ಕುಳಾಯಿ: "ಶ್ರೀ ವೆಂಕಟ್ರಮಣ ವಿದ್ಯಾಂಗಣ" ನೂತನ ಶೀಟು ಪ್ರಾಂಗಣ ಉದ್ಘಾಟನೆ

Shreya Hegde
0

ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ 




ಕುಳಾಯಿ: ಇಲ್ಲಿನ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಮಾಣಗೊಂಡ ನೂತನ ಶೀಟು ಅಳವಡಿಕೆಯ ಶಾಲಾ ಪ್ರಾಂಗಣ "ಶ್ರೀ ವೆಂಕಟ್ರಮಣ ವಿದ್ಯಾಂಗಣ" ದ ಉದ್ಘಾಟನಾ ಸಮಾರಂಭವು (ಅ.18) ವಿಜೃಂಭಣೆಯಿಂದ ಜರಗಿತು. ಆಡಳಿತ ಮಂಡಳಿಯ ಸಹಕಾರ, ಶಾಲಾಭಿವೃದ್ಧಿ ಸಮಿತಿಯ ನೇತೃತ್ವ, ಹಳೆ ವಿದ್ಯಾರ್ಥಿ ಸಂಘದ ನೆರವು ಹಾಗೂ ಊರ ಮಹನೀಯರು ಮತ್ತು ವಿದ್ಯಾಭಿಮಾನಿಗಳ ಉದಾರ ಸಹಕಾರದೊಂದಿಗೆ ಈ ನೂತನ ಪ್ರಾಂಗಣವು ನಿರ್ಮಾಣಗೊಂಡಿದೆ.


ಧಾರ್ಮಿಕ ವಿಧಿವಿಧಾನ ಹಾಗೂ ಉದ್ಘಾಟನೆ:

ಸಮಾರಂಭದ ಆರಂಭದಲ್ಲಿ ಪವನ್ ಮೈರ್ಪಾಡಿ ಅವರ ನೇತೃತ್ವದಲ್ಲಿ ಗಣಹೋಮ ನೆರವೇರಿತು. ತದನಂತರ ಹಿರಿಯರು ಹಾಗೂ ಮಾರ್ಗದರ್ಶಕರಾದ ಎಚ್.ಯು. ಅನಂತಯ್ಯನವರು ಗಣ್ಯರ ಉಪಸ್ಥಿತಿಯಲ್ಲಿ ರೇಷ್ಮೆ ಬಟ್ಟೆಯ ಪಟ್ಟಿಯನ್ನು (ರಿಬ್ಬನ್) ಕತ್ತರಿಸಿ, ನೂತನ ವಿದ್ಯಾಂಗಣವನ್ನು ಉದ್ಘಾಟಿಸಿ ಒಳಪ್ರವೇಶಿಸಿದರು. ಸಭಾ ಕಾರ್ಯಕ್ರಮವು ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಎಚ್. ಅವರು ಉಪಸ್ಥಿತರಿದ್ದ ಗಣ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಜಯಚಂದ್ರ ಹತ್ವಾರ್ ವಹಿಸಿದ್ದರು. ಅವರು ಮಾತನಾಡಿ, "ದಾನಿಗಳ ನೆರವಿನಿಂದ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಇಂತಹ ಸುಂದರ ಶೀಟು ಪ್ರಾಂಗಣವನ್ನು ನಿರ್ಮಿಸಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ, ಉಪಾಧ್ಯಕ್ಷ ಟಿ.ಎನ್. ರಮೇಶ್, ಕೋಶಾಧಿಕಾರಿ ಎಚ್.ಎಲ್. ರಾವ್, ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ., ಉಪಾಧ್ಯಕ್ಷ ಪ್ರಕಾಶ್ ಎಸ್. ಕರ್ಕೇರ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಮಾಜಿ ಅಧ್ಯಕ್ಷ ಪ್ರಭಾಕರ್ ಕುಳಾಯಿ, ಶಾಲಾಭಿವೃದ್ಧಿ ಸಮಿತಿ ಸಂಚಾಲಕರು ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಯೋಗೀಶ್ ಸನಿಲ್ ಕುಳಾಯಿ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ, ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.


ಶೀಟು ಅಳವಡಿಕೆಯ ಸಂಪೂರ್ಣ ಉಸ್ತುವಾರಿ ವಹಿಸಿ, ಪ್ರಾಂಗಣವನ್ನು ಗಟ್ಟಿಯಾಗಿ ಮತ್ತು ಸುಂದರವಾಗಿ ರೂಪಿಸಲು ಶ್ರಮಿಸಿದ ಹಾಗೂ ದಾನಿಗಳಿಂದ ನೆರವು ಸಂಗ್ರಹಿಸಲು ಶ್ರಮಿಸಿದ ಪ್ರಮುಖರಾದ ಪ್ರಕಾಶ್ ಎಸ್. ಕರ್ಕೇರ, ಪ್ರಭಾಕರ್ ಕುಳಾಯಿ, ಯೋಗೀಶ್ ಸನಿಲ್ ಕುಳಾಯಿ, ಶ್ರೀನಿವಾಸ ಕುಳಾಯಿ ಹಾಗೂ ಶ್ರೀಧರ್ ಎಚ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದರೊಂದಿಗೆ ನೂತನ ಪ್ರಾಂಗಣ ನಿರ್ಮಾಣಕ್ಕೆ ಆರ್ಥಿಕ ಹಾಗೂ ಕಾಯಾಕಾಯ ನೆರವು ನೀಡಿದ ಎಲ್ಲಾ ದಾನಿಗಳನ್ನು ಗೌರವಿಸಲಾಯಿತು.


ಶಾಲಾ ಸಂಚಾಲಕರಾದ ಕೆ. ಕಲಾವತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಗಮಿಸಿದ ಎಲ್ಲಾ ಅಭ್ಯಾಗತರನ್ನು ಶಾಲಾ ಮುಖ್ಯ ಶಿಕ್ಷಕರಾದ ಗೋಪಾಲ್ ವಿ. ಸ್ವಾಗತಿಸಿದರು. ಸಹಶಿಕ್ಷಕರಾದ ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು ಹಾಗೂ ಮಲಕಪ್ಪ ಧನ್ಯವಾದ ಸಮರ್ಪಿಸಿದರು. ಈ ಶುಭ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಅಧ್ಯಾಪಕೇತರ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top