SIR ನ ಫಾರಂ ನಂಬರ್ ಸಿಕ್ಸ್‌ನ 'ಒಂದು ಘೋಷಣೆ' ಮತ್ತು ಕಸ್ತೂರಿ ರಂಗನ್ ವರದಿಯ 'ನೂರು ಘೋಷಣೆ!'

Shreya Hegde
0


ಖಂಡಿತವಾಗಿಯೂ SIR ನ ಫಾರಂ ನಂಬರ್ 6ಗೂ ಮತ್ತು ಕಸ್ತೂರಿ ರಂಗನ್ ವರದಿಗೂ ಸುತಾರಾಂ ಸಂಬಂಧ ಇಲ್ಲ. ಆದರೆ, SIR ಫಾರಂ ನಂಬರ್ ಸಿಕ್ಸ್‌ನ ಒಂದೇ ಒಂದು ಘೋಷಣೆಯು, ದೇಶಾದ್ಯಂತ ಮಾಡುತ್ತಿರುವ ಸೌಂಡ್, ಸಂಚಲನದ ಹಿನ್ನಲೆಯಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿನ ನೂರಾರು ಕ್ರಿಟಿಕಲ್ ಘೋಷಣೆಗಳು ಭವಿಷ್ಯದಲ್ಲಿ ಅನುಷ್ಠಾನಕ್ಕೆ ಬಂದರೆ.... ಪಶ್ಚಿಮಘಟ್ಟದಲ್ಲಿ ಭೋರ್ಗರೆಯಬಹುದಾದ ಸೌಂಡ್, ಸಂಚಲನಗಳನ್ನು ಅಂದಾಜಿಸಬಹುದಾಗಿದೆ. 


SIR ಫಾರಂ 6 ನಲ್ಲಿ ಸೇರಿಸಲ್ಪಟ್ಟಿದೆ ಎಂದು ಹೇಳಲಾಗುತ್ತಿರುವ ಒಂದು ಘೋಷಣೆ ಇವತ್ತು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ.  ಬೀದಿಯಲ್ಲಿ ಹೋರಾಟ ನೆಡೆಯುತ್ತಿದೆ. ಸುಪ್ರಿಮ್ ಕೋರ್ಟ್‌ನಲ್ಲಿ ವಿಚಾರಣೆ ನೆಡೆಯುತ್ತಿದೆ. ವಿಪಕ್ಷಗಳ ನಾಯಕರನ್ನು ವಶಕ್ಕೆ ಪಡೆಯುವುದು, ಬಿಡುಗಡೆ ಮಾಡುವುದು ನೆಡೆಯುತ್ತಿದೆ.  ಚುನಾವಣಾ ಆಯೋಗದ ಮುಖ್ಯಸ್ಥರ ರಾಜಿನಾಮೆಗೆ ಒತ್ತಾಯ ನೆಡೆಯುತ್ತಿದೆ.  ಪತ್ರಿಕೆಗಳಲ್ಲಿ ಲೀಡ್ ಸುದ್ದಿ ಆಗುತ್ತಿದೆ. ಟಿವಿ ಚಾನಲ್‌ಗಳಲ್ಲಿ ಪ್ಯಾನಲ್ ಡಿಬೇಟ್ ನೆಡೆಯುತ್ತಿದೆ. SIRನ ಫಾರಂ 6 ನಿಂದ ಸದರಿ ಘೋಷಣೆಯನ್ನು ತೆಗೆದು ಹಾಕುವ ಭರವಸೆಯನ್ನು ಚುನಾವಣಾ ಆಯೋಗ ನೀಡಿದೆ.


