ಕರುನಾಡಿನ ಸಂಸ್ಕೃತಿಯ ಪ್ರತೀಕ- ನಾಡಹಬ್ಬ ದಸರಾ ನಡೆದು ಬಂದ ದಾರಿ

Shreya Hegde
0



ಕನ್ನಡಿಗರಿಗೆ ನಾಡಹಬ್ಬ ದಸರಾ ಬಂತೆಂದರೆ ಎಲ್ಲಿಲ್ಲದ ಸಡಗರ, ಸಂಭ್ರಮ. ನವದುರ್ಗೆಯರ ಆರಾಧನೆಯ ಪರ್ವಕಾಲ, ಹತ್ತು ದಿನಗಳ ಹಬ್ಬವಾದ ದಸರೆಯ ಕೊನೆಯ ದಿನ ವಿಜಯದಶಮಿಯಂದು ಸಂಪನ್ನಗೊಳ್ಳುವ ಈ ಹಬ್ಬದ ಸಂಕ್ಷಿಪ್ತ ಹಿನ್ನೆಲೆ & ವಿಶೇಷತೆಗಳ ಮೇಲೆ ಬೆಳಕು ಚೆಲ್ಲುವ ಲೇಖನವಿದು.


ನಮ್ಮ ದಸರಾ ಉತ್ಸವದ ಕೇಂದ್ರ ಸ್ಥಳವಾದ ಮೈಸೂರು ಅನ್ನುವ ಹೆಸರು ಬಂದಿದ್ದೇ ರಾಕ್ಷಸ ಮಹಿಷಾಸುರನಿಂದ, ಕಾರಣ ಈ ಸ್ಥಳ ಮಹಿಷನದ್ದಾಗಿತ್ತು. ನಮ್ಮ ನಾಡದೇವಿ ಚಾಮುಂಡೇಶ್ವರಿಯು ನಿರಂತರವಾಗಿ ಒಂಬತ್ತು ದಿನಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿ ಹತ್ತನೇಯ ದಿನ ಅವನನ್ನು ವಧಿಸಿ ವಿಜಯ ಸಾಧಿಸಿದ ವಿಷಯ ಪುರಾಣಗಳಿಂದ ನಮಗೆ ತಿಳಿದು ಬರುತ್ತದೆ. ಅಸುರನ ಸಂಹಾರಗೈದ ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ನಮ್ಮ ನಾಡು ತಲೆತಲಾಂತರದಿಂದ ಅತ್ಯಂತ ವೈಭವದಿಂದ ಆಚರಿಸುತ್ತ ಬಂದಿದೆ.


ಹಾಗೆ ನಮ್ಮ ಇತಿಹಾಸವನ್ನು ಅವಲೋಕನ ಮಾಡಿದಾಗ ನಮಗೆ ದಸರಾ ಹಬ್ಬವು ಮೊದಲು ಆರಂಭವಾಗಿದ್ದು ಮೈಸೂರಿನಲ್ಲಿ ಅಲ್ಲ, ಹಂಪೆಯಲ್ಲಿ ವಿಜಯ ನಗರದ ಸಾಮ್ರಾಜ್ಯದ ಕಾಲದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದ  ಸ್ಪಷ್ಟವಾದ ಉಲ್ಲೇಖಗಳು ಸಿಗುತ್ತವೆ.ಆಗ ಅದರ ಹೆಸರು 'ಮಹಾನವಮಿ' ಎಂಬುದಾಗಿದ್ದು ಇಡೀ ಸೈನ್ಯದ ಮೆರವಣಿಗೆ, ಆನೆಗಳು, ಕುದುರೆಗಳು ಮತ್ತು ರಾತ್ರಿಯಿಡೀ ನಡೆಯುತ್ತಿದ್ದ ನೃತ್ಯ, ಸಂಗೀತ ಕಾರ್ಯಕ್ರಮಗಳ ಕುರಿತು ಆ ಕಾಲದಲ್ಲಿ ನಮ್ಮ ನಾಡಿಗೆ ಭೇಟಿಕೊಟ್ಟ ವಿದೇಶಿ ಪ್ರವಾಸಿಗಳು ತಮ್ಮ ಅನುಭವದ ಕಥನಗಳಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ಈಗಲೂ ನಾವು ಹಂಪಿಗೆ ಹೋದಾಗ ದಸರಾ ಆಚರಣೆಯ ಕುರುಹಾಗಿ ಮಹಾನವಮಿ ದಿಬ್ಬವನ್ನು ನೋಡಬಹುದು. 


