ಲಘು ಬರಹ: ಇರುವೆಗಳ ನ್ಯಾಷನಲ್ ಹೈವೇ, ಅಂಡರ್‌ಪಾಸ್, ಟನಲ್‌ ನಿರ್ಮಾಣ ವಿಜ್ಞಾನ!

Shreya Hegde
0



84,00,000 ಜೀವ ರಾಶಿಯನ್ನು ದಾಟಿ ಬಂದ ಜನ್ಮ ಮನುಷ್ಯ ಜನ್ಮ. ಹಾಗಾದರೆ ನಾನು ಇರುವೆ ಆಗಿದ್ದ ಜನ್ಮ ಎಷ್ಟನೆಯದಿರಬಹುದು? ಹೀಗೊಂದು ಪ್ರಶ್ನೆ ಇವತ್ತು ಬೆಳಿಗ್ಗೆ ಹಾಲಿಗೆ ಹೊರಟಾಗ ಉದ್ಭವಿಸಿತು.  ಹಾಗೆ ಉದ್ಭವಿಸುವುದಕ್ಕೆ ಕಾರಣ ಆಗಿದ್ದು ದಾರಿಗೆ ಅಡ್ಡಡ್ಡವಾಗಿ ಚಲಿಸುತ್ತಿದ್ದ ಇರುವೆ ದಂಡು ನೋಡಿದಾಗ.  ಹಾಲು ತಂದು ಮನೆಯಲ್ಲಿಟ್ಟು, ಪುನಃ ಹೋಗಿ, ಹೋಗುವಾಗ ಮೊಬೈಲ್ ಹಿಡ್ಕೊಂಡು ಹೋಗಿ, ಇರುವೆಗಳು ಪರಸ್ಪರ ಮಾತಾಡಿಕೊಳ್ಳುತ್ತ.. ಚುನಾವಣಾ ರ‍್ಯಾಲಿಯಲ್ಲಿ ಜನ ಚಲಿಸುತ್ತಿದ್ದಂತೆ, ಇರುವೆಗಳು ಚಲಿಸುತ್ತಿದ್ದ ಕಾರ್ಯಕ್ರಮದ ಒಂದು ವೀಡಿಯೋ ದೃಶ್ಯವನ್ನು ಬೈಟ್ಸ್ ರೆಕಾರ್ಡ್ ಮಾಡಿದೆ.  


ಇರುವೆಗಳು ಸಂಚಾರಿಸಲು ನ್ಯಾಷನಲ್ ಹೈವೇ, ಅಂಡರ್‌ಪಾಸ್, ಟನಲ್‌, ಟ್ರಾಫಿಕ್ ನಿಯಂತ್ರಣಕ್ಕೆ ಪುಟ್ಟ ರಿಂಗ್ ರಸ್ತೆಗಳು, ಬ್ಯಾರಿಕೇಡ್‌ಗಳು, ಫುಟ್‌ಪಾತ್, ಬೈಪಾಸ್‌ಗಳು... ಎಲ್ಲ ಇವೆ! ಎಲ್ಲ ಮಾಡಿಕೊಂಡಿವೆ. ನಿನ್ನೆ ಹಗಲು ಹೊತ್ತು ಇರಲಿಲ್ಲ, ಬೆಳಗಾಗುವುದರೊಳಗೆ ಇಷ್ಟೆಲ್ಲ ಬೃಹತ್ ಯೋಜನೆಗಳು ಉದ್ಘಾಟನೆ ಆಗಿವೆ!! ಇದಿಷ್ಟನ್ನು ನಮ್ಮ ಮನೆಯೆ ಮಣ್ಣು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದಾವೆ. (ಇರುವೆಗಳ ಬಿರುಸಿನ ಲಾಜಸ್ಟಿಕ್ ವ್ಯವಹಾರ ನಡೆಯುತ್ತಿದ್ದ ಕಾರಣ, ಸುಮಾರು 11 ಗಂಟೆಯವರೆಗೆ ನನ್ನ ದ್ವಿಚಕ್ರ ವಾಹನವನ್ನು ಹೊರ ತೆಗೆಯಲಾಗಿರಲಿಲ್ಲ. 11 ಗಂಟೆಗೆ ಹೋಗಿ ನೋಡಿದರೆ.... ಒಂದೇ ಒಂದು ಇರುವೆ ಅಲ್ಲೆಲ್ಲೂ ಇರಲಿಲ್ಲ!!


