ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿ ಪರಿಷತ್‌ನ ಉದ್ಘಾಟನಾ ಸಮಾರಂಭವು ಅಕ್ಟೋಬರ್ 6 ರಂದು ನಡೆಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಪ್ರಜ್ವಲಿಸಿ ಹಾಗೂ ಮಟ್ಟುಗುಳ್ಳದ ಸಸಿಗೆ ನೀರು ಹಾಕುವ ಮೂಲಕ ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಆತ್ಮವಿಶ್ವಾಸ, ಶಿಸ್ತು ಹಾಗೂ ಸಂಘಟನಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಾಘವೇಂದ್ರ ಹೊಳ್ಳ, ಅಧ್ಯಕ್ಷರು ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಮಂಗಳೂರು, ಕಿಶನ್ ಹೆಗ್ಡೆ, ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಕೆ.ಸತ್ಯೇಂದ್ರ ಪೈ, ಸಂಚಾಲಕರು, ಎಸ್.ವಿ.ಎಸ್ ವಿಧ್ಯಾವರ್ಧಕ ಸಂಘ, ಕಟಪಾಡಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ.ರಾಘವೇಂದ್ರ ಹೊಳ್ಳ ಅವರು, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ವಿಕಸನದ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ನಾಯಕತ್ವ, ಸಮಯಪಾಲನೆ, ಶಿಸ್ತು ಮತ್ತು ತಂಡದೊಂದಿಗೆ ಕಾರ್ಯನಿರ್ವಹಿಸುವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು. ಪಠ್ಯಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕ ಅನುಭವ, ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿಗೂ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಿಶನ್ ಹೆಗ್ಡೆ ಅವರು ವಿದ್ಯಾರ್ಥಿ ಪರಿಷತ್‌ನ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಅನಾವರಣಗೊಳಿಸುವ ಪರಿಣಾಮಕಾರಿ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕೆ.ಸತ್ಯೇಂದ್ರ ಪೈ ಅವರು ತ್ರಿಶಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಗೆ ಅಪಾರ ಕೊಡುಗೆ ನೀಡುತ್ತಾ ಬಂದಿದ್ದು ಅವರ ಕಾರ್ಯವನ್ನು ಶ್ಲಾಗಿಸಿದರು. ನೂತನ ವಿದ್ಯಾರ್ಥಿ ಪರಿಷತ್‌ನ ಪದಾಧಿಕಾರಿಗಳಿಗೆ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭ ತ್ರಿಶಾ ವಿದ್ಯಾರ್ಥಿಗಳು ಗಣೇಶ ಚತುರ್ಥಿಗೆ ವೇಷ ತೊಟ್ಟು ಬಂದ ಹಣದಲ್ಲಿ ಕಟಪಾಡಿ ಎಸ್.ವಿ.ಎಸ್ ಕನ್ನಡ ಮಾಧ್ಯಮ ಶಾಲೆಗೆ ಕ್ರೀಡಾ ಸಾಮಗ್ರಿಯನ್ನು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಕ್ ಮ್ಯಾನೇಜರ್ ಶಾಂತ ಪ್ರಿಯ, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೊ. ಕುಲದೀಪ್ ವೈ.ಯು, ನೂತನ ವಿದ್ಯಾರ್ಥಿ ನಾಯಕಿ ಆಂತರ್ಯ ಶೆಟ್ಟಿ, ಉಪನಾಯಕ ಅನಿರುದ್ಧ, ವಿದ್ಯಾರ್ಥಿ ಪರಿಷತ್‌ನ ಉಸ್ತುವಾರಿ ಉಪನ್ಯಾಸಕ ರಾಮದಾಸ್ ನಾಯಕ್, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ವಾನ್ ವಾಗೀಶ್ ಆಚಾರ್ಯ ನಿರೂಪಿಸಿ, ಉಪನ್ಯಾಸಕರಾದ ಪಲ್ಲವಿ ಸ್ವಾಗತಿಸಿದರು, ಸ್ನೇಹ ವಂದಿಸಿದರು.