ಜಸ್ಟ್ ಒಂದೇ ಒಂದು ಘೋಷಣೆ ಇಷ್ಟು ದೊಡ್ಡ ಗದ್ದಲ ಸೃಷ್ಟಿಸುವಾಗ, ಸಂಚಲನ ಮೂಡಿಸುವಾಗ, ಮನೆ ಮನೆಯ ಟಿವಿ ಸೆಟ್‌ಗಳು ಬಿಸಿಯಾಗುವಷ್ಟು ಚರ್ಚೆ ಆಗುವಾಗ, ಒಂದು ಘೋಷಣೆ ಸುಪ್ರೀಂ ಕೋರ್ಟಿನ ಪೋರ್ಟಿಕೋ ದಾಟಿ ಕಟೆಕಟೆಗೆ ಬಂದು ವಾದ-ವಿವಾದ ಸೃಷ್ಟಿಸುವಾಗ, ಪ್ರತಿಭಟನೆಗಳು ಕಾವೇರುವಾಗ.... ಪಶ್ಚಿಮಘಟ್ಟದ ನೆಲವಾಸಿಗಳ ಬದುಕಿಗೆ ಬೆಂಕಿ ಇಡುವಂತಹ ಇಂತಹ ನೂರಾರು ಘೋಷಣೆಗಳು ಕಸ್ತೂರಿ ರಂಗನ್ ವರದಿಯ ಪುಟ ಪುಟಗಳಲ್ಲೂ ಇದ್ದು, ನಾಳೆ ಕಸ್ತೂರಿ ರಂಗನ್ ವರದಿಯು ಯಥಾವತ್ ಜಾರಿಯಾದರೆ.... ಪಶ್ಚಿಮಘಟ್ಟದ ಕೋಟಿ ಕೋಟಿ (2011 ರ ಪ್ರಕಾರ ಅಂದಾಜು 5,00,00,000+ !!! ಈಗ 15 ವರ್ಷಗಳ ನಂತರ ಇದು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ) ಜನರು ಅಕ್ಷರಶಃ ಬೀದಿಗೆ ಬರುತ್ತಾರೆ. SIRನ ಒಂದು ಘೋಷಣೆಗೆ ಆದ ಪರಿಣಾಮಗಳ ಹತ್ತು ಪಟ್ಟು ಸಂಚಲನ, ಪ್ರತಿಭಟನೆ, ವಾದ-ವಿವಾದಗಳ, ಘರ್ಷಣೆಗಳ ಪರಿಣಾಮಗಳು ಜರುಗಲಿವೆ!, ಅನುಮಾನವೇ ಬೇಡ.


ಗಮನಿಸಿ ನೋಡೋಣ:

ಕಸ್ತೂರಿ ರಂಗನ್ ವರದಿಯ ಪೀಠಿಕೆಯ ಎರಡನೇ ವಾಕ್ಯವೇ(ಜಸ್ಟ್ ಒಂದು ವಾಕ್ಯ!), ವರದಿ ಜಾರಿಯಾದರೆ ಮಲೆನಾಡಿನ ಜನರ ಬದುಕಿನ ಮೇಲೆ ಆಗಬಹುದಾದ ಒಂದು ಭಯಾನಕ ಪರಿಸ್ಥಿತಿಯನ್ನು ಕನ್ನಡಿ ಹಿಡಿದು ತೋರಿಸಿದಂತೆ ತೋರಿಸುತ್ತದೆ!. ಆ ವಾಕ್ಯ ".....ಇಂತಹ ಏಕೈಕ ಪರಿಸರ ವ್ಯವಸ್ಥೆಯು ಪಶ್ಚಿಮಘಟ್ಟ ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿದೆ...." ಎಂದಿದೆ ಮುಂದಿನ ಒಂದು ವಾಕ್ಯ "ಪಶ್ಚಿಮಘಟ್ಟಗಳ ಪರಿಸರವನ್ನು ಪುನರ್ ಚೈತನ್ಯಗೊಳಿಸಲು ಮತ್ತು ಸಮರ್ಥನೀಯ ಅಭಿವೃದ್ಧಿಯನ್ನು ಕೈಗೊಳ್ಳುವ ಅಗತ್ಯವನ್ನು ಮನಗಂಡು ಪರಿಸರ ಮತ್ತು ಅರಣ್ಯ ಸಚಿವಾಲಯವು ಪಶ್ಚಿಮ ಘಟ್ಟಗಳ ನೈಸರ್ಗಿಕ ತಜ್ಞರ ಸಮಿತಿ (WGEEP) ರಚಿಸಿತು"


ಈ ಎರಡು ವಾಕ್ಯಗಳ ಒಳಗೆ ಇಳಿದು ನೋಡಿದರೆ, "ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿರುವ ಪಶ್ಷಿಮ ಘಟ್ಟಗಳನ್ನು ಚೈತನ್ಯಗೊಳಿಸಲು WGEEP ರಚಿಸಿದ್ದು!. (ಇದರ ಮುಂದುವರಿದ ಭಾಗವಾಗಿ ಕಸ್ತೂರಿ ರಂಗನ್ ನೇತ್ರತ್ವದ 'ಉನ್ನತ ಮಟ್ಟದ ಕಾರ್ಯತಂಡ' (HLWG) ರಚಿಸಿದ್ದು.) ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿರುವ ಪಶ್ಷಿಮ ಘಟ್ಟಗಳನ್ನು ಸರಿ ಮಾಡಬೇಕಾದರೆ ಏನು ಮಾಡಬೇಕು? ಜನ ವಸತಿ ಒತ್ತಡವನ್ನು ಕಮ್ಮಿ ಮಾಡಬೇಕು!!? 


