ಎಡಗೈ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು, ದಾನ ಧರ್ಮ ತೋರ್ಪಡಿಕೆಗಲ್ಲ, ಸದ್ದಿಲ್ಲದೇ ಕೈಲಾದದ್ದು ಮಾಡುತ್ತಾ ಸಾಗಬೇಕು- ಇದೊಂದು ವ್ಯಾಖ್ಯಾನ ಚಿಕ್ಕಂದಿನಿಂದಲೂ ಕೇಳಿ ಬೆಳೆದ ಸಂಸ್ಕಾರ. ಮತ್ತೊಬ್ಬರ ಸಂತೋಷಕ್ಕಾಗಿ ಏನಾದರೂ ಮಾಡುವುದು, ಪ್ರತಿ ಆಚರಣೆ, ವಿಶೇಷ ದಿನವನ್ನು ಪ್ರೀತಿ ಪಾತ್ರರೊಂದಿಗೆ ಸಂಭ್ರಮಿಸುವುದು ಅಪ್ಪಾಜಿ ಅಮ್ಮನ ಗುಣದ ಅನುಕರಣೆ. ಹಾಗಾಗಿ ಚಿಕ್ಕಂದಿನಿಂದಲೂ ಅದೇ ದಾರಿಯ ಬದುಕು. ಹೀಗೆ ಬದುಕು ಬದಲಾಗಲು ಹೊಸ ಹೊಸ ಆಯಾಮಗಳು, ಜೊತೆಗೆ ಜೊತೆಯಾದ ಸಾಮಾಜಿಕ ಜಾಲತಾಣದ ನಂಟು. ವಿದ್ಯೆಗೆ ಮಾನ್ಯತೆ ಮತ್ತು ಮಧ್ಯಮ ವರ್ಗದ ಜೀವನ ಶೈಲಿ ಬೇರೆಯವರಿಗೆ ಹೋಲಿಸಿದರೆ ಸಾಮಾಜಿಕ ಜಾಲತಾಣಕ್ಕೆ ನನ್ನ ಆಗಮನ ತುಸು ತಡವೇ, ಆದರೆ ದಿನ ಕಳೆದಂತೆ ಅದು ಬದುಕಿನ ಭಾಗವಾಯಿತು.
ಈಗ ನಾನು ಎಲ್ಲೇ ಹೋದರೂ ಯಾರನ್ನಾದರೂ ಮಾತನಾಡಿಸಿದರೂ ಒಂದು ಸಾಮಾನ್ಯ ಮಾತು- ಹಾ ನಿಮ್ಮ ಬಗ್ಗೆ fb ಅಲ್ಲಿ ನೋಡಿದ್ದೇವೆ, ನಿಮ್ಮ ಕವಿತೆ ವಾಟ್ಸ್ ಆ್ಯಪ್ ನಲ್ಲಿ ಓದಿದ್ದೇವೆ, ನಿಮ್ಮ ಜೀವನಶೈಲಿ, ಆಸ್ಪತ್ರೆ l, ಕುಟುಂಬ ಎಲ್ಲಾ ನಿಮ್ಮ ಸ್ಟೇಟಸ್ ಅಲ್ಲಿ ನೋಡ್ತಾ ಇರ್ತೀವಿ, ಒಮ್ಮೊಮ್ಮೆ ಅತಿಯಾಗಿ ಖಾಸಗಿ ವಿಷಯಗಳನ್ನು ತೋರ್ಪಡಿಕೆ ಮಾಡುತ್ತೇವೆ ಎಂದೆನಿಸಿದರೂ ಹೀಗೆ ಅವರು ಹೇಳುವ ಅಂಶಗಳನ್ನು ಕೇಳಿದಾಗ ಸಾಮಾಜಿಕ ಜಾಲತಾಣ ಎಷ್ಟರ ಮಟ್ಟಿಗೆ ಜಗತ್ತನ್ನು ಒಂದಾಗಿಟ್ಟಿದೆ ಎಂದೆನಿಸುತ್ತದೆ.
