'ಸುರಪುರದ ಪ್ರಾಚೀನ ಶ್ರೀ ಪ್ರಸನ್ನ ವೆಂಕಟರಮಣ ದೇವಸ್ಥಾನ'

Shreya Hegde
0



ಯಾದಗಿರಿ ಜಿಲ್ಲೆಯ ಸುರಪುರವು ಒಂದು ಬಲಿಷ್ಠ ಸಂಸ್ಥಾನವಾಗಿತ್ತು. ಇಲ್ಲಿಯ ಸುಪ್ರಸಿದ್ಧ ರಾಜ ನಾಲ್ವಡಿ ರಾಜಾ ವೆಂಕಟಪ್ಪ ನಾಯಕನು ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ 1858ರಲ್ಲಿ ಅವರ ಗದ್ದುಗೆಯನ್ನೇ ಅಲ್ಲಾಡಿಸಿದ್ದ ರಾಜಸಿಂಹ! ಇಡೀ ದಕ್ಷಿಣ ಭಾರತದ ಎಲ್ಲ ರಾಜರನ್ನು ಒಗ್ಗೂಡಿಸಿ, ಆ ರಣ ಕಹಳೆಯ ನೇತೃತ್ವ ವಹಿಸಿದ್ದ ರಾಜನಿಗೆ ಆಗ ಕೇವಲ 24 ವಯಸ್ಸು. ಮೊಗಲ ದೊರೆ ಜೌರಂಗಜೇಬನನ್ನು ಹಿಮ್ಮೆಟ್ಟಿಸಿದ್ದ ಸುರಪುರ ಸಂಸ್ಥಾನದ ದೊರೆಗಳ ರಕ್ತದಲ್ಲಿಯೇ ಶೂರತ್ವ ಇತ್ತು. ಅಂತಹ ಮಹಾನ್ ವಂಶದಲ್ಲಿ ಜನಿಸಿದ್ದ ಈ ಅಪ್ರತಿಮ ಶೂರನಿಗೆ ತಾಯಿ ರಾಣಿ ಈಶ್ವರಮ್ಮ ಅವರ ಬೆಂಬಲ ಸದಾ ಇತ್ತು. ಆದರೆ ಆಂಗ್ಲರು ಹಾಗೂ ಇಲ್ಲಿಯ ದ್ರೋಹಿಗಳು ಸೇರಿಕೊಂಡು ಮಹಾನ್ ಶೂರನನ್ನು ಹೈದ್ರಾಬಾದಿಗೆ ಕರೆಯಿಸಿಕೊಂಡು ಮೋಸದಿಂದ ಕೊಂದು ಬಿಟ್ಟರು. ಇದು ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಹಿನ್ನಡೆಯಾಯಿತು. ಇಂದಿಗೂ ಇಲ್ಲಿಯ ದುಂದುಮೆ ಪದ ಹಾಡುವ ಜನಪದರು ಈ ರಾಜನ ಯಶೋಗಾಥೆಯನ್ನು ಹೊಗಳಿ ಹಾಡುತ್ತಾರೆ. ಹಾಡುತ್ತಾ ಕಣ್ಣಿರಾಗುತ್ತಾರೆ.


ಇಂತಹ ಅಪರೂಪದ ಸುರಪುರ ಸಂಸ್ಥಾನದ ದೊರೆಗಳು ದೈವ ಭಕ್ತರಾಗಿದ್ದರು. ತಿರುಪತಿ ತಿಮ್ಮಪ್ಪನನ್ನು ಸ್ವತಃ ಸುರಪುರಕ್ಕೆ ಕರೆಯಿಸಿಕೊಂಡವರು ಇವರು. ಸುರಪುರದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನ ಇಂದಿಗೂ ಇಲ್ಲಿ ಅದರ ಅಪರೂಪದ ಸಾರ್ಥಕ ಕ್ಷಣವಾಗಿ ನಿಂತಿದೆ. ತಿರುಪತಿಯಲ್ಲಿ ಇಂದಿಗೂ 'ಸುರಪುರಂ' ಎಂದು ಅಲ್ಲಿಯ ಅರ್ಚಕರು ಕೂಗುತ್ತಾರೆ. ರಥೋತ್ಸವದಲ್ಲಿ ಇಂದಿಗೂ ಪ್ರಪ್ರಥಮ ಮಂಗಳಾರತಿ ಸಂಸ್ಥಾನದ ಪ್ರತಿನಿಧಿಗಳು ನೆರವೇರಿಸುತ್ತಾರೆ. ಆದರೆ ರಾಜರು ತಿರುಪತಿಗೆ ಹೋಗುವುದಿಲ್ಲ. ಅವರು ಇಲ್ಲಿಯೇ ವೇಣುಗೋಪಾಲನಲ್ಲಿ ತಿರುಪತಿ ತಿಮ್ಮಪ್ಪನನ್ನು ಕಾಣುತ್ತಾರೆ. ಅವರ ಪರವಾಗಿ ಅವರ ಪ್ರತಿನಿಧಿಗಳು ಹಾಗೂ ಅರ್ಚಕರಾದ 'ದೇವರು' ವಂಶಸ್ಥರು ಹೋಗುತ್ತಾರೆ. 