ಒತ್ತಡದ ಜನವಸತಿಯನ್ನು ಕಮ್ಮಿ ಮಾಡುವುದು ಹೇಗೆ? ಕುಟುಂಬ ಯೋಜನೆ? ಬೀದಿ ನಾಯಿಗಳ ಸಂಖ್ಯೆ ಏರಿದಾಗ ಅವುಗಳಿಗೆ ಸಂತಾನಹರಣ ಚಿಕಿತ್ಸೆ ಕೊಟ್ಟಂತೆ ಪ್ರೌಢಾವಸ್ತೆಗೆ ಬಂದ ಜನರಿಗೆ ಇಂಜೆಕ್ಷನ್ ಕೊಡುವುದು!? ಜನ ಮದುವೆ ಆಗದಂತೆ ತಡೆಯುವುದು!? ಇರುವವರನ್ನು ಒಕ್ಕಲೆಬ್ಬಿಸುವುದು? ಜನರೇ ಗಂಟು ಮೂಟೆ ಕಟ್ಟಿ ಓಡಿ ಹೋಗುವಂತೆ ಮಾಡುವುದು? ಯಾವುದು? SIR ನ ಫಾರಂ ಸಿಕ್ಸ್‌ನ ಒಂದು ಘೋಷಣೆ ವಾಕ್ಯ ಏನೆಲ್ಲ ಅನುಮಾನ ಹುಟ್ಟಿಸುತ್ತದೋ? ಏನೆಲ್ಲ ಸಂಚಲನ ಮಾಡುತ್ತದೋ? ಅದೇ ರೀತಿ ಕಸ್ತೂರಿ ರಂಗನ್ ವರದಿಯ ಪಶ್ಚಿಮ ಘಟ್ಟ ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿದೆ ಎಂಬ ಒಂದು ವಾಕ್ಯ, ನಾಳೆ ಕಾನೂನು, SOP, ನಿಯಮಗಳಾಗಿ, ಘೋಷಣೆಯಾಗಿ ಪಶ್ಚಿಮ ಘಟ್ಟಕ್ಕೆ ಬರುವಾಗ ಏನೆಲ್ಲ ಆಗಬಹುದು!!? ಮಾಡಬಹುದು!?


ಇಡೀ ಕಸ್ತೂರಿ ರಂಗನ್ ವರದಿ ಅಂತರಾಳವೇ ಪಶ್ಚಿಮ ಘಟ್ಟ ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿದೆ ಎಂಬ ಬಿಲ್ಡ್ ಮಾಡಿದ ನರೇಷನ್‌ಗೆ ಮದ್ದು ಅರೆಯುವುದಕ್ಕೆ!! ಪಶ್ಚಿಮ ಘಟ್ಟ ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿದೆ. ನರೇಷನ್ ಬಿಲ್ಡ್ ಮಾಡಿದ್ದಕ್ಕೆ, ಜನವಸತಿ ಕಡಿಮೆ ಮಾಡುವುದು ಬಿಟ್ಟರೆ, ಬೇರೆ ಮಾರ್ಗ ಏನಿರಲು ಸಾಧ್ಯ?   ಟೆರಜಕಲ;ʼ ಸಮುದ್ರದ ಮಧ್ಯದಲ್ಲಿ ಚಲಿಸುತ್ತಿರುವ ದೋಣಿಯಲ್ಲಿ ಜನ ಜಾಸ್ತಿಯಾಗಿ ಅಪಾಯದಲ್ಲಿದೆ ಎಂದರೆ ಅಲ್ಲಿ ದೋಣಿ ದೊಡ್ಡದು ಮಾಡಲು ಸಾಧ್ಯವಾ? ಜನರನ್ನು ಕಡಿಮೆ ಮಾಡುವುದೇ ಪರಿಹಾರ. ಮಲೆನಾಡು ಎಂಬ ದೋಣಿ ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿದೆ! ಇದು ಕಸ್ತೂರಿ ರಂಗನ್ ವರದಿಯ ಬಿಲ್ಡಪ್ ಪೀಠಿಕೆ!.  