ನಾನು ಇರುವೆ ಆಗಿದ್ದ ಜನ್ಮ ಎಷ್ಟನೆಯದಿರಬಹುದು? ಅನ್ನುವ ಪ್ರಶ್ನೆ ಬಂದಿದ್ದು ಆಗ. ಇರುವೆ ತನ್ನ ತೂಕಕ್ಕಿಂತ ಹತ್ತು ಪಟ್ಟು ಭಾರವಾದ ತೂಕವನ್ನು ಹೋರುತ್ತವಂತೆ. ನಮಗೆ ಯಾಕೆ ಆಗುವುದಿಲ್ಲ? ಕೇವಲ ಒಂದುವರೆ ಲೀಟರ್ ಹಾಲಿನ ಕ್ಯಾನನ್ನು ಹಿಡ್ಕೊಂಬಂದು "ನನ್ನ ಬೆನ್ನು ಮೂಳೆ ಮುರಿದುಹೋಯಿತು" ಅಂತ ಕಾಲ್ಪನಿಕ ಕತೆ ಕಟ್ಟಿ ಗೊಳೋ ಅನ್ನುವ 84,00,001 ನೇ ಮನುಷ್ಯ ಜನ್ಮ ನಮ್ಮದು!!? ಇರುವೆಯಷ್ಟೇ ಶಕ್ತಿ ಇದ್ದಿದ್ದರೆ ಬಾಹುಬಲಿ ಸಿನಿಮಾದಲ್ಲಿನ ದೃಶ್ಯದಂತೆ ತಲಾ 70 ಕೆಜಿಯ ಹತ್ತು ಅಡಿಕೆ ಮೂಟೆ ಹೊತ್ತು ಅಡಿಕೆ ಮಂಡಿಗೆ ನೆಡೆದುಕೊಂಡೇ ಹೋಗಿ, ಹಾಕಿ ಬರಬಹುದಿತ್ತು!!ದಸರಾ ಟೈಮಲ್ಲಿ ಬೆಳಗ್ಗೆ ಹಾಲಿಗೆ ಹೋಗುವಾಗ ಕ್ಷೀರ ಸಾಗರದಲ್ಲಿರುವ ದೇವರು ಎದ್ದು ಬಂದು ದರ್ಶನ ಕೊಟ್ಟು "ಏನು ಬೇಕು ಕೇಳು" ಅಂದರೆ "ಇರುವೆಯಷ್ಟೇ ಸಾಮರ್ಥ್ಯವನ್ನು ನನಗೂ ಕೊಡು" ಅಂತ ಒಂದು ಪ್ರಾರ್ಥನಾ ಅರ್ಜಿ ಕೊಡುವ ಯೋಚನೆಯೂ ಬಂದು ಹೋಯ್ತು. 'ಎಷ್ಟನೇ ಜನ್ಮ' ಅನ್ನುವುದು ನೇರ ಸಂಖ್ಯೆಗೆ ಸಂಬಂಧಿಸಿದ ವಿಚಾರವಾದ ಕಾರಣ, ಕಾಲುಗಳು ಅನಾರ್ಯವರ್ದಿಯವರ ಮನೆ ಕಡೆಗೆ ಬೆಳದವು. ಹೋಗಿ ಪ್ರಶ್ನೆ ಮುಂದಿಟ್ಟೆ. ಆಗ ಗಂಟೆ 11.30.  "ನಾನು ಇರುವೆ ಆಗಿದ್ದ ಜನ್ಮ ಎಷ್ಟನೆಯದು?"

 