ಮುಂದೆ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಈ ಸಂಪ್ರದಾಯ ನಿಂತು ಹೋಗುವ ಸಾಧ್ಯತೆಗಳಿದ್ದವು,ಆದರೆ ಮೈಸೂರಿನ ರಾಜರಾದ ಒಡೆಯರ್ ಮನೆತನದವರು ಇದನ್ನು ಮುಂದುವರಿಸಿಕೊಂಡು ಹೋದರು. ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ಮತ್ತೆ ದಸರೆಯನ್ನು ಆರಂಭಿಸಿ ಅದು ಮುಂದೆ ಮೈಸೂರಿಗೆ ಬಂದು ನೆಲೆ ನಿಂತಿತು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರೆಗೆ ಹೊಸ ರೂಪ ಸಿಕ್ಕಿತು. ವಿದ್ಯುತ್ ದೀಪಾಲಂಕಾರ, ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತ, ಹಬ್ಬವು ಅರಮನೆಯಿಂದ ಹೊರಬಂದು ಜನತೆಯತ್ತ ಮುಖಮಾಡಿದ ಕಾಲ ಅದು. ಹೀಗೆ ನಾಡಿನ ಒಂದು ಭವ್ಯ ಪರಂಪರೆಯು ಮುಂದುವರೆದು ಹೊಸ ಮನ್ವಂತರಕ್ಕೆ ನಾಂದಿಹಾಡಿತು.


ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಅಂದ ತಕ್ಷಣ ನಮಗೆ ಕಂಡುಬರುವದು ತಾಯಿ ಚಾಮುಂಡೇಶ್ವರಿಯ ವಿಗ್ರಹ. ಮೊದಲು ಅಂಬಾರಿಯಲ್ಲಿ ರಾಜರು ಆಸೀನರಾಗುತ್ತಿದ್ದರು. ನಂತರ ರಾಜರ ಪ್ರಭುತ್ವ ಅಂತ್ಯಗೊಂಡು ಪ್ರಜಾಪ್ರಭುತ್ವ ಬಂದ ನಂತರ ಅಂಬಾರಿಯಲ್ಲಿ ನಾಡದೇವಿ ತಾಯಿ ಚಾಮುಂಡಿಯನ್ನು ಕೂಡಿಸಿ ಮೆರವಣಿಗೆಯನ್ನು ಮಾಡಲಾಗುತ್ತಿದೆ.ಹಬ್ಬದ ಕೇಂದ್ರ ಬದಲಾಗಿ ಮುಂದೆ ರಾಜ್ಯ ಸರ್ಕಾರವು ಇದನ್ನು ನಾಡಹಬ್ಬ ಎಂದು ಘೋಷಿಸಿ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಕೇವಲ ಅರಮನೆಗೆ ಸೀಮಿತವಾಗಿದ್ದ ಈ ಹಬ್ಬವು ನಾಡಿನ ಹಬ್ಬವಾಯಿತು.ಸರ್ಕಾರವೇ ಅಧಿಕೃತವಾಗಿ ನಡೆಸೋ ರಾಜ್ಯದ ಹಬ್ಬ, ಇಂಥ ಸ್ಥಾನ ಇರುವ ಹಬ್ಬಗಳು ದೇಶದಲ್ಲೇ ಕಡಿಮೆ. ಈ ಬಾರಿಯ ದಸರಾ ಉತ್ಸವವನ್ನು ಉತ್ತರ ಕರ್ನಾಟಕದಲ್ಲಿ ನೀರಿನ ಸಂರಕ್ಷಣೆ, ಕೆರೆಗಳ ಪುನರುಜ್ಜೀವನದ ಮಹತ್ಕಾರ್ಯವನ್ನು ಮಾಡುವ ಮೂಲಕ 'ಜಲ ಋಷಿ' ಎಂದೇ ಪ್ರಸಿದ್ಧರಾದ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸಿ ದಸರೆಯ ಮೆರಗನ್ನು ಹೆಚ್ಚಿಸಿದ್ದಾರೆ.


