ಮಂಗಳೂರು: ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೆ ಒಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ಶುಕ್ರವಾರ (ಅಕ್ಟೋಬರ್ 2, 2026) ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದೂ ವಿದ್ಯಾದಾಯಿನೀ ಸಂಘದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಶಾಲಾ ಸಂಚಾಲಕರಾದ ಶ್ರೀ ಸುಧಾಕರಾವ್ ಪೇಜಾವರ ಅವರು ಮಾತನಾಡಿ, "ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜೀವನ ಪ್ರತಿಯೊಬ್ಬರಿಗೂ ದಾರಿದೀಪ. ವಿದ್ಯಾರ್ಥಿಗಳು ಅವರ ಮಹಾನ್ ತತ್ವಗಳು ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅರ್ಚಕರಾದ ಶ್ರೀ ಗುರುಪ್ರಸಾದ್ ಶಾಂತಿ ಅವರು, ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಚ್ಛತೆಯ ತತ್ವಗಳು ಇಂದಿಗೂ ಪ್ರಸ್ತುತ ಹಾಗೂ ಅನುಕರಣೀಯ ಎಂದು ತಿಳಿಸಿದರು.
ಮಂಗಳೂರಿನ ಎಸ್. ಎಲ್. ಶೇಟ್ ಮಾಲೀಕರಾದ ಶ್ರೀ ರವೀಂದ್ರ ಶೇಟ್ ಅವರು ಮಾತನಾಡಿ, ಇಬ್ಬರೂ ಮಹಾನ್ ನಾಯಕರು ದೇಶಕ್ಕೆ ನೀಡಿದ ಕೊಡುಗೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು. ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಅವರು ಸತ್ಪ್ರಜೆಗಳಾಗಿ ಬೆಳೆಯಲು ಗಾಂಧಿ ಮಾರ್ಗವನ್ನು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಮಂಡ್ಯದ ಪ್ರಗತಿಪರ ಸೇವಾ ಸಂಸ್ಥೆ ಆಯೋಜಿಸಿದ್ದ 22ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಶಾಲೆಯ ಸುಮಾರು 40 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಸಾಗಿದರೆ, 9ನೇ ತರಗತಿ ವಿದ್ಯಾರ್ಥಿ ಸಿದ್ದಾರ್ಥ ನಾಯಕರ ಜೀವನ ಆದರ್ಶಗಳ ಕುರಿತು ಭಾಷಣ ಮಾಡಿದನು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಹರಿ ಎಂ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಹಾಗೂ ಶ್ರೀಮತಿ ರೇವತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಶ್ರೀ ಪಿ. ವಿ. ಗಿರೀಶ್, ಶ್ರೀಮತಿ ಉಮಾ, ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ದಿವಸ್ಪತಿ ಸ್ವಾಗತಿಸಿದರು. ಸಹ ಶಿಕ್ಷಕ ಶ್ರೀ ಮಹೇಶ್ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪ ಕೆ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