ಅಪ್ಪಾಜಿ ನನಗೆ ಕೆಲಸ ಸಿಕ್ಕ ವರ್ಷ ಅಮ್ಮನ ಬ್ಯಾಡರಹಳ್ಳಿ ಶಾಲಾ ಮಕ್ಕಳಿಗೆ ತಾವೇ ಮುಂದಾಗಿ ನಿಂತು ನೋಟ್ ಪುಸ್ತಕಗಳನ್ನು ಹಂಚಿದ್ದರು. ಬಹುಶಃ ಅಂದು ನಾನು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚದೇ ಹೋಗಿದ್ದರೆ ಇಂದು 15ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆಯಲು ಸಾಧ್ಯವೇ ಇರುತ್ತಿರಲಿಲ್ಲ. ಆ ಒಂದು ಶಾಲೆಗೆ ನಮ್ಮ ಕುಟುಂಬ ಸೀಮಿತವಾಗಿ ನಮ್ಮ ಸಾಮರ್ಥ್ಯ ಇಷ್ಟೇ ಎಂದು ಸುಮ್ಮನಾಗುತ್ತಿದ್ದೆವು. ಆ ದಿನ ಒಂದೆರಡು ಪೋಟೋ ಸ್ಟೇಟಸ್ ಮಾಡಿದ್ದೆ, ಹಲವಾರು ಜನ ಲೈಕ್ ಮಾಡಿದರು, ಲೈಕ್ ಅಲ್ಲಿ ಲೆಕ್ಕಕ್ಕೆ ಇರಲಿಲ್ಲ, ಅಲ್ಲಿ ನನಗೆ ಲೆಕ್ಕಕ್ಕೆ ಬಂದದ್ದು ಹೀಗೆ ಶಾಲೆಗಳಿಗೆ ಸಹಾಯ ಮಾಡುವ ಮನಸ್ಸಿರುವವರ ಸ್ಪಂದನೆ, ನಾವು ಹೀಗೆ ಮಾಡಬೇಕು, ಹೇಗೆ ಮಾಡಿದೆ, ಎಷ್ಟು ಹಣ ಬೇಕು ಹೀಗೆ ಅನೇಕ ಮನಸ್ಸುಗಳ ಮಿಡಿತ ಅರಿತ ನಾನು "ಅವಿರತ " ಟ್ರಸ್ಟ್ ಭಾಗವಾಗಿ ನನ್ನನ್ನು ವಿಚಾರಿಸಿದ ಜನರ ಸಹಾಯ ಪಡೆದು ಮುಂದಿನ ವರ್ಷಕ್ಕೆ 5 ಶಾಲೆಗಳಿಗೆ ನನ್ನ ಕೆಲಸ ವಿಸ್ತರಿಸಿದೆ, ಹೀಗೆ ಪ್ರತಿ ವರ್ಷ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕೆಲಸ ಗಮನಿಸಿದ ಹಲವಾರು ಜನ ಆ ಕಾರ್ಯಕ್ಕೆ ಕೈಜೋಡಿಸಿ ಈಗ ಪ್ರತಿ ವರ್ಷ ಹತ್ತರಿಂದ ಹದಿನೈದು ಶಾಲೆಗಳ ಮಕ್ಕಳು ಉಚಿತ ನೋಟು ಬುಕ್ ಪಡೆದು ವಿದ್ಯಾವಂತರಾಗುತ್ತಿದ್ದಾರೆ. ಈ ಕೆಲಸ ಮಾಡುವಾಗ ತೋರ್ಪಡಿಕೆ ಎಂದು ಜರಿಯುವ ಮಂದಿ, ಅದೇ ಹಣವನ್ನು ನಮಗೆ ಕೊಡಲಿ ಎನ್ನುವ ಸಂಬಂಧಿಗಳು, ಮುಂದೆ ರಾಜಕೀಯಕ್ಕೆ ಬರಬಹುದು ಎಂದು ಅಪಹಾಸ್ಯ ಮಾಡಿದ ಎಷ್ಟೋ ಮಂದಿಗೆ ಕಿವಿಕೊಟ್ಟು ಕೆಲಸ ನಿಲ್ಲಿಸಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚದೇ ತೆರೆಮರೆಯಲ್ಲಿ ಕೆಲಸ ಮಾಡಿದ್ದರೆ ಬಹುಶಃ ನಾವು ಒಂದು ಅಥವಾ ಎರಡು ಶಾಲೆಗೆ ಸೀಮಿತವಾಗಿ ಬಿಡುತ್ತಿದ್ದೆವು- ಈ ಅನುಭವ ಕಲಿಸಿದ ಪಾಠ, ಎಷ್ಟೋ ಜನಕ್ಕೆ ಸಹಾಯ ಮಾಡುವ ಮನಸ್ಸಿರುತ್ತದೆ, ಸಮಯದ ಅಭಾವ ಅಥವಾ ದಾರಿ ಹುಡುಕುವ ಪ್ರಯತ್ನ ಕಷ್ಟ ಎಂದು ಸುಮ್ಮನಾಗುತ್ತಾರೆ, ನಮ್ಮ ಸಾಮಾಜಿಕ ಜಾಲತಾಣದ ವಿಚಾರ ಅವರಿಗೆ ಒಂದು ಕಿಡಿಹೊತ್ತಿಸಲು ಅವರ ಮನಸ್ಸು ಮಿಡಿದು ಹತ್ತು ನೂರಾಗಿ ಹಲವರಿಗೆ ನೆರವಾಗುತ್ತದೆ.
