ಎಸ್.ಡಿ.ಎಂ ಸ್ಪೀಕ್ಸ್ ಸೀಸನ್ 5: ಹೊಸ ಕಾಲದ ವೈರುಧ್ಯ ಬಿಂಬಿಸಿದ ವಿದ್ಯಾರ್ಥಿ ಕಥೆಗಾರರು

Shreya Hegde
0


ಉಜಿರೆ: ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಸಕ್ತ ವರ್ಷದ ಸ್ಪೀಕ್ಸ್ ಕಾರ್ಯಕ್ರಮದ ಸೀಸನ್ ಐದರ ಸಂಚಿಕೆಯಲ್ಲಿ ವಿದ್ಯಾರ್ಥಿ ಪ್ರತಿಭೆಗಳು ಪ್ರಸ್ತುತಪಡಿಸಿದ ಕಥೆಗಳು ಹೊಸ ಕಾಲದ ವೈರುಧ್ಯಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾದವು.


ಇನ್ನೇನು ಮನದ ಮಾತು ಹೇಳಿಕೊಂಡು ಇಷ್ಟದ ಹುಡುಗನಿಗೆ ಸರ್‌ಪ್ರೈಸ್ ಕೊಡಬೇಕು ಎನ್ನುವ ಹೊತ್ತಿಗೆ ಎದುರಾದ ಆಘಾತವನ್ನು ಸುಧೀಕ್ಷಾ ಅವರ ಕಥೆ ಬಿಂಬಿಸಿತು. ಎಲ್ಲರಿಂದಲೂ ಅವಮಾನಿತಗೊಂಡು ಒಡಲಬೇಗೆಯಲಿ ಬೇಯುತ್ತಲೇ ಉಸಿರಾಡಬೇಕಾದ ಅನಿವಾರ್ಯತೆಯೊಂದಿಗಿನ ಟ್ರಾನ್ಜೆಂಡರ್ ಸಂಕಟವನ್ನು ಹರ್ಷ ಅವರ ಕಥನಪ್ರಸಂಗ ಹಿಡಿದಿಟ್ಟಿತು. ಮದುವೆಯಾಗುವುದಕ್ಕೆ ಹೆಣ್ಣು ಸಿಗದೇ ತೊಳಲಾಡುತ್ತಿರುವ ಹಳ್ಳಿಯುವಕರ ವೇದನೆಯನ್ನು ತರುಣ್‌ಕುಮಾರ್ ನಿವೇದಿಸಿದರು. ಮದುವೆಯಾಗಲೇಬೇಕಾದ ಒತ್ತಡದ ಕಾರಣಕ್ಕಾಗಿಯೇ ಕಾಡುವ ಗಂಡಾಂತರ ಪ್ರೇತದ ಭಯ ಉಂಟುಮಾಡುವ ತಲ್ಲಣಗಳನ್ನು ಅಕ್ಷತಾ ತಮ್ಮ ಕಥೆಯ ಮೂಲಕ ದಾಟಿಸಿದರು. ಚೌಕಟ್ಟುಗಳಾಚೆಗೆ ಜಿಗಿಯುತ್ತಲೇ ಎರಡು ಜೀವಗಳ ನಡುವೆ ಏರ್ಪಡುವ ಪ್ರೇಮದ ಪಾವಿತ್ರ್ಯದ ಶಕ್ತಿಯನ್ನು ಹಳೆಯ ವಿದ್ಯಾರ್ಥಿನಿ ನೈದಿಲೆ ಶೇಷೇಗೌಡರ ಕಥೆ ಕಾಣಿಸಿತು.‌


