ನವರಾತ್ರಿ ಪರ್ವದಲ್ಲಿ ದೇವಿ ಸ್ತುತಿ ಬಹಳ ಮಹತ್ವ ಪಡೆಯುತ್ತದೆ. ದೇವಿಯನ್ನು ಒಳಿಸಿಕೊಳ್ಳಲು ಪೂಜೆ ಮತ್ತು ಸ್ತೋತ್ರ ಪಾರಾಯಣ ಬಹಳ ಪವಿತ್ರವಾಗಿರುತ್ತದೆ. ನವರಾತ್ರಿ ಪರ್ವದಲ್ಲಿ ರಾಮ ದೇವರ, ವೆಂಕಟರಮಣನ ಸ್ತೋತ್ರವನ್ನು ಕೂಡ ಪಾರಾಯಣ ಅನುಷ್ಠಾನ ಮಾಡುತ್ತಾರೆ. ಈ ನವರಾತ್ರಿ ಹೇಳಬಹುದಾದ ಹಲವು ಸ್ತೋತ್ರಗಳು ಮತ್ತು ಅವುಗಳ ಫಲಗಳನನ್ನು ತಿಳಿಯೋಣ.
ಸ್ತುತಿ ರತ್ನ ಮಾಲಾ (ಶ್ರೀನಿವಾಸನ ಸೋತ್ರ)
ಶ್ರೀನಿವಾಸ ದೇವರ ಸ್ತೋತ್ರ, ಶ್ರೀಶವಿಠ್ಠಲ ದಾಸರು ಬರೆದ ಶ್ರೀನಿವಾಸ ಸ್ತುತಿಯಾಗಿದೆ. ಈ ಸ್ತೋತ್ರ ಪಠಣದಿಂದ ಹಿಡಿದ ಕೆಲಸ ಸಂಪೂರ್ಣವಾಗಿ ಉತ್ತಮ ಫಲ ದೊರೆಯುತ್ತದೆ. ಅನೇಕ ಬಗೆಯ ಮನಸ್ತಾಪ ಕ್ಲೇಶಗಳು ಪರಿಹಾರವಾರವಾಗುತ್ತದೆ. 27ದಿನ 27 ಸಲ ಪಠಣ ಮಾಡಬೇಕು. 48 ದಿನಗಳ ಕಾಲ ಕೂಡ ಪಠಣ ಮಾಡಬಹುದು . ಇಲ್ಲವೇ ದಿನ ನಿತ್ಯ ಮುಂಜಾನೆ ಮತ್ತು ಸಂಜೆ ತಪ್ಪದೇ ಹೇಳಬೇಕು. ಆಧ್ಯಾತ್ಮಕವಾಗಿ ನಮ್ಮ ಜೀವನಕ್ಕೆ ಇರುವ ಯಾವುದೇ ಅಡೆತಡೆಗಳನ್ನು ತೊಡೆದು ಹಾಕುತ್ತದೆ. ಮನಸ್ಸಿನಲ್ಲಿ ನೆಮ್ಮದಿ ಸಿಗುವಂತೆ ಮಾಡುತ್ತದೆ. ನಿಂತ ಕಾರ್ಯಗಳು ಸುಲಭವಾಗಿ ನೆರವೇರುತ್ತದೆ.
ಸ್ತುತಿ ರತ್ನ ಮಾಲಾ ಕರ್ತೃ ಗುರುಶ್ರೀಶವಿಠ್ಠಲದಾಸರು (1740 -1846):
ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಹೆಚ್ಚು ಪ್ರಸಿದ್ಧರಾಗದೇ ಉಳಿದ ಮಹಾನ್ ಹರಿದಾಸರಲ್ಲಿ ಗುರುಶ್ರೀಶ ವಿಠ್ಠಲ ದಾಸರು ಒಬ್ಬರು ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದರು. ರಾಯರ ಮೇಲೆ ಅವರು ರಚಿಸಿದ ಕೀರ್ತನೆಗಳು ಇಂದಿಗೂ ಜನರು ಹೇಳುತ್ತಾರೆ. ಇವರ ಇನ್ನೊಂದು ಪ್ರಮುಖ ರಚನೆ 'ಸ್ತುತಿ ರತ್ನ ಮಾಲಾ' ತಿರುಪತಿಯ ಶ್ರೀನಿವಾಸನ ಸ್ತುತಿಯಾಗಿದೆ.
