"CJP ಮಾತ್ರವಲ್ಲ ಪ್ರಧಾನಿ ಮೋದಿ ವಿರುದ್ಧ ಯಾರೇ ಪ್ರತಿಭಟಿಸಿದರೂ ಪಕ್ಷ ಹಣಕಾಸು ನೆರವು ನೀಡಲಿದೆ" ಎಂಬ ಒಂದು ಪಕ್ಷ ನಾಯಕನ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಾ ಇದೆ. ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ನೆಡೆದ SIR ವಿರುದ್ಧದ ಪ್ರತಿಭಟನೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಣ ಕೊಟ್ಟು ಪ್ರತಿಭಟನೆಕಾರರನ್ನು ಕರೆತರಲಾಗಿತ್ತು. SIR ಅಂದರೆ ಏನು? ಯಾವ ಉದ್ದೇಶಕ್ಕೆ? ಯಾರ ವಿರುದ್ಧ ಪ್ರತಿಭಟನೆ ಆಗುತ್ತಿದೆ? ಯಾರು ರಾಜಿನಾಮೆ ಕೊಡಬೇಕು? ಯಾಕೆ ಕೊಡಬೇಕು? ಅಂತೆಲ್ಲ ಮಾಧ್ಯಮದವರು ಪ್ರಶ್ನೆ ಮಾಡಿದರೆ.... ಪ್ರತಿಭಟನಾಕಾರರಲ್ಲಿ ಬೇಸಿಕ್ ಮಾಹಿತಿ ಅಕ್ಷರಷಃ ಇರಲಿಲ್ಲ. ಬಹುತೇಕ ಪ್ರತಿಭಟನಾಕಾರರನ್ನು ಹಣ, ತಿಂಡಿ, ಊಟ (ಕೆಲವರಿಗೆ ಮನೆ, ಸೈಟು ಕೊಡುವ ಆಶ್ವಾಸನೆಯೂ ಇತ್ತಂತೆ!!) ಕೊಟ್ಟು ಕರೆತರಲಾಗಿತ್ತು.
ತಮಾಷೆ ಅಂದರೆ, ಬೆಂಗಳೂರಿನ SIR ವಿರುದ್ಧದ ಪ್ರತಿಭಟನೆಯ ಸ್ಟೇಜ್ ನಾಯಕನಾಗಿದ್ದವ 'ಮಾರಿಕೊಂಡ ಮಾಧ್ಯಮ' ಅಂತ ಮಾಧ್ಯಮಗಳನ್ನು ಟೀಕೆ ಮಾಡಿದವ!! ಈಗ ಅದೇ ನಾಯಕ ಪ್ರತಿಭಟನಾಕಾರರಿಗೆ ಹಣ (ಮನೆ, ಸೈಟು) ಆಮಿಷ ತೋರಿಸಿ ಪ್ರತಿಭಟನೆಗೆ ಕರೆ ತಂದು, ಪ್ರತಿಭಟನಾಕಾರರನ್ನು ಮಾರಿಕೊಂಡ ಪ್ರತಿಭಟನಾಕಾರರು ಅಂತ ನಿರೂಪಿಸಿದ್ದು ದೊಡ್ಡ ಜೋಕ್ ಆಗಿ ಪರಿಣಮಿಸಿದೆ!!. 'ಮಾರಿಕೊಂಡ ಮಾಧ್ಯಮ' ಅಂತ ಹೇಳಿದವನೇ ಮಾರಿಕೊಂಡ ಪ್ರತಿಭಟನಾಕಾರರನ್ನು ಕರ್ಕೊಂಡು ಬಂದಿದ್ದು ಒಂದು ಕಡೆಯಾದರೆ, "CJP ಮಾತ್ರವಲ್ಲ ಪ್ರಧಾನಿ ಮೋದಿ ವಿರುದ್ಧ ಯಾರೇ ಪ್ರತಿಭಟಿಸಿದರೂ ಪಕ್ಷ ಹಣಕಾಸು ನೆರವು ನೀಡಲಿದೆ" ಎಂದು ಒಂದು ಪಕ್ಷದ ನಾಯಕ ಹೇಳಿಕೆ ನೀಡಿದ್ದು, ಇತ್ತೀಚಿನ ಪ್ರತಿಭಟನೆಗಳೆಲ್ಲ ಕೇವಲ ಕೇವಲ ಮತ್ತು ಕೇವಲ ಪೆಯ್ಡ್ ಪ್ರತಿಭಟನೆಗಳು ಎಂಬುದು ಜಗಜ್ಜಾಹೀರಾಗಿ ಹೋಗಿದೆ!!.