ಬಹಳ ಹಿಂದೆ ರಾಜರು ಕಷ್ಟಪಟ್ಟು ತಿರುಪತಿಗೆ ಹೋಗುತ್ತಿದ್ದರು. ತನ್ನ ಪ್ರಿಯ ಭಕ್ತನ ಕನಸಿನಲ್ಲಿ ಬಂದ 'ವೆಂಕಟರಮಣ', 'ಭಕ್ತನೇ ನೀನು ಇರುವಲ್ಲಿಗೇ ನಾನು ಬರುತ್ತೇನೆ, ಅಲ್ಲಿಯ ಗುಡಿ ಕಟ್ಟು' ಎಂದು ಹೇಳಿದಾಗ, ಈಗ ಸುಮಾರು 300 ವರ್ಷಗಳ ಹಿಂದೆಯೇ ಒಂದೇ ಕಲ್ಲಿನಲ್ಲಿ ಇಲ್ಲಿಯ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿದರು. ರಾಜರ ದರ್ಬಾರದಲ್ಲಿರುವ ದೊಡ್ಡ ಕಿಟಕಿ ಮುಖಾಂತರ ವೇಣುಲೋಲನನ್ನು ಅವರು ಕಣ್ತುಂಬಿಕೊಳ್ಳುತ್ತಿದ್ದರು. ಇಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ನಕ್ಷತ್ರ ಬಂದ ದಿನದಂದು ಗೋಪಾಲಸ್ವಾಮಿ ಜಾತ್ರೆ ನಡೆಯುತ್ತದೆ. ಆಗ ಕಂಭ, ರಣಗಂಭ ಏರುವುದು, ಕುಸ್ತಿ ಮೊದಲಾದ ಶೂರತ್ವ ಪ್ರತಿನಿಧಿಸುವ ಕಸರತ್ತುಗಳು ನಡೆಯುತ್ತವೆ. ಇವರು ನಂಬಿದರೆ ಪ್ರಾಣ ಕೊಡಬಲ್ಲರು, ಇಲ್ಲದಿರೆ ರುಂಡ ಹಾರಿಸುವವರು. ಸಂಗೋಳ್ಳಿ ರಾಯಣ್ಣನಿಗೆ ಬ್ರಿಟೀಷರ ವಿರುದ್ಧ ಹೋರಾಡಲು, ಅವನ ಮನವಿ ಮೇರೆಗೆ, ಅವನನ್ನು ಪರೀಕ್ಷಿಸಿ ವೀರ ಶೂರ 300 ಸೈನಿಕರನ್ನು ನೀಡಿದವರು ಸುರಪುರ ದೊರೆಗಳು. ಅವರು ಕಾಟೇರರೆಂದು ಪ್ರಸಿದ್ಧಿ ಪಡೆದ ಭಾರಿ ಸೈನಿಕರು. ಒಬ್ಬನೇ ನೂರು ಜನರನ್ನು ಕೊಲ್ಲುವಂತಹ ಧೀರರು ಈ ಕಾಟೇರರು.


