ಇಂದಿನ ಪಾಲಕತ್ವ ಮತ್ತು ಶಿಕ್ಷಣದ ಪರಿಕಲ್ಪನೆಗಳು ಕೇವಲ ಅಂಕಪಟ್ಟಿ, ರ್‍ಯಾಂಕ್ ಹಾಗೂ ತೀವ್ರ ಸ್ಪರ್ಧಾತ್ಮಕತೆಯ ಅಂಧ ಓಟಕ್ಕೆ ಸಿಲುಕಿ, ಮಗುವಿನ ಸಹಜ ವಿಕಾಸವನ್ನು ಮರೆಮಾಚುತ್ತಿವೆ. ತರಗತಿಯಲ್ಲಿ ಗಳಿಸುವ ಶೇಕಡಾವಾರು ಅಂಕಗಳೇ ಮಗುವಿನ ಭವಿಷ್ಯದ ಅಂತಿಮ ಮಾನದಂಡ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಆದರೆ "ಕಲಿಕೆ ಎಂಬುದು ಕೇವಲ ಮಿದುಳಿನ ಕಸರತ್ತಲ್ಲ, ಅದು ಹೃದಯದ ಸಂಸ್ಕಾರ" ಎಂಬುದನ್ನು ಸಮಾಜ ಮರೆಯಬಾರದು. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲನ ಮಾತು ಇಂದಿಗೂ ಪ್ರಸ್ತುತ- ‘ಹೃದಯವನ್ನು ಬೆಸೆಯದೆ ಕೇವಲ ಮೆದುಳಿಗೆ ಜ್ಞಾನ ತುಂಬುವುದು ಶಿಕ್ಷಣವೇ ಅಲ್ಲ’.
ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಪಾಲಕರ ಮೊದಲ ಹೆಜ್ಜೆಯೇ ಪ್ರೀತಿಯ ಸೇತು ಬೆಸೆಯುವುದು. "ಬೆಲ್ಲ ತಿಂದ ಬಾಯಿಗೆ ಕಹಿಯ ರುಚಿ ತಾಗಿಸಬೇಡ; ಮೊದಲು ಪ್ರೀತಿ ನೀಡು, ಬಳಿಕ ನೀತಿ ಹೇಳು" ಎಂಬ ಹಿರಿಯರ ನಾಣ್ಣುಡಿಯಂತೆ, ಮಕ್ಕಳನ್ನು ತಿದ್ದುವ ವಿಚಾರದಲ್ಲಿ ‘‘ಬೆಸೆಯಿರಿ, ಪ್ರಶಂಸಿಸಿ, ತಿದ್ದಿ ಮುನ್ನಡೆಸಿ ತತ್ತ್ವ ಅತ್ಯಂತ ಪ್ರಭಾವಶಾಲಿ ಮನೋವೈಜ್ಞಾನಿಕ ಕೀಲಿಕೈ. ಸಾಮಾನ್ಯವಾಗಿ ಪಾಲಕರು ಮತ್ತು ಶಿಕ್ಷಕರು ಮಾಡುವ ದೊಡ್ಡ ತಪ್ಪು ಎಂದರೆ—ಮಗು ತಪ್ಪು ಮಾಡಿದ ತಕ್ಷಣ ಮೊದಲ ಹಂತದಲ್ಲೇ ಹಲವರ ಎದುರು ಗದರಿ ‘ತಿದ್ದಲು’ ಧಾವಿಸುವುದು. ಇದರಿಂದ ಮಗು ಹಠಮಾರಿಯಾಗಬಹುದು ಅಥವಾ ಕೀಳರಿಮೆಗೆ ಜಾರಬಹುದು. ಇದಕ್ಕೆ ಬದಲಾಗಿ, ಮಗು ಎಡವಿದಾಗ ಕೋಪದಿಂದ ಅಂತರ ಕಾಯ್ದುಕೊಳ್ಳದೆ, ಹೆಗಲ ಮೇಲೆ ಕೈಹಾಕಿ "ನಾನು ನಿನ್ನ ಪರವಾಗಿದ್ದೇನೆ, ನಿನ್ನನ್ನು ಅರ್ಥಮಾಡಿಕೊಳ್ಳಬಲ್ಲೆ" ಎಂಬ ಅಭಯ ನೀಡಿ ಮೊದಲು ಮಗುವಿನ ಮನಸ್ಸನ್ನು ಪ್ರೀತಿಯಿಂದ ಬೆಸೆಯಬೇಕು ಭಾವನೆಗಳ ಬೆಸುಗೆ ಇಲ್ಲದ ಜಾಗದಲ್ಲಿ ಬುದ್ಧಿಮಾತಿಗೆ ಪ್ರವೇಶವಿಲ್ಲ. ಆ ಬಳಿಕ, ಅವರಲ್ಲಿರುವ ಸದ್ಗುಣಗಳನ್ನು, ಸಣ್ಣ ಪ್ರಯತ್ನ ಹಾಗೂ ಶ್ರಮವನ್ನು ಗುರುತಿಸಿ ನಾಲ್ಕು ಜನರ ಎದುರು ಮುಕ್ತವಾಗಿ ಪ್ರಶಂಸಿಸಬೇಕು ಏಕೆಂದರೆ ಪ್ರಾಮಾಣಿಕ ಪ್ರಶಂಸೆಯು ಮಗುವಿನಲ್ಲಿ ‘ನನ್ನಿಂದ ಸರಿಪಡಿಸಿಕೊಳ್ಳಲು ಸಾಧ್ಯ’ ಎಂಬ ಆತ್ಮವಿಶ್ವಾಸದ ಚಿಲುಮೆಯನ್ನು ಉಕ್ಕಿಸಿ, ಮನಸ್ಸನ್ನು ಹಸನು ಮಾಡುತ್ತದೆ. ಮಗು ನಮ್ಮ ಪ್ರೀತಿಯನ್ನು ಪೂರ್ಣವಾಗಿ ನಂಬಿದ ಮೇಲೆ, ಮಾಡಿದ ತಪ್ಪನ್ನು ಎಲ್ಲರೆದುರು ಹೀಯಾಳಿಸದೆ ಏಕಾಂತದಲ್ಲಿ ಪ್ರತ್ಯೇಕವಾಗಿ ಕರೆದು, "ನೀನು ಕೆಟ್ಟವನಲ್ಲ, ಆದರೆ ನೀನು ಮಾಡಿದ ಈ ಕೆಲಸ ಸರಿಯಲ್ಲ" ಎಂದು ಪ್ರೀತಿಯಿಂದ ತಿದ್ದಿ ಸರಿಪಡಿಸಬೇಕು.
ಎಲ್ಲರೆದುರು ಕೊಂಡಾಡು, ಏಕಾಂತದಲ್ಲಿ ತಿದ್ದಿ ಮುನ್ನಡೆಸು ಎನ್ನುವ ಲೋಕೋಕ್ತಿಯೂ ಇದನ್ನೇ ಸಾರುತ್ತದೆ. ಜರ್ಮನ್ ಮಹಾಕವಿ ಗಯಟೆಯು ಮಾರ್ಮಿಕವಾಗಿ ಹೇಳಿದಂತೆ—"ತಿದ್ದುವಿಕೆ ಕೆಲಸ ಮಾಡುತ್ತದೆ ನಿಜ, ಆದರೆ ಪ್ರೋತ್ಸಾಹ ಅದಕ್ಕಿಂತ ಮಿಗಿಲಾದ ಪರಿವರ್ತನೆ ತರುತ್ತದೆ". ಕಟು ಟೀಕೆಗಳಿಂದ ಮಗು ಹಠಮಾರಿಯಾಗಬಹುದು; ಆದರೆ ಪ್ರೀತಿಯ ಬೆಸುಗೆ, ಪ್ರಶಂಸೆಯ ಬಲ ಹಾಗೂ ಪ್ರತ್ಯೇಕವಾಗಿ ತಿದ್ದುವ ಸಂಯಮ ಮಗುವನ್ನು ಒಳಗಿನಿಂದಲೇ ಬದಲಾಯಿಸಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ.