ಗುರು ಶ್ರೀಷ ವಿಠ್ಠಲ ದಾಸರು ಕ್ರಿ.ಶ. 1740ರಲ್ಲಿ ಕನಕಗಿರಿಯಲ್ಲಿಂದು ಜನಿಸಿದರು. ಕನಕಾಚಲದ ಶ್ರೀ ನರಸಿಂಹ ದೇವರ ಅನುಗ್ರಹದಿಂದ ಜನಿಸಿದ ಕಾರಣ ಅವರಿಗೆ ಕುಂಟೋಜಿ ನರಸಿಂಹ ದಾಸರು ಎಂಬ ಹೆಸರು ಪ್ರಸಿದ್ಧವಾಯಿತು. ಅವರ ತಂದೆ ತಮ್ಮಣ್ಣ ತುಂಗಭದ್ರಾ ತೀರದ ಕುಂಟೋಜಿ ಗ್ರಾಮದಲ್ಲಿ ಹಲವು ವರ್ಷಗಳ ಕಾಲ ಕಾರಕೂನರಾಗಿ ಉದ್ಯೋಗ ಮಾಡುತ್ತಿದ್ದರು. ಅಂದಿನ ಕಾಲದ ನಿಯಮದಂತೆ ತಂದೆಯವರ ಕೆಲಸವನ್ನು ನರಸಿಂಹ ದಾಸರು ಅವರ ನಂತರ ಮುಂದುವರೆಸಿದರು. ಹೀಗೆಯೇ ತಮ್ಮ ಜೀವನದಲ್ಲಿ ದಿನಗಳೆದಂತೆ ಒಂದು ರಾತ್ರಿ ನರಸಿಂಹ ದಾಸರಿಗೆ ಸ್ವಪ್ನದಲ್ಲಿ ಶ್ರೀ ಹರಿಯ ದರ್ಶನವಾಗಿ ಪರಮಾತ್ಮನು ಲೋಕಿಕ ಉದ್ಯೋಗವನ್ನು ತ್ಯಜಿಸಿ, ಮಾನವಿಯ ಜಗನ್ನಾಥ ದಾಸರ ಬಳಿ ಶಿಷ್ಯತ್ವ ವಹಿಸಿ ಸಾಧನೆಯನ್ನು ಮಾಡಲು ಅದೇಶಿಸಿದನು.
ಆ ಪರಮಾತ್ಮನ ಸ್ವಪ್ನ ಆದೇಶವನ್ನು ಪಾಲಿಸಿ ನರಸಿಂಹ ದಾಸರು ಮಾನವಿಗೆ ಹೋಗಿ ಶ್ರೀ ಜಗನ್ನಾಥರ ಬಳಿ ಶಿಷ್ಯನನ್ನಾಗಿ ಮಾಡಿಕೊಳ್ಳಿ ಎಂದು ಪ್ರಾರ್ಥಸಿ, ಜಗನ್ನಾಥ ದಾಸರ ಬಳಿ ಹನ್ನೆರಡು ವರ್ಷಗಳ ಕಾಲ ಗುರುಸೇವೆ ಸಲ್ಲಿಸಿದರು. ನಂತರ ಕುಂಟೋಜಿಗೆ ಮರಳಿ, ನಂತರ ಕಾಂಪ್ಲಿಯಲ್ಲಿ ನೆಲೆಸಿದರು.
