ್ತಿರವಾಗಿವೆ," ಎಂದರು. ಅಲ್ಲದೆ, ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸೂಕ್ತ ವೇದಿಕೆ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಆತ್ಮವಿಶ್ವಾಸದಿಂದ ಪ್ರತಿಭೆ ಪ್ರದರ್ಶಿಸಿ: ಸಂದೇಶ್

ತೀರ್ಪುಗಾರರಾಗಿ ಭಾಗವಹಿಸಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ವಿಭಾಗದ ಸಹಾಯಕ ಪ್ರಬಂಧಕ ಸಂದೇಶ್ ಮಾತನಾಡಿ, "ನೃತ್ಯವು ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಕಲೆಯಾಗಿದೆ. ಸ್ಪರ್ಧಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲು ನಮಗೆ ಕಲಿಕೆಯ ದಾರಿಯಾದರೆ, ಗೆಲುವು ಸಾಧನೆಗೆ ಪ್ರೇರಣೆಯಾಗುತ್ತದೆ," ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಇನ್ನೋರ್ವ ತೀರ್ಪುಗಾರರಾಗಿ ಸದಾನಂದ ಬಿ. ಮುಂಡಾಜೆ ಸಹಕರಿಸಿದರು.


ಸ್ಪರ್ಧೆಯ ಫಲಿತಾಂಶ:

ವೈಯಕ್ತಿಕ ನೃತ್ಯ ಸ್ಪರ್ಧೆ: ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಭಕ್ತಿಪ್ರಿಯಾ (ಪ್ರಥಮ) ಹಾಗೂ ಉಜಿರೆ ಎಸ್.ಡಿ.ಎಮ್. ಕಾಲೇಜಿನ ಪ್ರಿಯದರ್ಶಿನಿ (ದ್ವಿತೀಯ).

ಗುಂಪು ನೃತ್ಯ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್. ಕಾಲೇಜು (ಪ್ರಥಮ) ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು (ದ್ವಿತೀಯ).


ಕಾರ್ಯಕ್ರಮದಲ್ಲಿ ಉಜಿರೆ SDM ಕಾಲೇಜಿನ ಹಿರಿಯ ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀಮತಿ ಆಶಾಕಿರಣ್, ಯೋಜನಾಧಿಕಾರಿಗಳಾದ ಡಾ. ಮಾಲಿನಿ ಅಂಚನ್, ಡಾ. ಸುಧೀರ್ ಕೆ.ವಿ. ಹಾಗೂ ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು. ಡಾ. ಮಾಲಿನಿ ಅಂಚನ್ ಸ್ವಾಗತಿಸಿದ ಕಾರ್ಯಕ್ರಮವನ್ನು ಸ್ವಯಂಸೇವಕ ಧನುಷ್ ಕೆ. ಯಾನ್ ನಿರೂಪಿಸಿದರು. ಡಾ. ಸುಧೀರ್ ಕೆ.ವಿ. ವಂದನಾರ್ಪಣೆ ಗೈದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top