ಮೌಲ್ಯಗಳನ್ನು ತರಗತಿಯ ಕಪ್ಪುಹಲಗೆಯ ಮೇಲೆ ಬರೆದು ಅಥವಾ ವೇದಿಕೆಯ ಮೇಲೆ ನಿಂತು ಭಾಷಣ ಮಾಡಿ ಮಕ್ಕಳ ರಕ್ತಗತವಾಗಿಸಲು ಸಾಧ್ಯವಿಲ್ಲ. ಅವು ಶುಷ್ಕ ಉಪದೇಶದಿಂದ ಒಲಿಯುವುದಿಲ್ಲ; ಸುತ್ತಲಿನ ವಾತಾವರಣದಿಂದ ಮೈಗೂಡುತ್ತವೆ. 'ನೂರು ಮಾತುಗಳ ಉಪದೇಶಕ್ಕಿಂತ ಒಂದು ನಡತೆಯ ನಿದರ್ಶನ ಲೇಸು' (Example is better than precept) ಎಂಬಂತೆ ಹಿರಿಯರ ಬದುಕೇ ಮಕ್ಕಳಿಗೆ ತೆರೆದ ಪುಸ್ತಕವಾಗಬೇಕು. "ತಾಯಿ ತಿದ್ದಿದರೆ ಊರು ಮೆಚ್ಚುವುದು, ತಂದೆ ನಡೆದಂತೆ ಮಗ ನೆಡೆಯುವನು" ಎಂಬ ಗಾದೆಯಿರುವುದು ಇದಕ್ಕೇ. ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಎನ್ನುವ ಮಾತಿನಂತೆ ಬಾಲ್ಯದಲ್ಲೇ ಒಳ್ಳೆಯ ಸಂಸ್ಕಾರ ಕಾಣಿಸಬೇಕು. ಮಹಾತ್ಮಾ ಗಾಂಧೀಜಿಯವರು "ನಿಮ್ಮ ಬದುಕೇ ನಿಮ್ಮ ಮಕ್ಕಳಿಗೆ ನೀವು ನೀಡುವ ಬಹುದೊಡ್ಡ ಸಂದೇಶ" ಎಂದಿದ್ದು ಕೇವಲ ಆದರ್ಶವಲ್ಲ, ನಿತ್ಯ ಸತ್ಯ.
ಏಕೆಂದರೆ ಮಕ್ಕಳು ದೊಡ್ಡವರ ಉದ್ದುದ್ದ ಉಪನ್ಯಾಸಗಳನ್ನು ಆಲಿಸುವಲ್ಲಿ ಜಾಣರಲ್ಲದಿರಬಹುದು, ಆದರೆ ಅವರ ನಡವಳಿಕೆಯನ್ನು ತದೇಕಚಿತ್ತದಿಂದ ಗಮನಿಸಿ ಅನುಕರಿಸುವಲ್ಲಿ ಎಂದಿಗೂ ಎಡವುದಿಲ್ಲ. ಇದನ್ನು ಜೇಮ್ಸ್ ಬಾಲ್ಡ್ವಿನ್ ಅತ್ಯಂತ ಸೊಗಸಾಗಿ ದಾಖಲಿಸಿದ್ದಾರೆ. ಪಾಲಕರು ದಿನವಿಡೀ ಮೊಬೈಲ್ ಪರದೆಯಲ್ಲೇ ಮುಳುಗಿದ್ದು, ಮಕ್ಕಳಿಗೆ ಮಾತ್ರ "ಪುಸ್ತಕ ಓದು" ಎಂದು ತಾಕೀತು ಮಾಡಿದರೆ ಆ ಮಾತಿಗೆ ಯಾವುದೇ ತೂಕವಿರುವುದಿಲ್ಲ. "ಹಿರಿಯರು ಹಾಕಿದ ಹೆಜ್ಜೆ, ಕಿರಿಯರಿಗೆ ರಾಜಮಾರ್ಗ" ಎನ್ನುವಂತೆ, ಹಿರಿಯರ ಕೋಪ, ಸಂಯಮ, ಸತ್ಯಸಂಧತೆ ಮತ್ತು ಸಹನೆಯೇ ಮಕ್ಕಳ ಕಣ್ಣೆದುರು ನಡೆಯುವ ನಿತ್ಯ ಪಾಠಗಳು. 'ಮಾತಿಗಿಂತ ಕೃತಿ ಲೇಸು' ಎಂಬುದನ್ನು ದೊಡ್ಡವರು ತಮ್ಮ ದಿನನಿತ್ಯದ ನಡತೆಯಲ್ಲಿಯೇ ತೋರಿಸಿಕೊಡಬೇಕಿದೆ.