ಅವರು ತಮ್ಮ ಮೊಬೈಲ್ ನೋಡಿ, "ತೊಂಬತ್ತಾರು ಲಕ್ಷದ ಮೊವತ್ತೊಂದು ಸಾವಿರದ ಇನ್ನೂರ ನಲವತ್ತೆಂಟನೇ ಜನ್ಮದಲ್ಲಿ ನೀನು 'ಇರುವೆ' ಆಗಿದ್ದಿ" ಅಂದ್ರು. ಹಾಗೆ ಹೇಳುವಾಗ ಎಂತದೋ ಒಂದು ರೀತಿಯ ವಿನೋದದ ನಗು ಅವರ ಮುಖದಲ್ಲಿತ್ತು. ಅದು ಹೇಗೆ? ಅಂದೆ ಕಿವಿಯ ಮೇಲಿದ್ದ ತಮ್ಮ ಕನ್ನಡಕವನ್ನು ಹೊರ ತೆಗೆದು, ಅದರ ಮೇಲೆ ಹರಿದಾಡುತ್ತಿದ್ದ ಒಂದು ಇರುವೆಯನ್ನು ಉಫ್ ಎಂದು ಗಾಳಿ ಊದಿ, ಪುನಃ ಧರಿಸಿಕೊಂಡು, ಸ್ವಲ್ಪ ಗಂಭೀರವಾಗಿ ಮುಖ ಮಾಡಿ ಅಂದರು—"ನೋಡು, ಇದು ಆಧ್ಯಾತ್ಮಿಕ ಗಣಿತ. ಸಾಮಾನ್ಯ ಗಣಿತದ ತರ ಅಲ್ಲ. ಇರುವೆಗಳದ್ದೇ ಒಂದು ದೊಡ್ಡ ರಿಜಿಸ್ಟರ್ ಇರುತ್ತೆ. ಅದನ್ನೆಲ್ಲ ಲೆಕ್ಕ ಹಾಕಿ ಹೇಳುವುದಕ್ಕೆ ಸಾಧ್ಯವಿಲ್ಲ.  ಮತ್ತು ಅನುಕ್ರಮವಾಗಿ ಇಂತಿಷ್ಟನೇ ಜನ್ಮದಲ್ಲಿ ಇರುವೆ, ಇಂತಿಷ್ಟನೇ ಜನ್ಮದಲ್ಲಿ ಕೋಣ, ಇಂತಿಷ್ಟನೇ ಜನ್ಮದಲ್ಲಿ ಮಂಗ.... ಅಂತೆಲ್ಲ ನಿರ್ಧಿಷ್ಟವಾಗಿ ಇರುವುದಿಲ್ಲ. ಮುಂದಿನ ಜನ್ಮದಲ್ಲೇ ನೀನು ನಾನು ಎಲ್ಲ ಮತ್ತೆ ಇರುವೆ ಆಗಬಹುದು" ಅಂದರು. ಬೆಳಗ್ಗೆ ದಾರಿಯಲ್ಲಿ ಕಂಡ ಇರುವೆಗಳ ಸಾಲು ನೆನಪಾಯ್ತು!! ಕಾಕಿ ಹಣ್ಣಿನಷ್ಟು ದೊಡ್ಡದಾದ ಮಂಡೆಯ ಇರುವೆ ಈ ಅನಾರ್ಯವರ್ದಿಗಳು, ಅದರ ಹಿಂದೆ ಹೋಗುತ್ತಿದ್ದ ಸಣ್ಣ ಮಂಡೆಯ ಇರುವೆ ನಾನು ಅಂತ ಒಮ್ಮೆ ಅನ್ನಿಸಿ, ನಗು ಬಂತು.  


ಅವರು ಮೊದಲ ಬಾರಿಗೆ ಉಫ್ ಅಂದಿದ್ದಕ್ಕೆ ಕನ್ನಡಕದ ಮೇಲಿದ್ದ ಇರುವೆ, ಕನ್ನಡಕ ಬಿಟ್ಟು ಹೋಗಿರಲಿಲ್ಲ ಅನಿಸುತ್ತೆ, ಅಥವಾ ಬ್ರಹ್ಮ ಸೃಷ್ಟಿ ಮಾಡಿದ ಮತ್ತೊಂದು ಇರುವೆ ಬಂದು ಅನಾರ್ಯವರ್ದಿಯವರ ಕನ್ನಡಕದ ಮೇಲೆ ಪಥ ಸಂಚಲನ ಮಾಡಿದ್ದಾ? ಗೊತ್ತಿಲ್ಲ. ಅಂತೂ ಅವರು ಮತ್ತೊಮ್ಮೆ ಮೂಗಿನ ಮೇಲಿದ್ದ ಕನ್ನಡಕ ತೆಗೆದು ಉಫ್ ಅಂದರು. "ನಗಬೇಡ, ನೋಡು, ನೋಡೋದಲ್ಲ ಕೇಳು. ನನಗೆ ದೂರ ದೃಷ್ಟಿ ದೋಷ ಇದೆ. ದೂರದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ ಆದರೆ, ಹತ್ತಿರದ್ದು ಕಾಣಿಸುವುದಿಲ್ಲ. ಕನ್ನಡಕ ತೆಗೆದರೆ, ಕನ್ನಡಕದ ಮೇಲಿನ ಇರುವೆಯೂ ಕಾಣಿಸುವುದಿಲ್ಲ. ಹಾಗಂತ ದೂರ ದೃಷ್ಟಿ ದೋಷ ಇದ್ದಾಗ, ದೂರದ್ದು ಚನಾಗಿ ಕಾಣಿಸಿದರೂ.... ನೀನು ಕೇಳುವಷ್ಟು ಜನ್ಮಾಂತರಗಳ ದೂರದ್ದೆಲ್ಲ ಕಾಣುವುದಿಲ್ಲ" ಅಂದರು. ನನಗೆ ಬೆಚ್ಚಗಾಯಿತು "ಮತ್ತೆ ತೊಂಬತ್ತಾರು ಲಕ್ಷದ ಮೊವತ್ತೊಂದು ಸಾವಿರದ ಇನ್ನೂರ ನಲವತ್ತೆಂಟನೇ ಜನ್ಮದಲ್ಲಿ ನೀನು 'ಇರುವೆ' ಆಗಿದ್ದಿ' ಅಂದ್ರಿ?" ಮರು ಪ್ರಶ್ನೆ ಮಾಡಿದೆ.


