ಮನಸು ಮತ್ತು ಪಂಚೇಂದ್ರಿಯಗಳ ನಿಯಂತ್ರಣದಿಂದ ಸಾರ್ಥಕ ಜೀವನ: ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ
ಧರ್ಮಸ್ಥಳ: ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ದುಶ್ಚಟಗಳಿಂದ ದೂರರಾಗಿ ಸತ್ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು. ಮನಸು ಮತ್ತು ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪ್ರತಿಯೊಬ್ಬರೂ ಸಾರ್ಥಕ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಕಿವಿಮಾತು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶ'ದಲ್ಲಿ ಆಶೀರ್ವಚನ ನೀಡಿದರು. ಋಷಿ-ಮುನಿಗಳು ಹಾಗೂ ವೇದ-ಉಪನಿಷತ್ತುಗಳು ನೀಡಿರುವ ಮಾರ್ಗದರ್ಶನದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದ ಅವರು, ಮದ್ಯಪಾನ ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದು, ಒಬ್ಬ ವ್ಯಕ್ತಿ ವ್ಯಸನಮುಕ್ತನಾದರೆ ಇಡೀ ಕುಟುಂಬವೇ ಸುಧಾರಿಸುತ್ತದೆ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿಗಳು ನಡೆಸುತ್ತಿರುವ ಮದ್ಯವರ್ಜನ ಶಿಬಿರಗಳು ಸಮಾಜಮುಖಿಯಾಗಿ ಯಶಸ್ವಿಯಾಗಿರುವುದನ್ನು ಶ್ಲಾಘಿಸಿದರು.
ವ್ಯಸನಮುಕ್ತರು ನಂದಾದೀಪದಂತೆ ಬೆಳಗಲಿ:
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, "ವ್ಯಸನಮುಕ್ತರಾದವರು ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು. ನುಡಿದಂತೆ ನಡೆದರೆ ಮಾತಿಗೆ ಬೆಲೆ ಬರುತ್ತದೆ. ವ್ಯಸನಮುಕ್ತರು ನಂದಾದೀಪದಂತೆ ಬೆಳಗಿ ಇತರೆ ಬದುಕಿಗೂ ಮಾರ್ಗದರ್ಶನ ನೀಡಬೇಕು" ಎಂದು ಸಲಹೆ ನೀಡಿದರು.
ಆರ್ಥಿಕ ಹಾಗೂ ಹೃದಯದ ಬಡತನ ನಿರ್ಮೂಲನೆ:
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, "ವ್ಯಸನ ಮುಕ್ತರಾದವರಿಂದ ಆರ್ಥಿಕ ಹಾಗೂ ಹೃದಯದ ಬಡತನ ನಿರ್ಮೂಲನೆಗೊಂಡು ಆರ್ಥಿಕ ಸ್ವಾವಲಂಬನೆಯೊಂದಿಗೆ ಸುಖ, ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಇಂತಹ ಸುಧಾರಣಾ ಕಾರ್ಯಕ್ರಮಗಳು ನಾವು ಮಹಾತ್ಮ ಗಾಂಧೀಜಿಯವರಿಗೆ ಅರ್ಪಿಸುವ ನಿಜವಾದ ಕೊಡುಗೆಯಾಗಿದೆ" ಎಂದರು. ವೇದಿಕೆಯಲ್ಲಿ ಮದ್ಯವ್ಯಸನ ಮುಕ್ತರಾದ ಕೇಶವ ಚಾರ್ಮಾಡಿ ಮತ್ತು ಸುಕನ್ಯಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಆಶಯ ಭಾಷಣ ಮಾಡಿದರು. ಶಾಸಕ ಹರೀಶ್ ಪೂಂಜ, ಮಾಜಿ ಎಂ.ಎಲ್.ಸಿ. ಕೆ. ಪ್ರತಾಪಸಿಂಹ ನಾಯಕ್, ನಟರಾಜ ಬಾದಾಮಿ ಹಾಗೂ ಪ್ರಕಾಶ್ ಕಾರಂತ್ ಶುಭಾಶಂಸನೆಗೈದರು.
ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿ, ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಧನ್ಯವಾದ ಅರ್ಪಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
