ಮಂಗಳೂರು: ನಾಡಿನಾದ್ಯಂತ ದಸರಾ ಸಂಭ್ರಮದ ವಾತಾವರಣ ಮೂಡುತ್ತಿದ್ದು ಇನ್ನೇನು ಶಾಲಾ ಮಕ್ಕಳಿಗೆ ರಜೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮೈಸೂರು ನಂತರ ದಸರಾದಲ್ಲಿ ಅತ್ಯಂತ ಜನಾಕರ್ಷಣೆ ಗಳಿಸಿರುವ ಮಂಗಳೂರಿನ ಸಾಂಸ್ಕೃತಿಕ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು ಎರಡು ದಿನ ರಜೆ ವಿಸ್ತರಿಸುವಂತೆ ಶಾಸಕ ವೇದವ್ಯಾಸ ಕಾಮತ್ ರವರು ಜಿಲ್ಲಾಡಳಿತದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದನ್ವಯ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯನ್ನು ಅಕ್ಟೊಬರ್ 3 ರಿಂದ 21 ರ ವರೆಗೆ ನೀಡಲಾಗಿದೆ. ಆದರೆ ಕುದ್ರೋಳಿ ಗೋಕರ್ಣನಾಥೇಶ್ವರ, ಉರ್ವ ಮಾರಿಗುಡಿ, ಕುದ್ರೋಳಿ ಭಗವತಿ, ಮಂಗಳಾದೇವಿ, ಆಚಾರ್ಯ ಮಠ ವಠಾರ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಹೀಗೆ ಮಂಗಳೂರಿನ ಎಲ್ಲೆಡೆ 23 ನೇ ಅಕ್ಟೋಬರ್ ಮುಂಜಾನೆಯ ತನಕವೂ ಹಬ್ಬದ ಸಂಭ್ರಮ ಇರಲಿದೆ. ಹಾಗಾಗಿ ಕುಟುಂಬ ಸಮೇತರಾಗಿ ಭಾಗಿಯಾಗುವ ಅಸಂಖ್ಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನಲ್ಲಿ ದಸರಾ ರಜೆಯನ್ನು ಎರಡು ದಿನ ವಿಸ್ತರಿಸಬೇಕು ಎಂದು ಶಾಸಕರು ಒತ್ತಾಯಿಸಿದರು.
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸೇರಿದಂತೆ ಎಲ್ಲರಿಗೂ ಕೆಲಸ ಅಥವಾ ಯಾವುದೇ ಒತ್ತಡವಿಲ್ಲದೇ ಸಂಭ್ರಮದಿಂದ ದಸರಾ ಆಚರಿಸುವಂತಾಗಲು ಅನುಕೂಲಕರ ವಾತಾವರಣ ನಿರ್ಮಿಸಬೇಕು. ಹಾಗಾಗಿ ಪದವಿ ಮಟ್ಟದವರೆಗೂ ರಜೆ ನೀಡಬೇಕು. ಇತ್ತೀಚಿನ ಶ್ರೀ ಕೃಷ್ಣಜನ್ಮಾಷ್ಠಮಿ ಹಾಗೂ ಮರಿಯ ಜಯಂತಿ ಹಬ್ಬಕ್ಕೆ ದ.ಕ ಜಿಲ್ಲೆಯಲ್ಲಿ ರಜೆ ನೀಡುವಂತೆ ಮನವಿ ಸಲ್ಲಿಸಿದ್ದರೂ ಆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಈಗಲೂ ಸಹ ಅದೇ ರೀತಿಯ ನಿರ್ಲಕ್ಷ್ಯ ಧೋರಣೆ ತಾಳದಂತೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಶಾಸಕರು ಆಗ್ರಹಿಸಿದರು.
