ಎಸ್.ಡಿ.ಎಂ ಜೆಎಂಸಿ ವಿಭಾಗದಲ್ಲಿ ರೇಡಿಯೋ ವೃತ್ತಿಪರತೆ ಕಾರ್ಯಾಗಾರ

Shreya Hegde
0

ಸಕಾರಾತ್ಮಕ ಧ್ವನಿ ಪ್ರಯೋಗಗಳಿಂದ ವೃತ್ತಿಪರತೆಗೆ ಶಕ್ತಿ: ಬಿ.ಕೆ.ಸುಮತಿ


ಉಜಿರೆ: ಹೊಸ ಮಾಧ್ಯಮಗಳ ದೃಶ್ಯ ಅಬ್ಬರದ ನಡುವೆ ಸಮೂಹ ಸಂವಹನದ ಸಕಾರಾತ್ಮಕ ಧ್ವನಿಯ ಸೃಜನಶೀಲತೆಗೆ ಅನುಗುಣವಾದ ಪ್ರಯೋಗಗಳು ಮಾಧ್ಯಮದ ವೃತ್ತಿಪರತೆಯ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕಿ, ಧ್ವನಿ ಕಲಾವಿದೆ ಬಿ.ಕೆ.ಸುಮತಿ ಅಭಿಪ್ರಾಯಪಟ್ಟರು. ಅವರು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ‘ರೇಡಿಯೋ ವೃತ್ತಿಪರತೆ ಮತ್ತು ಕೌಶಲ್ಯಯುತ ಅಸ್ಮಿತೆ’ ಕುರಿತು ಆಯೋಜಿಸಿದ್ದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.  


ರೇಡಿಯೋ ಮಾಧ್ಯಮ ಪ್ರತಿನಿಧಿಸುವ ವೃತ್ತಿಪರರು ಮುದ್ರಣ ಮತ್ತು ದೃಶ್ಯ ಎರಡೂ ವಲಯಗಳಲ್ಲೂ ಕಾರ್ಯನಿರ್ವಹಿಸಬಲ್ಲ ತಾಂತ್ರಿಕ ಮತ್ತು ಭಾಷಿಕ ನೈಪುಣ್ಯತೆಯನ್ನು ಪಡೆದುಕೊಂಡಿರುತ್ತಾರೆ. ರೇಡಿಯೋಕ್ಕೆ ಧ್ವನಿಯೇ ಸಂವಹನದ ಬಹುಮುಖ್ಯ ಆಧಾರವಾಗಿರುವುದರಿಂದ ಆ ಮೂಲಕವೇ ಭಾಷೆ ಮತ್ತು ಕಂಟೆಂಟ್ ಎರಡನ್ನೂ ಸಂಯೋಜಿಸಿ ಜನಮನ ಸೆಳೆಯಬೇಕಾಗುತ್ತದೆ. ಭಾಷೆ ಮೇಲೆ ಹಿಡಿತ ಸಾಧಿಸಿದ ಪ್ರತಿಭೆಗಳು ಸಕಾರಾತ್ಮಕವಾಗಿ ಜನಸಮೂಹವನ್ನು ಸೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದರು. ಸೋಷಿಯಲ್ ಮೀಡಿಯಾದ ಪ್ರಭಾವಳಿಯ ಸದ್ಯದ ಕಾಲಘಟ್ಟದಲ್ಲಿ ರೇಡಿಯೋ ಕೇಳುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಕೊರಗುಗಳನ್ನು ವ್ಯಕ್ತವಾಗುತ್ತಿವೆ. ಆದರೆ, ಹೊಸ ಮಾಧ್ಯಮಗಳ ಮೂಲಕ ಹಲವರು ಈಗಲೂ ರೇಡಿಯೋ ಕೇಳುತ್ತಿದ್ದಾರೆ. ದೃಶ್ಯದ ಆಕರ್ಷಣೀಯ ಅಬ್ಬರ ಕಾಣಿಸಿಕೊಂಡ ಹೊಸ ತಾಂತ್ರಿಕ ಮಾಧ್ಯಮಗಳ ನಡುವೆ ಧ್ವನಿ ಮಾಧ್ಯಮವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಧ್ವನಿ ಇಲ್ಲದೇ ದೃಶ್ಯಕ್ಕೆ ಪ್ರತ್ಯೇಕ ಅಸ್ತಿತ್ವವೇ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.


