ಮಂಗಳೂರು: "ಈ ಸಮಾಜವು ವಿಪ್ರ ಸಮುದಾಯಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದೆ. ಧರ್ಮ ಹಾಗೂ ಶಾಸ್ತ್ರಗಳ ಸೂಕ್ಷ್ಮತೆಯನ್ನು ಅರಿತುಕೊಂಡು ಆದರ್ಶ ಬದುಕನ್ನು ಬಾಳುವುದರಿಂದಲೇ ನಮ್ಮ ವಿದ್ವತ್ ನಮಗೆ ಗೌರವದ ಸ್ಥಾನ ತಂದುಕೊಟ್ಟಿದೆ. ಸಮಾಜದಲ್ಲಿ ನಾವು ಅಲ್ಪಸಂಖ್ಯಾತರಲ್ಲ; ಬಹುಸಂಖ್ಯೆಯಲ್ಲಿರುವ ನಾವು ಒಗ್ಗಟ್ಟಿನಿಂದ ಮುನ್ನುಗ್ಗಿದರೆ ಮಾತ್ರ ಪ್ರತಿಯೊಂದು ಮನೆಮನೆಯನ್ನು ತಲುಪಲು ಸಾಧ್ಯ. ಈ ಪರಿಸರದ ಪ್ರತೀ ವಿಪ್ರರ ಮನೆಯೂ ದೇವ ಮಂದಿರವಾಗಲಿ" ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಸುರೇಶ ಉಡುಪ ಅವರು ಆಶಿಸಿದರು.
ಅವರು ಕೋಡಿಕಲ್‌ನ ವಿಪ್ರ ವೇದಿಕೆಯ ವತಿಯಿಂದ ಆಯೋಜಿಸಲಾದ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರ ನೇತೃತ್ವದ ಸರಯೂ ಸಭಾಭವನದಲ್ಲಿ ಜರುಗಿದ ಈ ಕಾರ್ಯಕ್ರಮವು ರಸಪ್ರಶ್ನೆಯ ವಿಶಿಷ್ಟ ಸಂಯೋಜನೆಯೊಂದಿಗೆ ಅತ್ಯಂತ ಆಕರ್ಷಕವಾಗಿ ಮೂಡಿಬಂತು.
ವೇದಿಕೆಯಲ್ಲಿ ರಾಮ ಭಟ್, ಕೃಷ್ಣಪ್ರಸಾದ ರಾವ್, ತೆಕ್ಕೆಕೆರೆ ವಿಶ್ವೇಶ್ವರ ಭಟ್, ಸಂಪತ್ ಕುಮಾರ್ ಭಟ್, ಶ್ರೀಮತಿ ಪ್ರಭಾವತಿ ಮಡಿ ಮತ್ತು ರಜನಿ ಉಡುಪ ಮುಂತಾದ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀದುರ್ಗಾದಾಸ್ ಕಟೀಲ್ ಅವರು ಎಲ್ಲರನ್ನು ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶ್ರೀಮತಿ ವಿದ್ಯಾಗಣೇಶ್ ರಾವ್ ಅವರು ಕಾರ್ಯಕ್ರಮದ ಪ್ರಾಯೋಜಕರನ್ನು ಗೌರವಿಸಿದರು. ಅಂತಿಮವಾಗಿ ಶ್ರೀಮತಿ ಇಂದಿರಾ ರಾಮ್ ಭಟ್ ವಂದನಾರ್ಪಣೆಗೈದರು.


