ಅಯೋಧ್ಯೆಯಲ್ಲಿ ಧನ್ವಂತರಿ ಮಹಾಯಜ್ಞ: ಯಾಗ, ಯಜ್ಞಗಳಿಂದ ಲೋಕಕಲ್ಯಾಣ ಸಿದ್ಧಿ

Shreya Hegde
0

ಉಡುಪಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ- ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರಿಂದ ಆಶೀರ್ವಚನ


ಅಯೋಧ್ಯೆ: ಜಗತ್ತಿಗೆ ಕಲ್ಯಾಣವಾಗಬೇಕಾದರೆ ಯಜ್ಞ ಯಾಗಾದಿಗಳು ಅತ್ಯಂತ ಮಹತ್ವವಾಗಿದೆ. ಯಜ್ಞ ಯಾಗಾದಿಗಳಿಂದ ಕಾಲಕಾಲಕ್ಕೆ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸುತ್ತದೆ ಎಂದು ಉಡುಪಿ ಪೇಜಾವರ ಮಠದ ಪೂಜ್ಯಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.


ಅಯೋಧ್ಯೆಯಲ್ಲಿ ಗುರುವಾರ (ಅಕ್ಟೋಬರ್ 8ರಂದು) ಬೆಂಗಳೂರಿನ ವಿವೇಕಾನಂದ ಸೇವಾ ಸಮಿತಿಯ ಮುನಿರಾಜು ಅವರು ರಾಮ ಜನ್ಮಭೂಮಿಯಲ್ಲಿ  ಆಯೋಜಿಸಿದ ಧನ್ವಂತರಿ ಮಹಾಯಜ್ಞದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಸುಖ ಸಂ ಪದ ಹಾಗೂ ಶಾಂತಿ ನೆಲೆಸಬೇಕಾದರೆ ಸನಾತನ ಧರ್ಮದ ಸಂಸ್ಕಾರ ಬೆಳೆಯಬೇಕು. ಮುಂದಿನ ಪೀಳಿಗೆಯಲ್ಲಿ ಈ ಸಂಸ್ಕಾರ, ಸಂಸ್ಕೃತಿ ಉಳಿಯಲು ರಾಮಮಂದಿರದಂತಹ ಧಾರ್ಮಿಕ ಕೇಂದ್ರಗಳು ಬೆಳೆಯಬೇಕು ಮತ್ತು ಉಳಿಯಬೇಕು. 500 ವರ್ಷಗಳ ಸತತ ಹೋರಾಟದ ಫಲವಾಗಿ ರಾಮಮಂದಿರ ಇಂದು ಭವ್ಯವಾಗಿ ತಲೆಯೆತ್ತಿ ನಿಂತಿದೆ. ಅದನ್ನು ಮುಂದಿನ ಜನಾಂಗಕ್ಕೆ ಆ ಚಂದ್ರಾರ್ಕವಾಗಿ ಉಳಿಯುವಂತೆ ಮಾಡಲು ಎಲ್ಲ ಹಿಂದುಗಳು ಶ್ರಮಿಸಬೇಕು. ಎಲ್ಲರಿಗೂ ಮಹಾಯಜ್ಞದಿಂದ ಆರೋಗ್ಯ ಭಾಗ್ಯ ಒದಗಲಿ ಎಂದು ಹೇಳಿದರು.


ರಾಷ್ಟ್ರಭಕ್ತಿಯ ವರ್ಧನೆಗೆ ಧನ್ವಂತರಿ ಯಾಗ:

ಸರ್ವರ ಆರೋಗ್ಯಕ್ಕಾಗಿ ಹಾಗೂ ರಾಷ್ಟ್ರ ಭಕ್ತಿ ವರ್ಧನೆಗಾಗಿ ಧನ್ವಂತರಿ ಮಹಾ ಯಾಗದ ಪೂರ್ಣಾಹುತಿ ಸಮಾರಂಭವು ಎಲ್ಲರಿಗೂ ಅಪೂರ್ವ ಯೋಗವಾಗಿದೆ ಎಂದು ಕಾಶಿ ಜಂಗಮವಾಡಿ ಮಠ ವಾರಣಾಶಿಯ ಜಗದ್ಗುರು ಪೂಜ್ಯಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ಆರೋಗ್ಯದ ಅಧಿಷ್ಟಾಧಿದೇವತೆ ಧನ್ವಂತರಿಯಾಗಿದ್ದು ಈ ಯಜ್ಞ ಸಮಸ್ತ ಜನತೆಯ ಆರೋಗ್ಯ ವರ್ಧನೆ ಮತ್ತು ರಾಷ್ಟ್ರಭಕ್ತಿ ಬೆಳೆಯಲು ಪ್ರೇರಣೆ ನೀಡಲಿ. ರಾಮಾವತಾರವು ಮನುಷ್ಯನಿಗೆ ಅತ್ಯಂತ ಹತ್ತಿರದ ಅವತಾರವಾಗಿದ್ದು ಆಚಾರ, ಗುರುಹಿರಿಯರೊಂದಿಗೆ ಹೇಗೆ ಗೌರವ ಕೊಡಬೇಕು ಮುಂತಾದ ವಿಚಾರಗಳನ್ನು ವಿಷ್ಣು ಅವತಾರದ ಮೂಲಕ ಕಲಿಸಿಕೊಟ್ಟಿದೆ. ಅಂತಹ ಅಯೋಧ್ಯೆಯಲ್ಲಿ ಈ ಧಾರ್ಮಿಕ ಯಜ್ಞ ನಡೆದು ಸರ್ವರಿಗೆ ಪುಣ್ಯ ಒದಗಲಿದೆ. ಕಾಶಿಯ ಎಲ್ಲ ಮಠಗಳಿಗೂ ಅತ್ಯಂತ ಪ್ರಾಚೀನವಾದ ಮಠ ಕಾಶಿ ಜಂಗಮವಾಡಿ ಮಠವಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ ಆರನೇ ಶತಮಾನದ ಕಾಶಿ ಮಾಂಡಲಿಕ ಅರಸ ಜಯನಂದ ದೇವರು ವಿಶ್ವರಾಧ್ಯ ಸಿಂಹಾಸನ ಜಂಗಮವಾಡಿ ಮಠಕ್ಕೆ ಕೊಡುಗೆ ನೀಡಿದ್ದರು. ಅಂತಹ ಕಾಶಿ ಮಠದ ಸಾನಿಧ್ಯದಲ್ಲಿ ಈ ಯಜ್ಞ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.


ಕಾರ್ಯಕ್ರಮದಲ್ಲಿ ಅಯೋಧ್ಯೆಯ ಗೋಪಾಲ್ ಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಘಟಕದ ಲಿಂಗರಾಜಪ್ಪ ಅಪ್ಪ, ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್, ಆರ್ ಎಸ್ ಎಸ್ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಹರ್ಷಾನಂದ ಗುತ್ತೇದಾರ, ಕಾಶಿ ಪೀಠದ ವ್ಯವಸ್ಥಾಪಕ ಆರ್ ಕೆ ಸ್ವಾಮಿ ಶಿವಾನಂದ ಹಿರೇಮಠ  ಉಪಸ್ಥಿತರಿದ್ದರು. ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್, ಶಿವರಾಜ್ ರದ್ದೇವಾಡಗಿ, ಹರ್ಷಾನಂದ ಗುತ್ತೇದಾರ್ ಮತ್ತಿತರ ಅನೇಕರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top