ನವದೆಹಲಿ: ಪ್ರಖರ ಹಿಂದು ರಾಷ್ಟ್ರೀಯ ವಾದಿ, ಪ್ರಸಿದ್ಧ ಪ್ರವಚನಕಾರ್ತಿ, ವಾಗ್ಮಿ, ಪದ್ಮಭೂಷಣ ಪುರಸ್ಕೃತ ಸಾಧ್ವಿ ಋತಂಬರಾ ಅವರ ವೃಂದಾವನ ಕ್ಷೇತ್ರದಲ್ಲಿರುವ ಅವರ ವಾತ್ಸಲ್ಯಗ್ರಾಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಸಶಕ್ತ ಸುದೃಢ ಸುಭಿಕ್ಷ ರಾಷ್ಟ್ರ ನಿರ್ಮಾಣದ ಮಹತ್ವಾಕಾಂಕ್ಷೆಯೊಂದಿಗೆ ಅವರು ನಡೆಸುತ್ತಿರುವ ಹಿಂದು ಯುವತಿಯರ ಸೈನಿಕ ಶಾಲೆ (2000 ವಿದ್ಯಾರ್ಥಿನಿಯರು) ಸೇರಿದಂತೆ ವಿಭಿನ್ನ ಕಾರ್ಯಚಟುವಟಿಕೆಗಳ ಕುರಿತು ಸ್ವಾಮೀಜಿಯವರಿಗೆ ವಿವರಿಸಿದರು.
ಕೀರ್ತಿ ಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಡನೆ ರಾಮಜನ್ಮಭೂಮಿ ಆಂದೋಲನಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದು ಹಾಗೂ ಅವರು 1980 ರ ದಶಕದಲ್ಲಿ ಆಶೀರ್ವಾದಪೂರ್ವಕವಾಗಿ ತಮಗೆ ನೀಡಿದ ಉಡುಪಿ ಶ್ರೀಕೃಷ್ಣನ ಮೂರ್ತಿಯೇ ಇಂದಿಗೂ ಆಶ್ರಮದ ಪೂಜಾಪೀಠದಲ್ಲಿ ತಾನು ಪೂಜಿಸುತ್ತಿರುವುದು ಇತ್ಯಾದಿಗಳನ್ನು ಸ್ಮರಿಸಿಕೊಂಡರು. ಸ್ವಾಮೀಜಿಯವರು ಋತಂಭರಾ ಅವರಿಗೆ ಪದ್ಮಭೂಷಣ ಪುರಸ್ಕಾರ ಸಂದಿರುವುದನ್ನು ಅಭಿನಂದಿಸಿ ಸಂಮಾನಿಸಿದರು.

