​ಸೋಲಿಗೆ 'ಆಯೋಗ'ದ ನೆಪ, ದೇಶದ ವಿರುದ್ಧ ಜಾಗತಿಕ ಸಂಚು

Shreya Hegde
0



ದಿನಾ ಬೆಳಿಗ್ಗೆ ಎದ್ದು ಸಾಮಾಜಿಕ ಜಾಲತಾಣದ ಖಾತೆ ತೆರೆದರೆ ಸಾಕು, ಪ್ರತಿಯೊಬ್ಬರೂ ಒಂದೊಂದು ದೊಡ್ಡ ತನಿಖಾಧಿಕಾರಿಯಾಗಿ ಬದಲಾಗಿಬಿಡುತ್ತಾರೆ! ಎಲ್ಲೋ ನಡೆಯುವ ಒಂದು ಸಣ್ಣ ಘಟನೆಯನ್ನು, ಇನ್ಯಾವುದೋ ಮೂಲೆಗೆ ತಂದು ಕಟ್ಟಿ, 'ಚುಕ್ಕೆಗಳನ್ನು ಜೋಡಿಸಿ' (ಕನೆಕ್ಟ್ ದಿ ಡಾಟ್ಸ್) ನೋಡಿ ಎಂದು ದೊಡ್ಡದಾಗಿ ಲೇಖನ ಪ್ರಕಟಿಸುತ್ತಾರೆ. ಆದರೆ, ಈ ಚುಕ್ಕೆಗಳನ್ನು ಜೋಡಿಸಿ ನೋಡಿದಾಗ ಕೇವಲ ವದಂತಿಗಳಲ್ಲ, ಅದರ ಹಿಂದೆ ಇರಬಹುದಾದ ನಿಜವಾದ ಆತಂಕಕಾರಿ ಚಿತ್ರಣವೂ ಅನಾವರಣಗೊಳ್ಳುತ್ತದೆ.


ತಮಾಷೆಯೆಂದರೆ, ಇಲ್ಲೊಬ್ಬರು ಮಹಾನ್ ನಾಯಕರಿದ್ದಾರೆ. ಸತತವಾಗಿ ಸಾಲು ಸಾಲು ಚುನಾವಣೆಗಳಲ್ಲಿ ಸೋತು ಸೋತು ಶತಕದ ಸಮೀಪ ತಲುಪಿದರೂ, 'ಸೋಲಿಗೆ ನನ್ನ ತಂತ್ರಗಾರಿಕೆ ಅಥವಾ ನಮ್ಮ ಪಕ್ಷದ ವೈಫಲ್ಯವೇ ಕಾರಣ' ಎಂದು ಒಪ್ಪಿಕೊಳ್ಳುವ ಉದಾರ ಮನಸ್ಸು ಮಾತ್ರ ಅವರದ್ದಲ್ಲ! ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ 'ಶಿಕ್ಷಕರಿಗೆ ನನ್ನ ಮೇಲೆ ಕೋಪ' ಅಥವಾ 'ಲೇಖನಿಯಲ್ಲಿ ಶಾಯಿ ಇರಲಿಲ್ಲ' ಎಂದು ನೆಪ ಹೇಳುವಂತೆ, ಈ ನಾಯಕರು ಮತ್ತು ಅವರ ಪಕ್ಷ ತಮ್ಮ ಪ್ರತಿಯೊಂದು ಸೋಲಿಗೂ ಕೊನೆಗೆ ಹೊಣೆ ಮಾಡುವುದು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು! ತಮ್ಮ ತಪ್ಪುಗಳನ್ನು ತಿದ್ದುಕೊಂಡು ಜನರ ಮನಸ್ಸು ಗೆಲ್ಲುವುದನ್ನು ಬಿಟ್ಟು, 'ಮತದಾನ ಯಂತ್ರ ಸರಿ ಇಲ್ಲ', 'ಚುನಾವಣಾ ಆಯೋಗವೇ ನಮಗೆ ಮೋಸ ಮಾಡಿತು' ಎಂದು ರಾಗ ಎಳೆಯುವುದು ನೋಡಿದರೆ ನಗಬೇಕೋ ಅಥವಾ ಅಳಬೇಕೋ ತಿಳಿಯುವುದಿಲ್ಲ.


