ಮಂಗಳೂರು: ಇಲ್ಲಿನ ಪಾಂಡೇಶ್ವರದ ಸಿಟಿ ಕ್ಯಾಂಪಸ್ನಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಟೂರಿಸಂ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 35ನೇ ವಾರ್ಷಿಕ ಆಹಾರೋತ್ಸವ ‘ಹಾಗ್ 2026’ (HOG 2026) ಶನಿವಾರ, ಅಕ್ಟೋಬರ್ 24ರಂದು ಅತ್ಯಂತ ಸಂಭ್ರಮ-ಸಡಗರದಿಂದ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ. ಶಾಮ ರಾವ್ ಫೌಂಡೇಶನ್ನ ಅಧ್ಯಕ್ಷರಾದ ಡಾ. ಎ. ಶ್ರೀನಿವಾಸ ರಾವ್ ಅವರು, "ಆಹಾರೋತ್ಸವವು ವಿದ್ಯಾರ್ಥಿಗಳ ಪ್ರತಿಭೆ, ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯಾಗಿದೆ. 35 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ 'ಹಾಗ್' ಆಹಾರೋತ್ಸವದ ಬಗ್ಗೆ ಸಾರ್ವಜನಿಕರಲ್ಲಿರುವ ಉತ್ಸಾಹ ಇಂದಿಗೂ ತಗ್ಗಿಲ್ಲ. ಇಂತಹ ಆಯೋಜನೆಗಳು ವಿದ್ಯಾರ್ಥಿಗಳಲ್ಲಿ ತಂಡದ ಕೆಲಸ, ಸಂಘಟನಾ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ" ಎಂದು ಹಾರೈಸಿದರು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ, ಉದ್ಯಮಿ ಹಾಗೂ ಕಂಟೆಂಟ್ ಕ್ರಿಯೇಟರ್ ಸುಧರ್ಶನ್ ಭಟ್ ಬೆದ್ರಡಿ ಅವರು ಮಾತನಾಡಿ, "ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಮರೆಯದೆ ಗುಣಮಟ್ಟ ಹಾಗೂ ಸೃಜನಶೀಲತೆಯಿಂದ ಅಡುಗೆ ತಯಾರಿಸಬೇಕು. ಆಹಾರವು ಕೇವಲ ಹೊಟ್ಟೆ ತುಂಬಿಸುವುದಕ್ಕೆ ಸೀಮಿತವಾಗದೆ ಮನಸ್ಸಿಗೂ ತೃಪ್ತಿ ನೀಡಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಸೃಜನಶೀಲತೆ, ನಿರಂತರ ಪ್ರಯತ್ನ ಹಾಗೂ ಪ್ರಾಯೋಗಿಕ ಜ್ಞಾನ ಯಶಸ್ಸಿಗೆ ಪ್ರಮುಖ ಬುನಾದಿ" ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಕಂಟೆಂಟ್ ಕ್ರಿಯೇಟರ್ ಶ್ರೀಮತಿ ಲಕ್ಷ್ಮೀ ಶೆಣೈ ಅವರು ಮಾತನಾಡಿ, "ಆಹಾರವು ನಮ್ಮ ಪಂಚೇಂದ್ರಿಯಗಳ ಮೂಲಕ ಅನುಭವಿಸುವ ಅದ್ಭುತ ಆಸ್ವಾದವಾಗಿದೆ. ನೋಟ, ಶಬ್ದ, ಸ್ಪರ್ಶ, ಸುವಾಸನೆ ಮತ್ತು ರುಚಿಯ ಮೂಲಕ ಆಹಾರವು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ. ಆಹಾರ ತಯಾರಿಕೆಯ ಪ್ರತಿಯೊಂದು ಹಂತದಲ್ಲೂ ವಿಶೇಷ ಕಾಳಜಿ, ಸೃಜನಶೀಲತೆ ಮತ್ತು ಶ್ರಮ ಅಡಗಿರುತ್ತದೆ" ಎಂದು ಅಭಿಪ್ರಾಯಪಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯರಾದ ಸಮನ್ನಾ ಎಸ್. ರಾವ್ ಅವರು ಶುಭಕೋರಿದರು.
ಕಾರ್ಯಕ್ರಮದಲ್ಲಿ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯರಾದ ಪ್ರೊ. ಇಆರ್. ಮಿತ್ರಾ ಎಸ್. ರಾವ್, ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಟೂರಿಸಂನ ಡೀನ್ ಪ್ರೊ. ಬಿ. ಪ್ರಶಾಂತ್ ಪ್ರಭು ಹಾಗೂ ವಿವಿಧ ವಿಭಾಗಗಳ ಡೀನ್ಗಳಾದ ಡಾ. ವೆಂಕಟೇಶ್ ಅಮೀನ್, ಡಾ. ತ್ರಿಶಾಲ ನೊರೊನಾ, ಡಾ. ಪವಿತ್ರ ಕುಮಾರಿ, ಡಾ. ಪ್ರಾಂಜಲಿ ಮಾತ್ರೆ ಮತ್ತು ಡಾ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಆಕರ್ಷಕ ಆಹಾರ ಮೇಳ ಮತ್ತು ಸಾಂಸ್ಕೃತಿಕ ವೈಭವ:
ಆಹಾರೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿವಿಧ ಶೈಲಿಯ ಖಾದ್ಯಗಳ ‘ಆಹಾರ ಮೇಳ’ ಸರ್ವರ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಮ್ಮ ಪಾಕಕೌಶಲ್ಯ, ಆತಿಥ್ಯ ಸೇವೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದರು. ಆಹಾರ ಮೇಳದ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. 35ನೇ ಆವೃತ್ತಿಯ ‘HOG 2026’ ವಿದ್ಯಾರ್ಥಿಗಳ ಕೌಶಲ್ಯ ಹಾಗೂ ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿ ಯಶಸ್ವಿಯಾಗಿ ಮೂಡಿಬಂತು.