ಗುರು ಶ್ರೀಶ ವಿಠ್ಠಲದಾಸರ ಒಂದು ಮಹಿಮೆ ತಿಳಿಯುವುದಾದರೆ, ಕಂಪ್ಲಿಯಲ್ಲಿ ಒಂದು ಧಾರ್ಮಿಕ ಸಮಾರಂಭದಲ್ಲಿ ಪೂಜೆ ಮತ್ತು ನೈವೇದ್ಯಕ್ಕೆ ಬೇಕಾದ ತುಪ್ಪ ಸಮಯಕ್ಕೆ ಬರಲಿಲ್ಲ. ಯಾಜಕರು ಚಿಂತಿತರಾದಾಗ ನರಸಿಂಹ ದಾಸರು ತುಂಗಭದ್ರಾ ನದಿಗೆ ಹೋಗಿ, ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಬಂದರು. ಆ ಪಾತ್ರೆಯಲ್ಲಿದ್ದ ನೀರು ಅದ್ಭುತವಾಗಿ ಶುದ್ಧ ತುಪ್ಪವಾಗಿ ಪರಿವರ್ತಿತವಾಯಿತು. ಇಷ್ಟಕ್ಕೆ ಬಿಡದೇ ಆ ಸಮಾರಂಭದ ಬಳಕೆಗೆ ತರಿಸಿದ ತುಪ್ಪ ಬಂದಾಗ, ಅದೇ ಪ್ರಮಾಣದ ತುಪ್ಪವನ್ನು ಅವರು ಮತ್ತೆ ತುಂಗಭದ್ರೆಗೆ ಅರ್ಪಿಸಿದರು. ಇನ್ನೊಂದು ಘಟನೆಯಲ್ಲಿ ದಾಸರು ತಮ್ಮ ಶಿಷ್ಯರೊಂದಿಗೆ ಕಾಶಿ ಯಾತ್ರೆಗೆ ಹೊರಟರು. ಯಾತ್ರೆಯ ವೇಳೆ ದೋಣಿ ಮುಳುಗಿ, ನರಸಿಂಹ ದಾಸರು ಮಾತ್ರ ಉಳಿದರು. ನದಿ ತೀರದಲ್ಲಿ ಕುಳಿತಿದ್ದ ಒಬ್ಬ ಸಂನ್ಯಾಸಿಯೊಬ್ಬರಿಗೆ ಪತ್ರವೊಂದನ್ನು ಕೊಟ್ಟು ಅದರಲ್ಲಿ ದೋಣಿಯಲ್ಲಿದ್ದವರು ಎಲ್ಲರೂ ದುರಂತದಲ್ಲಿ ಸಾವನ್ನಪ್ಪಿದ ವಿಷಯವನ್ನು ಬರೆದಿದ್ದರು. ಆದರೆ ದಾಸರು ಕಾಶಿ ಯಾತ್ರೆಯನ್ನು ಪೂರ್ಣಗೊಳಿಸಿದ ಗುರು ಶ್ರೀಶ ವಿಠ್ಠಲ ದಾಸರು ಮತ್ತೆ ಕಂಪ್ಲಿಗೆ ಮರಳಲಿಲ್ಲ. ಅವರು ಕ್ರಿ.ಶ. 1846ರಲ್ಲಿ ಹರಿಪಾದವನ್ನು ಸೇರಿದರು. ಅವರು ಶತಾಯುಷಿಗಳೆಂದು ಹೇಳುತ್ತಾರೆ.
ಗುರುಶ್ರೀಶವಿಠ್ಠಲದಾಸರು“ಗುರಶ್ರೀಶವಿಠ್ಠಲ” ಎಂಬ ಅಂಕಿತದಿಂದ ಕೀರ್ತನೆಗಳನ್ನು ರಚಿಸಿದ್ದಾರೆ.
ಅವರ ಪ್ರಸಿದ್ಧ ಕೃತಿಗಳಲ್ಲಿ ಸ್ತುತಿರತ್ನಮಾಲ ಪ್ರಮುಖವಾದುದು.
“ಬಾರೋ ಗುರು ರಾಘವೇಂದ್ರ, ಬರಯ್ಯ ಬಾ
ನರಹರಿ ಪ್ರಿಯನೇ ಬಾ…”
“ನೋಡಲೇ ಮನವೇ ಕೊಂಡಾಡು ಗುರುಗಳ ಪಾದವ
ಇದು ಇಲ್ಲವೋ ಪುಣ್ಯಕೆ”
ಗುರು ಮಧ್ವ ವಂದನೆಯಾದ "ಗುರು ಮಧ್ವ ರಾಯರಿಗೆ ನಮೋ ನಮೋ" ಇಂತಹ ಅನೇಕ ಗೀತೆಗಳನ್ನು, ಪ್ರಾರ್ಥನೆಯ ರೂಪದಲ್ಲಿ ಮಾಡಿದ್ದಾರೆ.
ಸ್ತುತಿ ರತ್ನ ಮಾಲಾ ಸ್ತುತಿಯ ಸಾರ :
ಸೂರ್ಯಕಾಂತಿಯ ಸಾವಿರಪಟ್ಟು ತೇಜೋಮಯನಾದ ಲಾವಣ್ಯವಂತ ವೆಂಕಟೇಶನೆ ನಿನಗೆ ನಮಿಸುತ್ತೇನೆ, ದಯಾನಿಧಿಯೇ ನಮ್ಮನ್ನು ರಕ್ಷಿಸು.