ಪಶ್ಚಿಮಘಟ್ಟದಲ್ಲಿ ಲಕ್ಷಾಂತರ ಎಕರೆಗಳಲ್ಲಿ ಜೀವವೈವಿಧ್ಯತೆಯ ವಿರೋಧಿ ಅಕೇಶಿಯ, ನೀಲಗಿರಿ ಬೆಳೆಯುವುದರಿಂದ ಅಪಾಯ ಆಗುತ್ತಿಲ್ಲ, ಅರಣ್ಯ ಇಲಾಖೆ ಮತ್ತು ದುಷ್ಟ ಪ್ರಭಾವಿ ವ್ಯಕ್ತಿಗಳ ದೌರ್ಜ್ಯನ್ಯದಿಂದ ಅರಣ್ಯದಲ್ಲಿರುವ ಹಲಸು, ಹೆಬ್ಬಹಲಸು, ನಂದಿ, ಬೀಟೆ, ನೇರಳೆ, ಗಂಧ.... ಮರಗಳ ಸರ್ವನಾಶದಿಂದ ಪಶ್ಚಿಮ ಘಟ್ಟಕ್ಕೆ ಅಪಾಯ ಆಗುತ್ತಿಲ್ಲ, ಪ್ರಭಾವಿಗಳು, ಕಂಪನಿಗಳು ಸಾವಿರಾರು ಎಕರೆ ಕಾಫಿ ತೋಟ ಮಾಡುವುದರಿಂದ ಪಶ್ಚಿಮ ಘಟ್ಟಕ್ಕೆ ಅಪಾಯ ಇಲ್ಲ, ಜಂಗಲ್ ರೆಸಾರ್ಟ್, ಆಫ್‌ರೋಡ್ ರ‌್ಯಾಲಿಗಳಿಂದ ಪಶ್ಚಿಮ ಘಟ್ಟಕ್ಕೆ ಅಪಾಯ ಇಲ್ಲ. ಕಸ್ತೂರಿ ರಂಗನ್ ಟೀಮ್ ಬರೆದ ವರದಿಯ ಷರಾ ಘೋಷಣೆಯ ಪ್ರಕಾರ ಪಶ್ಚಿಮ ಘಟ್ಟ ಕೇವಲ ನಿರಂತರ ಜನವಸತಿ ಒತ್ತಡಗಳಿಗೆ ಈಡಾಗಿ ಅಪಾಯಗಳನ್ನು ಎದುರಿಸುತ್ತಿದೆ!! ಕಸ್ತೂರಿ ರಂಗನ್ ವರದಿಯಲ್ಲಿ ಇಂತಹ ಅನೇಕ ಘೋಷಣೆಗಳು ಪುಟ ಪುಟಗಳಲ್ಲೂ ಇವೆ. SIR ಫಾರಂ‌ನಲ್ಲಿ ಒಂದು ಘೋಷಣೆ ಇದ್ದರೆ, ಕಸ್ತೂರಿ ರಂಗನ್ ವರದಿಯಲ್ಲಿ ನೂರಿವೆ!!


ಸ್ಯಾಂಪಲ್‌ಗೆ ಇನ್ನೊಂದೆರಡನ್ನು ಗಮನಿಸುವುದಾದರೆ....:

1) ಕಸ್ತೂರಿ ರಂಗನ್ ವರದಿ: ಪುಟ ಸಂಖ್ಯೆ 66: ಕ್ರಮ ಸಂಖ್ಯೆ 12 "ಕೀಟ ನಾಶಕಗಳ ಬಳಕೆಯನ್ನು ನಿಷೇಧಿಸುವುದನ್ನೂ ಸೇರಿದಂತೆ ಸಾವಯವ ಕೃಷಿ ಪದ್ದತಿಯನ್ನು ಪ್ರೋತ್ಸಾಹಿಸುವ ಕ್ರಮವನ್ನು ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಒಪ್ಪಿಕೊಂಡಿವೆ..."

