ಹಮ್ಮು ಬಿಮ್ಮುಗಳಿಲ್ಲದ ಸರಳತೆ: ಪೇಜಾವರ ಶ್ರೀಗಳ ಗೋಪ್ರೇಮದ ರೋಚಕ ಕಥನ

Shreya Hegde
0


ಪೇಜಾವರ ಶ್ರೀಗಳ ಅದಮ್ಯ ಗೋನಿಷ್ಠೆಯ ಸಣ್ಣ ಕಹಾನಿ. ಎಲ್ಲರಿಗೂ ಗೊತ್ತಿರೋದೇ, ಅದಕ್ಕೊಂದು ಸೇರ್ಪಡೆ ಅಷ್ಟೆ. ನಿನ್ನೆ (ಬುಧವಾರ ನಡೆದಿದ್ದು) ಸಮಯವಿದ್ದಾಗ ಓದಲು ಪ್ರಯತ್ನಿಸಿ, ಅಷ್ಟೆ!


ಪೂಜ್ಯ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತ ಸಂಪನ್ನಗೊಳಿಸಿ, ಮಥುರಾ ವೃಂದಾವನ ಕ್ಷೇತ್ರದಲ್ಲಿ ಸಪ್ತಾಹ ಪರ್ಯಂತ ಪರಿಕ್ರಮ ಯಾತ್ರೆ ಮುಗಿಸಿದರಷ್ಟೆ... ಬುಧವಾರ (7/10/2026) ಬೆಳಿಗ್ಗೆ ವೃಂದಾವನ ಕ್ಷೇತ್ರದಲ್ಲಿ ದ್ವಾದಶೀ ಪೂಜೆ, ಪಾರಣೆ ಮುಗಿಸಿ ಅಯೋಧ್ಯೆಯೆಡೆಗೆ ಪ್ರಯಾಣ. ಕಾರಣ ಎರಡು: ಒಂದು - ಅಯೋಧ್ಯೆಯಲ್ಲಿ ಯೋಗಿ ಸರ್ಕಾರ ಸ್ಥಾಪಿಸಿ ನಿರ್ವಹಿಸುತ್ತಿರುವ ಗೋಶಾಲೆಯನ್ನು ನಿರ್ವಹಣೆಗಾಗಿ ಶ್ರೀಮಠಕ್ಕೆ ಪಡೆಯುವ ಪ್ರಸ್ತಾಪವಿತ್ತು; ಆ ಗೋಶಾಲೆ ನೋಡಬೇಕು. ಎರಡನೆಯದ್ದು - ಸಹಜವಾಗಿಯೇ ಸರಯೂ ಸ್ನಾನ, ಶ್ರೀರಾಮ ದರ್ಶನ ಇದ್ದೇ ಇತ್ತು. ಅಯೋಧ್ಯೆ ತಲುಪಲು 15-20 ಕಿ.ಮೀ. ಇರುವಾಗ ಆರಂಭವಾಯಿತು ನೋಡಿ... ಜಡಿಮಳೆ! ಕಾರಿನ ಎದುರಿನಲ್ಲಿ ಏನೇನೂ ಕಾಣಿಸುತ್ತಿಲ್ಲ; ಅಷ್ಟೂ ಗಾಳಿ-ಮಳೆ. ಅಪರಾಹ್ನ ಮೂರು ಗಂಟೆಗೇ ರಾತ್ರಿ 7ರ ಕತ್ತಲು! ಆ ಕಡೆಯಿಂದ ಗೋಶಾಲೆಯ ನಿರ್ವಾಹಕರ ಫೋನ್ ಕರೆ: "ಇವತ್ತು ಗೋಶಾಲೆ ಭೇಟಿಗೆ ಬರ್ಲೇ ಬೇಡಿ, ಅಷ್ಟು ಮಳೆಯಾಗ್ತಿದೆ. ಗೋಶಾಲೆ ತಲುಪುವಲ್ಲಿ ನಡುವೆ ೨ ಕಿ.ಮೀ. ಕಚ್ಚಾ ರಸ್ತೆ ಇದೆ, ಅಲ್ಲಿ ಕೆಸರೆದ್ದಿದೆ; ಕಾರ್ ಬರಲ್ಲ, ನಾಳೆ ಬನ್ನಿ" ಅಂತ ವಿನಂತಿ.