ಕಾಲ ಮೇಲ್ನೋಟದಲ್ಲಿ ಎಷ್ಟೇ ಆಧುನಿಕವಾದರೂ ಇಷ್ಟದ ಹುಡುಗನನ್ನು ಒಪ್ಪಿಕೊಂಡು ಧೈರ್ಯದಿಂದ ಹೇಳಿಕೊಂಡು ಜೊತೆಯಾಗುವುದಕ್ಕೆ ಸಾಂಪ್ರದಾಯಿಕತೆಯು ಒಂದಲ್ಲ ಒಂದು ರೀತಿಯಲ್ಲಿ ಅಡ್ಡಿಯಾಗುತ್ತದೆ. ಈ ದ್ವಂದ್ವದೊಂದಿಗಿನ ಮನದ ತೊಳಲಾಟವನ್ನು ಎರಡು ಪಾತ್ರಗಳ ನಡುವಿನ ಪಿಸುಮಾತುಗಳ ದನಿಯೊಂದಿಗೆ ನಿರೂಪಿಸಿದ್ದು ಸುಧೀಕ್ಷಾ ಅವರ ‘ಕೊನೆ ಕರೆ’ ಶೀರ್ಷಿಕೆಯ ಕಥೆ. ಹುಡುಗಿಯ ಸಮ್ಮತಿಯ ಸಿಗ್ನಲ್ ಬರಲಿಲ್ಲ ಎನ್ನುವ ಕೊರಗೇ ಮಾನಸಿಕ ಒತ್ತಡ ಸೃಷ್ಟಿಸಿ ಜೀವವನ್ನೇ ಇಲ್ಲವಾಗಿಸಿಕೊಳ್ಳುವ ಈ ಕಾಲದ ಹೊಸ ತಲೆಮಾರಿನ ಯುವಸಮೂಹದ ನಿರಾಶಾವಾದಿ ಮನಸ್ಥಿತಿ ಈ ಕಥೆಯ ಮೂಲಕ ಅನಾವರಣಗೊಂಡಿತು. ಕಾಯುವ ಮಾಧುರ್ಯದ ವೇದನೆಯನ್ನೇ ಸ್ಫೂರ್ತಿಯಾಗಿಸಿಕೊಂಡವರ ಅಮರ ಪ್ರೇಮವನ್ನೇ ಅಣಕಿಸುವಂತೆ ಈಗಿನವರ ನಿರಾಶಾವಾದ ಕಥೆಯ ಮೂಲಕ ಮುಖಾಮುಖಿಯಾಯಿತು. ಈ ಬಗೆಯ ನಿರಾಶಾವಾದದ ಔಚಿತ್ಯದ ಬಗ್ಗೆ ಯೋಚಿಸುವಂತೆ ಪ್ರೇರಣೆ ನೀಡಿತು.


ಪ್ರಾಕ್ಟಿಕಲ್ ಅಸೈನ್‌ಮೆಂಟ್‌ನ ಭಾಗವಾಗಿ ಅಂಕಗಳನ್ನು ಗಳಿಸಿಕೊಳ್ಳುವ ಉದ್ದೇಶದೊಂದಿಗೆ ಒಲ್ಲದ ಮನಸಿನಲ್ಲಿ ಟ್ರಾನ್ಜ್ಸಂಡರ್ ಸಂದರ್ಶನಕ್ಕೆ ಹೊರಡುವ ವಿದ್ಯಾರ್ಥಿ ಮಾತುಕತೆ ಕೊನೆಗೊಳ್ಳುವ ಹೊತ್ತಿಗೆ ನೋವಿನಲ್ಲಿರುವವರ ಪರವಾದ ಅಪ್ಪಟ ಕಾಳಜಿಯುಳ್ಳ ವ್ಯಕ್ತಿತ್ವವಾಗಿ ಮಾರ್ಪಾಡಾಗುವ ವಿಶೇಷತೆಯನ್ನು ಪರಿಚಯಿಸಿದ್ದು ಹರ್ಷ ಪ್ರಸ್ತುತಪಡಿಸಿದ ಕಥೆ ‘ಜಾಜಿ; ಅವಳು ಎಲ್ಲರಂತಲ್ಲ’. ಅಂಕ ಗಳಿಸಿಕೊಳ್ಳುವ ಯಾಂತ್ರಿಕ ಕ್ರಿಯೆ ವಿದ್ಯಾರ್ಥಿಯೊಳಗೆ ಸಾಮಾಜಿಕ ಸಂವೇದನೆ ಬೆರೆಸುವ ಸಾಂಸ್ಕೃತಿಕ ಪಾತ್ರ ನಿರ್ವಹಿಸುವ ಸಾಧ್ಯತೆಯನ್ನು ಈ ಕಥೆಯೊಳಗಿನ ನಿರೂಪಣಾ ಕ್ರಮ ವಿಭಿನ್ನವಾಗಿ ತೆರೆದಿಟ್ಟಿತು. ಕಥೆಯ ಕೊನೆಯ ಸಾಲು ಕೇಳಿದ ತಕ್ಷಣ ಟ್ರಾನ್ಜ್ಸಂಡರ್ ನೋವುಗಳ ದಾರುಣ ಅನುಭವ ದಟ್ಟೈಸಿತು. ನೊಂದವರ ಜೊತೆಗೆ ನಿಲ್ಲಬೇಕಾದ ಸ್ಪಷ್ಟ ನಿಲುವು ಕಂಡುಕೊAಡು ಮಾಗುತ್ತಾ ಸಾಗಬೇಕು ಎಂಬ ಒತ್ತಾಸೆ ಮೂಡಿಸುವಲ್ಲಿ ಕಥೆ ಯಶಸ್ವಿಯಾಯಿತು.