ಇದೇ ಅವಿರತ ಪ್ರಯತ್ನ ನನಗೆ ಎಷ್ಟೋ ಈ ರೀತಿಯ ಸಮಾನಮನಸ್ಕರ ಪರಿಚಯ ಮಾಡಿಸಿದೆ. ಅನೇಕ ಈ ತರದ ಸಂಘಗಳ ಭಾಗವಾಗಿ ನಾನು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಇದಕ್ಕಿಂತ ಹೆಮ್ಮೆಯ ವಿಷಯ ಇದೇ ಮನೋಭಾವದಲ್ಲಿ ಪರಿಚಯವಾದ ವ್ಯಕ್ತಿಯಿಂದ ಕಡುಬಡವ ಮಕ್ಕಳು ಇಂಜಿನಿಯರ್ ವೈದ್ಯಕೀಯ ವೃತ್ತಿಗೆ ವಿದ್ಯಾಭ್ಯಾಸಕ್ಕೆ ಹೋದಾಗ ಪುಸ್ತಕ ಕೊಳ್ಳಲೂ ಪರದಾಡುತ್ತಿದ್ದ ಕುಟುಂಬಗಳಿಗೆ ಪ್ರತಿ ವರ್ಷ NGO ವತಿಯಿಂದ ಸ್ಕಾಲರ್ಷಿಪ್ ಕೊಡಿಸಲು ನೆರವಾಗಿ ಬಡ ಮಕ್ಕಳು ಕುಟುಂಬಕ್ಕೆ ಆಧಾರವಾದ ನಿದರ್ಶನವಿದೆ. ಇಂತಹ ಉದಾಹರಣೆ ದಿನನಿತ್ಯ ಸಾಗುವಾಗ ಸಾಮಾಜಿಕ ಜಾಲತಾಣ ನನಗೆ ತೋರ್ಪಡಿಕೆ ಸಾಧನವಲ್ಲದೇ ಒಂದು ಸಮಾನಮನಸ್ಕರ ವೇದಿಕೆ ಎನಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆಯಲ್ಲಿದ್ದಾಗ ಒಂದು ಕನ್ನಡ ಗೋಡೆ ನಿರ್ಮಾಣ ಮಾಡಿದೆ. ಆ ಒಂದು ಗೋಡೆ ಕನ್ನಡ ಪ್ರೇಮದ ಪ್ರತೀಕವಾಗಿ ಕರ್ನಾಟಕದ ಶ್ರೀಮಂತಿಕೆ ಸಾರಬೇಕೆಂದು ಪತ್ರಕರ್ತರೊಬ್ಬರನ್ನು ಇಡಿದು ಚರ್ಚಿಸಿ ಅವರ ಧನ ಸಹಾಯದಿಂದ ಆ ಗೋಡೆಗೆ ಕನ್ನಡ ರಾಯಭಾರಿ ರೂಪ ಕೊಟ್ಟು ಅನಾವರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದೆ. ಆ ಒಂದು ಕೆಲಸಕ್ಕೆ ನಾವು ಪಟ್ಟ ಪರಿಶ್ರಮ ತೆರೆ ಹಿಂದಿನ ಕುಸೂರಿ ನಮಗಷ್ಟೇ ಗೊತ್ತು, ಆದರೆ ಅದರ ಅನಾವರಣದ ವಿಡಿಯೋ ನೋಡಿದ ಎಷ್ಟು ಮಂದಿ ಬಾಯಿ ಮೇಲೆ ಬೆರಳಿಟ್ಟು ನನ್ನನ್ನು ಶ್ಲಾಘಿಸಿದರು. ಕೆಲವೇ ತಿಂಗಳಲ್ಲಿ ಅದೇ ಗೋಡೆಯ ಪ್ರತಿರೂಪ ಅನೇಕ ಸರ್ಕಾರಿ ಕಚೇರಿಗಳಲ್ಲಿ ಬಣ್ಣಕಟ್ಟಿ ಕನ್ನಡದ ಶ್ರೀಮಂತಿಕೆ ಸಾರಿತ್ತು. ಅಂದು ನಾನು ಕಂಡ ಕನಸು ಅನೇಕ ಗೋಡೆಗಳಿಗೆ ಕನ್ನಡದ ಉಸಿರು ನೀಡಿತು- ಈ ಅನುಭವ ಒಂದು ಚಿಂತನೆ ಪ್ರಯತ್ನ ಅನೇಕ ಮನದ ದನಿಯಾಗುವುದು ಎಂಬುದನ್ನು ತಿಳಿಸಿದಾಗ ಸಾಮಾಜಿಕ ಜಾಲತಾಣ ತೋರ್ಪಡಿಕೆಯಲ್ಲ ಚಿಂತನೆಗಳ ವೇದಿಕೆ ಎಂದು ಮನವರಿಕೆಯಾಯಿತು.
