ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಮಂಗಳೂರು ಟ್ರಾನ್ಸ್ಪೋರ್ಟ್ ಕಂಟ್ರಾಕ್ಟರ್ಸ್ ಮತ್ತು ಏಜೆಂಟರುಗಳ ಅಸೋಸಿಯೇಷನ್ (ರಿ) ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ (ಸೆ 27) ಪಣಂಬೂರಿನ ಎನ್.ಎಂ.ಪಿ.ಎ.ಬಿ.ಡಿ.ಸಿ. ಕನ್ವೆನ್ಷನ್ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರಗಿತು. ಬೈಕಂಪಾಡಿ ಮೊಗವೀರ ಮಹಾಸಭಾದ ಅಧ್ಯಕ್ಷ ಕುಮಾರ್ ಮೆಂಡನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅಸೋಸಿಯೇಷನ್‌ನ ಅಧ್ಯಕ್ಷ ಚಿತ್ತರಂಜನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್.ಎಂ.ಪಿ.ಎ. ಹಿರಿಯ ಸಹಾಯಕ ಸಂಚಾರ ವ್ಯವಸ್ಥಾಪಕ ಅರುಣ್ ಕುಮಾರ್, ಜೆ.ಎಸ್.ಡಬ್ಲ್ಯೂ. ಹಿರಿಯ ಅಧಿಕಾರಿ ಸೂರಜ್ ಎಕ್ಕಾರ್, ತಣ್ಣೀರುಬಾವಿ ಮೊಗವೀರ ಮಹಾಸಭಾದ ಅಧ್ಯಕ್ಷ ಲೀಲಾಧರ್ ಹಾಗೂ ಅಗರ್ವಾಲ್ ಕೋಲ್ ಕಾರ್ಪೊರೇಷನ್‌ನ ಶಾಖಾ ವ್ಯವಸ್ಥಾಪಕ ವಿನಯ ಕುಮಾರ್ ಶುಕ್ಲಾ ಭಾಗವಹಿಸಿ, ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಜಯಪ್ರಕಾಶ್ ಎಸ್ ಮತ್ತು ಗಣೇಶ್ ಮೆಂಡನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಸಂಘದ ಸದಸ್ಯರ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಗಂಗಾಧರ, ಲೋಕೇಶ್ ಎಸ್. ಹಾಗೂ ಇಮ್ರಾನ್ ಖಾನ್ ಅವರನ್ನು ಸ್ಮರಿಸಿ ಗೌರವಾರ್ಪಣೆ ಮಾಡಲಾಯಿತು.
ಸಮಾರಂಭದ ಆರಂಭದಲ್ಲಿ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಉಪಾಧ್ಯಕ್ಷರಾದ ಅರ್ಶದ್ ಹುಸೈನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ ಹೊಸಬೆಟ್ಟು ಹಾಗೂ ಸಂಘದ ಪ್ರಮುಖ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಸತೀಶ್ ಮುಂಚೂರು, ರತನ್ ಶೆಟ್ಟಿ ಮತ್ತು ಭಾಸ್ಕರ್ ರೈ ಉಪಸ್ಥಿತರಿದ್ದರು. ಯೋಗೀಶ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶರತ್ ಕೊಟ್ಟಾರಿ ವಂದನಾರ್ಪಣೆಗೈದರು.