ಸುರಪುರ ದೊರೆಗಳು ದೈವ ಭಕ್ತರಾಗಿದ್ದರು, ಕಲೆ, ಸಂಗೀತ, ಸಾಹಿತ್ಯ, ಚಿತ್ರಕಲೆ, ಲಲಿತ ಕಲೆಗಳ ಆರಾಧಕರಾಗಿದ್ದರು. ಇಲ್ಲಿಯ ಗರುಡಾದ್ರಿ ಕಲೆ ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಕವಿ, ಕಲಾವಿದ, ಪಂಡಿತರು, ವಿದ್ವಾಂಸರನ್ನು ಗೌರವಿಸಿದರು.ಇವರು ನೂರಾರು ದೇವಾಲಯ ನಿರ್ಮಿಸಿದರು. ಎಲ್ಲ ಧರ್ಮದವರನ್ನೂ ಸಮನಾಗಿ ಕಂಡರು. ಸಾವಿರಾರು ಎಕರೆ ಭೂಮಿಯನ್ನು ಉಂಬಳಿಯಾಗಿ ನೀಡಿದರು. ಸಹಧರ್ಮ ಸಹಬಾಳ್ವೆ ಇವರ ಮೂಲ ಮಂತ್ರವಾಗಿತ್ತು. ದೊರೆಗಳು ನಿರ್ಮಿಸಿದ್ದಂತಹ ಅಸಂಖ್ಯಾತ ದೇವಸ್ಥಾನಗಳಲ್ಲಿ ಇಲ್ಲಿಯ ರಾಜ ದರ್ಬಾರ ಸಮೀಪವೇ ಇರುವ, 'ಶ್ರೀಪ್ರಸನ್ನ ವೆಂಕಟರಮಣ ದೇವಸ್ಥಾನ' ಬಹಳ ರೋಚಕ ಇತಿಹಾಸ ಹೊಂದಿದೆ. ಶ್ರೀ ನರಸಿಂಹ ದೇವಸ್ಥಾನ, ಶ್ರೀ ಪಾಂಡುರಂಗ ದೇವಾಲಯಗಳೂ ಕೂಡ ಬಹಳ ಪ್ರಾಚೀನ ಕಾಲದವುಗಳಾಗಿವೆ.


ಕ್ರಿ.ಶ 1717 ರಲ್ಲಿ ಪ್ರಸನ್ನ ವೆಂಕಟರಮಣ ದೇವಸ್ಥಾನ ನಿರ್ಮಾಣವಾಯಿತು. ಇದು ನೋಡಲು ಚಿಕ್ಕದಿದ್ದರೂ ಕೂಡ ಇಲ್ಲಿಯ 'ಸ್ವಾಮಿ' ಮೂರ್ತಿ ಆಕರ್ಷಕವಾಗಿದೆ. ಇದು ಹೇಗೆ ಸಂಭವಿಸಿತು ಎಂದು ಮುಜುಮದಾರ ಗಲ್ಲಿಯಲ್ಲಿರುವ ಈ ದೇವಸ್ಥಾನದ ಅರ್ಚಕರಾದ  ಕೃಷ್ಣಾಚಾರ್ಯ ದೇವರು ಅವರನ್ನು ಕೇಳಿದಾಗ ಅವರು ಇದರ ಸ್ವಾರಸ್ಯದ ಬಗ್ಗೆ ಹೀಗೆ ಹೇಳಿದರು. '1717 ರಲ್ಲಿ ಈ ಮೂರ್ತಿಯನ್ನು ತಿಂಥಣಿ ಆಚೆ ಇರುವ ದೇವದುರ್ಗ ಭಾಗದಿಂದ ತಂದಿದ್ದು. ಆ ಕಡೆಯವರು ಆ ಮೂರ್ತಿಯನ್ನು ತಗೊಂಡ ಹೊಂಟಾರಲಾ, ಅದನ್ನು ಹ್ಯಾಂಗರೇ ಮಾಡಿ ತಡಿಬೇಕಂತ ಬಂದರಂತ, ಆದ್ರs ಅಲ್ಲಿ ನೀರು ಬಂದು ಆ ಭಾಗ ಇಬ್ಭಾಗ ಆಯ್ತಂತ. ಅವರು ನಿರುಪಾಯರಾಗಿ ಹೊಳ್ಳಿ ಹೋದರಂತ.ಆಗ ನಮ್ಮ ಗುರುಗಳಾಗಿದ್ದ ಶ್ರೀಮಾಧವತೀರ್ಥರ ಕಾಲ ಅದು. ಇಲ್ಲಿಯ ರಾಜ ದರ್ಬಾರದಲ್ಲಿ ಲಿಂಗೋಜಿರಾವ ಮುಜುಮದಾರ ಅವರು ಮುಖ್ಯಮಂತ್ರಿಗಳಾಗಿದ್ದರು.