ಇತ್ತೀಚೆಗಿನ ದೆಹಲಿಯ ಎಲ್ಲಾ ಪ್ರತಿಭಟನೆಗಳೂ ಕೂಡ ಇದೇ ರೀತಿ 'ಮಾರಿಕೊಂಡ ಪ್ರತಿಭಟನಾಕಾರರ' ಪ್ರತಿಭಟನೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಪ್ರತಿಭಟನಾಕಾರರ ನಾಯಕರೂ ಈಗ ಮಾರಿಕೊಂಡ ಪ್ರತಿಭಟನಾಕಾರರು!! ಇರಲಿ. ಹೀಗೆದ್ದೆಲ್ಲ ನೆಡಯುತ್ತಿರಬೇಕು. ಹೀಗೆಲ್ಲ ನೆಡೆಯುವುದರಿಂದ ಕೆಲವರ ನೈಜ ಬಣ್ಣ ಬಯಲಿಗೆ ಬರುತ್ತೆ. ಇಂತಹ ಪ್ರತಿಭಟನೆಗಳನ್ನು ತಮಾಷೆಯಾಗಿಯೇ ತೆಗೆದುಕೊಳ್ಳುವಂತೆ ಪಕ್ಷಗಳು, ಪ್ರತಿಭಟನಾಕಾರರ ನಾಯಕರು ಮತ್ತು ಮಾರಿಕೊಂಡ ಪ್ರತಿಭಟನಾಕಾರರೇ ಮಾಡುವಾಗ, ನಾವೂ ಪ್ರತಿಭಟನೆಯನ್ನು ತಮಾಷೆಯಾಗಿಯೇ ತೆಗೆದುಕೊಳ್ಳೋಣ!! ಯಾವಾಗ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರವಾಗಿದ್ದ "ಪ್ರತಿಭಟನೆ"ಯಂತಹ ಗಂಭೀರ ವಿಷಯವನ್ನು ಹಣ, ಊಟ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಂಡು ತಮಾಷೆ ಮಾಡಲಾಗುತ್ತದೆಯೋ, ಆಗ ಜನಸಾಮಾನ್ಯರೂ ಅದನ್ನು ನಗೆಪಾಟಲಿನಿಂದಲೇ ನೋಡುವುದು ಸಹಜ. ಇಂತಹ ಘಟನೆಗಳು ಹಾಗೂ ಬಾಡಿಗೆ ಪ್ರತಿಭಟನಾಕಾರರ ಮಾತು ನೆಡೆಗಳು, ಜನಸಾಮಾನ್ಯರಿಗೆ ರಾಜಕೀಯದ ಹಿಂದಿರುವ ಅಸಲಿ ಸತ್ಯವನ್ನು ಮತ್ತು ಮುಖವಾಡಗಳನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.
'ಮಾರಿಕೊಂಡ ಪ್ರತಿಭಟನಾಕಾರ' ಬಣ್ಣ ಕಳಚಿಕೊಳ್ಳುವಾಗಿನ ಸ್ಥಿತಿಯನ್ನು ತಮಾಷೆಯಾಗಿಯೇ ನೋಡುವುದಾದರೆ..... ಪ್ರತಿಭಟನಾಕಾರರನ್ನು ಸಂದರ್ಶನ ಮಾಡಿ ಆಯ್ಕೆ ಮಾಡುವಾಗ ಕೇಳುವ ಪ್ರಶ್ನೆ: "ನಿಮಗೆ ಎಷ್ಟು ಗಂಟೆವರೆಗೆ ಘೋಷಣೆ ಕೂಗುವ ಅಭ್ಯಾಸವಿದೆ? ಬಿಸಿಲಿನಲ್ಲಿ ನಿಲ್ಲಲು ಸಾಧ್ಯವೇ? ಮೋದಿಯವರ ಬಗ್ಗೆ ಎಷ್ಟು ಕೋಪ ತೋರಿಸಬಲ್ಲಿರಿ?" ಪ್ರತಿಭಟನಾ ಸ್ಥಳದಲ್ಲಿ ಟಿವಿ ಸಂದರ್ಶಕ: ಮೋದಿ ಯಾರು?" ಪ್ರತಿಭಟನಾಕಾರ: "ನಮಗೆ ಗೊತ್ತಿಲ್ಲ ಸಾರ್, ಬೆಳಗ್ಗೆ ಟಿಫನ್ ಕೊಟ್ಟು, 500 ರೂಪಾಯಿ ಕೊಡ್ತೀವಿ ಅಂದ್ರು, ಅದಕ್ಕೆ ಬಂದಿದ್ದೀವಿ" ಪಕ್ಷದ ನಾಯಕ: "ಇಕಳಿ, ಈ ಕೆಂಪು ಪುಸ್ತಕ ಹಿಡ್ಕೊಂಡು ಪ್ರತಿಭಟನೆ ಮಾಡಬೇಕು. ಸಂಜೆ ಪುಸ್ತಕ ವಾಪಾಸ್ ಕೊಟ್ಟು ಕೂಲಿ ಇಸ್ಕಳಿ". 