ಮಂಗಳೂರು ಅಕ್ಟೋಬರ್ 02: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಂಸ್ಥೆಯ ವಾರ್ಷಿಕ ಆಡಳಿತ ಮಂಡಳಿಯ ಚುನಾವಣೆ ತಾ. 27.09.2026 ರಂದು ಬೆಂಗಳೂರು ನಗರದಲ್ಲಿ ಚುನಾವಣ ಅಧಿಕಾರಿ ಡಾ| ವಿಕಾಸ್ ನೇತೃತ್ವದಲ್ಲಿ ಜರಗಿತು. ನಗರದ ಖ್ಯಾತ ಮೂತ್ರ ರೋಗ ತಜ್ಞ ಹಾಗೂ ಶಸ್ತ್ರ ಚಿಕಿತ್ಸಕರು, ನಗರದ ವೆನ್‌ಲಾಕ್ ಆಸ್ಪತ್ರೆಯ ಮೂತ್ರ ರೋಗ ವಿಭಾಗದ ಮುಖ್ಯಸ್ಥರಾದ ಡಾ| ಸದಾನಂದ ಪೂಜಾರಿಯವರು ಈ ಪ್ರತಿಷ್ಠಿತ ವೈದ್ಯಕೀಯ ಸಂಘದ ರಾಜ್ಯದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ತಾ. 23, 24, ಅಕ್ಟೋಬರ್ 2026 ರಂದು ಜರಗುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಅವರು ಅಧಿಕಾರವನ್ನು ಸ್ವೀಕರಿಸಲಿರುವರು. ಅವರು ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಯಶ್ವಸ್ಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ| ಪೂಜಾರಿಯವರು ರಾಜ್ಯಮಟ್ಟದ ಡಾ| ಬಿ.ಸಿ. ರೋಯ್ ಪ್ರಶಸ್ತಿ, ರಾಜ್ಯದ ಖ್ಯಾತ ದೃಶ್ಯಮಾಧ್ಯಮ ಸುವರ್ಣ ಕನ್ನಡ ನ್ಯೂಸ್ ವಾಹಿನಿಯ ಹೆಲ್ತ್ ಕೇರ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದು ಅವರ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗೆ ಸಾಕ್ಷಿ. ಭಾರತೀಯ ವೈದ್ಯಕೀಯ ಸಂಘವು ರಾಜ್ಯದಲ್ಲಿ 175 ಶಾಖೆಗಳನ್ನು ಹೊಂದಿದ್ದು ಸುಮಾರು 38,000 ಸದಸ್ಯರನ್ನು ಒಳಗೊಂಡಿದೆ.
ಕಾರ್ಯದರ್ಶಿ