ಕಲಬುರಗಿ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾದ ಯು.ಟಿ ಖಾದರ್ ಅವರು ರಾಜ್ಯದ ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಹೋಟೆಲ್ ಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ಕ್ಯಾನ್ಸರ್ ಸೇರಿದಂತೆ ಔಷಧಿಗಳ ಬೆಲೆ ಇಳಿಕೆಗೆ ಪ್ರಯತ್ನಿಸಿರುವುದಕ್ಕೆ ಕಲಬುರಗಿ ಜಿಲ್ಲೆ ಹೋಟೆಲ್ ವಸತಿ ಮತ್ತು ಬೇಕರಿ ಮಾಲೀಕರ ಸಂಘವು ಶ್ಲಾಘನೆ ವ್ಯಕ್ತಪಡಿಸಿದೆ.
ಕಲಬುರಗಿಗೆ ಮಂಗಳವಾರ (ಅ. 28 ರಂದು) ಆಗಮಿಸಿದ ಸಚಿವ ಯು.ಟಿ ಖಾದರ್ ಅವರನ್ನು ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್ ನೇತೃತ್ವದ ನಿಯೋಗ ಭೇಟಿಯಾಗಿ ಸನ್ಮಾನಿಸಿತು. ರಾಜ್ಯದ ಹೋಟೆಲ್ ಉಪಹಾರ ಗ್ರಹಗಳಲ್ಲಿ ಸ್ವಚ್ಛತೆ ಆಹಾರ ಗುಣಮಟ್ಟದ ಪರಿಶೀಲನೆ ಕಲಬೆರಕೆ ತಡೆಗೆ ಸಚಿವರು ದಿಟ್ಟ ಹೆಜ್ಜೆ ಕೈಗೊಂಡ ಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಹೋಟೆಲ್ ಬೇಕರಿ ತಪಾಸಣಾ ನೆಪದಲ್ಲಿ ಅಧಿಕಾರಿಗಳು ವ್ಯಾಪಾರಸ್ಥರನ್ನು ಬೆದರಿಸುವುದು ಅಥವಾ ವಿನಾಕಾರಣ ನೀಡಿ ಕಿರುಕುಳ ನೀಡಬಾರದಾಗಿ ಸಚಿವರ ಗಮನಸೆಳೆದು ಈ ಬಗ್ಗೆ ಇಲಾಖೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಸಲಹೆ ನೀಡಲಾಯಿತು. ಕ್ಯಾನ್ಸರ್ ರೋಗದ ಔಷಧ ಗಳ ದರ ಕಡಿತಗೊಳಿಸುವಂತೆ ರಾಜ್ಯ ಸರ್ಕಾರ ಬರೆದ ಪತ್ರಕ್ಕೆ ಕೇಂದ್ರವು ಸ್ಪಂದನೆ ನೀಡಿ ಈಗ ಔಷಧಿ ಬೆಲೆಯನ್ನು ಕಡಿತಗೊಳಿಸಿರುವುದು ಸಚಿವರ ಪ್ರಯತ್ನಕ್ಕೆ ಸಿಕ್ಕ ಯಶಸ್ಸು ಎಂದು ಮೆಚ್ಚುಗೆ ಸೂಚಿಸಲಾಯಿತು. ಇದರಿಂದಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸಚಿವರ ಜನಪರ ನಿಲುವು ಸ್ವಾಗತಾರ್ಹ:
ರಾಜ್ಯ ಸಚಿವ ಸಂಪುಟದ ಕ್ರಿಯಾಶೀಲ ಸಚಿವರಾಗಿ ಜನಪರ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ರೂಪಿಸಿ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದು ಸ್ವಾಗತಾರ್ಹ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.
ಹೋಟೆಲ್ ಸಮಾವೇಶಕ್ಕೆ ಸಚಿವರಿಗೆ ಆಹ್ವಾನ:
ಕರ್ನಾಟಕ ಪ್ರದೇಶ ಹೋಟೇಲ ಸಂಘದ ರಾಜ್ಯ ಪದಾಧಿಕಾರಿಗಳ ಸಮಾವೇಶ ಶೀಘ್ರದಲ್ಲೇ ಕಲಬುರಗಿಯಲ್ಲಿ ನಡೆಸುವ ಸಾಧ್ಯತೆಯಿದ್ದು ಈ ಕಾರ್ಯಕ್ರಮಕ್ಕೆ ಸಚಿವ ಯು.ಟಿ ಖಾದರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಸಂಘದ ಅಧ್ಯಕ್ಷರಾದ ನರಸಿಂಹ ಮಂಡನ್ ಮನವಿ ಮಾಡಿದರು. ರಾಜ್ಯದ ಹೋಟೆಲ್ ಉದ್ಯಮಕ್ಕೆ ರಾಜ್ಯ ಸರ್ಕಾರವು ಹೆಚ್ಚಿನ ಮಾನ್ಯತೆ ನೀಡಿ ಉದಾರ ನೀತಿಯನ್ನು ಅನುಸರಿಸಿ ಪ್ರವಾಸೋದ್ಯಮ ರಂಗಕ್ಕೆ ಉತ್ತೇಜನ ನೀಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಮಂಗಳೂರಿಗೆ ಬಸ್ ಸಂಚಾರ 16 ತಾಸುಗಳು ಹಿಡಿಯುತ್ತಿದ್ದು ಇದಕ್ಕಾಗಿ ಕಲಬುರಗಿಯಿಂದ ವಯಾ ಬೆಂಗಳೂರು ಮಾರ್ಗವಾಗಿ ವಿಮಾನ ಸಂಚಾರ ವಿಸ್ತರಿಸುವಂತೆ ಕೂಡ ಮನವಿ ಮಾಡಿಕೊಳ್ಳಲಾಯಿತು. ಈ ಬಗ್ಗೆ ರಾಜ್ಯದ ಮೂಲಭೂತ ಸೌಲಭ್ಯ ಹಾಗೂ ಭಾರಿ ಉದ್ಯಮ ಖಾತೆಯ ಸಚಿವರಾದ ಎಂ.ಬಿ ಪಾಟೀಲ್ ಅವರ ಗಮನಕ್ಕೆ ತರುವಂತೆ ಹೇಳಿದರು.
ಬೇಡಿಕೆ ಆದ್ಯತೆ ಮೇಲೆ ಬಗೆಹರಿಸಲು ಸಚಿವರ ಭರವಸೆ:
ನಿಯೋಗದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಶೀಘ್ರದಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಚರ್ಚಿಸುವುದಾಗಿ ಭರವಸೆ ನೀಡಿ ಹೋಟೆಲ್ ಅಸೋಸಿಯೇಷನ್ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಸಚಿವ ಯು.ಟಿ ಖಾದರ್ ತಿಳಿಸಿದರು. ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಸುನಿಲ್ ಶೆಟ್ಟಿ, ಶರಣು ಪಾಟೀಲ್ ಸಪ್ತಗಿರಿ, ಸಂತೋಷ್ ಪೂಜಾರಿ ಪಂಚಮಿ, ಮಹಾ ಕೀರ್ತಿ ಶೆಟ್ಟಿ ಇದ್ದರು.

