ಪಣಜಿ (ಗೋವಾ): ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಎಂದು ಕರೆಯಲ್ಪಡುವ ಸಂಘಟನೆಯು ಇತ್ತೀಚೆಗೆ ಪಣಜಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ‘ಹಿಂದೂವಾದ ಮುರ್ದಾಬಾದ್’ ಎಂಬ ದೇಶವಿರೋಧಿ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಘೋಷಣೆಗಳನ್ನು ಕೂಗಲಾಗಿದ್ದು, ಸಂಬಂಧಪಟ್ಟ ಪ್ರತಿಭಟನಾಕಾರರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಂಯೋಜಕ ಸತ್ಯವಿಜಯ ನಾಯ್ಕ್ ಆಗ್ರಹಿಸಿದ್ದಾರೆ.
ಪ್ರತಿಭಟನೆಯ ಅಸಲಿ ಕಾರ್ಯಸೂಚಿ ಬಯಲು:
ಪಣಜಿಯಲ್ಲಿ ನಡೆದ ಈ ಪ್ರತಿಭಟನೆಯು ಮೇಲ್ನೋಟಕ್ಕೆ ‘ಎಸ್.ಐ.ಆರ್.’ ವಿರೋಧ ಹಾಗೂ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಲಾದಂತೆ ಕಂಡರೂ, ಇದರ ಮೂಲ ಉದ್ದೇಶ ಹಿಂದೂಗಳನ್ನು ಗುರಿಯಾಗಿಸುವುದು ಮತ್ತು ಶಾಂತಿಯುತ ಗೋವಾದ ಸಾಮಾಜಿಕ ಸೌಹಾರ್ದತೆಯನ್ನು ಕದಡುವುದೇ ಆಗಿತ್ತು ಎಂದು ಸಮಿತಿ ಆರೋಪಿಸಿದೆ. ಸಮಿತಿಯ ರಾಜ್ಯ ಸಂಯೋಜಕ ಸತ್ಯವಿಜಯ ನಾಯ್ಕ್ ಅವರು ಮಾತನಾಡುತ್ತಾ, "ಈ ಪ್ರತಿಭಟನೆಯ ಸೂತ್ರಧಾರಿ ಅಮರೀನ್ ಶೇಖ್ ಸೇರಿದಂತೆ ಭಾಗವಹಿಸಿದ ಎಲ್ಲಾ ಪ್ರತಿಭಟನಾಕಾರರ ವಿರುದ್ಧ ತಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಜರುಗಿಸಬೇಕು" ಎಂದು ಒತ್ತಾಯಿಸಿದರು.
ಹಿಂದೂವಿರೋಧಿ ಹಾಗೂ ದೇಶವಿರೋಧಿ ನಿಲುವು:
‘ಸಿಜೆಪಿ’ ಸಂಘಟನೆಯ ಇತಿಹಾಸವನ್ನು ಉಲ್ಲೇಖಿಸಿದ ನಾಯ್ಕ್ ಅವರು, ಈ ವೇದಿಕೆಯಿಂದ ನಿರಂತರವಾಗಿ ಇಂತಹ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಸ್ಲಾಮಿಕ್ ಪ್ರಚಾರ ಹಾಗೂ ಸಾಹಿತ್ಯದ ಬಳಕೆ: ಪ್ರತಿಭಟನೆಯಲ್ಲಿ ಪಾಕಿಸ್ತಾನಿ ಕವಿ ಫೈಜ್ ಅಹ್ಮದ್ ಫೈಜ್ ಅವರ ಕವಿತೆಯನ್ನಾಧರಿಸಿದ ‘ಸಬ್ ತಾಜ್ ಉಛಾಲೇ ಜಾಯೇಂಗೆ... ಬಸ್ ನಾಮ್ ರಹೇಗಾ ಅಲ್ಲಾಹ್ ಕಾ’ ಎಂಬ ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ಧಾರ್ಮಿಕ ಪ್ರಚೋದನೆಗೆ ಯತ್ನಿಸಲಾಗಿದೆ. ಹಿಂದಿನ ಪ್ರತಿಭಟನೆಗಳ ಹಿನ್ನೆಲೆ: ಈ ಹಿಂದೆ ಗೋವಾದಲ್ಲಿ ನಡೆದ ‘ನೀಟ್ ಪರೀಕ್ಷೆ’ ವಿರೋಧಿ ಪ್ರತಿಭಟನೆಯಲ್ಲಿ ಅಮರೀನ್ ಶೇಖ್ ಅವರ ನೇತೃತ್ವದಲ್ಲೇ ‘ಫ್ರೀ ಉಮರ್ ಖಾಲಿದ್’ (Free Umar Khalid) ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿತ್ತು.
'ಕಮ್ಯುನಿಸ್ಟ್ ಜನತಾ ಪಾರ್ಟಿ':
ಸಾಮಾಜಿಕ ವಿಷಯಗಳ ನೆಪವೊಡ್ಡಿ ದೇಶದ ಯುವಕರನ್ನು ಹಾದಿತಪ್ಪಿಸಿ, ಅರಾಜಕತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು ಈ ಸಂಘಟನೆಯ ಪ್ರಮುಖ ಕೆಲಸವಾಗಿದೆ. ‘ಸಿಜೆಪಿ’ ಎಂದರೆ ‘ಕಾಕ್ರೋಚ್ ಜನತಾ ಪಾರ್ಟಿ’ ಅಲ್ಲ, ಬದಲಿಗೆ ‘ಕಮ್ಯುನಿಸ್ಟ್ ಜನತಾ ಪಾರ್ಟಿ’ ಎಂಬುದು ಅವರ ಇತ್ತೀಚಿನ ನಡವಳಿಕೆಗಳಿಂದ ಸ್ಪಷ್ಟವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪ್ರತಿಭಟನೆಯಲ್ಲಿ ‘ಹಿಂದೂವಾದ ಮುರ್ದಾಬಾದ್’ ಘೋಷಣೆ ಕೂಗಿದವರು ಹಾಗೂ ಪ್ರತಿಭಟನೆಯ ಆಯೋಜಕಿ ಅಮರೀನ್ ಶೇಖ್ ವಿರುದ್ಧ ತಕ್ಷಣವೇ ಎಫ್.ಐ.ಆರ್. (FIR) ದಾಖಲಿಸಬೇಕು. ನಾಡಿನ ಸಾಮಾಜಿಕ ಸೌಹಾರ್ದತೆ ಹಾಳುಗೆಡವುವ ಇಂತಹ ಸಂಘಟನೆಯನ್ನು ‘ದೇಶದ್ರೋಹಿ’ ಹಾಗೂ ‘ಹಿಂದೂದ್ರೋಹಿ’ ಎಂದು ಘೋಷಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಸಮಿತಿ ಆಗ್ರಹಿಸಿದೆ.

