ಆ ಮಳೆಗಾಲ ಮುಗಿಯುತಿರಲು ಭೂಮಿಗೆ ಹಚ್ಚ ಹಸಿರಿನ ಹಾಸಿಗೆ ಹಾಸುವಂತಹ ವಾತಾವರಣ. ರಾತ್ರಿಯ ಚಂದಿನರನ ಹೊಳಪು ನಿರ್ಮಲ. ತಂಗಾಳಿಯಲ್ಲಿ ತೇಲುವ ತಂಪು. ಶರದೃತು ಬಂತೆಂದರೆ ಸಾಕು, ಪ್ರಕೃತಿಯೇ ತನ್ನ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆದಂತೆ ಭಾಸವಾಗುತ್ತದೆ.
ಆಯುರ್ವೇದದ ದೃಷ್ಟಿಯಲ್ಲಿ ವರ್ಷ ಋತುವಿನ ಮಳೆಮೋಡಗಳು ಸರಿದು ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಷಿಸುವ ಈ ಕಾಲದಲ್ಲಿ ಪ್ರಕೃತಿಯಷ್ಟೇ ಅಲ್ಲ, ನಮ್ಮ ದೇಹವೂ ಋತುಪರಿವರ್ತನೆಯ ಲಯಕ್ಕೆ ಹೊಂದಿಕೊಳ್ಳತೊಡಗುತ್ತದೆ. ಇದೇ ಹಾದಿಯನ್ನು ನಮ್ಮ ಮನಸ್ಸು ಕೂಡ ಏಕೆ ಅನುಸರಿಸಬಾರದು?
ಜೀವನದ ಹಾದಿಯಲ್ಲಿ ಬರುವಂತಹ ಕಷ್ಟಗಳ ಬೇಗೆಯ ಬೇಸಿಗೆ ದಾಟಿ ವರ್ಷ ಋತುವಿನ ಮಳೆಹನಿಗಳಂತಿರುವ ಸುಖ-ದುಃಖಗಳು ಮೀರಿ ಬರುವಂತಹ ಹೊಸ ಚಿಗುರಿನ ನಿರ್ಮಲತೆ, ತಂಪಾದ ತಿಳಿರಿನ ಕವಿತೆಯಾದ ಶರದೃತುವಿನ ನವೆಂಬರ್ ಮಾಸ- ನಮಗೆಲ್ಲಾ 'ನವ'ಅಂಬರ- ಹೊಸತಾದ ಆಕಾಶವನ್ನು, ಹೊಸತಾದ ಬದುಕನ್ನು ನೀಡುವಂತಾಗಬಾರದೇಕೆ!!? ಹೀಗಿರುವಾಗ ಆಯುರ್ವೇದದ ಹಿನ್ನೆಲೆಯಲ್ಲಿ ಹಾಗೂ ಭಾವನಾತ್ಮಕವಾಗಿ ನಾವೇನು ಮಾಡಬಹುದೆಂದು ನೋಡೋಣ.
ವರ್ಷಾಋತುವಿನಲ್ಲಿ ಸಂಚಿತವಾದ ಪಿತ್ತವು ಶರದೃತುವಿನಲ್ಲಿ ಪ್ರಕುಪಿತವಾಗುವ ಕಾರಣ ದೇಹದ ಉಷ್ಣತೆಯನ್ನು ಸಮತೋಲನಗೊಳಿಸುವುದರ ಜತೆಗೆ ಮನಸ್ಸಿಗೂ ತಂಪು- ನೆಮ್ಮದಿ- ಸ್ಥಿರತೆ ನೀಡುವುದು ಮುಖ್ಯ. ಮನಸ್ಸಿನ ಆರೈಕೆಗೆ ನಾವು ಮಾಡಬಹುದಾದ ಆಯುರ್ವೇದದ ಕೆಲವೊಂದು ಅಭ್ಯಾಸಗಳು ಹೀಗಿವೆ:
1. ಬೆಳಗಿನ ಆರಂಭ: ಶಾಂತ ಮನಸ್ಸಿಗೆ
ಎದ್ದ ತಕ್ಷಣ ಮೊಬೈಲ್ ನೋಡದೆ- ಕನಿಷ್ಠ 15 ನಿಮಿಷ- ನಮಗೆ ಜೀವನದಲ್ಲಿರುವಂತಹ ಎಲ್ಲ ವಸ್ತು, ಜೀವಗಳಿಗೂ ಧನ್ಯತೆ ಹೇಳುವುದು.
2. ಅಭ್ಯಂಗ: ದೇಹಕ್ಕೆ ಸೂಕ್ತವಾದ ಎಣ್ಣೆಯಿಂದ ಮೃದುವಾದ ಅಭ್ಯಂಗ.
3. ಸಂಜೆಯ ಚಂದಿರ- ಮನಸ್ಸಿಗೆ ಸುಂದರ:
- ಸಂಜೆ ತಂಪಾದ ವಾತಾವರಣದಲ್ಲಿ ನಡಿಗೆ.
- ಚಂದಿರನ ಬೆಳಕಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಿ.
ಭಾವನಾತ್ಮಕವಾಗಿ:
* ದಿನದ ಕೊನೆಯಲ್ಲಿ ಕೃತಜ್ಞತೆಯ ಮೂರು ವಿಷಯಗಳನ್ನು ಬರೆಯಿರಿ.
*ನಿಮ್ಮ ಭಾವನೆಗಳನ್ನು ನಿರ್ಣಯಿಸದೆ ಗಮನಿಸಿ.
* ನಿಮ್ಮ ಬಗ್ಗೆ ಹಾಗೂ ಸುತ್ತಲಿನವರ ಬಗೆಗೂ ಕ್ಷಮೆ, ಪ್ರೀತಿ, ಕರುಣೆ ಇರಲಿ.
ಹೀಗೆ ಮಾಡಿದಲ್ಲಿ, ನವೆಂಬರ್ ಕೇವಲ ಇನ್ನೊಂದು ಮಾಸ ಮಾತ್ರವಲ್ಲದೆ- ನಮ್ಮ ಬದುಕಿಗೆ ನವ ಅಂಬರವನ್ನು ಕೊಡುವಂತಾಗಬಹುದು.
- ಡಾ. ಅನಘಾ ಭಟ್ ಬಿ.
ಬಿ.ಎ.ಎಂ.ಎಸ್., ಎಂ.ಡಿ. (ಪಂಚಕರ್ಮ)
ರೇಕಿ ಮತ್ತು ಇಎಫ್‌ಟಿ ಹೀಲರ್ (ಚಿಕಿತ್ಸಕಿ), ಬೆಂಗಳೂರು
ಕ್ಷೇಮಾಯು ಆಯುರ್ವೇದಿಕ್ ಸೆಂಟರ್,
ಸಹಕಾರನಗರ, ಬೆಂಗಳೂರು– 92
Ph: 9980250250