ಆಗ ಯುದ್ಧದ ಕಾಲ, ಮೂರ್ತಿ ತಂದವರು ಇದನ್ನು ಎಲ್ಲಿಯಾದರೂ ಪ್ರತಿಷ್ಠಾಪನೆ ಮಾಡ್ರಿ ಅಂತ ಅವಸರಿಸಿದರು. ಯುದ್ಧ ಮುಗಿಲಿ ಮಾಡೂಣಂತ ಅಂತ ಮುಜಮದಾರರು ಹೇಳಿದ್ರಂತೆ, ಆದರೆ ಆಗ ಬಹಳ ಸೂಕ್ಷ್ಮ ಕಾಲ, ಅನ್ಯ ಧರ್ಮಿಯರ ಉಪಟಳ. ಅದಕ್ಕೆ (ಮುಜುಮದಾರ ದೊಡ್ಡ ಮನೆ ಎದುರುಗಡೆ ಇದ್ದ) ಅವಸರದಾಗನೇ, ಇಲ್ಲಿ ಮೊದಲ ಹಣಮಂತ ದೇವರದು ದೊಡ್ಡ ಗುಡಿ ಇತ್ತು. ಇದಕ್ಕೆ ಆ ಕಡೆಗೆ ಒಂದೇ ಬಾಗಿಲು ಇತ್ತು, ಇನ್ನೊಂದು ಬಾಗಿಲು ಎದುರುಗಡೆಗೆ ನಿರ್ಮಿಸಿ ಅವಸರದಲ್ಲಿ ಪ್ರಸನ್ನ ವೆಂಕಟರಮಣ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ರು. ಇದರ ಬಗ್ಗೆ ಮುಜುಮದಾರ ಅವರ ಬಳಿ ದಾಖಲೆಗಳು ಎಲ್ಲ ಇದ್ದವು. ಈ ದೇವಸ್ಥಾನಕ್ಕೆ ಉಂಬಳಿಯನ್ನು ರಾಜರು ನೀಡಿದ್ದರು.‌


ಅವರ ಮನೆ ಕೋಟಿ ಖೋಲಿಯೊಳಗ ಇದ್ದ ದಾಖಲೆ ಎಲ್ಲಾ ನಾಶ ಆಗಿ ಹೋಗ್ಯಾವು. ಅವರದೇ 4000 ಎಕರೆ ಭೂಮಿ ಎಲ್ಲಾ ಬ್ಯಾರೆಯವರ ಪಾಲಾಯ್ತು. ಈ ಮನೆನೂ ಬ್ಯಾರೆಯವರ ಪಾಲು ಆದಾಗ ಅವು ಹೋಗಿರಬೇಕು. ಕಲ್ಲಿಕೋಟೆ ಯುದ್ಧದಾಗ ಬ್ಯಾರೆ ಎಲ್ಲಾ ರಾಜರೂ ಸೋತಾಗ, ಸುರಪುರ ದೊರಿ ಇದ್ರ ಅಲ್ಲಿ ಸುತ್ತ ಇದ್ದ ಕಂದಕದಾಗ ದಂಟಿನ ಸೊಪ್ಪಿನ ಮೂಲಕ ಬರೇ 200 ಸೈನಿಕರು ಆ ಪ್ರದೇಶ ಮುಟ್ಟಿ, ಅಲ್ಲಿ ಕೋಟೆ ಮೇಲೆ ಹಗ್ಗ ಕಟ್ಟಿ ಉಡ ಎಸೆದು, ಅದರ ಮ್ಯಾಲ ಏರಿ, ಒಳ ಹೊಕ್ಕು ಅವರನ್ನು ಸೋಲಿಸಿ ಬಂದ್ರಂತ! ಇದ್ಯಾಂಗ ಸಾಧ್ಯ ಆಯ್ತು ಅಂತ, ಅಲ್ಲಿಯವರು ವಿಚಾರಿಸಿದಾಗ, ಶೂರ ಕಾಟೇರಾ ಸೈನಿಕರ 'ಸಮರ್ಪಣಾ ಭಾವದಿಂದ' ಇದು ಸಾಧ್ಯ ಆಯ್ತು ಅಂತ ತಿಳಿದು ಅವರೆಲ್ಲಾ ಮೂಗಿನ ಮೇಲೆ ಬೆರಳು ಇಟ್ಟಕೊಳ್ಳುವಂಗ ಆಯ್ತು ಅಂತ ನಮ್ಮ ಹಿರಿಯರು ಹೇಳ್ತಿದ್ರು.  ಈ ದೇವಸ್ಥಾನ ಬಹಳ ಜಾಗೃತವಿದೆ ಎಂದು ಎಲ್ಲ ಭಕ್ತರ ಅನುಭವಕ್ಕೆ ಬಂದ ಮಾತದ. 


