ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ (ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ) ಹಾಗೂ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೆ ಒಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಮೈರ್ಪಾಡಿ ಕುಳಾಯಿ ಇವರ ಸಹಯೋಗದಲ್ಲಿ ಸುರತ್ಕಲ್ ಹೋಬಳಿ ಮಟ್ಟದ 14 ರ ವಯೋಮಾನದ ಬಾಲಕ-ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟವು ಎನ್.ಐ.ಟಿ.ಕೆ. ಕ್ರೀಡಾಂಗಣದಲ್ಲಿ ಜರುಗಿತು.
ಬೆಳಗ್ಗೆ 9:00 ಗಂಟೆಗೆ ಕ್ರೀಡಾಪಟುಗಳ ಆಕರ್ಷಣೆಯ ಸಮಾವೇಶದೊಂದಿಗೆ, ವಿದ್ಯಾದಾಯಿನೀ ಪ್ರೌಢ ಶಾಲೆಯ ಬ್ಯಾಂಡ್ ಸೆಟ್ ವಾದನದ ಗತಿಗೆ ತಕ್ಕಂತೆ ಗಣ್ಯರನ್ನು ಸ್ವಾಗತಿಸಿ ಕರೆತರಲಾಯಿತು. ಸುರತ್ಕಲ್ ಹೋಬಳಿಯ ಧ್ವಜಾರೋಹಣವನ್ನು ಹಿಂದು ವಿದ್ಯಾದಾಯಿನೀ ಸಂಘದ ಉಪಾಧ್ಯಕ್ಷರಾದ ಟಿ.ಎನ್. ರಮೇಶ್ ನೆರವೇರಿಸಿದರು. ಶಾಲಾ ಧ್ವಜಾರೋಹಣವನ್ನು ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ರಾವ್ ನೆರವೇರಿಸಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ನಾಡಗೀತೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಜಯಚಂದ್ರ ಹತ್ವಾರ್ ಮಾತನಾಡಿ, "ಮಕ್ಕಳು ಕ್ರೀಡೆಯನ್ನು ಪ್ರೀತಿಸುವುದರ ಮೂಲಕ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ದೇಶಕ್ಕೆ ಕೀರ್ತಿ ತರಲು ಶ್ರಮಿಸಬೇಕು" ಎಂದು ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಧರ್ ಎಚ್. ರವರು ಎಲ್ಲಾ ಅತಿಥಿಗಳ ಸಮ್ಮುಖದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜೀವನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಯನ್ನು ಹಚ್ಚಿಕೊಂಡು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನಾ ಪತ್ರವನ್ನು ಮುಖ್ಯ ಶಿಕ್ಷಕರಿಗೆ ವಿತರಿಸಲಾಯಿತು. ವೇದಿಕೆಯಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಉಪಾಧ್ಯಕ್ಷ ಟಿ.ಎನ್. ರಮೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್.ವಿ. ರಾಘವೇಂದ್ರ ರಾವ್, ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ, ಅಂಗರಗುಂಡಿ ಮತ್ತು ಕಾವೂರು ಕ್ಲಸ್ಟರಿನ ಸಿ.ಆರ್.ಪಿ. ಶ್ರೀಮತಿ ದೀಪಿಕಾ, ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಿತಿನ್ ಪುತ್ರನ್, ಶಾಲಾ ಸಂಚಾಲಕಿ ಶ್ರೀಮತಿ ಕೆ. ಕಲಾವತಿ, ಎಸ್.ಡಿ.ಎಂ.ಸಿ. ಸಂಚಾಲಕ ಯೋಗೀಶ್ ಸನಿಲ್ ಕುಳಾಯಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಪ್ರಭಾಕರ್ ಕುಳಾಯಿ, ಪಿ.ವಿ. ಗಿರೀಶ್ ಹಾಗೂ ನಿವೃತ್ತ ಶಿಕ್ಷಕ ಭರತ್ ಕುಮಾರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲ್. ವಿ ಸ್ವಾಗತಿಸಿದರು. ಸಹಶಿಕ್ಷಕ ಭಾಸ್ಕರ್ ಕೆ. ಕಾರ್ಯಕ್ರಮ ನಿರೂಪಿಸಿದರು ಮತ್ತು ಸಹಶಿಕ್ಷಕ ಮಲಕಪ್ಪ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರದೊಂದಿಗೆ ಅಥ್ಲೆಟಿಕ್ಸ್‌ನ ಎಲ್ಲಾ ವಿಭಾಗಗಳ ಆಟೋಟಗಳು ಸಾಯಂಕಾಲದವರೆಗೆ ಯಶಸ್ವಿಯಾಗಿ ಜರುಗಿದವು. ಸಾಯಂಕಾಲ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾದಾಯಿನೀ ಕ್ರೀಡಾ ಅಕಾಡೆಮಿ ಮಾಜಿ ಸಂಚಾಲಕರಾದ ಸುಬ್ರಹ್ಮಣ್ಯ ಟಿ. ವಹಿಸಿ, ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಅಜೇಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ಬಂಜನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಿತಿನ್ ಪುತ್ರನ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಆನಂದ್, ಎನ್.ಐ.ಟಿ.ಕೆ. ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್ ಹಾಗೂ ಶಾಲಾ ಸಂಚಾಲಕಿ ಶ್ರೀಮತಿ ಕೆ. ಕಲಾವತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಗೋಪಾಲ್. ವಿ ಸ್ವಾಗತಿಸಿ, ಸಹಶಿಕ್ಷಕ ಮದಪ್ಪ ಮಾದರ ನಿರೂಪಿಸಿ, ಮಲಕಪ್ಪ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ, ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರ ಸಹಕಾರದೊಂದಿಗೆ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
