ಆಳ್ವಾಸ್ ನುಡಿಸಿರಿ-ವಿರಾಸತ್ 2027 ಗೆ ವ್ಯಾಪಕ ಸಿದ್ಧತೆ: ಡಾ. ಎಂ. ಮೋಹನ ಆಳ್ವರಿಂದ ವಿವರ ಮಾಹಿತಿ

Shreya Hegde
0

ಜನವರಿ 06 ರಿಂದ 10ರವರೆಗೆ ಐದು ದಿನಗಳ ಕಾಲ ಮೂಡುಬಿದರೆಯಲ್ಲಿ 

ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ



ಮೂಡುಬಿದಿರೆ: ಕರಾವಳಿಯ ಸಾಂಸ್ಕೃತಿಕ ಕಿರೀಟ ಎಂದೇ ಖ್ಯಾತಿ ಪಡೆದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (ರಿ.) ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಹಾಗೂ ‘ಆಳ್ವಾಸ್ ನುಡಿಸಿರಿ 2027’ರ ಮಹಾಸಮ್ಮೇಳನವು ಬರುವ ಜನವರಿ 06 ರಿಂದ 10ರವರೆಗೆ ಐದು ದಿನಗಳ ಕಾಲ ಮೂಡುಬಿದರೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಕುರಿತು ಆಯೋಜಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.


ಜನವರಿ 07ರ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡು ಮೂರು ದಿನಗಳ ಕಾಲ ಸಾಗಲಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2027’ಕ್ಕೆ ‘ಕನ್ನಡ ಮನಸ್ಸು: ಭವಿಷ್ಯದ ಕನಸು’ ಎಂಬ ಅರ್ಥಪೂರ್ಣವಾದ ಮುಖ್ಯ ಪರಿಕಲ್ಪನೆಯನ್ನು ನೀಡಲಾಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದು ಕರ್ನಾಟಕದ ಭವಿಷ್ಯವನ್ನು ರೂಪಿಸುವ ದೊಡ್ಡ ಸಂಕಲ್ಪವನ್ನು ಈ ಬಾರಿಯ ಸಮ್ಮೇಳನ ಹೊಂದಿದೆ ಎಂದು ಪ್ರತಿಷ್ಠಾನವು ಸ್ಪಷ್ಟಪಡಿಸಿದೆ.


ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಕನ್ನಡದ ಹಿರಿಯ ಹಾಗೂ ಪ್ರಮುಖ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಅಲಂಕರಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಸ್ವರ್ಣ ಪದಕಗಳೊಂದಿಗೆ ಉನ್ನತ ಶಿಕ್ಷಣ ಪಡೆದಿರುವ ಇವರು, ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ಅನನ್ಯ ಛಾಪನ್ನು ಮೂಡಿಸಿದ್ದಾರೆ. ಇನ್ನು ಸಮಾರಂಭದ ಉದ್ಘಾಟಕರಾಗಿ ಹಿರಿಯ ಪತ್ರಕರ್ತರು, ಪ್ರಬುದ್ಧ ಚಿಂತಕರು ಹಾಗೂ ‘ವಿಶ್ವವಾಣಿ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.


ಜನವರಿ 6ರ ಸಂಜೆ ವೈಭವಪೂರ್ಣವಾಗಿ ಜರುಗುವ ಆಳ್ವಾಸ್ ವಿರಾಸತ್ 2027ರ ಉದ್ಘಾಟನಾ ಸಮಾರಂಭವು ವೇದಘೋಷ, ಭಜನೆ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥದ ಮೆರವಣಿಗೆಯ ಮೂಲಕ ಕಳೆಗಟ್ಟಲಿದೆ. ಹರಿದ್ವಾರದಿಂದ ಆಗಮಿಸುತ್ತಿರುವ ವಿಶೇಷ ಗಂಗಾರತಿ ತಂಡದ ಮಂತ್ರಘೋಷ ಹಾಗೂ ರಥಾರತಿಯು ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಶಾಸ್ತ್ರೀಯ ಹಾಗೂ ಜನಪದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿಷ್ಠಿತ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ಜನವರಿ 6ರಿಂದ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯುವ ವಿವಿಧ ಸಂಗೀತ, ನೃತ್ಯ ಮತ್ತು ಕಲಾ ಪ್ರಕಾರಗಳ ಪ್ರದರ್ಶನಗಳು ಕಲಾಪ್ರೇಮಿಗಳಿಗೆ ರಸದೌತಣ ನೀಡಲಿವೆ.


ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಸಹಭಾಗಿತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜನವರಿ 6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ. ಪಾವಂಜೆ, ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ತ್ಯಾಜ್ಯವು ನದಿಗಳನ್ನು ಸೇರುವುದನ್ನು ತಡೆಯಲು ಮತ್ತು ವೈಜ್ಞಾನಿಕವಾಗಿ ಮರುಬಳಕೆ ಮಾಡಲು ಗ್ರಾಮ ಮಟ್ಟದಲ್ಲೇ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ‘ಚೋಟಾ ಕಾಪ್’ ಯೋಜನೆ ಹಾಗೂ ನವೀನ ಆವಿಷ್ಕಾರಗಳಿಗಾಗಿ ಐಡಿಯಾಥಾನ್ ಅನ್ನು ಹಮ್ಮಿಕೊಳ್ಳಲಾಗಿದೆ.


ಯುವಜನರಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯಮಟ್ಟದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿಯು ಆಯೋಜನೆಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ಸಾವಿರಕ್ಕೂ ಅಧಿಕ ಯುವ ಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ದೇಶೀಯ ಕಲೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ 30 ವರ್ಷದೊಳಗಿನ 800 ಸಂಗೀತ ಹಾಗೂ ಶಾಸ್ತ್ರೀಯ ಕಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.


ಪ್ರತಿವರ್ಷದಂತೆ ಜನವರಿ 8ರಂದು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಆಳ್ವಾಸ್ ವಿದ್ಯಾರ್ಥಿಸಿರಿ’ ನಡೆಯಲಿದ್ದರೆ, ಈ ಬಾರಿ ಹೊಸ ಪರಿಕಲ್ಪನೆಯೊಂದಿಗೆ ಜನವರಿ 9ರಂದು ಪದವಿ ಹಾಗೂ ಸ್ನಾತಕೋತ್ತರ ಯುವಜನರಿಗಾಗಿ ಪ್ರತ್ಯೇಕವಾಗಿ ‘ಆಳ್ವಾಸ್ ಯುವಸಿರಿ’ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದರೊಂದಿಗೆ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳಗಳು ಸಮ್ಮೇಳನದ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿವೆ.


ಕಾರ್ಯಕ್ರಮದ ಯಶಸ್ಸಿಗೆ ಪ್ರತಿನಿಧಿಗಳಿಂದ ನೋಂದಣಿ ಆಹ್ವಾನಿಸಲಾಗಿದ್ದು, ಐದು ದಿನಗಳ ಈ ಮಹೋತ್ಸವದಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು  500 ಪ್ರತಿನಿಧಿ ಶುಲ್ಕವನ್ನು ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ, ಕಾರ್ಯದರ್ಶಿ  ವೇಣುಗೋಪಾಲ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷ ಸಮಿತಿಯ ಸದಸ್ಯ  ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top