ಇಲ್ಲಿ ನಮ್ಮಕಿಂತಾ ಮೊದಲು ಗುಡಗುಂಟಿ ಅನಂತ ಆಚಾರ್ಯರು ಅರ್ಚಕರಾಗಿದ್ರು. ಅದರ ಮೊದಲು ಇಲ್ಲಿ ಹಣಮಂತ ದೇವರ ಗುಡಿ ಇದ್ದಾಗ, ಹಣಮಂತಾಚಾರ್ಯರು, ನಂತರ ಭಾಗವತ ಅನಂತಾಚಾರ್ಯರು ಆರ್ಚಕರಾಗಿದ್ರು. ಇಲ್ಲಿ ಮಗ್ಗಲಕ್ಕಿಂದು ಪುರಾಣಿಕರ ಮನೆ, ಆ ಕಡೆ ಏವೂರ ವಿಠ್ಠಲರಾವ ಅವರ ಮನೆ ಇತ್ತು. ನಾನು ದೇವರ ಪೂಜೆ ಮಾಡಿಲಿಕತ್ತು 36 ವರ್ಷ ಆಯಿತು. ಮೊದಲು ಮುಜುಮದಾರ ಮನೆಯಿಂದಲೇ ನೈವೇದ್ಯ ಬರುತ್ತಿತ್ತು, ಸಂಜೆ ಭಜನೆ ಆಗುತ್ತಿತ್ತು. ಗರುಡ ವಾಹನ ಸೇವೆ ಇದ್ದಾಗ ಅವರು ತಮ್ಮ ಮನೆ ಮುಂದೆ ನಿಂತು ದರ್ಶನ ಮಾಡುತ್ತಿದ್ದರು. ದರ್ಬಾರದಿಂದಲೂ ಕಾಯಿ ಬರುತ್ತಿತ್ತು. ಈಗಲೂ ಕೂಡ ದರ್ಬಾರ ಅರಸರಿಂದ ಕಾಯಿ ಬರುತ್ತದೆ. ದಸರೆ ದಿನ ದೇವರು ಬನ್ನಿ ಮುಡಿದಾದ ಮೇಲೆ ರಾಜರು ಬಂದು ದೇವರ ದರ್ಶನ ಮಾಡಿಕೊಂಡು ಹೋಗುತ್ತಿದ್ದರು. ಈಗಲೂ ಆ ಪದ್ಧತಿ ಮುಂದುವರೆದಿದೆ. ನಮ್ಮ ಮನೆತನದವರು ಕಳೆದ 13 ತಲೆಯಿಂದಲೂ ಅರಸರ ಪ್ರತಿನಿಧಿಗಳೊಂದಿಗೆ ಮುಡಿಪು ತೆಗೆದುಕೊಂಡು ತಿರುಪತಿಗೆ ಹೋಗಿ, ಅಲ್ಲಿ ರಥೋತ್ಸವದಲ್ಲಿ ಪ್ರಥಮ ಮಂಗಳಾರತಿ ಮಾಡಿ ಬರುತ್ತೇವೆ. 


