ಕನ್ನಡ ನಾಡು ನುಡಿಯ ಬಗ್ಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ನುಡಿಗಳು

Shreya Hegde
0



ಕನ್ನಡ ನಾಡಿನ ಹಿರಿಯ ಸಾಮಾಜಿಕ ನಾಯಕ ಮತ್ತು ಕವಿ ದಿನಕರ ದೇಸಾಯಿಯವರು ತಮ್ಮ ಚುಟುಕಗಳ ಮೂಲಕ ವರ್ತಮಾನದ ರಾಜಕೀಯ ಸಾಮಾಜಿಕ ಘಟನೆಗಳಿಗೆ ಪ್ರತಿಕ್ರಿಯಿಸುತ್ತಾ ಬಂದವರು. ಕರ್ನಾಟಕ ಏಕೀಕರಣ, ಕನ್ನಡ ನಾಡು, ಸಂಸ್ಕೃತಿಮತ್ತು ನುಡಿಗಳ ಬಗ್ಗೆ ವಿಶಿಷ್ಟ ರೀತಿಯಲ್ಲಿ ಸ್ಪಂದಿಸಿದ್ದಾರೆ. ರಾಜಕಾರಣಿಗಳ ಹಾಗೂ ನಾಯಕರ ಇಬ್ಬಂದಿತನನನ್ನು ಪ್ರಶ್ನಿಸುತ್ತಾ ಬಂದವರು ಇವರು. 'ಕರ್ನಾಟಕ ಏಕೀಕರಣ' ಎಂಬ ಚುಟುಕಿನಲ್ಲಿ ಕವಿ ದಿನಕರ ದೇಸಾಯಿ ಹೀಗೆ ವಸ್ತು ಸ್ಥಿತಿಯನ್ನು ಹೇಳುತ್ತಾರೆ.

  

ಆಯ್ತು ಏಕೀಕರಣದಿಂದ ಒಕ್ಕಟ್ಟು 

ಒಕ್ಕಟ್ಟಿನಿಂದ ಮತ್ತಷ್ಟು ಬಿಕ್ಕಟ್ಟು,

ಈ ಪರಿಸ್ಥಿತಿಗೆ ಕಾರಣವೇನು ಗೊತ್ತೆ?

ಒಂದೆಡೆಗೆ ಸೇರಿದರು ಸೊಸೆ ಮತ್ತೆ ಅತ್ತೆ.


ಕನ್ನಡಿಗರ ಅಸಹಾಯಕ ಸ್ಥಿತಿಯನ್ನು 'ಕನ್ನಡಿಗನ ಕತೆ 'ಚುಟುಕಿನಲ್ಲಿ ನಿರೂಪಿಸುತ್ತಾರೆ.

ಇದ್ದರೂ ಜೊತೆಗೆ ಉತ್ತುಂಗ ಸಹ್ಯಾದ್ರಿ 

ಯಾವ ವ್ಯಾಪಾರಿಯೂ ಕೊಡಲಿಲ್ಲ ಉದ್ರಿ,

ಇದ್ದರೂ ಮನೆಯೊಳಗೆ ತಾಯಿ ಕಾವೇರಿ 

ಮದರಾಸಿಗೇ ಹೋಯ್ತು ನೀರೆಲ್ಲ ಜಾರಿ


ಕನ್ನಡ ಪ್ರಾಚೀನವಾದುದು. ಆದರೆ ನವೀನ ಸಮಾಜ ಅದನ್ನು ಮರೆತು ಪರ ಭಾಷೆಯನ್ನು ನೆಚ್ಚಿ ಕೊಂಡಿದೆ ಎಂಬ ಕೊರಗು ಕವಿಯದು.

ಓ ಮಗನೆ, ನಮ್ಮ ನುಡಿ ಬಹಳ ಪ್ರಾಚೀನ,

ಹೀಗಾಗಿ ಅದಕಿಲ್ಲ ಮನೆಯೊಳಗೆ ಸ್ಥಾನ,

ಮನೆಯೊಳಗೆ ಮಾಯವಾಗಿದೆ 'ಅಮ್ಮ' 'ಅಪ್ಪಾ',

ಬದಲಾಗಿ ಬಂದು ಬಿಟ್ಟಿದೆ 'ಮಮ್ಮಿ' 'ಪಪ್ಪಾ'


ಕನ್ನಡದ ಅಭಿವೃದ್ಧಿ ಹೇಗೆ ಸಾಧ್ಯ... ಎಂಬ ಚಿಂತನೆಯಲ್ಲಿ 'ಭೂತಲದ' ನೆಲೆಯಲ್ಲಿ ಅದು ನಡೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಕನ್ನಡದ ನಾಲಗೆಗೆ ಬಿಗಿ ದೇವ ಭಾಷೆ 

ಅಚ್ಚಗನ್ನಡವೆಂಬುದೇ ನಮ್ಮ ಆಸೆ 

ನಮಗೇಕೆ ದೇವಲೋಕದ ದೊಡ್ಡ ಸುದ್ಧಿ?