ಸ್ವಾಮೀಜಿಗೆ ವಿಷಯ ತಿಳಿಸಿದ್ರೆ... ಊ... ಹ್ಞುಂ... "ಮಳೆಯಾದ್ರೆ ಏನಾಯ್ತು? ಎಲ್ಲಿ ತನಕ ಹೋಗುತ್ತೋ ಹೋಗೋಣ, ನಂತರ ನಡೆಯೋಣ, ಇವತ್ತೇ ಹೋಗ್ಬೇಕು" - ಆದೇಶ!! ಡ್ರೈವರ್ ನವೀನಣ್ಣನಿಗೆ ಏನೂ ಹೇಳಲಾಗದ ಸ್ಥಿತಿ. ಕನ್ನಡಿಯಲ್ಲೇ ನನ್ನನ್ನು ಮತ್ತು ತನ್ನ ಪಕ್ಕದಲ್ಲಿ ಕುಳಿತ ಕೃಷ್ಣಣ್ಣನನ್ನು ನೋಡಿದರು. ರಸ್ತೆಯಂತೂ ಕಾಣಿಸುತ್ತಲೇ ಇಲ್ಲ, ನಿಲ್ಲಿಸಲು ಉಪಾಯವಿಲ್ಲ; ಕಾರ್ ಮುನ್ನಡೆಯಿತು. ನಮ್ಮಲ್ಲಿರುವ ಗೂಗಲ್ ಲೋಕೇಶನ್ ಅನುಸರಿಸಿ ಹೋದರು. ಒಂದು ಸ್ಥಳ ತಲುಪುತ್ತಲೇ ಮುಂದೆ ಕೆಸರುಮಯ ರಸ್ತೆ, ಮುಂದೆ ಹೋಗೋದೇ ಸಾಧ್ಯವಿಲ್ಲ ಅಂತ ನವೀನಣ್ಣ ಕೈಚೆದರಿದರು! ಅಲ್ಲಿಂದ ಎರಡು ಕಿ.ಮೀ. ದೂರ ತೋರಿಸ್ತಿದೆ ಗೂಗಲ್ ಮ್ಯಾಪ್. "ಏನು ಮಾಡೋಣ ಸ್ವಾಮೀ?" ಕೃಷ್ಣಣ್ಣನ ಪ್ರಶ್ನೆ.


"ನಾನು, ವಾಸು ನಡೆದು ಹೋಗಿ ನೋಡಿ ಬರ್ತೇವೆ" - ಸ್ವಾಮೀಜಿ ಉತ್ತರ!


ಸರಿ ಅಂದವರೇ ತಲೆಗೆ ಮುಂಡಾಸು ಕಟ್ಟಿಕೊಂಡರು; ಒಂದು ಕೊಡೆ ಹಿಡಿದು ಹೊರಟೆವು. ಜೇಡಿಮಣ್ಣಿನ ಕೆಸರು ರಸ್ತೆ... ಕಾಲಿಟ್ಟರೆ ಜಾರುತ್ತೆ, ಕೆಲವೆಡೆ ಒಂದಡಿ ಕಾಲು ಮುಳುಗುವಷ್ಟು ನೀರು, ಜಡಿಮಳೆ-ಗಾಳಿ. ಒಂದು ಕಿ.ಮೀ. ದೂರ ಹೋದರೆ ಕಣ್ಣಳತೆಯ ದೂರದಲ್ಲಿ ಗೋಶಾಲೆ ಕಾಣಿಸುತ್ತಿದೆ, ದಾರಿ ಮಾತ್ರ ಇಲ್ಲ! ಮತ್ತೆ ಫೋನ್ ಮಾಡಿದೆವು ಗೋಶಾಲೆಗೆ: "ನಾವು ಸಮೀಪ ತಲುಪಿದ್ದೇವೆ, ಮುಂದೆ ರಸ್ತೆ ಇಲ್ಲ, ಏನು ಮಾಡೋದು?" ಅಂದೆ. "ಅಯ್ಯೋ ಯಾಕೆ ಬಂದ್ರಿ? ಬರ್ಬೇಡಿ ಅಂದ್ನಲ್ವಾ??" ಆತನ ವರಾತ! "ಬಂದಾಯ್ತಲ್ವ, ಅಲ್ಲೇ ಇರಿ ಒಬ್ಬಾತನ್ನ ಕಳಿಸ್ತೇನೆ" ಅಂದ. ಬೈಕಲ್ಲಿ ಒಬ್ಬ ಪಥದರ್ಶಿ ಬಂದ, ವಾಪಾಸು ಕಾರ್ ನಿಂತಲ್ಲೇ ಬಂದೆವು. ಹಾಗೆ ಬರುವಾಗ ನಾನು ಕ್ಲಿಕ್ಕಿಸಿದ ಫೋಟೋ ಇದು. ಆತ ಅಂದ: "ನೀವು ಕಾರಲ್ಲೇ ನನ್ನನ್ನು ಫಾಲೋ ಮಾಡಿ." ಸರಿ ಎಂದು ಫಾಲೋ ಮಾಡಿದೆವು. ಅಂತೂ ಬದಲಿ ದಾರಿಯಲ್ಲಿ ಗೋಶಾಲೆಗೆ ಪ್ರವೇಶ ಆಯ್ತು!