2) ಕಸ್ತೂರಿ ರಂಗನ್ ವರದಿ: ಪುಟ ಸಂಖ್ಯೆ 26, ಕ್ರಮ ಸಂಖ್ಯೆ 4 "ನೈಸರ್ಗಿಕ ವ್ಯವಸ್ಥೆಯ ಮೇಲೆ ಗಾಢವಾಗಿ ಮತ್ತು ಪ್ರಭಾವಶಾಲಿಯಾಗಿ ಪರಿಣಾಮ ಬೀರುವಂತಹ ಚಟುವಟಿಕೆಯನ್ನು ESA ವ್ಯಾಪ್ತಿಯ ಪ್ರದೇಶದಿಂದ ನಿರ್ಬಂಧಿಸುವ ಮತ್ತು ನಿಯಂತ್ರಣಾತ್ಮಕ ವ್ಯವಸ್ಥೆಗೆ HLWGಯ ಶಿಫಾರಸ್ಸು ಮಾಡುತ್ತದೆ"


SIR ಫಾರಂ ಸಿಕ್ಸ್ ಘೋಷಣೆ ಸಿದ್ಧಪಡಿಸಿದಂತಹ ಅಧಿಕಾರಿಗಳೇ, ಕಸ್ತೂರಿ ರಂಗನ್ ವರದಿಗೆ ಶಾಸನ, ನಿಯಮ, ಕಟ್ಟುಪಾಡುಗಳ ಘೋಷಣೆಯನ್ನು ನಿರೂಪಿಸುವಾಗ, ಮೇಲಿನ ಎರಡು ವಾಕ್ಯಗಳಿಗೆ ಒಂದಕ್ಕೊಂದು ಡಾಟ್ ಕನೆಕ್ಟ್ ಮಾಡಿ, ಕಾನೂನು ಮಾಡುವಾಗ "ರಾಸಾಯನಿಕ, ಕ್ರಿಮಿನಾಶಕ, ಕೀಟನಾಶಕ ಬಳಸುವ ಕೃಷಿಯೂ ನೈಸರ್ಗಿಕ ವ್ಯವಸ್ಥೆಯ ಮೇಲೆ ಗಾಢವಾಗಿ ಮತ್ತು ಪ್ರಭಾವಶಾಲಿಯಾಗಿ ಪರಿಣಾಮ ಬೀರುವಂತಹ ಚಟುವಟಿಕೆ ಆಗಿರುವುದರಿಂದ, ESA ವ್ಯಾಪ್ತಿಯ ಪ್ರದೇಶದಲ್ಲಿ ರಾಸಾಯನಿಕ, ಕ್ರಿಮಿನಾಶಕ, ಕೀಟನಾಶಕ ಬಳಕೆಯನ್ನು  ನಿರ್ಬಂಧಿಸಲಾಗಿದೆ"* ಎಂದು *ಕಾನೂನಿನ ಘೋಷಣ* ಮಾಡಿದರೆ..... ಮಲೆನಾಡಿಗರ ಬದುಕಿಗೆ ಬೇರೆ ವಿಷ ಕೊಡುವುದು ಬೇಡ!!


ಮಲೆನಾಡಿನಲ್ಲಿ ಆಧುನಿಕ ಕೃಷಿ ಪದ್ದತಿಯ ಕ್ರಿಮಿನಾಶಕ, ಕೀಟನಾಶಕ, ರಾಸಾಯನಿಕ ಬಳಸದೆ ಕೃಷಿ ಮಾಡಲು ಸಾಧ್ಯವೇ ಇಲ್ಲ.  ರಾಸಾಯನಿಕ ಕಾಪರ್ ಸಲ್ಫೇಟ್ + ಕ್ಯಾಲ್ಸಿಯಂ ಇಲ್ಲದೆ ಒಂದು ಅಡಿಕೆ ಕಾಯಿಯೂ ಬೆಳೆಗಾರರ ಮನೆಗೆ ಬರುವುದಿಲ್ಲ.  ನೈಸರ್ಗಿಕ ವ್ಯವಸ್ಥೆಯ ಮೇಲೆ ಗಾಢವಾಗಿ ಮತ್ತು ಪ್ರಭಾವಶಾಲಿಯಾಗಿ ಪರಿಣಾಮ ಬೀರುವಂತಹ ಕೃಷಿ ಚಟುವಟಿಕೆಯನ್ನು ESA ವ್ಯಾಪ್ತಿಯ ಪ್ರದೇಶದಿಂದ ನಿರ್ಬಂಧಿಸಿ ನಿಯಂತ್ರಣ ಮಾಡಿದರೆ, ಅದರ ಪರಿಣಾಮ ಜನರ ಸಾವಿನೊಂದಿಗೆ ಮನುಷ್ಯೇತರ ಜೀವ ವೈವಿಧ್ಯತೆ ವಿಸ್ತಾರಗೊಳ್ಳಬಹುದು!.