ಅಲ್ಲಿ ಅರಸರ ಮೂರು ತೋಟಗಳು ಇದ್ದವು. ತಿರುಪತಿ ತಿಮ್ಮಪ್ಪನಿಗೆ ಇವರ ತೋಟದಿಂದಲೇ ಹೂವು, ಹಣ್ಣುಗಳು ಹಾಗೂ ಅಲ್ಲಿ ಬೆಳೆದ ಭತ್ತದಿಂದಲೇ, ಅನ್ನದ ನೈವೇದ್ಯವಾಗಬೇಕಿತ್ತು. ಇಂತಹ ಅಪರೂಪದ ಶ್ರೀನಿಧಿ ಸನ್ನಿಧಾನದ ಅರಸು ಮನೆತನವಿದು, ನಾವು 'ದೇವರು' ಮನೆತನದವರು ಅವರ ಅರ್ಚಕರು, ಇದು ನಮ್ಮ ಸುದೈವವೇ ಸರಿ. ವೆಂಕಮ್ಮ ಒಬ್ಬ ಪತಿವೃತಾ ಸ್ತ್ರೀ ಹಚ್ಚುತ್ತಿದ್ದ ದೀಪದ ಕಾಡಿಗೆಯನ್ನು ಹಚ್ಚಿ ರಾಜ ಮನೆತನದ ಗಣ್ಯರ ಕಣ್ಣು ಕಾಣಿಸುವಂತೆ ಮಾಡಿದ್ದು ನಮ್ಮ ಮನೆತನದ ಹೆಗ್ಗಳಿಕೆ. ಅದಕ್ಕಾಗಿ ಆ ವೆಂಕಮ್ಮನಿಗೆ ಅಳ್ಳಿಟ್ಟಿಗೆ ಒಂದು ಹೊಲ, ಬೋನಾಳ, ಕನ್ನಳ್ಳಿ, ಕೊಳ್ಳೂರು ಮರ್ಕಲ್ಲದಲ್ಲಿ ಹೊಲ ಕೊಟ್ಟರು. ಅದು ಈಗ ನಮ್ಮಲ್ಲಿ ಇಲ್ಲ. ಈ ದೇವಸ್ಥಾನದ ಕಂಭಗಳನ್ನು ತಂದು ಹಾಕಿಸಿದ್ದು ಮುಜುಮದಾರರು, ಶೆಳ್ಳಗಿ ಮಂಟಪದಲ್ಲಿ ಕೆತ್ತುತ್ತಿದ್ದ ಕಂಭಗಳನ್ನು ತರಸಿ ಹಾಕಿಸಿದ್ದು ಅವರೇ. ಕುಳಗೇರಿಯಲ್ಲಿ ಈ ದೇವಸ್ಥಾನಕ್ಕೆ ಇದ್ದ 37 ಎಕರೆ ಕೂಡ ಈಗ ಇಲ್ಲ. ಈಗ ಗುಡಿ ಆಸ್ತಿ ಇಲ್ಲ, ಎಲ್ಲ ಭಕ್ತರಿಂದಲೇ ನಡೆಯುತ್ತಿದೆ.


ಇಲ್ಲಿ ಮೊದಲು ಈ ರೀತಿ ಮಾರ್ಬಲ್ ಟೈಲ್ಸ್ ಇರಲಿಲ್ಲ. ಒಂದು ದಿನ ಸೀತಾರಾಮ ಸೇಠ್ ಜೋಶಿ ಅವರು ಬಂದರು, ಇದರ ಬಗ್ಗೆ ವಿಚಾರಿಸಿದರು. ಅವರ ಜೊತೆ ಸರ್ದಾರ್ ಸೇಠರು, ಧ್ಯಾನು ಸೇಠರು ಹಾಗೂ ಇತರರು  ಬಂದರು.ಕೂಡಲೇ ರಾಯಚೂರಿನಿಂದ ಟೈಲ್ಸ್  ಹಾಗೂ ಕಾರ್ಮಿಕರನ್ನು ಕರೆತಂದು ಕೇವಲ ಒಂದೇ ದಿನದಲ್ಲಿ ಹಾಕಿಸಿದರು. ಇದು ಒಂದು ರೀತಿಯ ದೈವಿಕ ಪ್ರೇರಣೆಯೇ ಸರಿ. ಇಲ್ಲಿ ಎದುರುಗಡೆ ಇರುವ ಕಟ್ಟೆ ಕೂಡ ಬೇರೆಯವರ ಪಾಲಾಗಿತ್ತು. ಆದರೆ ಪವಾಡ ಎನ್ನುವಂತೆ ಅದು ಪುನಃ ದೇವಸ್ಥಾನಕ್ಕೆ .... ವೆಂಕಟರಮಣನಿಗೆ ಬಂದು ಸೇರಿತು. ಹೀಗಾಗಿ ಇಲ್ಲಿ ಎಲ್ಲ ಮಾಡಿಸಿಕೊಳ್ಳುವುದು ಆ ದೇವನೇ ಸರಿ, ಎಲ್ಲರಿಗೂ ಒಳ್ಳೆಯದು ಮಾಡುವವನು ಅವನೇ. ಇದರಲ್ಲಿ ನಮ್ಮದು ಏನೂ ಇಲ್ಲ' ಎನ್ನುತ್ತಾರೆ ಅರ್ಚಕ ಕೃಷ್ಣಾಚಾರ್ಯ ದೇವರು.


