ಮಂಗಳೂರು: ನಗರದ ನೀರುಮಾರ್ಗ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಆರ್. ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ, ಆಸ್ಪತ್ರೆಯ ಆವರಣದಲ್ಲಿ ಅ.24ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ವೈದ್ಯಕೀಯ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ವಿಭಾಗಗಳ ನುರಿತ ತಜ್ಞ ವೈದ್ಯರು ಸೇವೆ ನೀಡಲಿದ್ದಾರೆ. ಸಂಸ್ಥೆಯ ಸಾಮಾನ್ಯ ಶಸ್ತçಚಿಕಿತ್ಸಾ ವಿಭಾಗದ ಖ್ಯಾತ ಪ್ರಾಧ್ಯಾಪಕರಾದ ಡಾ. ದೇವಿದಾಸ್ ಶೆಟ್ಟಿ ಮತ್ತು ಡಾ. ಪ್ರಕಾಶ್, ಸಾಮಾನ್ಯ ವೈದ್ಯಕೀಯ ಶಾಸ್ತ್ರ ವಿಭಾಗದ ಡಾ. ದೇವದಾಸ್ ರೈ, ಡಾ. ಜೂಲಿಯನ್ ಸಲ್ಡಾನಾ, ಡಾ. ಈರಪ್ಪ, ಪ್ರಸೂತಿ ಮತ್ತು ಸ್ತ್ರೀ ಆರೋಗ್ಯ ಶಾಸ್ತ್ರ ವಿಭಾಗದ ಡಾ. ಕಿಶೋರಿ, ಕಿವಿ, ಮೂಗು, ಗಂಟಲು ವಿಭಾಗದ ಡಾ. ಜೆಶ್ವಿನ್, ಕೀಲು ಮತ್ತು ಮೂಳೆ ರೋಗಶಾಸ್ತ್ರ ವಿಭಾಗದ ಡಾ. ವಿಶಾಲ್, ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಡಾ. ರವಿ ತೇಜ ಹಾಗೂ ಪ್ರಯೋಗಾಲಯ ಉಸ್ತುವಾರಿಯಾಗಿ ಪ್ರೊ. ಡಾ. ಸುಚೇತಾ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ಈ ಶಿಬಿರದಲ್ಲಿ ಮಧುಮೇಹ ರೋಗ ತಪಾಸಣೆ, ರಕ್ತದೊತ್ತಡ ತಪಾಸಣೆ, ಕಿವಿ, ಮೂಗು, ಗಂಟಲು, ಸ್ತ್ರೀ ಆರೋಗ್ಯ ತಪಾಸಣೆ, ಮೂಳೆ ರೋಗದ ತಪಾಸಣೆ ಮತ್ತು ನರರೋಗದ ತಪಾಸಣೆಯನ್ನು ನಿರ್ವಹಿಸಲಾಗುವುದು.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿ.ಆರ್. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.