SIR ಫಾರಂ ಸಿಕ್ಸ್ ಘೋಷಣೆಯಂತಹದೇ ಕಸ್ತೂರಿ ರಂಗನ್ ವರದಿಯ ಇನ್ನೊಂದು ಘೋಷಣೆ: ಪುಟ ಸಂಖ್ಯೆ 29, ಕ್ರಮ ಸಂಖ್ಯೆ 12 "ಪಶ್ಚಿಮ ಘಟ್ಟಗಳ ESA ವಲಯದ 10 ಕಿ.ಮೀ.ಅಂತರದ ವ್ಯಾಪ್ತಿಯಲ್ಲಿಬರುವ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದ್ದಲ್ಲಿ, ಅಂತಹುದನ್ನು EIA ಅಧಿಸೂಚನೆ 2006 ರ ನಿಬಂಧನೆಗಳನುಸಾರ ನಿಯಂತ್ರಿಸಲ್ಪಡತಕ್ಕದ್ದಾಗಿರುತ್ತದೆ"* ಶತಮಾನಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಕಾಡಂಚಿನ ಜನರ ಮನೆಗೇ ಒಂದು ಹಕ್ಕುಪತ್ರದ ಅನುಮತಿ ಕೊಡಲಾರದ ಅರಣ್ಯ ಇಲಾಖೆ ಮೂಲಭೂತ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ಕೊಡಲು ಸಾಧ್ಯವೆ?  ಕೊಡಬಾರದಂತಹ ನಿಯಮ, ನಿಯಂತ್ರಣ, ನಿರ್ಬಂಧಗಳ ಘೋಷಣೆಗಳನ್ನು ಕಾನೂನಿನಲ್ಲಿ ಸೇರಿಸಲು ಕಸ್ತೂರಿ ರಂಗನ್ ವರದಿ ಶಿಫಾರಸ್ ಮಾಡಿದೆ.


ಇಂತಹ ನೂರಾರು ಘೋಷಣೆಗಳು, ಶಿಫಾರಸ್ಸುಗಳು ಮರಣ ಶಾಸನ ಕಸ್ತೂರಿ ರಂಗನ್ ವರದಿಯಲ್ಲಿವೆ.  ಮತ್ತು ಅವುಗಳು SIR ಫಾರಂ ಸಿಕ್ಸ್‌ನ ಘೋಷಣೆಗಿಂತ ಹತ್ತು ಪಟ್ಟು ಜನ ವಿರೋಧಿ, ಜೀವ ವಿರೋಧಿ, ಜೀವನ ವಿರೋಧಿ ಘೋಷಣೆಗಳಾಗಿವೆ. ನಿನ್ನೆ ದೆಹಲಿಯಲ್ಲಿ ವಿಪಕ್ಷಗಳು SIR ಫಾರಂ ಸಿಕ್ಸ್‌ನ್ನು ಸಾಂಕೇತಿಕವಾಗಿ ಸುಟ್ಟು ಪ್ರತಿಭಟನೆ ಮಾಡಿದ್ದು ಸುದ್ಧಿಯಾಗಿದೆ.  ಮಲೆನಾಡಿಗರಿಗೆ ಮರಣ ಶಾಸನ ಎನ್ನಲಾಗುತ್ತಿರುವ ಕಸ್ತೂರಿ ರಂಗನ್ ವರದಿಯನ್ನು ಇದೇ ರೀತಿ ಮಾಡಿ, ಅಂತ್ಯ ಸಂಸ್ಕಾರ ಮಾಡಿ, ಎಳ್ಳು ನೀರು ಬಿಟ್ಟು ಮುಕ್ತಾಯಗೊಳಿಸಿ ಒಂದು ಶಾಂತಿ ಮಂತ್ರ ಹೇಳುವುದು ಒಳ್ಳೆಯದು.  ಅದಲ್ಲಾ ಅಂತಾದರೆ, SIR ಫಾರಂ ಸಿಕ್ಸ್‌‌ನ ಒಂದು ಘೋಷಣೆಗೆ ನೆಡೆಯುತ್ತಿರುವ ಕ್ರಾಂತಿಗಿಂತ ಭೀಕರವಾದ ಕ್ರಾಂತಿ ಮಲೆನಾಡಿನಲ್ಲಿ ಶುರುವಾಗಲಿದೆ ಮತ್ತು ಅದು ದೆಹಲಿಯ ಜಂತರ್ ಮಂತರ್‌ವರೆಗೂ ವ್ಯಾಪಿಸಲಿದೆ. ಇಲ್ವಾ?


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top