ನವರಾತ್ರಿಯ ಪರ್ವಕಾಲ ದೇವಿಯ ಉಪಾಸನೆಗೆ ಅತ್ಯುತ್ತಮ ಕಾಲ: ರಾಘವೇಶ್ವರ ಶ್ರೀ

Upayuktha
0


* ನವರಾತ್ರಿಯಲ್ಲಿ ದೇವಿ ಮಹಾತ್ಮೆಯ ಶ್ರವಣ-ಪಠನದಿಂದ ಅನಂತ ಫಲ

* ಲಲಿತೋಪಾಖ್ಯಾನದ ಅನುಸಂಧಾನದಿಂದ ಕೋಟಿ ಸಪ್ತಶತಿ ಪಾಠದ ಪಲವಿದೆ

* ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನವರಾತ್ರ್ಯ ನಮಸ್ಯಾಕ್ಕೆ ಚಾಲನೆ


ಬೆಂಗಳೂರು: ನವರಾತ್ರಿಯ ಪರ್ವಕಾಲವು ಪ್ರಕೃತಿಯೂ ಕೂಡ ನಮಗೆ ಉಪಾಸನೆಯನ್ನು ಮಾಡು ಎಂದು ಅಗತ್ಯ ಅವಕಾಶವನ್ನು ಒದಗಿಸಿಕೊಡುವ ಸಮಯವಾಗಿದ್ದು, ಬಾಹ್ಯ ಪ್ರಕೃತಿಯಲ್ಲಿನ  ಪ್ರಸನ್ನತೆಯು ಉಪಾಸನೆಗಳಿಗೆ ತುಂಬಾ ಸೂಕ್ತವಾದ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ದೇವಿಯ ಅಲ್ಪ ಸೇವೆಯನ್ನು ಮಾಡಿ ಅನಂತವನ್ನು ಪಡೆಯಲು ನವರಾತ್ರಿಯು ಸಕಾಲ. ಅಧ್ಯಾತ್ಮಿಕವಾಗಿ ಇದು ತುಂಬ ಉತ್ತಮ ಕಾಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ 'ನವರಾತ್ರ್ಯ ನಮಸ್ಯಾ' ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಗಳು, ಬಾಹ್ಯ ಪ್ರಕೃತಿಗೂ ನಮ್ಮ ದೇಹ ಹಾಗೂ ಮನಸ್ಸಿಗೂ ನೇರವಾದ ಸಂಬಂಧವಿದೆ. ಪ್ರಾಕೃತಿಕವಾಗಿ ಈ ಶರತ್ಕಾಲ ಮಳೆಗಾಲ ಕಳೆದು ಪ್ರಸನ್ನತೆಯನ್ನು ಪಡೆಯುವ ಕಾಲವಾಗಿದ್ದು, ಚಂಡಮಾರುತ ಕಳೆದು ಮಂದಮಾರುತ ಈ ಕಾಲದಲ್ಲಿ ಬೀಸಿದರೆ, ಆಗಸದಲ್ಲಿ ಅಗಸ್ತ್ಯ ನಕ್ಷತ್ರದ ಉದಯವಾಗಿ ಸತ್ವಗುಣದ ಉದಯವಾಗುತ್ತದೆ. ಮಳೆಯ ಕಾರ್ಮೋಡಗಳು ಕರಗಿ, ಜ್ಞಾನಸೂರ್ಯ ಉದಯವಾಗಿ ಹೃದಯ ಕಮಲ ತೆರೆದುಕೊಳ್ಳುವ ಕಾಲವಾಗಿದೆ ಎಂದು ಅಭಿಪ್ರಾಯಪಟ್ಟರು.