'ಅಖಿಲ ಭಾರತ ಪ್ರತಿಭಟನಾಕಾರರ ಸಂಘ'ದ ಅಧ್ಯಕ್ಷ, ಪಕ್ಷದ ನೇತಾರನ ಮನೆ ಮುಂದೆ ಪ್ರತಿಭಟನೆ ಮಾಡುತ್ತ ಇಡುವ ಬೇಡಿಕೆ " ಮೋದಿ ವಿರುದ್ಧ ಪ್ರತಿಭಟನೆಗೆ ಈಗ ಕೊಡುತ್ತಿರುವ ದಿನಗೂಲಿಯನ್ನು ಕನಿಷ್ಠ 1000 ರೂಪಾಯಿಗೆ ಏರಿಸಬೇಕು. ಮಹಾನಗರಗಳಲ್ಲಿ ಪ್ರತಿಭಟನೆ ನಡೆಸಿದರೆ 'ಅಲೋಯನ್ಸ್' ಪ್ರತ್ಯೇಕವಾಗಿ ಕೊಡಬೇಕು. ಪ್ರತಿಭಟನಾ ಕೂಲಿ ಏರಿಸದ 'ಪಂಚ ಬೆರಳು' ಪಕ್ಷವನ್ನು ತೊರೆದ 'ಅಖಿಲ ಭಾರತ ಪ್ರತಿಭಟನಾಕಾರರ ಸಂಘ', ಜಿರಳೆ ಪಕ್ಷದ ಕದ ತಟ್ಟುತ್ತಿದೆ!!
ಪತ್ರಕರ್ತರು ಮತ್ತು ಮಾಧ್ಯಮದವರು ಪ್ರತಿಭಟನಾ ಸಂಘಟನೆಯ ಅಧಿಕೃತ ಬಾತ್ಮೀದಾರರನ್ನು ಮಾತ್ರ ಪ್ರಶ್ನಿಸುವಂತೆ ಪ್ರತಿಭಟನಾ ಸಂಘಟನೆಯ ನಿರ್ಬಂಧ. (ಇತ್ತೀಚೆಗೆ ಬೆಂಗಳೂರಿನಲ್ಲಿ CJP ಹಮ್ಮಿಕೊಂಡಿದ್ದ SIR ವಿರುದ್ಧದ ಪ್ರತಿಭಟನೆಯಲ್ಲಿ, ಮಡಿಕೇರಿಯಿಂದ ಬಂದ Paid ಪ್ರತಿಭಟನಾಕಾರರನ್ನು "SIR ಅಂದರೇನು? ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೀರಿ?" ಎಂದು ಕೇಳಿದಾಗ, "ನಮಗೇನೂ ಗೊತ್ತಿಲ್ಲ, ಹಣ, ಊಟ, ಬಸ್ ಸೌಕರ್ಯ ಕೊಟ್ಟು ಕರ್ಕೊಂಬಂದಿದ್ದಾರೆ" ಅಂತ ಪ್ರಾಮಾಣಿಕವಾಗಿ ಹೇಳಿದ್ದನ್ನು ಮಾಧ್ಯಮಗಳು "ಪ್ರತಿಭಟನಾಕಾರರಿಗೆ ತಿಳುವಳಿಕೆ ಇಲ್ಲ" ಎಂದು ಅವಮಾನಿಸಿದ ಹಿನ್ನಲೆಯಲ್ಲಿ, ಪ್ರತಿಭಟನಾ ಸಂಘಟನೆಗಳು ಪತ್ರಕರ್ತರಿಗೆ ಮತ್ತು ಮಾಧ್ಯಮದವರಿಗೆ ಈ ನಿರ್ಬಂಧ ವಿದಿಸಿದೆ!!) 'ಮಾರಿಕೊಂಡ ಮಾಧ್ಯಮಗಳು' ಅಂತ ಮಾಧ್ಯಮಗಳನ್ನು ಜರಿದ ಪ್ರತಿಭಟನಾಕಾರ ನಾಯಕ, ಫ್ರೀಡಂ ಪಾರ್ಕ್ನಲ್ಲಿ SIR ಪ್ರತಿಭಟನೆಗೆ 'ಮಾರಿಕೊಂಡ ಪ್ರತಿಭಟನಾಕಾರರನ್ನು' ಹಣ ಕೊಟ್ಟು ಕರೆದು ತಂದಿರುವ ಸುದ್ಧಿ ತಡವಾಗಿ ಬೆಳಕಿಗೆ ('ಪ್ರಕಾಶ'ಕ್ಕೆ) ಬಂದಿದೆ.