ದೃಶ್ಯದಲ್ಲಿ ಕಾಣಿಸಿಕೊಳ್ಳುವಿಕೆ ಶಕ್ತಿಯೂ ಹೌದು. ಒಂದು ಮಿತಿಯೂ ಹೌದು. ಧ್ವನಿ ಮಾಧ್ಯಮದಲ್ಲಿ ಕಲ್ಪನೆಗೆ ವಿಶಾಲ ಅವಕಾಶವಿರುತ್ತದೆ. ದೃಶ್ಯದೊಳಗೆ ಧ್ವನಿ ಸಮತೋಲಿತವಾಗಿ ಹೇಗೆ ಬೆರೆಯುತ್ತದೆ ಎನ್ನುವುದರ ಆಧಾರದ ಮೇಲೆ ಅಭಿವ್ಯಕ್ತಿಯ ಪರಿಣಾಮಕಾರಿ ಗುಣ ನಿರ್ಧಾರಿತವಾಗುತ್ತದೆ. ಯಾವುದೇ ಹೊಸ ಮಾಧ್ಯಮ ಆವಿಷ್ಕೃತಗೊಂಡರೂ ಅದು ದೃಶ್ಯದೊಳಗಿನ ಧ್ವನಿ ಮತ್ತು ಧ್ವನಿಯೊಳಗಿನ ದೃಶ್ಯಾತ್ಮಕ ಕಲ್ಪನಾಂಶವನ್ನು ಸಂಯೋಜಿಸಿಕೊಂಡೇ ಜನಜನಿತಗೊಳ್ಳಬೇಕು. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಸಮೂಹ ಸಂವಹನ ನಿರೀಕ್ಷಿಸುವ ಧ್ವನಿ ಸೃಜನಶೀಲತೆಯನ್ನು ಮಾಧ್ಯಮ ವಿದ್ಯಾರ್ಥಿಗಳು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.


ಕೃತಕ ಮಾತುಗಳೇ ನಿರೂಪಣೆಯ ಮಾನದಂಡವಾಗಿರುವಾಗ ಸಹಜ ಮಾತಿನ ಶೈಲಿ ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ. ಸಹಜ ಅಭಿವ್ಯಕ್ತಿಗೆ ಯಾವಾಗಲೂ ಬೆಲೆ ಇರುತ್ತದೆ. ಜನರ ಗ್ರಹಿಕೆಗೆ ಎಟುಕುವಂತಹ ಸಹಜ ಮಾತಿನ ಧಾಟಿಯೊಂದಿಗಿನ ನಿರೂಪಣಾ ಕ್ರಮಗಳ ಮೂಲಕ ಶ್ರವಣ ಮತ್ತು ದೃಶ್ಯ ಮಾಧ್ಯಮ ಎರಡೂ ಹಲವರನ್ನು ತಲುಪಿಕೊಳ್ಳಬಲ್ಲವು. ಭಾಷೆಯೊಳಗಿನ ಧ್ವನಿಶಕ್ತಿ ಅರಿತು ಅದಕ್ಕನುಗುಣವಾಗಿ ವಾಕ್‌ಶಕ್ತಿ ರೂಪಿಸಿಕೊಳ್ಳುವುದರಡೆಗಿನ ಶ್ರದ್ಧೆಯಿಂದ ಸಂವಹನ ವೃತ್ತಿಪರರು ಭಿನ್ನವಾದ ಪ್ರಯೋಗಗಳನ್ನು ನಡೆಸಬಲ್ಲರು ಎಂದರು.


ಧ್ವನಿಗೆ ಅಬ್ಬರದ ಆಕರ್ಷಣೀಯ ವ್ಯಾಕರಣ ಬೇಕಾಗಿಲ್ಲ. ಎಸ್.ಜಾನಕಿ ಹಾಡುವಾಗ ಯಾವುದೇ ಆಂಗಿಕ ಕೃತಕ ಪ್ರದರ್ಶನವಿಲ್ಲದೇ ತಮ್ಮ ಸುಶ್ರಾವ್ಯ ಕಂಠದ ಮೂಲಕವೇ ಧ್ವನಿಯ ಸಹಜ ಅಭಿವ್ಯಕ್ತಿ ಸಾಧಿಸಿಕೊಳ್ಳುತ್ತಿದ್ದರು. ಆ ಮೂಲಕ ಹಾಡಿನೊಳಗೆ ಅಡಕವಾದ ಅರ್ಥವನ್ನು ಧ್ವನಿಸುತ್ತಿದ್ದರು. ಧ್ವನಿಯೇ ಕೇಂದ್ರವಾಗಿ ಅಭಿನಯವೂ ಆಗಿ ದೃಶ್ಯವನ್ನೂ ಹೊಳೆಸಿಬಿಡುವ ವೈಶಿಷ್ಟ್ಯ ಅವರ ಗಾಯನದ ಮೂಲಕ ಅನುಭವಕ್ಕೆ ಬರುತ್ತಿತ್ತು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಹಂಪೇಶ್ ಕೆ ಎಸ್ ವಿದ್ಯಾರ್ಥಿಗಳಲ್ಲಿ ಧ್ವನಿ ಸಂವಹನದ ಮಾದರಿ ಪ್ರಯೋಗಶೀಲತೆಯ ಆಯಾಮಗಳನ್ನು ಪರಿಚಯಿಸುವ ಉದ್ದೇಶದೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವಿದ್ಯಾರ್ಥಿನಿ ಸುಜನಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top