1993ರಿಂದಲೂ ಇಲ್ಲಿ ಸೇವೆ ಸಲ್ಲಿಸುತ್ತಿರುವ ನಗರಸಭೆಯ ಮಾಜಿ ಸದಸ್ಯರಾದ ನರಸಿಂಹ ಪಂಚಮಗಿರಿ ಅವರು ಹೇಳುತ್ತಾರೆ, 'ನಾವೆಲ್ಲ ಇಲ್ಲಿ ಸೇವೆ ಮಾಡುತ್ತ ಬಂದಿದ್ದೇವೆ, ಎಲ್ಲರ ಸಹಕಾರದಿಂದ ವೆಂಕಟರಮಣ ದೇವರಿಗೆ ಬೆಳ್ಳಿ ಕವಚ ಮಾಡಿಸಿದ್ದೇವೆ. ಈಗ ಇಲ್ಲಿರುವ ಮೂಲ ಮೂರುತಿ ವೀರಾಂಜನೆಯನಿಗೆ ಭಕ್ತರ ನೆರವಿನಿಂದ ಬೆಳ್ಳಿ ಕವಚ ಮಾಡಿಸುತ್ತಿದ್ದೇವೆ. ಇದು ಎಲ್ಲ ದೇವರ ಕೃಪೆ, ಉತ್ಸವದಲ್ಲಿ ಮಯೂರ ವಾಹನ, ಸಿಂಹ ವಾಹನ, ಹನುಮದ್ವಾಹನ, ಶೇಷ ವಾಹನ, ಗುರುಡ ವಾಹನ, ಕಲ್ಪವೃಕ್ಷ ವಾಹನ, ಗಜ ವಾಹನ, ಕಲ್ಕಿ ವಾಹನಗಳ ಸೇವೆ ನಡೆಯುತ್ತದೆ. ಪೂಜೆ, ಮಂಗಳಾರತಿ, ಅನ್ನ ಸಂತರ್ಪಣೆ, ಭಜನೆ, ರಥೋತ್ಸವ.... ಹೀಗೆ ಎಲ್ಲ ಕಾರ್ಯಕ್ರಮಗಳು ಸಾಂಗೋಪವಾಗಿ ಸರ್ವರ ಸಹಕಾರದಿಂದ ಉತ್ಸವದಲ್ಲಿ ನಡೆಯುತ್ತವೆ. ಭಕ್ತರ ಅಭಿಷ್ಠೆಗಳು ನೆರವೇರಿವೆ. ಇಲ್ಲಿ ವಿಜಯ ದಶಮಿಯಂದು ಕಲ್ಯಾಣೋತ್ಸವ ನಡೆಯುತ್ತದೆ. ಅಲ್ಲಿ ಬಂದು ದಾರ ಕಟ್ಟಿದವರ ಲಗ್ನ ನೆರವೇರುತ್ತವೆ. ನನಗೂ ಒಳ್ಳೆಯದಾಗಿದೆ ಹಾಗೂ ಎಲ್ಲರಿಗೂ ಒಳ್ಳೆಯದಾಗುತ್ತ ನಡೆದಿದೆ. ಇದೇ ಪ್ರಸನ್ನ ವೆಂಕಟರಮಣ ದೇವರ ವಿಶೇಷ' ಎಂದು.


ಸುರಪುರ ಹೀಗೆ ತುಂಬ ವಿಶೇಷಗಳ ಆಗರವಾಗಿದೆ. ಹೌದು ನಿಜಕ್ಕೂಇದು ದೇವತೆಗಳು ನೆಲೆಸಿದ ತಾಣವೇ ಸರಿ.


- ಶ್ರೀನಿವಾಸ ಜಾಲವಾದಿ, ಸುರಪುರ


ವೀಕ್ಷಣೆಗಳು: 187

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top