ನಾನು ಎಂ ಎಸ್ ಓ ಬಿ ಜಿ ಮಾಡಲು ಬೆಂಗಳೂರಿಗೆ ಹೋದಾಗ ಪರೀಕ್ಷೆ ಫಲಿತಾಂಶ ಬಂದ ದಿನ. ಬಹುಶಃ ಎರಡನೇ ವರ್ಷದಿಂದ ಕಾಲೇಜಿಗೆ ರಾಂಕ್ ತರುವ ವಿದ್ಯಾರ್ಥಿಯಂತೆ ಅಧ್ಯಾಪಕರಿಗೆ ಬಿಂಬಿತವಾದ ನಾನು, ಅವರ ನಿರೀಕ್ಷೆ ಮುಟ್ಟಬೇಕೆಂದು ಹಗಲು ರಾತ್ರಿ ಎಡಬಿಡದೆ ಓದಿ ಸಾಗಿದೆ, ಹುಚ್ಚಿಯಂತೆ ಪುಸ್ತಕಕ್ಕೆ ಅಂಟಿದ್ದ ನನಗೆ ಡಿಸ್ಟಿಂಕ್ಷನ್ ನನ್ನ ಗುರಿಯಾಗಿತ್ತು, ಆದರೆ ಪ್ರಯತ್ನಗಳಿಗೆ ಫಲಕರ್ಮ ನೀಡುವ ಮೇಲಿನವ ಏಕೋ ನನ್ನ ಕನಸಿಗೆ ತಣ್ಣೀರೆರಚಿ ಫಸ್ಟ್ ಕ್ಲಾಸ್ ಗೆ ಫಲಿತಾಂಶ ಮುಗಿಸಲು ನಾನು ಕುಸಿದು ಹೋದೆ, ರಾತ್ರಿ ಪೂರ್ತಿ ಕಣ್ಣೀರ ಕೋಡಿ, ಬೇಸರ. ಆದರೆ ಡಿಗ್ರಿ ಸಿಕ್ಕ ವಿಷಯ ಎಲ್ಲರಿಗೂ ತಿಳಿಯಲು ಆ ರಾತ್ರಿ ಒಂದು ಸಂದೇಶ ಬಂತು- ಹಾಸನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದ ಒಬ್ಬ ಕಿರಿಯ ಸಹೋದ್ಯೋಗಿ "ಮೇಡಂ, ಅಭಿನಂದನೆಗಳು, ನಾನು ಹೊಸದಾಗಿ ವೈದ್ಯನಾಗಿ ಸರ್ಕಾರಿ ಕೆಲಸಕ್ಕೆ ಸೇರಿದ್ದಾಗಿ ಬಹಳ ಬೇಸರ ಹೆದರಿಕೆ ಹಿಂಜರಿಕೆಯಿತ್ತು, ಆದರೆ ನೀವು ಹಗರೆ ವೈದ್ಯರಾಗಿ ಮಾಡುತ್ತಿದ್ದ ಕೆಲಸಗಳು, ವಿಭಿನ್ನ ಪ್ರಯತ್ನಗಳು, ಸವಾಲುಗಳ ಬೇಟೆ, ಅಷ್ಟು ಸಾಹಿತ್ಯ ಆಸ್ಪತ್ರೆ ನಿರ್ವಹಣೆ ಮತ್ತು ಸಾಮಾಜಿಕ ಸೇವೆ ನಡುವೆ ಬಿ ಎಂ ಸಿ ಅಲ್ಲಿ ಸೀಟ್ ಪಡೆದ ಪರಿ, ನಿಮ್ಮಲ್ಲಿ ನನ್ನ ಮುಂದಿನ ದಾರಿಯನ್ನು ನಾನು ಕಂಡುಕೊಂಡೆ, ಸರ್ಕಾರಿ ಸೇವೆ ಮುಂದುವರೆಸಿ ಜನರಿಗೆ ನನ್ನ ಕೈಲಾದ ಸೇವೆ ಮಾಡಿ ಇಂದು ನಿಮ್ಮನ್ನು ಪ್ರೇರಣೆ ಮಾಡಿಕೊಂಡು ಸೇವಾನಿರತ ವೈದ್ಯನಾಗಿ ಎಂ ಎಸ್ ಓ ಬಿ ಜಿ ಸೀಟ್ ಪಡೆದೆ, ನನಗೆ ಸಾಮಾಜಿಕ ಜಾಲತಾಣಗಳ ಸಹಾಯದಿಂದ ನಿಮ್ಮ ಹಗರೆಯ ಕೆಲಸ ಪರಿಚಿತವಾದದ್ದು ನನ್ನ ಸರ್ಕಾರಿ ವೈದ್ಯನ ಮುಂದಿನ ಬದುಕಿಗೆ ದಾರಿದೀಪವಾಯಿತು, ಧನ್ಯವಾದ" ಎಂದು ಬರೆದಿತ್ತು.