ಇನ್ನೊಂದೆಡೆ, ಕಾಂಕ್ರೀಟ್ ಗೋಡೆಗಳು ಮತ್ತು ಗ್ಯಾಜೆಟ್‌ಗಳ ಕೃತಕ ಬೆಳಕಿನಲ್ಲಿ ಇಂದಿನ ಬಾಲ್ಯ ಉಸಿರುಗಟ್ಟುತ್ತಿದೆ. ಮಕ್ಕಳನ್ನು ಮಣ್ಣು, ನೀರು, ಗಾಳಿ ಹಾಗೂ ಹಸಿರು ಪ್ರಕೃತಿಯ ಮುಕ್ತ ಒಡನಾಟಕ್ಕೆ ಕರೆದೊಯ್ಯುವುದು ಇಂದಿನ ತುರ್ತು. "ಮಣ್ಣಿನ ಒಡನಾಟವಿಲ್ಲದ ಬಾಲ್ಯ, ಬೇರಿಲ್ಲದ ಮರದಂತೆ". ಪ್ರಕೃತಿಯ ಮಡಿಲಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ, ನಾವು ಬಯಸಿದಕ್ಕಿಂತ ಹೆಚ್ಚಿನ ಜ್ಞಾನವನ್ನು ನೀಡುತ್ತದೆ ಎಂಬ ಜಾನ್ ಮುಯಿರ್ ಅವರ ನುಡಿ ಅಕ್ಷರಶಃ ಸತ್ಯ. ಹೂವರಳುವ ಬೆರಗು, ಹಕ್ಕಿಗಳ ಮುಕ್ತ ಕಲರವ, ಸಂಜೆಯ ಸೂರ್ಯಾಸ್ತಗಳನ್ನು ಕಣ್ತುಂಬಿಕೊಂಡಾಗ ಮಗುವಿನಲ್ಲಿ ತಾಳ್ಮೆ, ಸೌಂದರ್ಯಪ್ರಜ್ಞೆ ಮತ್ತು ಸಮಸ್ತ ಜೀವರಾಶಿಗಳ ಮೇಲಿನ ಕರುಣೆ ತಾನಾಗಿಯೇ ಅರಳುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ, ಕೇವಲ ಶೇಕಡಾ ನೂರರಷ್ಟು ಅಂಕ ಗಳಿಸಿ, ವೈಯಕ್ತಿಕ ಸುಖ-ಭೋಗ ಮತ್ತು ಸ್ವಹಿತಾಸಕ್ತಿಯನ್ನೇ ಪರಮ ಗುರಿಯಾಗಿಸಿಕೊಂಡರೆ ಅಂತಹ ಶಿಕ್ಷಣ ಸಮಾಜಕ್ಕೆ ಹೊರೆಯಾಗುತ್ತದೆ. ಸಮಾಜಕ್ಕೆ ಇಂದು ಕೇವಲ ತಾಂತ್ರಿಕವಾಗಿ ನುರಿತ 'ಸ್ವಕೇಂದ್ರಿತ ಬುದ್ಧಿವಂತ ದೈತ್ಯ'ರಲ್ಲ, ಕರುಣಾಮಯಿ ಸಹೃದಯಿಗಳು ಬೇಕಾಗಿದ್ದಾರೆ. "ಕರುಣೆ ಇಲ್ಲದ ಜ್ಞಾನವು ಎಣ್ಣೆ ಇಲ್ಲದ ದೀಪವಿದ್ದಂತೆ; ಅದು ಬೆಳಕು ನೀಡಲಾರದು". "ನನ್ನ ಏಳಿಗೆ, ನನ್ನ ಲಾಭ" ಎಂಬ ಸಂಕುಚಿತ ಭಾವನೆಯಿಂದ ಹೊರಬಂದು, ನಮ್ಮ ಸುತ್ತಲಿನ ಸಮಾಜಕ್ಕಾಗಿ ಅತ್ಯಂತ ಸಣ್ಣ ಮಟ್ಟದಲ್ಲಾದರೂ ಅಳಿಲು ಸೇವೆಯ ರೂಪದಲ್ಲಿ ಏನನ್ನಾದರೂ ಕೊಡುಗೆ ನೀಡುವ ಪ್ರಜ್ಞೆ ಬಾಲ್ಯದಲ್ಲೇ ಚಿಗುರೊಡೆಯಬೇಕು. "ನಿನ್ನನ್ನು ನೀನು ಕಂಡುಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿನ್ನನ್ನು ಸಮರ್ಪಿಸಿಕೊಳ್ಳುವುದು" ಎಂಬ ಗಾಂಧೀಜಿಯವರ ಮಾತು ಸದಾ ನೆನಪಿರಲಿ. "ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ" ಹಾಗೂ "ತಾನು ಬದುಕಿ, ಇತರರನ್ನೂ ಬದುಕಿಸು" ಎಂಬ ನಮ್ಮ ಸಂಸ್ಕೃತಿಯ ಸದಾಶಯವೇ ಮಗುವಿನ ಅಂತರಂಗದ ನಿಜವಾದ ಐಶ್ವರ್ಯ.
ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗಲೂ ಇದು ಸ್ಪಷ್ಟವಾಗುತ್ತದೆ. ಶಾಲಾ ದಿನಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಾಗಿದ್ದು, ಅಂಕಪಟ್ಟಿಯ ಸ್ಪರ್ಧೆಯಲ್ಲಿ ಎಂದೂ ಮುಂಚೂಣಿಯಲ್ಲಿರದ ಆಲ್ಬರ್ಟ್ ಐನ್‌ಸ್ಟೈನ್, ಥಾಮಸ್ ಆಲ್ವಾ ಎಡಿಸನ್ ಅಥವಾ ನಮ್ಮ ಹೆಮ್ಮೆಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಮಹನೀಯರು ಜಗತ್ತನ್ನೇ ಬೆಳಗಿದ್ದು ತಮ್ಮ ಹೃದಯವಂತಿಕೆ, ಕುತೂಹಲ ಮತ್ತು ಸಮಾಜಪರ ಅಂತಃಕರಣದಿಂದಲೇ ಹೊರತು ಅಂಕಗಳ ಬೆಂಬಲದಿಂದಲ್ಲ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಮಾನವೀಯ ಚಿಂತನೆಗಳನ್ನು ಅಕ್ಷರಶಃ ಬದುಕಿದ ಕಲಾಂ ಅವರು 'ಜನರ ರಾಷ್ಟ್ರಪತಿ'ಯಾಗಲು ಅವರ ಸಹೃದಯತೆಯೇ ಕಾರಣವಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ದೇಶ-ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಉನ್ನತ ಪದವಿ ಪಡೆದ ಎಷ್ಟೋ ಮಂದಿ ‘ಅಂಕಗಳ ದೈತ್ಯರು’ ಜೀವನದ ಸಣ್ಣ ಸೋಲುಗಳನ್ನು ಎದುರಿಸಲಾಗದೆ, ಕೌಟುಂಬಿಕ ಸಂಬಂಧಗಳನ್ನು ನಿಭಾಯಿಸಲಾಗದೆ ಖಿನ್ನತೆಗೆ ಜಾರಿದ್ದನ್ನು, ಭ್ರಷ್ಟಾಚಾರ-ಅಹಂಕಾರಗಳಿಗೆ ಬಲಿಯಾಗಿ ಬದುಕಿನಲ್ಲಿ ಸೋತುಹೋಗಿದ್ದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಅಂಕಗಳು ವ್ಯಕ್ತಿಗೆ ಕೇವಲ ಒಂದು ಬಾಗಿಲನ್ನು ತೆರೆಯಬಲ್ಲವೇ ಹೊರತು, ಇಡೀ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಲು ಬೇಕಿರುವುದು ಜೀವಪರ ಅಂತಃಕರಣ ಮತ್ತು ಸ್ಥಿತಪ್ರಜ್ಞತೆ ಮಾತ್ರ.
ಮಕ್ಕಳ ಮಿದುಳಿಗೆ ಕೇವಲ ಮಾಹಿತಿ ತುರುಕಿ ಅವರನ್ನು ಯಾಂತ್ರಿಕವಾಗಿಸುವ ಧಾವಂತದಲ್ಲಿ ಅವರ ಭಾವಕೋಶವನ್ನು ಬರಿದು ಮಾಡುವುದು ಬೇಡ. ಈ ಜೀವಪರ ಮೌಲ್ಯಗಳ ಮೂಲಕ ಅವರನ್ನು ನಾಳಿನ ಸುಸಂಸ್ಕೃತ, ಸಮಚಿತ್ತದ ಮತ್ತು ಸಮಾಜಕ್ಕೆ ಮಿಡಿಯುವ ಸತ್ಪ್ರಜೆಗಳನ್ನಾಗಿ ರೂಪಿಸುವುದು ಇಂದಿನ ಪಾಲಕರು ಹಾಗೂ ಶಿಕ್ಷಕರ ಪರಮ ಕರ್ತವ್ಯವಾಗಿದೆ.
- ಎಸ್. ಎನ್. ಭಟ್, ಸೈಪಂಗಲ್ಲು



