ಮಥುರೆಯಲ್ಲಿ ಚಾರಿತ್ರಿಕ ಘಟನೆ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಪೇಜಾವರ ಶ್ರೀಗಳಿಂದ ಸಂಸ್ಥಾನ ಪೂಜೆ‌

Shreya Hegde
0


ಮಥುರಾ: ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ಮಂಗಳವಾರ ಅತ್ಯಂತ ಚಾರಿತ್ರಿಕ ಹಾಗೂ ಅಪರೂಪದ ಧಾರ್ಮಿಕ ಘಟನೆಯೊಂದು ನೆರವೇರಿದೆ. ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಸುದೀರ್ಘ ಯತಿ ಪರಂಪರೆಯ ಭಾಗವಾಗಿ, ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪವಿತ್ರ ಏಕಾದಶಿಯ ಶುಭ ದಿನದಂದು ಮಥುರೆಯ ಕೃಷ್ಣ ಜನ್ಮಸ್ಥಾನದಲ್ಲಿ ತಮ್ಮ ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಸಂಸ್ಥಾನ ಪೂಜೆ ಹಾಗೂ ಶ್ರೀ ಕೃಷ್ಣನ ವಿಶೇಷ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಿದರು. ಕೃಷ್ಣಜನ್ಮಭೂಮಿ ಟ್ರಸ್ಟ್ ನ ವಿಶೇಷ ಆಹ್ವಾನದ ಮೇರೆಗೆ ಆಗಮಿಸಿದ್ದ ಶ್ರೀಗಳು, ಪಟ್ಟದ ದೇವರ ಪೂಜೆಯ ನಂತರ ಶ್ರೀ ಕೃಷ್ಣ ಜನ್ಮಸ್ಥಾನದಲ್ಲಿ ವಿಷ್ಣುಸಹಸ್ರನಾಮ ಪಠಣದೊಂದಿಗೆ ತುಳಸಿ ಮತ್ತು ಪುಷ್ಪಾರ್ಚನೆ ಮಾಡಿ ಮಂಗಳಾರತಿ ಬೆಳಗಿದರು. ತದನಂತರ ಗೋಪೂಜೆ ನೆರವೇರಿಸಿ, ಸಮಸ್ತ ಭಾರತ ದೇಶ, ಸನಾತನ ಧರ್ಮ ಹಾಗೂ ಜಗತ್ತಿನ ಕ್ಷೇಮಕ್ಕಾಗಿ ಪ್ರಾರ್ಥಿಸಿದರು.


ಉಡುಪಿ-ಮಥುರಾದ ದಿವ್ಯ ಸಂಗಮ:

ಈ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಕೃಷ್ಣ ಜನ್ಮಭೂಮಿ ಟ್ರಸ್ಟ್‌ನ ಮುಖ್ಯಸ್ಥರಾದ ಕಪಿಲ್ ಶರ್ಮಾ ಅವರು ಆನಂದ ವ್ಯಕ್ತಪಡಿಸಿ, "ಇಂದಿನ ದಿನವು ಮಥುರಾವಾಸಿಗಳಿಗೆ ಹಾಗೂ ಭಕ್ತರಿಗೆ ಅತ್ಯಂತ ಸ್ಮರಣೀಯ ಕ್ಷಣ. ಶ್ರೀ ಮಧ್ವಾಚಾರ್ಯ ಪರಂಪರೆಯ ಯತಿಗಳು ಹಾಗೂ ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀಗಳು ಇಲ್ಲಿ ಪೂಜೆ ನೆರವೇರಿಸಿರುವುದು ದಕ್ಷಿಣ-ಉತ್ತರ ಭಾರತ ಹಾಗೂ ಅಯೋಧ್ಯೆ-ಮಥುರಾಗಳ ದಿವ್ಯ ಸಂಗಮವಾಗಿದೆ" ಎಂದು ಬಣ್ಣಿಸಿದರು. ಅಲ್ಲದೆ, "ಅಯೋಧ್ಯೆಯ ಶ್ರೀ ರಾಮಮಂದಿರದಂತೆ ಮಥುರೆಯ ಕೃಷ್ಣ ಜನ್ಮಭೂಮಿಯ ಮುಕ್ತಿಗೂ ಶೀಘ್ರದಲ್ಲೇ ಮುಹೂರ್ತ ನಿಗದಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ" ಎಂದು ಶರ್ಮಾ ಆಶಯ ವ್ಯಕ್ತಪಡಿಸಿದರು. ಶ್ರೀಗಳು ವರ್ಷಕ್ಕೊಮ್ಮೆಯಾದರೂ ಮಥುರೆಗೆ ಆಗಮಿಸಿ ಸಂಸ್ಥಾನ ಪೂಜೆ ನೆರವೇರಿಸಬೇಕೆಂದು ಮನವಿ ಮಾಡಿದರು.


ಕೃಷ್ಣ ಜನ್ಮಭೂಮಿ ಶೀಘ್ರವೇ ಮುಕ್ತಿಗೊಳ್ಳಲಿ:

ಟ್ರಸ್ಟ್‌ನ ಮನವಿಗೆ ಸ್ಪಂದಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, "ರಾಮಜನ್ಮಭೂಮಿ ವಿಮೋಚನೆಯಾದಂತೆ ಕೃಷ್ಣ ಜನ್ಮಭೂಮಿಯೂ ಶೀಘ್ರದಲ್ಲೇ ಸಂಪೂರ್ಣ ಮುಕ್ತಿ ಕಾಣಬೇಕು. ಉಡುಪಿ ಹಾಗೂ ಮಥುರಾ ನಡುವಿನ ಧಾರ್ಮಿಕ ಸಂಬಂಧ ನಿರಂತರವಾಗಿ ಬೆಳೆಯಬೇಕು. ಇಡೀ ಜಗತ್ತಿಗೆ ಶ್ರೀರಾಮ ಮತ್ತು ಶ್ರೀಕೃಷ್ಣನ ಅನುಗ್ರಹ ಲಭಿಸಲಿ" ಎಂದು ಆಶೀರ್ವಚನ ನೀಡಿದರು.


ಈ ಮಹತ್ವದ ಪೂಜಾ ಕೈಂಕರ್ಯಕ್ಕೆ ಮಥುರೆಯ ಸಹಸ್ರಾರು ಭಕ್ತಾದಿಗಳು ಸಾಕ್ಷಿಯಾದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top