ಸಧ್ಯದ ನಾಡಹಬ್ಬ ದಸರಾ ಹತ್ತು ದಿನಗಳವರೆಗೆ ನಡೆಯುವ ರಾಜ್ಯ ಸರ್ಕಾರದ ಅತ್ಯಂತ ದೊಡ್ಡ ಕಾರ್ಯಕ್ರಮವಾಗಿದೆ. ಲಕ್ಷಾಂತರ ಜನರು ಸೇರುವ, ಜೀವನದಲ್ಲಿ ಒಮ್ಮೆಯಾದರೂ ವೀಕ್ಷಿಸಲೇಬೇಕಾದ ಈ ಮೈಸೂರಿನ ದಸರಾ ವಿಶ್ವವನ್ನೇ ತನ್ನತ್ತ ಸೆಳೆಯುತ್ತದೆ. ವಿಜಯ ದಶಮಿಯಂದು ನಡೆಯುವ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗಾಗಿ ಪೂರ್ವದಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಕಾಡಿನ ಶಿಬಿರಗಳಿಂದ ಆನೆಗಳು ಮೈಸೂರಿಗೆ ಬರುತ್ತವೆ, ಅದಕ್ಕೆ ಗಜಪಯಣ ಅಂತ ಹೆಸರು. ನಂತರ ಅವುಗಳಿಗೆ ತೂಕ ಹೊರುವ ತಾಲೀಮು, ಜನಸಂದಣಿಗೆ ಒಗ್ಗಿಕೊಳ್ಳುವ ಅಭ್ಯಾಸ ಮಾಡಿಸಲಾಗುತ್ತದೆ. ಚಿನ್ನದ ಅಂಬಾರಿಯನ್ನು ಹೊರುವ ಆನೆಯನ್ನು ಆರಿಸುವುದೇ ಒಂದು ದೊಡ್ಡ ಪ್ರಕ್ರಿಯೆ. ಈ ಬಾರಿ ಅಂಬಾರಿಯನ್ನು ಹೊರುವ ಆನೆಯ ಹೆಸರು 'ಪ್ರಶಾಂತ'. ವಿಜಯದಶಮಿಯ ದಿನದಂದು 750 ಕಿಲೋ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಆನೆ ಅರಮನೆಯಿಂದ ಹೊರಟು ಬನ್ನಿಮಂಟಪಕ್ಕೆ ಸಾಗುವಾಗ ಹಿಂದೆ ಹಿಂದೆ ಕಲಾ ತಂಡಗಳು, ಸ್ಥಬ್ಧ ಚಿತ್ರಗಳು, ಬ್ಯಾಂಡುಗಳು ಹಿಂಬಾಲಿಸುವ ದೃಶ್ಯವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಜನಸ್ತೋಮವೇ ಅಲ್ಲಿ ನೆರೆಯುತ್ತದೆ.


ಹೊಸ ಕಾಲದ ಸೇರ್ಪಡೆಗಳಾಗಿ ಯುವ ದಸರಾ, ಆಹಾರ ದಸರಾ, ಫಲ ಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಯುವ ದಸರಾದಲ್ಲಿ ಸೇರುವ ಯುವ ಸಮೂಹವನ್ನು ನೋಡಿದರೆ ದಸರಾ ಹಬ್ಬವು ಯುವ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ಸನ್ನ ಕಂಡಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಹಂಪೆಯಲ್ಲಿ ಆರಂಭವಾಗಿ ಶ್ರೀರಂಗಪಟ್ಟಣ,ಅಲ್ಲಿಂದ ಮೈಸೂರಿಗೆ, ಮಹಾರಾಜರಿಂದ ತಾಯಿ ಚಾಮುಂಡಿದೇವಿಗೆ, ಅರಮನೆಯಿಂದ ನಾಡಿನ ಮನೆಮನೆಗೆ ಬಂದ ದಸರಾ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಹೊಂದುತ್ತ, ನಾಲ್ಕು ಶತಮಾನಗಳಿಂದ ನಡೆದು ಬಂದರೂ ತನ್ನ ಸಾಂಸ್ಕೃತಿಕ ಮೆರಗನ್ನು ಹೆಚ್ಚಿಸುವ ಮೂಲಕ ವಿಶ್ವವಿಖ್ಯಾತಿಯನ್ನು ಪಡೆದಿದೆ.ಹೀಗೆ ದಸರಾ ಹಬ್ಬವು ಕೇವಲ ಒಂದು ಹಬ್ಬವಾಗದೇ ಇದು ನಮ್ಮ ಕರ್ನಾಟಕದ ಸಂಸ್ಕೃತಿ,ಇತಿಹಾಸ & ಏಕತೆಯ ಸಂಕೇತವಾಗಿದೆ.


- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top