‘ಬೂದಿಯಾದ ಕನಸು’ ಶೀರ್ಷಿಕೆಯ ಕಥೆಯೊಂದಿಗೆ ತರುಣ್‌ಕುಮಾರ್ ಕೃಷಿಯನ್ನೇ ನೆಚ್ಚಿಕೊಂಡ ಬಂಗಾರದಂತಹ ಮನಸ್ಸಿನ ಹಳ್ಳಿಗಳ ಯುವಸಮೂಹ ಮದುವೆಯ ಆಸೆ-ಆಕಾಂಕ್ಷೆಗಳನ್ನೇ ಹತ್ತಿಕ್ಕಿಕೊಂಡು ಬದುಕಬೇಕಾಗುತ್ತಿದೆ ಎನ್ನುವ ಕಠೋರ ವಾಸ್ತವಕೆ ಕನ್ನಡಿ ಹಿಡಿದರು. ಕನ್ನಡದ ಪ್ರಾದೇಶಿಕ ಭಾಷೆಯ ಸೊಗಡಿನ ಮ್ಯೂಸಿಕಲ್ ಲಯದೊಂದಿಗೆ ಪ್ರೇಕ್ಷಕರನ್ನು ಆಪ್ತವಾಗಿ ಸೆಳೆದರು. ಅವರು ತಮ್ಮೂರಿನ ಯುವಕರು ವ್ಯವಸಾಯದ ಕಾರಣಕ್ಕಾಗಿಯೇ ಹೆಣ್ಣು ಸಿಗದೇ ಮದುವೆಯಾಗುತ್ತಿಲ್ಲ. ಈ ಬಗೆಯ ಟ್ರೆಂಡ್ ವ್ಯವಸಾಯ ಮಾಡುವ ಮಹತ್ವಕಾಂಕ್ಷೆಯೊಂದಿಗಿನ ತರುಣರನ್ನೂ ಆತಂಕಕ್ಕೀಡುಮಾಡಿದೆ ಎನ್ನುವುದನ್ನು ಕಟ್ಟಿಕೊಟ್ಟ ರೀತಿ ವಿಭಿನ್ನವಾಗಿತ್ತು. ಈ ನಿರೂಪಣಾ ಶೈಲಿಯು ನಗರೀಕರಣ ಸೃಷ್ಟಿಸಿದ ಅಭಿವೃದ್ಧಿಯ ಟೊಳ್ಳು ಪರಿಕಲ್ಪನೆಯು ಗ್ರಾಮೀಣ ಭಾಗದ ತಾರುಣ್ಯದ ಬಯಕೆಗಳನ್ನೂ ಹತ್ತಿಕ್ಕಿರುವ ವಿಪರ್ಯಾಸ ದಾಟಿಸಿತು.


ಅಕ್ಷತಾ ಪ್ರಸ್ತುತಪಡಿಸಿದ ‘ಪ್ರೀತಿ ಕತೆ ಪ್ರೇತದ ಜೊತೆ’ ಶೀರ್ಷಿಕೆಯ ಕಥೆಯು ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರಕ್ಕೆ ಹೊಸದಾದ ಶೈಲಿಯನ್ನು ಸೇರ್ಪಡೆಗೊಳಿಸಿದ ಪ್ರಯೋಗವಾಗಿ ಗಮನ ಸೆಳೆಯಿತು. ಮಗಳಿಗೆ ಮದುವೆ ಮಾಡಿಕೊಡಬೇಕು ಎನ್ನುವ ಸಹಜ ಆದ್ಯತೆಯು ಸಾಂಪ್ರದಾಯಿಕ ಒತ್ತಡಗಳ ಕಾರಣಕ್ಕಾಗಿಯೇ ತಂದೆ ಮತ್ತು ಮಗಳು ಇಬ್ಬರನ್ನೂ ಮಾನಸಿಕವಾಗಿ ನಲುಗಿಸುವ ವ್ಯಂಗ್ಯದ ಅಭಿವ್ಯಕ್ತಿ ಈ ಕಥೆಯ ಜೀವಾಳವಾಗಿತ್ತು. ಮದುವೆ ಆಗಬೇಕು ಎನ್ನುವ ಬಯಕೆಯೂ, ಈಗಲೇ ಆಗಬಾರದು ಎನ್ನುವ ತೊಳಲಾಟವೂ ಸೇರಿ ಮಗಳೊಳಗೆ ರೂಪುಗೊಂಡು ಕಾಡುವ ಪ್ರೇತ ಒಂದು ಕಡೆ. ಮಗಳನ್ನು ಕಾಡುವ ಪ್ರೇತದಂತೆಯೇ ತಂದೆಯನ್ನೂ ಕಾಡುವ ಮತ್ತೊಂದು ಬಗೆಯ ಮಾನಸಿಕ ಗೊಂದಲ ಇನ್ನೊಂದು ಕಡೆ. ಇವೆರಡೂ ಸೇರಿ ಕಥೆಯು ಕುತೂಹಲ ಕೆರಳಿಸುತ್ತಾ ಅಂತ್ಯವಾಗುವ ವೇಳೆ ಅರ್ಥಪೂರ್ಣವೆನ್ನಿಸಿತು.


