ಉದ್ದೇಶ ಸ್ಪಷ್ಟತೆ ಇರುವವರಿಗೆ ಯಾವುದೇ ಅಡೆತಡೆಗಳಿಲ್ಲ: ಪಿ. ಪ್ರದೀಪ್ ಕುಮಾರ್

Upayuktha
0



ಪುತ್ತೂರು: ಪ್ರತಿಭೆಯಿಲ್ಲದ ವ್ಯಕ್ತಿಯಿಲ್ಲ. ಆದರೆ ನಮ್ಮೊಳಗಿರುವ ಪ್ರತಿಭೆಗಳನ್ನು ಗುರುತಿಸುವುದು, ಬೆಳೆಸುವುದು ಹಾಗೂ ಆ ಪ್ರತಿಭೆಯನ್ನು ಸತ್ಕಾರ್ಯಗಳಿಗಾಗಿ ಬಳಸುವುದು ಅತ್ಯಂತ ಮುಖ್ಯ. ಸಮರ್ಪಿತ ಹಾಗೂ ಉದ್ದೇಶ ಸ್ಪಷ್ಟತೆ ಹೊಂದಿರುವ ವ್ಯಕ್ತಿಯ ಬೆಳವಣಿಗೆಗೆ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ - ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಶನಿವಾರ ಮಾತನಾಡಿದರು. 


ಈ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ದೊಡ್ಡ ದೊಡ್ಡ ಸಾಧಕರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಂದವರೇ ಆಗಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಅವಕಾಶಗಳು ಕಡಿಮೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಕಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ, ಯಾವ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ. ಸಾಧನೆಯೆಡೆಗೆ ಮುಖ ಮಾಡಿ ನಿರಂತರ ಕಾರ್ಯಪ್ರವೃತ್ತರಾದರೆ ಅಂದುಕೊಂಡ ಗಮ್ಯವನ್ನು ತಲಪುವುದಕ್ಕೆ ಸಾಧ್ಯವಿದೆ ಎಂದರು.


ಕನಸು ಕಾಣುವುದಕ್ಕೆ ಎಲ್ಲರಿಗೂ ಸಾಧ್ಯವಿದೆ. ಆದರೆ ಕಂಡ ಕನಸುಗಳನ್ನು ನನಸು ಮಾಡುವುದಕ್ಕೆ ಶಿಸ್ತು, ಪ್ರಾಮಾಣಿಕತೆ, ನಿರಂತರ ಪ್ರಯತ್ನ ಹಾಗೂ ಎದುರಾಗುವ ಅಡೆತಡೆಗಳನ್ನು ಮೀರಿ ಮುನ್ನಡೆಯುವ ಸಾಮರ್ಥ್ಯಗಳಿರಬೇಕು. ಆಕಾಂಕ್ಷೆ ಹಾಗೂ ಸಾಧನೆಗಳ ಮಧ್ಯೆ ಬಹುದೊಡ್ಡ ಅಂತರವಿದೆ. ಆ ಅಂತರದ ನಡುವಣ ಸೇತುವೆಯಲ್ಲಿ ನಡೆಯಲು ಕಠಿಣ ಪರಿಶ್ರಮವೊಂದೇ ದಾರಿ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ವ್ಯಕ್ತಿತ್ವವನ್ನು ತಂತ್ರಜ್ಞಾನ ರೂಪಿಸಲಾರದು, ಸ್ವತಃ ನಾವೇ ರೂಪಿಸಿಕೊಳ್ಳಬೇಕು ಎಂದು ನುಡಿದರು.


ಮತ್ತೋರ್ವ ಅತಿಥಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ನ್ ಡೆಪ್ಯೂಟಿ ಇಂಜಿನಿಯರ್ ಅನುಜ್ಞಾ ಪಳ್ಳತ್ತಡ್ಕ ಮಾತನಾಡಿ ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ಈ ದೇಶದ್ದು. ಹಾಗಾಗಿ ಈ ದೇಶದ ಸೇವೆಯನ್ನು ಮಾಡಿ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಒಂದು ಸರಿಯಾದ ಉದ್ದೇಶವನ್ನಿಟ್ಟುಕೊಂಡು ಮುಂದುವರೆಯಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಹಿರಿಯರ ಪರಿಶ್ರಮದ ಫಲವಾಗಿ ನಮ್ಮ ಭಾರತೀಯ ಕಲೆ, ಸಂಸ್ಕೃತಿಗಳು ಬೆಳೆದು ಬಂದಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಅಂಬಿಕಾ ಸಂಸ್ಥೆಗಳು ಸದಾ ತೊಡಗಿಕೊಂಡಿವೆ. ದೇಶ ಮೊದಲು ಎಂಬ ಭಾವನೆಯಡಿ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್, ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಅವಿನಾಶ ಕೊಡೆಂಕಿರಿ ಹಾಗೂ ತಿಲಕ್ ಬಿ.ಸಿ, ಅಂಬಿಕಾ ನೀಟ್ ಅಕಾಡೆಮಿಯ ಪ್ರಾಚಾರ್ಯ ಕಿಶೋರ್ ಭಟ್, ವಿದ್ಯಾರ್ಥಿ ಸಂಘದ ನಾಯಕರಾದ ಅವನಿ ನಾಯಕ್, ಎಚ್.ವಿ.ಭವಿತ್ ಗೌಡ, ರಿಧಿ ಗೌಡ ಹಾಗೂ ಇಂದಿವರ್ ಪಿ.ಪಿ ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರು, ವಿದ್ಯಾಭಾರತಿ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿ ಅಮೃತಾ ರಾವ್ ಶಂಖನಾದಗೈದರು. ವಿದ್ಯಾರ್ಥಿನಿ ಶ್ರೀವಿಭಾ ಹಾಗೂ ತಂಡದವರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ವಂದಿಸಿದರು. 


ಸಭಾ ಕಾರ್ಯಕ್ರಮದ ಬಳಿಕ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಅವರಿಂದ ವಿಡಿಯೋ ಪ್ರಾತ್ಯಕ್ಷಿಕೆ ಸಹಿತ ವರದಿ ವಾಚನ ನಡೆಯಿತು. ವಿದ್ಯಾರ್ಥಿನಿಯರಾದ ಸೋನಾ ನಾರ್ಕೋಡ್ ಹಾಗೂ ಉರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಆನ್ಯಾ ಹಾಗೂ ಚಿನ್ಮಯೋ ಶೆಟ್ಟಿ ಅತಿಥಿ ಪರಿಚಯ ನಡೆಸಿಕೊಟ್ಟರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top