ಫಲಿತಾಂಶದ ಬೇಸರ ಎರಡೇ ನಿಮಿಷಕ್ಕೆ ಮರೆಯಾಗಿ ಇದಕ್ಕಿಂತ ಡಿಸ್ಟಿಂಕ್ಷನ್ ನನಗೆ ಅವಶ್ಯವೇ ಎಂದು ತೃಪ್ತಿಯಿಂದ ಮಲಗಿದೆ. ಇದೇ ರೀತಿ ಅನೇಕ ಕಿರಿಯ ವೈದ್ಯರು ಸರ್ಕಾರಿ ವೈದ್ಯರು ಈ ರೀತಿಯೂ ಬದುಕಬಹುದು ಎಂಬ ಅಂದಾಜೆ ನಮಗಿರಲಿಲ್ಲ, ನಿಮ್ಮ ಪೋಸ್ಟ್, ಬಡವರಿಗೆ ವೈದ್ಯಕೀಯ ಅವಶ್ಯಕತೆ, ಸರ್ಕಾರಿ ಕಾರ್ಯಕ್ರಮಗಳು ಎಲ್ಲವನ್ನೂ ಮನವರಿಕೆ ಮಾಡಲು ಅವಕಾಶ ಸಿಕ್ಕರೆ ನಾವು ಸರ್ಕಾರಿ ಕೆಲಸಕ್ಕೆ ಬರಬೇಕು ಎಂದು ಪ್ರೇರೇಪಿಸುತ್ತದೆ ಎಂದು ಹೇಳುತ್ತಾ ಖುಷಿ ಪಡುತ್ತಾರೆ. ಆಸ್ಪತ್ರೆ ಕೆಲಸ ಮಾಡಿ ಸುಮ್ಮನೆ ಮನೆಯಲ್ಲಿ ಮಲಗಿದರೆ ಸರ್ಕಾರಿ ಆಸ್ಪತ್ರೆಯು ಮಲಗಿ ಸರ್ಕಾರಿ ಶಾಲೆಗಳಂತೆ ಮುಂದೊಂದು ದಿನ ಮುಚ್ಚಲ್ಪಟ್ಟು ಖಾಸಗಿ ಕಾಂಚನ ಕಾಂಚಾಣ ವ್ಯವಸ್ಥೆ ಬಡವರನ್ನು ಶೂಲಕ್ಕೇರಿಸುವುದು ಖಂಡಿತ. ಹಾಗಾಗಿ ಈ ಘಟನೆ ಸಾಮಾಜಿಕ ಜಾಲತಾಣ ನನ್ನ ಕೆಲಸದ ಶೈಲಿಯ ತೋರ್ಪಡಿಕೆಯಲ್ಲದೇ ಒಂದು ಸ್ಪೂರ್ತಿ ಸೆಲೆಯ ವೇದಿಕೆ ಎಂಬುದ ಮನದಟ್ಟು ಮಾಡಿದೆ.
ಸುಳ್ಯಕ್ಕೆ 2025 ಏಪ್ರಿಲ್ ಕೊನೆಗೆ ಬಂದಾಗ ಇಪ್ಪತ್ತರಿಂದ ಮೂವತ್ತು ಹೆರಿಗೆಗೆ ನಮ್ಮ ಕೆಲಸ ಸೀಮಿತವಾಗಿ ಕೊನೆಗೆ ಒಂದೊಂದು ದಿನ ಐದಕ್ಕೂ ಕಡಿಮೆ ರೋಗಿ ನೋಡಿ ಹೊರಬರುವಾಗ ಮನಸ್ಸಿಗೆ ಹಿಂಸೆ ಆಗುತ್ತಿತ್ತು. ಕಡು ಬಡವರು ಹಿಂದುಳಿದ ಜನ ಇರುವ ಈ ಊರಲ್ಲಿ ರೋಗಿಗಳಿಗೆ ಬರವಾ ಎಂಬ ಪ್ರಶ್ನೆ, ಹಾಗೆ ಪ್ರಯತ್ನ ಅನವರತ ಸೇವೆ ಮುಂದುವರಿದರೂ ಐವತ್ತು ಹೆರಿಗೆ ಮುಟ್ಟಲು ಆರು ತಿಂಗಳು ಬೇಕಾಯ್ತು. ನವೆಂಬರ್ ಕೊನೆಗೆ ಅರವತ್ತೆರಡು ಹೆರಿಗೆಯಾಗಲು ನಾನು ಖುಷಿಯಿಂದ ಸುಮ್ಮನಾಗಬಹುದಿತ್ತು.