"ಅಲ್ಲ, ಸ್ವಲ್ಪ ಯೋಚನೇ ಮಾಡು, ಇರುವುದೇ ಎಂಬತ್ನಾಲ್ಕು ಲಕ್ಷ ಜೀವರಾಶಿ. ಅದಷ್ಟನ್ನು ದಾಟಿ ಬರಬೇಕು. ನಾನು ತೊಂಬತ್ತಾರು ಲಕ್ಷದ ಮೊವತ್ತೊಂದು ಸಾವಿರದ ಇನ್ನೂರ ನಲವತ್ತೆಂಟು ಅಂತ ಹೇಳಿದ್ದು. ಅದು ಜೀವ ರಾಶಿಗಳ ಲೆಕ್ಕವೂ ಅಲ್ಲ, ಜನ್ಮಾಂತರಗಳ ಲೆಕ್ಕವೂ ಅಲ್ಲ" "ಮತ್ತೆ?" "ಮತ್ತೆಂತ ಅಂತ ಮನೆಗೆ ಹೋಗಿ ಬುದ್ಧಿವಂತಿಕೆಯಿಂದ ಲೆಕ್ಕ ಹಾಕು, ಗೊತ್ತಾಗುತ್ತೆ" ಅಂತ ನನ್ನ ತಲೆಗೇ ಇರುವೆ ಬಿಟ್ರು!! "ನಿನಗೆ ಬುದ್ಧಿವಂತಿಕೆ ಕಡಿಮೆ. ಇಲ್ಲಾಂದ್ರೆ ಕ್ಷೀರ ಸಾಗರದ ದೇವರು ನಿನಗೆ ನಿಜಕ್ಕೂ ಇರುವೆಯ ಶಕ್ತಿ ಕೊಟ್ಟರೆ, ನೀನು ಬಾಹುಬಲಿಯಾಗುವ ಬದಲು, ದಿನಾ ಸಕ್ಕರೆಗಾಗಿ ಸಾಲಾಗಿ ನಿಲ್ಲುವ ಅಪ್ಪಟ ಇರುವೆಗೆ ನಾಯಕ ಆಗ್ಬೇಕಾಗುತ್ತೆ!" ಅಂದ್ರು. ನಾನೂ ನಕ್ಕು ಮನೆಗೆ ಬಂದೆ. ಮನೆಗೆ ಬಂದ ಮೇಲೆ ತಲೆ ಒಳಗಿದ್ದ ಇರುವೆ ಚುಳ್ ಅಂತ ಮಿದುಳು ತಿನ್ನುವುದಕ್ಕೆ ಶುರು ಮಾಡ್ತು!!


