
ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ದೇಶದಲ್ಲಿಯೇ ವಿಶಿಷ್ಟವಾದ ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ರೂಪುಗೊಂಡು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಇಲ್ಲಿ ವಿವಿಧ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಇವುಗಳ ಮೂಲಕ ಸಾರ್ವಜನಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಜೀವವೈವಿಧ್ಯತೆ, ಕಲೆ ಮತ್ತು ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಪ್ರಾಧಿಕಾರದ ವಿವಿಧ ಚಟುವಟಿಕೆಗಳ ಭಾಗವಾಗಿ ಮೀನುಗಳ ವಿವಿಧ ಪ್ರಭೇದಗಳನ್ನು ಗುರುತಿಸುವುದು, ಅವುಗಳನ್ನು ಬೆಳೆಸುವುದು, ಸಂತಾನೋತ್ಪತ್ತಿಗೆ ಉತ್ತೇಜನ ನೀಡುವುದು ಹಾಗೂ ಅವುಗಳನ್ನು ಸೂಕ್ತ ನೈಸರ್ಗಿಕ ಆವಾಸಸ್ಥಾನಗಳಿಗೆ ಬಿಡುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ಪಿಲಿಕುಳದ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಪ್ರತಿವರ್ಷ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ.
ಈ ವರ್ಷದ ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ–2026 ಕಾರ್ಯಕ್ರಮವನ್ನು ದಿನಾಂಕ 25-10-2026ರಂದು ಪಿಲಿಕುಳದ ಕೆರೆ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಗೌರಿ, ತಿಲಾಪಿಯಾ ಮೊದಲಾದ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು. ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಮೀನಿನ ಖಾದ್ಯಗಳನ್ನು ಸವಿಯುವ ಅವಕಾಶವನ್ನೂ ಕಲ್ಪಿಸಲಾಯಿತು.
ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೆರೆಗೆ ಮೀನು ಮರಿಗಳನ್ನು ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ ಮತ್ತು ಎನ್.ಜಿ. ಮೋಹನ್, ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷರಾದ ಜಿ. ಶ್ರೀನಿಕೇತನ್ ಹಾಗೂ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜನರಲ್ ಮ್ಯಾನೇಜರ್ ಮಹೇಶ್ ಕುಮಾರ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಅರುಣ್ ಕುಮಾರ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಗನ್ನಾಥ್ ಅವರು ನಿರ್ವಹಿಸಿದರು. ರಾಮಕೃಷ್ಣ ಮರಾಟಿ ಅವರು ವಂದನಾರ್ಪಣೆ ಸಲ್ಲಿಸಿದರು. ಡಾ. ನಿತಿನ್, ಉದಯ ಕುಮಾರ್ ಶೆಟ್ಟಿ ಹಾಗೂ ನಾಗೇಶ್ ಕುಲಾಲ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಮೀನಿನ ಖಾದ್ಯಗಳನ್ನು ಸವಿದು ಆನಂದಿಸಿದರು. ಈ ಕಾರ್ಯಕ್ರಮದಲ್ಲಿ ಅಂದಾಜು 2,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಮತ್ಸ್ಯೋತ್ಸವವು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