ಇಷ್ಟಕ್ಕೇ ನಿಲ್ಲದೆ, 'ಚುನಾವಣಾ ಆಯೋಗವೇ ಸರಿ ಇಲ್ಲ' ಎಂದು ವಾದಿಸುತ್ತಾ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ರಂಪಾಟ ಮಾಡುವುದು ಈಗ ಕೇವಲ ದೇಶೀಯ ರಾಜಕೀಯವಾಗಿ ಉಳಿದಿಲ್ಲ. ಇದರ ಜೊತೆಗೆ, ಮತದಾರರ ಪಟ್ಟಿಯ ನವೀಕರಣ ಹಾಗೂ 'ವಿಶೇಷ ಸಮಗ್ರ ಪರಿಷ್ಕರಣೆ' (ಎಸ್.ಐ.ಆರ್) ಪ್ರಕ್ರಿಯೆಯನ್ನು ಗುರಿಯಾಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಅಪಪ್ರಚಾರದ ಜಾಲ ಹೆಣೆಯಲಾಗುತ್ತಿದೆ. ಪಾಶ್ಚಿಮಾತ್ಯ ಮಾಧ್ಯಮಗಳಂತೂ ಭಾರತದ ಆಂತರಿಕ ಚುನಾವಣಾ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನು ದೇಶಾಂತರವಾಗಿ ನಿಂದಿಸಲು ಸದಾ ಕಾಯುತ್ತಿರುತ್ತವೆ.


ಇನ್ನು ಈ ಜಾಗತಿಕ ಸಂಚಿನ ದೊಡ್ಡ ಕೈ ಎಂದರೆ ಅದು ಕೋಟ್ಯಧಿಪತಿ ಜಾರ್ಜ್ ಸೊರೊಸ್ ಅವರದ್ದು! ತಮ್ಮ ಅಷ್ಟು ದೊಡ್ಡ ಸಾಮ್ರಾಜ್ಯದಿಂದ ಭಾರತದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮೂಗು ತೂರಿಸಿ, ಎಸ್.ಐ.ಆರ್ ನಂತಹ ಸುಧಾರಣಾ ಪ್ರಕ್ರಿಯೆಗಳನ್ನು ನ್ಯಾಯಾಲಯದ ಮೆಟ್ಟಿಲೇರಿ ತಡೆಯಲು ಯತ್ನಿಸುವ 'ಸೊರೊಸ್ ಬೆಂಬಲಿತ ಜಾಲ' ಕೇವಲ ಕಲ್ಪನೆಯಲ್ಲ. ಮತ್ತೊಂದೆಡೆ, ಧ್ರುವ್ ರಾಠಿಯಂತಹ ಯೂಟ್ಯೂಬ್ ವೀಡಿಯೋ ತಯಾರಕರು ವಿದೇಶದಲ್ಲಿದ್ದುಕೊಂಡೇ ವೀಡಿಯೋ ಮಾಡಿ ಜನರ ಮನಸ್ಸಿನಲ್ಲಿ ಸಂಶಯದ ಬೀಜ ಬಿತ್ತುವುದು, ಸಮಯ ಸಿಕ್ಕಾಗ ಭಾರತಕ್ಕೇ ಬಂದು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುವುದು ಅತ್ಯಂತ ಯೋಜಿತ ತಂತ್ರದಂತೆ ಕಾಣುತ್ತದೆ. ಇದಕ್ಕೆ ಪೂರಕವಾಗಿ ಎಲಾನ್ ಮಸ್ಕ್ ಅವರಂತಹ ಉದ್ಯಮಿಗಳು ತಮ್ಮ 'ಸ್ಟಾರ್‌ಲಿಂಕ್' ಉಪಗ್ರಹ ಇಂಟರ್ನೆಟ್ ಉದ್ಯಮಕ್ಕೆ ಭಾರತ ಸರ್ಕಾರ ಅನುಮತಿ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ, ಜಾಗತಿಕ ವೇದಿಕೆಯಲ್ಲಿ ಸರ್ಕಾರದ ವಿರುದ್ಧ ಲೇಖನ ಹಾಕಿ ಬೆಂಕಿ ಕಾರುತ್ತಾರೆ!


ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡಿದರೆ ಸಾಮಾನ್ಯ ಅನಿಸಬಹುದು. ಆದರೆ ಒಟ್ಟಿಗೆ ತೂಗಿ ನೋಡಿದರೆ, ಇವೆಲ್ಲವೂ ಭಾರತದ ಅಭಿವೃದ್ಧಿಯನ್ನು ತಡೆಯಲು ಮತ್ತು ದೇಶದಲ್ಲಿ ನೆಮ್ಮದಿ ಕೆಡಿಸಲು ನಡೆಯುತ್ತಿರುವ '0.5 ಫ್ರಂಟ್'  ಮಾದರಿಯ ಪರೋಕ್ಷ ಯುದ್ಧ ಎಂಬುದು ಸ್ಪಷ್ಟವಾಗುತ್ತದೆ! ಗಡಿಯಲ್ಲಿ ಎದುರಾಗುವ ಶತ್ರುಗಳನ್ನು ನಮ್ಮ ಧೀರ ಯೋಧರು ತಡೆದು ನಿಲ್ಲಿಸುತ್ತಾರೆ. ಆದರೆ, ದೇಶದ ಒಳಗಿದ್ದುಕೊಂಡೇ 'ಬುದ್ಧಿಜೀವಿಗಳ' ಮುಖವಾಡ ಧರಿಸಿ, ತಮ್ಮ ಸ್ವಂತ ಸೋಲನ್ನು ಮುಚ್ಚಿಟ್ಟುಕೊಳ್ಳಲು ಸಾಂವಿಧಾನಿಕ ವ್ಯವಸ್ಥೆಯನ್ನೇ ಬಲಿಪಶು ಮಾಡುವವರನ್ನು ಯಾರು ತಡೆಯಬೇಕು?


ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ವಿಮರ್ಶಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ತಮ್ಮ ಸ್ವಂತ ನಾಯಕತ್ವದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ದೇಶದ ಚುನಾವಣಾ ವ್ಯವಸ್ಥೆಯನ್ನೇ ಹರಾಜಿಗೆ ಇಡುವುದು ಮತ್ತು ವಿದೇಶಿ ಶಕ್ತಿಗಳಿಗೆ ವೇದಿಕೆ ಮಾಡಿಕೊಡುವುದು ನಿಜಕ್ಕೂ ಹಾಸ್ಯಾಸ್ಪದ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಗಂಭೀರ ವಿಷಯಗಳನ್ನು ನೋಡಿ ನಕ್ಕು ಸುಮ್ಮನಾಗುವುದು ಸುಲಭ. ಆದರೆ, ನಮ್ಮ ಸುತ್ತಲೂ ನಡೆಯುತ್ತಿರುವ ಇಂತಹ ಅಪಪ್ರಚಾರಗಳನ್ನು ಸೂಕ್ಷ್ಮವಾಗಿ ಗುರುತಿಸಿ, ದೇಶದ ಸಾಂವಿಧಾನಿಕ ವ್ಯವಸ್ಥೆಯ ಪರವಾಗಿ ನಿಲ್ಲುವುದು ಪ್ರತಿಯೊಬ್ಬ ಜಾಗೃತ ಭಾರತೀಯನ ಕರ್ತವ್ಯವಾಗಿದೆ.


- ಪ್ರಸನ್ನ ಹೊಳ್ಳ, ತೀರ್ಥಹಳ್ಳಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top