ಪುತ್ತೂರು: ಸ್ಥಳೀಯ ನೆಹರು ನಗರದ ವಿವೇಕಾನಂದ ಪದವಿಪೂರ್ವ ಕಾಲೇಜಿನ 60ನೇ ವರ್ಷಾಚರಣೆಯ ಸಮಾರೋಪ ಹಾಗೂ 2026-27ನೇ ಸಾಲಿನ ಕಾಲೇಜು ವಾರ್ಷಿಕೋತ್ಸವವು ಅಕ್ಟೋಬರ್ 27ರಿಂದ 29ರ ವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ವಂದೇಮಾತರಂ ಗೀತೆಯ 150ನೇ ವರ್ಷಾಚರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮವರ್ಷಾಚರಣೆಯ ಸ್ಮರಣಾರ್ಥವಾಗಿ, ವಾರ್ಷಿಕೋತ್ಸವದ ಪ್ರಧಾನ ವೇದಿಕೆಗೆ 'ಏಕತಾ ವೇದಿಕೆ' ಎಂದು ಹೆಸರಿಡಲಾಗಿದೆ. ಮೂರು ದಿನಗಳ ಕಾಲ ವೈವಿಧ್ಯಮಯ ಸಭಾ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.
ಅಕ್ಟೋಬರ್ 27: 'ಸಾಧನಾ ದರ್ಪಣಂ' ಹಾಗೂ ಸಂಗೀತ ಸಂಜೆ
ಅಕ್ಟೋಬರ್ 27ರಂದು ಮಧ್ಯಾಹ್ನ 1:30ಕ್ಕೆ ನಡೆಯಲಿರುವ 'ಸಾಧನಾ ದರ್ಪಣಂ' ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಸಚಿನ್ ಶೆಣೈ ಕೆ. ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಂಶುಪಾಲ ಜೀವನ್‌ದಾಸ್ ಎ. ಹಾಗೂ ಯೆನೆಪೋಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿಜ್ಞಾನಿ ಡಾ. ಸುಚೇತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಎನ್. ಸತ್ಯನಾರಾಯಣ ಉಪಸ್ಥಿತರಿರಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಸಾರ್ವಜನಿಕರಿಗಾಗಿ ವಿಶೇಷ ಕಾರ್ಯಕ್ರಮವಾಗಿ 'ವಿವೇಕ ಗಾನಾಮೃತ' ಸಂಗೀತ ಸಂಜೆ ಆಯೋಜಿಸಲಾಗಿದೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ಖ್ಯಾತ ಸಂಗೀತ ವಿದ್ವಾಂಸ ಡಾ. ವಿದ್ಯಾಭೂಷಣ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಯೋಧ ಹಾಗೂ ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿರುವರು.
ಅಕ್ಟೋಬರ್ 28: 'ಪರಂಪರಾ ದರ್ಶನಂ'
ಎರಡನೇ ದಿನವಾದ ಅಕ್ಟೋಬರ್ 28ರಂದು 'ಪರಂಪರಾ ದರ್ಶನಂ' ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಆಡಳಿತ ಮಂಡಳಿ ನಿರ್ದೇಶಕ ಡಾ. ಕೆ. ಎನ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಪ್ರಧಾನ ವಕ್ತಾರರಾಗಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಭರತ್ ಪೈ ವಿಶೇಷ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶಶಿಕಲಾ ಎಂ. ಕೆ. ಉಪಸ್ಥಿತರಿರಲಿದ್ದಾರೆ.
ಅಕ್ಟೋಬರ್ 29: 'ಷಷ್ಠ್ಯಬ್ದ ಸಮರ್ಪಣಂ'
ಅಕ್ಟೋಬರ್ 29ರಂದು 60ನೇ ವರ್ಷಾಚರಣೆಯ ಸಮಾರೋಪದ ಅಂಗವಾಗಿ 'ಷಷ್ಠ್ಯಬ್ದ ಸಮರ್ಪಣಂ' ಕಾರ್ಯಕ್ರಮ ಜರುಗಲಿದೆ. ಈ ಸಭೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ವಿತರಿಸಲಾಗುವುದು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಸರ್ಜನ್ ಡಾ. ಶ್ರುತಿಕಾಂತ್ ಎಸ್. ಮುಖ್ಯ ಅತಿಥಿಯಾಗಿ ಹಾಗೂ ಆರ್‌ಎಸ್‌ಎಸ್ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಕುಮಾರ್ ಪ್ರಧಾನ ವಕ್ತಾರರಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಬೋಧ್ ಶೆಟ್ಟಿ ಎಂ. ಉಪಸ್ಥಿತರಿರಲಿದ್ದಾರೆ.
ಪ್ರತಿಯೊಂದು ದಿನದ ಸಭಾ ಕಾರ್ಯಕ್ರಮದ ನಂತರ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.