ಆದರೆ ಕೆಲಸದ ಪ್ರಮಾಣ ಹೆಚ್ಚಾದರೂ ನನ್ನೊಂದಿಗೆ ಕೈ ಜೋಡಿಸಿ ನಡೆಯುವ ಸಿಬ್ಬಂದಿ ಖುಷಿಗೆ ಎಲ್ಲರಿಗೂ ಸಿಹಿ ಹಂಚಿ, ನಮ್ಮ ಮನೆಯಲ್ಲಿ ಹೆರಿಗೆ ತಂಡದ ಜೊತೆ ಒಂದು ಕೇಕ್ ಕತ್ತರಿಸುವ ಮೂಲಕ ಖುಷಿಯ ಕ್ಷಣ ಹಂಚಿಕೊಂಡೆ. ಇದು ಸ್ಟೇಟಸ್ ಮೂಲಕ ಜನರಿಂದ ಜನರಿಗೆ ತಲುಪಿ ನಮ್ಮ ಆರೋಗ್ಯ ರಕ್ಷಾ ಸಮಿತಿಯವರು ನನಗೆ ಸನ್ಮಾನ ಮಾಡಿ ಸುದ್ದಿಯಲ್ಲಿ ಪ್ರಕಟಿಸಿದರು. ಕೆಲವು ದಿನದಲ್ಲೇ ಆಸ್ಪತ್ರೆ ಬಗ್ಗೆ ಸದಾ ನಕಾರಾತ್ಮಕ ವರದಿ ಮಾಡುತ್ತಿದ್ದ ನಾವು ಆಸ್ಪತ್ರೆ ಪ್ರಗತಿ ಬಗ್ಗೆ ಒಳ್ಳೆಯ ವರದಿ ಮಾಡುವೆವು ಎಂದು ಮಾಧ್ಯಮದವರು ಮುಂದಾಗಿ ಬಂದು ಒಂದು ಗಂಟೆಗೂ ಹೆಚ್ಚು ಸಮಯ ಬಿತ್ತರವಾಗುವ ವರದಿ ಮಾಡಿದರು. ಆ ವರದಿ ಅಲ್ಲಿ ಇಲ್ಲಿ ತಲುಪಿ ನನಗೆ ಮಂಗಳೂರಿನ ಎಂ ಆರ್ ಪಿ ಎಲ್ ಉದ್ಯೋಗಿ ಚಿಕ್ಕಮಗಳೂರು ನವೋದಯದ ಹಳೇ ವಿದ್ಯಾರ್ಥಿ ಸಂಪತ್ ಅವರ ಪರಿಚಯ ಮಾಡಿಸಲು ಅವರೇ ಸ್ವತಃ ಮುಂದಾಗಿ ಕಂಪನಿ ಸಿ ಎಸ್ ಆರ್ ವತಿಯಿಂದ ನಮ್ಮ ಆಸ್ಪತ್ರೆಗೆ ಇಪ್ಪತ್ತು ಲಕ್ಷ ಹಣ ಬಿಡುಗಡೆ ಮಾಡಿಸಿ ಆಸ್ಪತ್ರೆಗೆ ಅವಶ್ಯ ಉಪಕಾರಗಳನ್ನು ಖರೀದಿಸಲು ಸಹಕರಿಸಿದರು. ಸಂಪತ್ ಅಣ್ಣನನ್ನು ಬದುಕಿಗೆ ಪರಿಚಿಸಿದ್ದು ಒಂದು ವೈಯಕ್ತಿಕ ಖುಷಿಯಾದರೆ, ನನ್ನ ಹುಟ್ಟು ಹಬ್ಬದ ದಿನವೇ ಇಪ್ಪತ್ತು ಲಕ್ಷ ಅನುದಾನ ಸಿಕ್ಕಾಗ ಅಪ್ಪ ಅಮ್ಮ ಸುಳ್ಯಕ್ಕೆ ಮಗಳ ಹುಟ್ಟುಹಬ್ಬದ ಉಡುಗೊರೆ ಎಂದು ಆನಂದಭಾಷ್ಪ ಸುರಿಸಲು- ಆ ಅರವತ್ತು ಹೆರಿಗೆಯ ಸಂಭ್ರಮಕ್ಕೆ ಹೊಸ ಅರ್ಥ ಸಿಕ್ಕಿತ್ತು. ನಾನು ಮಾಡಿದೆ ಎಂದು ತೋರಿಸುವುದಕ್ಕಿಂತ ಸಿಬ್ಬಂದಿಗೆ ಒಂದು ಸ್ಪೂರ್ತಿ ಹುರುಪು ನೀಡಲು ಮಾಡಿದ ಕೆಲಸ ಇಷ್ಟೆಲ್ಲಾ ಪ್ರತಿಫಲ ನೀಡಲು ಸಾಮಾಜಿಕ ಜಾಲತಾಣ ತೋರ್ಪಡಿಕೆ ಸಾಧನವಲ್ಲದೇ ಒಂದು ಹೊಸ ಭರವಸೆಗೆ ವೇದಿಕೆಯಾಯಿತು.