ಜಂತರ್ ಮಂತರ್ನಲ್ಲಿ ನಿಂತು ಘೋಷಣೆ ಕೂಗುವವರ ಡಿಮ್ಯಾಂಡನ್ನು ಗಮನದಲ್ಲಿಟ್ಟುಕೊಂಡು, "ಅಖಿಲ ಭಾರತ ಪ್ರತಿಭಟನಾಕಾರರ ಸಂಘ" ಹೊಸದೊಂದು ಬೇಡಿಕೆಯನ್ನು 'ಪಂಚ ಬೆರಳು' ಪಕ್ಷದ ಮುಂದಿಟ್ಟಿದೆ. ಪ್ರತಿಭಟನಾ ಸ್ಥಳದಲ್ಲಿ ಬರೀ ಮಜ್ಜಿಗೆ ಅನ್ನ ಮತ್ತು ಪುಳಿಯೋಗರೆ ನೀಡಿದರೆ ಸಾಕಾಗುವುದಿಲ್ಲ; ಮಧ್ಯಾಹ್ನದ ಊಟದಲ್ಲಿ ಕನಿಷ್ಠ ಪಕ್ಷ ಒಂದು ಸಿಹಿ ಮತ್ತು ಐಸ್ ಕ್ರೀಮ್ ಕಡ್ಡಾಯವಾಗಿ ನೀಡಬೇಕು. ಇಲ್ಲವಾದರೆ ಮಧ್ಯಾಹ್ನದ ನಂತರದ ಅವಧಿಯಲ್ಲಿ ಘೋಷಣೆಗಳ ಆರ್ಭಟ ಶೇ. 50ರಷ್ಟು ಕಡಿಮೆ ಮಾಡುತ್ತೇವೆ ಎಂದು ಮುಖಂಡರು ರಾಷ್ಟ್ರೀಯ 'ಪಂಚ ಬೆರಳು' ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗೆ ಜನರನ್ನು ಹುಡುಕಲು ಪಡುತ್ತಿರುವ ಕಷ್ಟವನ್ನು ತಪ್ಪಿಸಲು, ಅಖಿಲ ಕರ್ನಾಟಕ ಪ್ರತಿಭಟನಾಕಾರರ ಸಂಘಟನೆ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಯಾವ ಪಕ್ಷಕ್ಕೆ ಎಷ್ಟು ಜನ ಪ್ರತಿಭಟನಾಕಾರರು ಬೇಕು, ಯಾವತ್ತಿಗೆ ಬೇಕು? ಯಾವ ವಿಷಯದ ಬಗ್ಗೆ ಧರಣಿ ನಡೆಸಬೇಕು ಎಂಬುದನ್ನು ಮುಂಚಿತವಾಗಿ ಬುಕ್ ಮಾಡಬಹುದು. ಆನ್ಲೈನ್ ಮೂಲಕವೇ ಹಣ ಪಾವತಿಸುವ ಸೌಲಭ್ಯವಿರುತ್ತದೆ!!
ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿಭಟನೆಗಳ ಸಂಖ್ಯೆ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಘಟಕರು, ಪ್ರತಿಭಟನಾ ನಿರತರಿಗೆ 'ಮಾನ್ಸೂನ್ ಪ್ಯಾಕೇಜ್' ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಪ್ರತಿಭಟನಾಕಾರರಿಗೆ ಪಕ್ಷದ ಬಣ್ಣದ ರೈನ್ ಕೋಟ್, ಕೊಡೆ ಹಾಗೂ ಬಿಸಿ ಬಿಸಿ ಚಹಾ ವಿತರಿಸಲು ಪ್ರಾಯೋಜಕ 'ಬೆರಳು ಪಕ್ಷ' ದ ಜೊತೆ ಒಪ್ಪಂದ ಮಾಡಿಕೊಂಡಿದೆ. "ಮಳೆ ಬಂದರೂ ಧರಣಿ ನಿಲ್ಲುವುದಿಲ್ಲ" ಎಂಬ ಘೋಷವಾಕ್ಯ ರೈನ್ ಕೋಟು ಮತ್ತು ಕೊಡೆಗಳ ಮೇಲೆ ಪಕ್ಷದ ಚಿಹ್ನೆಯೊಂದಿಗೆ ಮುದ್ರಿಸಲಾಗಿದೆ!! ಮಾಧ್ಯಮಗಳ ಎದುರು ಮಾತನಾಡುವಾಗ ಸಂಘವು 'ಮಾಧ್ಯಮ ಎದುರಿಸುವ ಕಲೆ' ಹೆಸರಿನಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದೆ. ಟಿವಿ ಕ್ಯಾಮೆರಾ ಹಾಗೂ ಮೈಕ್ ಕಂಡ ತಕ್ಷಣ ಹೆದರಿ ಓಡಿಹೋಗದೆ ಅಥವಾ ಅಪ್ಪಟ ಸತ್ಯವನ್ನು ಹೇಳದೆ, "ಸಂವಿಧಾನದ ಆಶಯಗಳನ್ನು ಉಳಿಸಲು ನಾವು ಸ್ವಯಂಪ್ರೇರಿತರಾಗಿ ಬಂದಿದ್ದೇವೆ" ಎಂದು ನಟಿಸುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ!!
ಪ್ರತಿಭಟನೆಗೆ ಬರುವ ಜನ ಕೊನೆಯಲ್ಲಿ ಹಣ ಪಡೆದು ನಡುವೆ ಜಾರಿಕೊಳ್ಳುವುದನ್ನು ತಡೆಯಲು ಸಂಘಟಕರು ಹೈಟೆಕ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಪ್ರತಿಭಟನಾ ಸ್ಥಳದ ಪ್ರವೇಶದ್ವಾರದಲ್ಲೇ 'ಬಯೋಮೆಟ್ರಿಕ್ ಹಾಜರಾತಿ' ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಬರುವಾಗ ಒಂದು ಸಾರಿ, ಸಂಜೆ ಪ್ರತಿಭಟನೆ ಮುಗಿಸಿ ಹೋಗುವಾಗ ಒಂದು ಸಾರಿ ಥಂಬ್ ಇಂಪ್ರೆಷನ್ ಕೊಟ್ಟರೆ ಮಾತ್ರ ದಿನದ ಕೂಲಿ ಖಾತೆಗೆ ಜಮೆ ಆಗಲಿದೆ! ರಾಜಕೀಯ ಪಕ್ಷಗಳ ನಡುವೆ ಪ್ರತಿಭಟನಾಕಾರರ ಕೊರತೆ ಎದುರಾಗಿರುವುದರಿಂದ, 'ಪಂಚ ಬೆರಳು' ಪಕ್ಷ ಮತ್ತು 'ಜಿರಳೆ ಪಕ್ಷ'ಗಳ ನಡುವೆ ಹರಾಜಿನ ವಾತಾವರಣ ನಿರ್ಮಾಣವಾಗಿದೆ!! ಇದೇ ಕಾರಣಕ್ಕೆ ಇದುವರೆಗೆ 'ಪಂಚ ಬೆರಳು ಪಕ್ಷ', 'ಜಿರಳೆ ಪಕ್ಷದ' ಪ್ರತಿಭಟನೆಗಳಿಗೆ ಕೊಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅತ್ಯಂತ ಆವೇಶದಿಂದ, ದಣಿವರಿಯದೆ ಗಂಟಲು ಹರಿಯುವವರೆಗೆ ಘೋಷಣೆ ಕೂಗುವ ಪ್ರತಿಭಟನಾಕಾರ ನಾಯಕನಿಗೆ 'ಪಂಚ ಬೆರಳು ಪಕ್ಷ' 'ವರ್ಷದ ಶ್ರೇಷ್ಠ ಅರಚಾಟಗಾರ' ಪ್ರಶಸ್ತಿ ನೀಡಿ, ಮುಂದಿನ ದೊಡ್ಡ ಪ್ರತಿಭಟನೆಗಳಿಗೆ ಅವರನ್ನು ವಿಶೇಷ ಪ್ರತಿಭಟನಾಕಾರರನ್ನಾಗಿ ಆಯ್ಕೆ ಮಾಡಿದೆ!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248