ಸಾಕೆಂಬೆ ಭೂತಲದ ಜನರ ಅಭಿವೃದ್ಧಿ


'ಕನ್ನಡ ರಾಜ್ಯೋತ್ಸವ' ಚುಟುಕಿನಲ್ಲಿ ಕನ್ನಡಿಗರ ಆಲಸ್ಯ ಪ್ರವೃತ್ತಿಯನ್ನು ಹೀಗೆ ತಿಳಿಸುತ್ತಾರೆ.

ವರುಷಕ್ಕೆ ಒಂದು ದಿನ ಮಾಡಿದರು ಹಬ್ಬ

ಸಂಭ್ರಮದ ಮೆರವಣಿಗೆಯೇನು! ಅಬ್ಬಬ್ಬ!

ಆಮೇಲೆ ಪ್ರತಿ ದಿವಸ ಮಾಡಿದರು ನಿದ್ದೆ

ಭೂಮಿ ಬಂಜರು ಬಿದ್ದು ಬರಡಾಯ್ತು ಗದ್ದೆ


ನೆಲಮೂಲ ವಾಸಿಗಳ ನೋವುಗಳನ್ನು 'ನಮ್ಮ ಇತಿಹಾಸ' ಚುಟುಕಿನಲ್ಲಿ ಹೇಳುತ್ತಾರೆ. ಈಗಿನ ಬಹುರಾಷ್ಟ್ರ ಕಂಪನಿ ಗಳ ವರ್ತನೆಗಳು ಇದಕ್ಕೆ ಹೊರತಾಗಿಲ್ಲ.

ಮೂಲದ ವಾಸಿಗಳು ಸೇರಿದರು ಮೂಲೆ

ಇದು ನಮ್ಮ ಇತಿಹಾಸ! ಕೋಲೆನ್ನಿ ಕೋಲೆ

ಹೊರಗಿಂದ ಬಂದವರು ಸಿಕ್ಕಿದ್ದು ನುಂಗಿ

ಒಳಗಿನವರೆಗೆ ಪಾಪ ಗೇಣುದ್ದ ಲುಂಗಿ


ಕನ್ನಡ ನುಡಿ ಆಂಗ್ಲ ಭಾಷೆಯ ಅತಿ ವ್ಯಾಮೋಹದಿಂದ ಬೆರಕೆ ನುಡಿಯಾಗಿದೆ. ಈ ಚುಟುಕು ಅದನ್ನು ಹೀಗೆ ಹೇಳುತ್ತದೆ.

ಮಾತು ಮಾತಿಗೆ ಲೈಟು, ಟೇಬಲ್ಲು, ರೂಮು,

ಪೆನ್ನು, ಪೇಪರು, ಬುಕ್ಕು, ಕರ್ಚೀಪು, ಗೇಮು

ಮುಂದುವರಿದರೆ ಇಂಥ ಶಬ್ದಗಳ ದಾಳಿ

ಶೀಘ್ರದಲಿ ತೆಗೆಯುವುದು ಕನ್ನಡ ದಿವಾಳಿ

ನಮ್ಮ ಭಾಷೆ ನಮ್ಮ ಆಸೆ, ಅಭಿಲಾಷೆ


ಭಾಷೆ ಎಂಬುದು ಆಸೆ, ಕವಿಗಳ ತಮಾಷೆ

ಭಾಷೆಯೊಳಗಿರಬೇಕು ನರನಅಭಿಲಾಷೆ

ಭಾಷೆ ಮಾನವ ಶಕ್ತಿ ಪನನಗಳ ಉಕ್ತಿ

ಭಾಷೆಯಿಂದಲೆ ನಮಗೆ ಜೀವನದಮುಕ್ತಿ


'ನಮ್ಮ ಕನ್ನಡ ನಮ್ಮ ತಾಯಿ ಎಂಬ ಭಾವ ನಮ್ಮದಾಗಿರಬೇಕು. ಬರೆದಿರುವುದು ತೊದಲು ನುಡಿಗಳು. ಕನ್ನಡ ತಾಯಿ ಶ್ರೇಷ್ಠಳು ಎಂಬ ಭಕ್ತಿಯಿಂದ ಅವಳ ಸೇವೆ ಮಾಡಬೇಕು ಎಂಬ ಆಶಯ ಕವಿಯದ್ದಾಗಿದೆ.

 

'ಕನ್ನಡ ನುಡಿಗೆ' ಚುಟುಕಿನಲ್ಲಿ ಕನ್ನಡ ನುಡಿಯ ವರ್ಣನೆ ಮನೋಹರವಾಗಿದೆ.

ನನ್ನ ಕನ್ನಡ ನುಡಿಯೇ, ನೀನೆಷ್ಟು ಚಂದ!

ಏನು ಗೀಚಿದರು ಆಗುವುದು ಶ್ರೀಗಂಧ,

ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು 

ಬಂಗಾರಗಿಂತಲೂ ಶ್ರೇಷ್ಠ ನುಡಿಮುತ್ತು


ಕನ್ನಡ ನಾಡು ನುಡಿಗಳ ಬಗ್ಗೆ ಅರಿತು ಕೊಳ್ಳಬೇಕಾಗಿದೆ. ಅಭಿಮಾನದಿಂದ ನಮ್ಮ ನಾಡು ನುಡಿಯ ಸೇವೆಗೆ ತೊಡಗಿಸಿಕೊಳ್ಳಬೇಕಾಗಿದೆ.


- ಕೃಷ್ಣಮೂರ್ತಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top