ವಿಭಾಗದ ಹಳೆಯ ವಿದ್ಯಾರ್ಥಿನಿ ನೈದಿಲೆ ಶೇಷೇಗೌಡ ಅವರ ಕಥೆಯು ಪ್ರೀತಿಯು ಚೌಕಟ್ಟುಗಳಾಚೆಗೆ ಜಿಗಿಯುತ್ತಲೇ ಜೀವಗಳನ್ನು ತಂಪಾಗಿಸುವಂತಹ ಮೌಲ್ಯ ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಇಂಥದ್ದೇ ಸಮಯದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ, ಪೂರ್ವಯೋಜಿತವಾಗಿಯೇ ಪ್ರೀತಿ ಜೀವತಳೆಯುತ್ತದೆ ಎಂಬುದನ್ನು ಕಥೆ ನಿರಾಕರಿಸಿತು. ಯಾವಾಗಲಾದರೂ ಹುಟ್ಟಿ ಅಮರತ್ವ ಪಡೆಯುವ ದೊಡ್ಡ ತತ್ವದ ಗುಣ ಪ್ರೀತಿಗೆ ಇರುತ್ತದೆ ಎಂದು ನಿರೂಪಿಸಿತು.


ಸ್ಪೀಕ್ಸ್ಟ್ ನ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಮಾತನಾಡಿ ವಿದ್ಯಾರ್ಥಿ ಪ್ರತಿಭೆಗಳು ಪ್ರಸ್ತುತಪಡಿಸಿದ ಕಥೆಗಳನ್ನು ವಿಮರ್ಶಿಸಿದರು. ಸ್ಪೀಕ್ಸ್ ಐದನೇ ಸೀಸನ್‌ನ ಕಥೆಗಳೆಲ್ಲವೂ ಮೌಲಿಕ ಸಮಯವನ್ನು ಗಳಿಸಿಕೊಂಡ ಅನುಭವವನ್ನು ನೀಡಿದವು ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ಅವರು ಸ್ಪೀಕ್ಸ್ನ ಐದೂ ಸಂಚಿಕೆಗಳಲ್ಲಿ ಪ್ರಸ್ತುತಪಡಿಸಲ್ಪಟ್ಟ ಕಥೆಗಳೆಲ್ಲವೂ ವಿಭಿನ್ನ ಪ್ರಯೋಗಶೀಲತೆಯೊಂದಿಗೆ ಗುರುತಿಸಿಕೊಂಡಿದ್ದವು ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸ್ಪೀಕ್ಸ್ ವೇದಿಕೆಯು ಹೊಸ ಪ್ರತಿಭೆಗಳಿಗೆ ಸ್ಪೂರ್ತಿ ನೀಡುತ್ತದೆ ಎಂದರು. 


ವಿಭಾಗದ ಮುಖ್ಯಸ್ಥ ಡಾ.ಹಂಪೇಶ್ ಕೆ.ಎಸ್. ಮಾತನಾಡಿ ವಿಭಾಗದ ಪ್ರಯೋಗಶೀಲ ಹೆಜ್ಜೆಗಳಲ್ಲಿ ಸ್ಪೀಕ್ಸ್ ವಿನೂತನವಾದುದು ಎಂದರು. ಸ್ಪೀಕ್ಸ್ನ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ಎ.ಜೆ ಅವರು ಸ್ಪೀಕ್ಸ್ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ, ಪತ್ರಿಕೋದ್ಯಮ ಪದವಿ ವಿಭಾಗದ ಮುಖ್ಯಸ್ಥ ಸುನೀಲ್ ಹೆಗ್ಡೆ, ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top