ಅಲ್ಲಿ ಸ್ವಾಮೀಜಿಯವರನ್ನು ಸ್ವಾಗತಿಸಲು ಕಾಯುತ್ತಿದ್ದ ಹತ್ತಾರು ಕಾರ್ಮಿಕರು ತಬ್ಬಿಬ್ಬು. "ಕೋನ್ ಹೈ ಮಹಾರಾಜ್?" (ಸ್ವಾಮೀಜಿ ಯಾರು?) ಪ್ರಶ್ನೆ!! ಕಾರಣ, ಸ್ವಾಮೀಜಿಯವರು ಖಾವಿ ಬಟ್ಟೆ ತೊಟ್ಟು ಕೇವಲ ತಲೆಗೆ ಮುಂಡಾಸು, ಕೈಯಲ್ಲಿ ಕೊಡೆ ಹಿಡಿದುಕೊಂಡಿದ್ದಾರೆ; ಕಾಲಿನಲ್ಲಿದ್ದ ಪಾದುಕೆಯನ್ನೂ ಕಾರಿನಲ್ಲೇ ಬಿಟ್ಟಿದ್ದರು. "ಇವ್ರೇ ಸ್ವಾಮೀಜಿನಾ? ಇಷ್ಟು ಸಿಂಪಲ್ಲಾ??" ಡೌಟೋ ಡೌಟು! ಕೊನೆಗೆ ನನ್ನ ಮೊಬೈಲಲ್ಲಿದ್ದ ಕೆಲವು ಫೋಟೋ ತೋರಿಸಿದೆ - "ಹ್ಞಾ ಇವ್ರೇ, ಮೊನ್ನೆ ಇತ್ತೀಚಿಗೆ ಮೋದೀಜಿ ಭೇಟಿ ಮಾಡಿದ್ದು, ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದು, ಅಯೋಧ್ಯೆ ಮಂದಿರದ ಟ್ರಸ್ಟಿ ಇವ್ರೇ" ಅಂದೆ ಗುಟ್ಟಲ್ಲಿ! ಅಂತೂ ಅವರಿಗೆ ಮನವರಿಕೆಯ ಜೊತೆಗೆ ಆಶ್ಚರ್ಯವೂ ಆಯಿತು!! ಎಲ್ಲರೂ ಒಬ್ಬೊಬ್ಬರಾಗಿ ಸ್ವಾಮೀಜಿ ಕಾಲಿಗೆ ಎರಗಿ ಬರಮಾಡಿಕೊಂಡು ಗೋಶಾಲೆ ಸುತ್ತಾಡಿಸಿದರು, ಎಲ್ಲ ವಿವರ ಕೊಟ್ಟರು. ಆ ಮೇಲಷ್ಟೇ ಸ್ವಾಮೀಜಿ ಸಮಾಧಾನದ, ಸಂತೃಪ್ತಿಯ ನಿಟ್ಟುಸಿರು ಬಿಟ್ಟರು.


"ನಾಳೆ ಬರ್ಬೋದಿತ್ತು ಸ್ವಾಮೀ" ಅಂದ್ರೆ - "ಗೋರಕ್ಷಣೆಯ ಕೆಲಸ ತಡ ಆಗಬಾರದು ಅಷ್ಟೆ... ಗೋವು ಉಳಿದರೆ ತಾನೇ ನಾವು??" ಅನ್ನೋ ತರ ಉತ್ತರ! ಗೋರಕ್ಷಣೆಯ ಈ ಧ್ಯೇಯ, ಈ ಮಂತ್ರಗಳ ಎದುರು ತಾನೊಬ್ಬ ಸಂಸ್ಥಾನದ ಅಧಿಪತಿ, ಒಂದಷ್ಟು ಕನಿಷ್ಠವಾದರೂ ಸ್ಟೇಟಸ್ ಮೇಂಟೈನ್ ಮಾಡಬೇಕು ಅನ್ನೋದೆಲ್ಲಾ... ಊಹೂಂ... ಸೆಕೆಂಡರಿ! ಇದು ಪೇಜಾವರ ಶ್ರೀಗಳ ಗೋಪ್ರೇಮದ ಒಂದು ಝಲಕ್... ಮತ್ತೊಮ್ಮೆ ಕಂಡೆವು ಅಷ್ಟೆ.


– ಜಿ. ವಾಸುದೇವ ಭಟ್ ಪೆರಂಪಳ್ಳಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top