ನವರಾತ್ರ ವ್ರತದ ಆಚರಣೆಯನ್ನು ಯಾರು ಬೇಕಾದರೂ ಮಾಡಬಹುದಾಗಿದ್ದು, ಮೊದಲಿನಿಂದ ನವರಾತ್ರ ವ್ರತವನ್ನು ಆಚರಿಸುವ ಪರಂಪರೆಯನ್ನು ಹೊಂದಿರುವವರು ಆಚರಣೆಯನ್ನು ಬಿಡಬಾರದು. ಆಚರಣೆ ಬಿಟ್ಟುರುವವರು ಹಲವಾರು ರೀತಿಯಲ್ಲಿ ತೊಂದರೆಗೊಳಗಾಗಿರುವುದನ್ನು ಕಾಣಬಹುದು. ಹಾಗಾಗಿ ನವರಾತ್ರದ ಆಚರಣೆಯನ್ನು ಪ್ರಯತ್ನಪೂರ್ವಕವಾಗಿ ಆಚರಿಸಬೇಕು ಎಂದು ಕರೆನೀಡಿದರು.



ಲಲಿತೋಪಾಖ್ಯಾನವನ್ನು ಒಂದು ಬಾರಿ ಅನುಸಂಧಾನ ಮಾಡಿದಾರೆ, ಕೋಟಿ ಬಾರಿ ದೇವಿಮಹಾತ್ಮವನ್ನು ಅನುಸಂಧಾನ ಮಾಡಿದ ಫಲವಿದೆ. ದೇವಿಯ ಚರಿತ್ರೆ ಪಠನ, ಶ್ರವಣಗಳಿಗೆ ನವರಾತ್ರಿಯಲ್ಲಿ ವಿಶೇಷ ಫಲವಿದ್ದು, ಲಲಿತೋಪಾಖ್ಯಾನ, ಶ್ರೀಚಕ್ರ ಪೂಜೆಗಳನ್ನು ರಹಸ್ಯ ಎಂಬುದಾಗಿ ಪರಂಪರೆಯಲ್ಲಿ ಹೇಳಲಾಗಿದೆ. ಲಲಿತೋಪಾಖ್ಯಾನವು ಇಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲ. ಇದು ದೇವಿಯ ಮಹಿಮೆಯನ್ನು ವರ್ಣಿಸುವ ಕಥಾನಕವಾಗಿದ್ದು, 'ನವರಾತ್ರ್ಯ ನಮಸ್ಯಾ'ದಲ್ಲಿ ಲಲಿತೋಪಾಖ್ಯಾನ ಪ್ರವಚನದ ಮೂಲಕ ಪ್ರತಿದಿನ ದೇವಿಯನ್ನು ವಾಗ್ಪುಷ್ಪಗಳಿಂದ ಪೂಜಿಸಲಾಗುವುದು ಎಂದರು.      

 

ಇದಕ್ಕೂ ಮೊದಲು ಶ್ರೀಗಳ ಸಾನ್ನಿಧ್ಯದಲ್ಲಿ ಮಣ್ಣಿನ ರಾಜರಾಜೇಶ್ವರಿಯ ಪ್ರತಿಷ್ಠೆ ನಡೆಯಿತು. ನವರಾತ್ರ್ಯ ನಮಸ್ಯಾದ ಅಂಗವಾಗಿ ರಾಜರಾಜೇಶ್ವರಿಯ, ಶ್ರೀಮಹಾಕಾಳಿ ಮಂತ್ರ ಹವನ, ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.

 

ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ನಿವೃತ್ತ ಪೋಲಿಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್,  ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಚಟ್ನಳ್ಳಿ, ನವರಾತ್ರ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಡಾ| ಶಾರದಾ ಜಯಗೋವಿಂದಾ, ರಮಾನಾಥ ಬಿ.ಎಲ್, ದಿನಪ್ರಧಾನರಾಗಿ ಶ್ರೀಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ದಂಪತಿಗಳು ಸೇರಿದಂತೆ ಸಾವಿರಾರು ಭಕ್ತರು ದೇವಿಯ ಉಪಾಸನೆಯಲ್ಲಿ ಭಾಗಿಗಳಾದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top