ದೇವರು ಎದ್ದು ಬಂದು ದರ್ಶನ ಕೊಟ್ಟು "ಏನು ಬೇಕು ಕೇಳು" ಅಂದರೆ "ಇರುವೆಯಷ್ಟೇ ಸಾಮರ್ಥ್ಯವನ್ನು ನನಗೂ ಕೊಡು" ಅಂತ ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದ ವಿಚಾರ ಅನಾರ್ಯವರ್ದಿಯವರಿಗೆ ಹೇಗೆ ಗೊತ್ತಾಯ್ತು!!? ನಾನು ಆ ವಿಷಯ ಅವರಿಗೆ ಹೇಳೇ ಇರಲಿಲ್ಲ!!  ಹಾಗಾದರೆ, ಅವರಿಗೆ ಇನ್ನೊಬ್ಬರ ಮನಸ್ಸನ್ನು ಓದುವುದಕ್ಕೆ ಬರುತ್ತೆ ಅಂತಾಯ್ತು!!?  ಹೌದು ತನ್ನ ತೂಕಕ್ಕಿಂತ ಹತ್ತು ಪಟ್ಟು ಭಾರವಾದ ತೂಕವನ್ನು ಹೋರುವ ಇರುವೆಯನ್ನು ತಲೆಯಲ್ಲಿ ಇಟ್ಟುಕೊಂಡು,  "ಇರುವೆಯಷ್ಟೇ ಸಾಮರ್ಥ್ಯವನ್ನು ನನಗೂ ಕೊಡು" ಅಂತ ಅಕಸ್ಮಾತ್ ದೇವರನ್ನು ಕೇಳಿ ಬಿಟ್ಟಿದ್ದರೆ.... ಕತೆ ಹೊಯ್ಲ್ ಆಗ್ತಿತ್ತು!! ಏಳುನೂರು ಕೆಜಿ ಇರಲಿ, ಏಳು ಎಮ್‌ಜಿನೂ ಹೋರಲು ಆಗ್ತಿರಲಿಲ್ಲ! ಸದ್ಯ ಕೇಳಲಿಲ್ಲ, ಒಳ್ಳೇದಾಯ್ತು!!  ತಲೆ ಮೇಲೆ ಹರಿಯುತ್ತಿದ್ದ ಒಂದು ಇರುವೆಯನ್ನು ಕೆಳಗೆ ದೂಡಿದೆ!! "ಮತ್ತೆಂತ ಅಂತ ಮನೆಗೆ ಹೋಗಿ ಬುದ್ಧಿವಂತಿಕೆಯಿಂದ ಲೆಕ್ಕ ಹಾಕು, ಗೊತ್ತಾಗುತ್ತೆ" ಅಂದ್ರಲ್ಲಾ ಅದೇನು? ತಲೆಯಲ್ಲಿ ಮತ್ತೊಂದು ಇರುವೆ ಕೊರೆಯುವುದಕ್ಕೆ ಶುರು ಮಾಡಿತು!! ಮನೆಗೆ ಬಂದ ಮೇಲೆ, ಎದುರುಗಡೆ ಟೇಬಲ್ ಮೇಲೆ ಇದ್ದ ಪೇಪರ್‌ನಲ್ಲಿ ಬರೆದೆ: 96,31,248 ಅರೆ, ಇದು ನನ್ನ ಮೊಬೈಲ್ ನಂಬರ್!! 


ಮೊಬೈಲ್‌ನ ಮೊದಲ ಮೂರು ಡಿಜಿಟ್ ತೆಗೆದು, ಉಳಿದ ಏಳು ಡಿಜಿಟ್‌ನ್ನು ಹೇಳಿ, ಅದೇ ನಿನ್ನ ಇರುವೆ ಜನ್ಮದ ಸಂಖ್ಯೆ ಅಂತ ಹೇಳಿ, ವಿನೋದವಾಗಿ ನಕ್ಕು, ನನ್ನನ್ನು ಈ ಜನ್ಮದಲ್ಲಿ ಮಂಗ ಮಾಡಿದ್ರಲ್ಲ ಈ ಅನಾರ್ಯವರ್ದಿ ಗುರುಗಳು!! ಇರುವೆಗಳ ನ್ಯಾಷನಲ್ ಹೈವೆಯ ಪಥ ಸಂಚಲನ ಮತ್ತು ಲಾಜಿಸ್ಟಿಕ್ ವ್ಯವಹಾರದ ವೀಡಿಯೋ ತೆಗೆದು ಮತ್ತೊಮ್ಮೆ ನೋಡಿದೆ.  ಬಾರ ಮಾತ್ರ ಹತ್ತು ಪಟ್ಟಲ್ಲ, ನಮ್ಮ  ಎಂಜಿನಿಯರ್ ವಿಜ್ಞಾನಕ್ಕಿಂತಲೂ ಈ ಇರುವೆಗಳು ಹತ್ತು ಪಟ್ಟು ಮುಂದಿವೆ ಅನಿಸಿತು. ಇರುವೆಗಳ ನ್ಯಾಷನಲ್ ಹೈವೇ, ಅಂಡರ್‌ಪಾಸ್, ಟನಲ್‌, ಟ್ರಾಫಿಕ್ ನಿಯಂತ್ರಣಕ್ಕೆ ಪುಟ್ಟ ರಿಂಗ್ ರಸ್ತೆಗಳು, ಬ್ಯಾರಿಕೇಡ್‌ಗಳು, ಫುಟ್‌ಪಾತ್, ಬೈಪಾಸ್‌ಗಳು...


ನೀವೂ ಒಂದ್ಸಲ ಈ ವೀಡಿಯೋ ನೋಡಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

944 9631248

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top