ಒಮ್ಮೆ ಒಂದು ಕವಿಗೋಷ್ಠಿ ಗೆ ಹೋಗಿರಲು, ಹಿಂದೆ ನಾನೊಂದು ಕನ್ನಡ ವ್ಯಾಕರಣ ಸಂಬಂಧಿ ಕವಿತೆಯನ್ನು ಹಂಚಿಕೊಂಡಾಗ ಒಂದು ಎಂಟನೇ ತರಗತಿ ವಿದ್ಯಾರ್ಥಿ ಅವರ ಅಪ್ಪನನ್ನು ಕಾಡಿ ಅದರ ಪ್ರಿಂಟ್ ಔಟ್ ತೆಗೆದು ಗೋಡೆ ಮೇಲೆ ಅಂಟಿಸಿಕೊಂಡು ವ್ಯಾಕರಣ ಕಬ್ಬಿಣದ ಕಡಲೆಯಲ್ಲ ಈ ಕವಿತೆಯಂತೆ ಸರಳ ಎಂದು ಹೇಳಿದಳು ಎಂದು ಅವರಮ್ಮ ಹೇಳುವಾಗ ನಾನು ನನ್ನ ಹವ್ಯಾಸಕ್ಕೆ ಬರೆಯುವ ಕವಿತೆಗಳ ಮೌಲ್ಯ ತಿಳಿಯಿತು. ನಾನು ಎಲ್ಲೇ ಹೋದರೂ ಜನ ನನ್ನ ಕವಿತೆ ಲೇಖನ ನಾನು ಮಾಡಿದ ಭಾಷಣದ ತುಣುಕುಗಳನ್ನು ಸವಿವರವಾಗಿ ಹೇಳುವ ಪರಿ ಸಾಮಾಜಿಕ ಜಾಲತಾಣ ನಮ್ಮ ಪ್ರತಿಭೆಗೆ ಕನ್ನಡಿಯಂತೆ ಕಾಣಲು ಸಹಕರಿಸುತ್ತಿರುವುದು ಮನವರಿಕೆಯಾಗುತ್ತದೆ. ಅದರಿಂದ ಅವಕಾಶಗಳು ಸಿಗುತ್ತವೆ ಹಾಗೂ ನಮ್ಮ ಪ್ರಗತಿಯೂ ನಿಲ್ಲದೆ ಸಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣ ನನಗೆ ತೋರ್ಪಡಿಕೆ ಸಾಧನವಲ್ಲದೇ ಬೆಳವಣಿಗೆಯ ಏಣಿಯಂತೆ.
ಇವೆಲ್ಲಾ ಕೆಲವೇ ಕೆಲವು ತುಣುಕುಗಳು. ಪ್ರವಾಸ ಹೋದಾಗ ಆ ಜಾಗ ಮೆಚ್ಚಿ ಅವರೂ ಹೋಗುವುದು, ನಾವೇನೋ ಆಸ್ಪತ್ರೆಯಲ್ಲಿ ವಿಶೇಷವಾಗಿ ಮಾಡಿದಾಗ ಇನ್ನೊಂದು ಆಸ್ಪತ್ರೆಯವರು ಅದೇ ಪ್ರಯತ್ನ ಮಾಡುವುದು, ಬರವಣಿಗೆ ವಿಷಯಕ್ಕೆ ಸಹಾಯ ಕೇಳುವುದು, ಕೆಲವೊಮ್ಮೆ ವೈಯಕ್ತಿಕ ಸನ್ಮಾನ ಬಿರುದುಗಳವರೆಗೆ ನನ್ನ ಬದುಕಿನಲ್ಲಿ ಸಾಮಾಜಿಕ ಜಾಲತಾಣದ ಕೊಡುಗೆ ಅಪಾರ. ಒಳ್ಳೆಯ ಅಂಶಗಳು ಹಂಚದಷ್ಟೂ ಹೊಸ ಬೀಜವಾಗಿ ಇತರರ ಮನದಲ್ಲಿ ಬೇರೂರಿ ಇನ್ನಷ್ಟು ಹೊಸ ಅಂಶಗಳ ಮರವಾಗುತ್ತವೆ. ಎಡಗೈ ಮಾಡಿದ್ದು ಬಲಗೈಗೆ ಗೊತ್ತಾಗದಿದ್ದರೆ ಬಲಗೈಗೆ ನಾನು ಹೀಗೆ ಮಾಡಬಹುದು ಎಂಬ ಅರಿವೇ ಬರುವುದಿಲ್ಲ, ಎಡಗೈ ಮಾಡಿ ಮಾಡಿ ಸೋತು ಸುಮ್ಮನಾಗಲು ಒಳ್ಳೆಯ ಕೆಲಸ ಎಡಗೈ ಜೊತೆ ಕೊನೆಯಾಗುತ್ತದೆ.
