ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾನಸಿಕ ರೋಗ ಹಾಗೂ ಮನೋವಿಜ್ಞಾನ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನದ ಪೂರ್ವಭಾವಿಯಾಗಿ “ದಿ ರೆಸಿಲಿಯೆಂಟ್ ವುಮನ್: ಮ್ಯಾನೇಜಿಂಗ್ ಸ್ಟ್ರೆಸ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಆಯುರ್ವೇದ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ, ಮಹಿಳೆಯರ ಜೀವನದಲ್ಲಿ ಮಾನಸಿಕ ಒತ್ತಡದ ನಿರ್ವಹಣೆಯ ಮಹತ್ವವನ್ನು ವಿವರಿಸಿದರು. ಇಂದಿನ ವೇಗದ ಜೀವನಶೈಲಿಯಲ್ಲಿ ಮಹಿಳೆಯರು ಕುಟುಂಬ, ಉದ್ಯೋಗ, ಮಕ್ಕಳ ಆರೈಕೆ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಒಳಗೊಂಡಂತೆ ಹಲವು ಪಾತ್ರಗಳನ್ನು ಏಕಕಾಲದಲ್ಲಿ ನಿರ್ವಹಿಸಬೇಕಾಗುತ್ತದೆ.
ಈ ಬಹುಮುಖ ಜವಾಬ್ದಾರಿಗಳ ನಡುವೆ ಉಂಟಾಗುವ ಒತ್ತಡವು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾನಸಿಕ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸುವುದು ಮಹಿಳೆಯರ ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಅವರ ಮಕ್ಕಳ ಮತ್ತು ಕುಟುಂಬದ ಒಟ್ಟಾರೆ ಕ್ಷೇಮಕ್ಕೂ ಅತ್ಯಂತ ಅಗತ್ಯವಾಗಿದೆ.
ಒತ್ತಡವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗದಿದ್ದರೂ, ಅದನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ನಿಭಾಯಿಸುವ ಕೌಶಲಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಮಾನಸಿಕ ಒತ್ತಡದಲ್ಲಿರುವವರಿಗೆ ನೆರವಾಗಲು ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸುವುದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅಗತ್ಯ ಸಂದರ್ಭದಲ್ಲಿ ಸೂಕ್ತ ಬೆಂಬಲ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಸ್ಪರ ಸಹಾನುಭೂತಿ, ಭಾವನಾತ್ಮಕ ಬೆಂಬಲ ಮತ್ತು ಮುಕ್ತ ಸಂವಹನವು ಆರೋಗ್ಯಕರ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ್ ಶೆಟ್ಟಿ ಮಾತನಾಡಿ, ಮಾನಸಿಕ ಆರೋಗ್ಯವು ಸಮಗ್ರ ಆರೋಗ್ಯದ ಅವಿಭಾಜ್ಯ ಅಂಗವಾಗಿದೆ. ದೈನಂದಿನ ಜೀವನದಲ್ಲಿ ಮಹಿಳೆಯರು ನಿರ್ವಹಿಸುವ ವಿವಿಧ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಗುರುತಿಸುವುದರ ಜೊತೆಗೆ, ಅವರ ಮಾನಸಿಕ ಕ್ಷೇಮಕ್ಕೂ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಶೇ. 70ಕ್ಕಿಂತ ಹೆಚ್ಚು ಬೋಧಕ ಸಿಬ್ಬಂದಿ ಮಹಿಳೆಯರಾಗಿದ್ದು, ಅವರ ಸಂಪೂರ್ಣ ಸಹಕಾರ, ಬದ್ಧತೆ ಮತ್ತು ಬೆಂಬಲದಿಂದ ಸಂಸ್ಥೆಯ ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ಸುಸೂತ್ರವಾಗಿ ನಡೆಯುತ್ತಿವೆ. ಮಹಿಳಾ ಸಿಬ್ಬಂದಿಯ ಕೊಡುಗೆ ಸಂಸ್ಥೆಯ ಪ್ರಗತಿಗೆ ಮಹತ್ವದ ಶಕ್ತಿಯಾಗಿದೆ ಎಂದು ಪ್ರಶಂಸಿಸಿದರು.
ಮಾನಸಿಕ ಆರೋಗ್ಯ ಸೇವೆಗಳಿಗೆ ವಿಶೇಷ ರಿಯಾಯಿತಿ
ಕಾರ್ಯಕ್ರಮದ ಅಂಗವಾಗಿ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಅಗತ್ಯವಿರುವವರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ವಿಶೇಷ ರಿಯಾಯಿತಿಯ ಮಾಹಿತಿಯನ್ನೂ ಹಂಚಿಕೊಳ್ಳಲಾಯಿತು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಮಾನಸಿಕ ರೋಗ ಮತ್ತು ಮನೋವಿಜ್ಞಾನ ವಿಭಾಗದ ವತಿಯಿಂದ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಚಿಕಿತ್ಸಾ ಸೇವೆಗಳಿಗೆ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಈ ಸೌಲಭ್ಯವು ಅಕ್ಟೋಬರ್ 9ರಿಂದ ನವೆಂಬರ್ 8ರವರೆಗೆ ಲಭ್ಯವಿರಲಿದೆ. ವಿಭಾಗದ ವತಿಯಿಂದ ನಿರಂತರವಾಗಿ ನಡೆಸಲಾಗುತ್ತಿರುವ ಕೌನ್ಸೆಲಿಂಗ್ ಮತ್ತು ಇತರ ಮಾನಸಿಕ ಆರೋಗ್ಯ ಸೇವೆಗಳನ್ನು ಅಗತ್ಯವಿರುವವರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಮಾನಸಿಕ ರೋಗ ಮತ್ತು ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ರವಿಪ್ರಸಾದ್ ಹೆಗ್ಡೆ ಅವರು ಅತಿಥಿಗಳನ್ನು ಸ್ವಾಗತಿಸಿ, ಡಾ. ಅರ್ಚಿತಾ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ಅರುಣ್ ಎಂ. ವಂದಿಸಿದರು.

.png)