ಹೀಗೇ ಯಾರದೋ ಬಾಯಿಯಲ್ಲಿ ಮಾಡಿದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ನನ್ನ ಅಭ್ಯಾಸದ ಬಗ್ಗೆ "ಅವರಿಗೆ ಹೆಸರು ಮಾಡುವ ಹುಚ್ಚು" ಎಂದು ಕೇಳಿದೆ, ಹೆಸರು ಹಣ ಮಾಡಲು ಸಾವಿರ ಕಳ್ಳ ದಾರಿಗಳು ಸುಲಭವಾಗಿ ಸಿಗುವಾಗ ಹಗಲು ರಾತ್ರಿ ಊಟ ನಿದ್ದೆ ಬಿಟ್ಟು ಸರ್ಕಾರಿ ಸಂಬಳಕ್ಕೆ ದುಡಿಯುವ ಅನಿವಾರ್ಯತೆ ಯಾರಿಗೂ ಇರುವುದಿಲ್ಲ, ಹಣ ಸಮಯ ವ್ಯರ್ಥ ಮಾಡಿಕೊಂಡು ಒಂದು ಸಾಮಾಜಿಕ ಕೆಲಸಕ್ಕೆ ದುಡಿಯುವ ಅವಶ್ಯಕತೆಯೂ ಇಲ್ಲ. ಸುಮ್ಮನೆ ತೋರ್ಪಡಿಕೆಗೆ ಫೋಟೋ ಗೆ ಹಲ್ಲುಕಿರಿಯುವವರ ಮುಂದೆ ತನು ಮನ ಧನ ಸಮರ್ಪಿಸಿ ಸಮಾಜದ ಒಳಿತಿಗೆ, ತಳಸಮುದಾಯದ ಪ್ರಗತಿಗೆ, ನಾಡು ನುಡಿಯ ಹೋರಾಟಕ್ಕೆ, ಸಕಾರಾತ್ಮಕ ಚಿಂತನೆ ವಿಸ್ತರಿಸುವ ಬಹಳ ದೊಡ್ಡ ಗುಂಪೇ ಇದೆ, ಅದೇ ಮನಸ್ಥಿತಿಯಲ್ಲಿ ಇರುವವರಿಗೆ ಅದೇ ಮನಸ್ಥಿತಿಯವರ ಪರಿಚಯ ಅದೇ ಮನಸ್ಥಿತಿಯಲ್ಲಿ ಯಾವುದೇ ಪರಿಸ್ಥಿತಿಗೆ ಅಂಜದೇ ನಡೆಯುವಂತೆ ಮಾಡುತ್ತದೆ. ಪ್ರತಿ ಪೋಸ್ಟ್, ಪ್ರತಿ ಹೆಜ್ಜೆ ಸದ್ದಿಲ್ಲದೇ ಯಾರಿಗೋ ಸ್ಪೂರ್ತಿಯಾಗಿ ಸದ್ದಿಲ್ಲದೇ ತನ್ನ ಕೆಲಸ ಮಾಡುತ್ತಿರುತ್ತದೆ.
ಸಾಮಾಜಿಕ ಜಾಲತಾಣ ತೋರ್ಪಡಿಕೆ ಸಾಧನವಲ್ಲದೇ ಬಹಳಷ್ಟು ಸಾಧನೆಯ ಮೈಲಿಗಲ್ಲಿಗೆ ದೊಡ್ಡ ವೇದಿಕೆ. ಜಗತ್ತಿನೊಳಗೆ ಜಗವಾಗಿ ಬೆರೆತು ವಿಶಾಲವಾಗಿ ವಿಸ್ತರಿಸಲು ಇರುವ ಅವಕಾಶ. ಉದ್ದೇಶ ಪ್ರಯತ್ನ ಸರಿಯಿದ್ದರೆ ಮನಬಿಚ್ಚಿ ಪೋಸ್ಟ್ ಮಾಡಿ, ನಿಮ್ಮಿಂದ ಮತ್ತೊಬ್ಬರು ಪ್ರೇರಿತರಾಗಿ ಸದುದ್ದೇಶಗಳು ಮೇಳೈಸಿ ಸಧೃಡ ಸಮಾಜಕ್ಕೆ ಅಡಿಪಾಯವಾಗಲಿ.
"ಜರಿದವರು ಸರಿಯುತ್ತಾರೆ,
ಕಿವಿಗೊಡದೆ ಅರಿವಿಗಾಗಿ ಬೆರೆಯುತ್ತಾ ಸಾಗೋಣ".
- ಡಾ ಶಾಲಿನಿ ವಿ ಎಲ್
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ
ಸಾರ್ವಜನಿಕ ಆಸ್ಪತ್ರೆ ಸುಳ್ಯ