ಶೇಷಾಚಲದಲ್ಲಿ ವಾಸ ಮಾಡುವ ನೀನು ದೋಷರಹಿತನು ಭಕ್ತ ಪೋಷಕನಾದ ಶ್ರೀಕಾಂತನೆ ನಿನಗೆ ನಮಿಸುವೆ ನಮ್ಮನ್ನು ಪಾಲಿಸು.
ಪಾಲಸಾಗರದಲ್ಲಿ ಶಯನ ಮಾಡುವ ಲಕುಮಿ ಪತಿಯಾದ ನೀಲ ಮೇಘ ಶ್ಯಾಮ ನಮ್ಮನ್ನು ಸಲಹು.
ಗರುಡವಾಹನ ಜಗತ್ತಿಗೆ ಒಡೆಯನಾದ ನಿನ್ನ
ಅಗಣಿತ ಮಹಿಮಗೆ ನಮಿಸುವೆ ಶ್ರೀನಿವಾಸನೇ ದಯಪಾಲಿಸು.
ಶಂಖಚಕ್ರವನ್ನು ಧರಿಸಿರುವ ವೇಂಕಟರಮಣ ಕಳಂಕ ವಿಲ್ಲದವ ನಾದ ದೇವ ನಿನಗೆ ಶರಣು.
ಪನ್ನಗ ಶಯನನೇ ನಿನ್ನಂತ ದೇವರು ಬೇರೆ ಯಾರೂ ಇಲ್ಲ ಬ್ರಹ್ಮಾದಿ ದೇವತೆಗಳಿಂದ ಪೂಜಿತನಾದ ಶ್ರೀನಿವಾಸ ನೀನು ದಯಾನಿಧೆ.
ಸೃಷ್ಟಿ ಇಲ್ಲದೆಯೇ ಒಂದು ಕಡೆಯಲ್ಲಿದ್ದ ಜನರನ್ನು
ಸೃಷ್ಟಿಸಿ ಜೀವರನ್ನು ಕಾಪಾಡುವಿ ಶ್ರೀನಿವಾಸ ನೀನು ದಯಾನಿಧಿಯಾಗಿದ್ದೀಯ
ತನಮನಕರಣಗಳನು ಎಲ್ಲ ಜೀವರಿಗೂ ಕೊಟ್ಟು ಅನಿಮಿಷರೆನುವ ದೇವತೆಗಳನ್ನು ಅಭಿಮಾನಿಗಳೆನಿಸಿ ಅವರಲ್ಲಿ ನೆಲೆಸಿ ನಮ್ಮನ್ನು ಕಾಪಾಡುವ ದೇವ ನೀನು ಶ್ರೀನಿವಾಸ ದಯಾನಿಧೆ
ದೀನವತ್ಸಲನಾದ ನೀನು ಜೀವರನ್ನು ನಿನ್ನಾಧೀನದೊಳಗಿಟ್ಟು ಕೊಂಡು ಅವರಿಂದ ಜ್ಞಾನ ಕರ್ಮಗಳನ್ನು ಮಾಡಿಸಿ ಉದ್ಧಾರವ ಮಾಡುವ ಸ್ವಾಮಿ ಶ್ರೀನಿವಾಸ ದಯಾನಿಧೆ
ಒಂದೂ ಕ್ಷಣ ಬಿಡದೆಲೆ ನಿನ್ನ ಭಕ್ತಜನರ ರಕ್ಷಿಸಿ ಸಲಹುವ ನೀನು ದುರ್ಜನರಾಗಿರುವ ಜನರಿಗೆ ದುರ್ಲಭನೆನಿಸಿ ಅವರಿಗೆ ತಕ್ಷ ಶಿಕ್ಷೆ ಕೊಡುವವ ನೀನೇ ಶ್ರೀನಿವಾಸ ದಯಾನಿಧೆ.
ಪರಮಾತ್ಮನಾದ ನಿನಗೆ ಯಾವ ಜೀವದ ಮೇಲೇಯೂ ವೈಷಮ್ವಾಗಲಿ ನೈರ್ಘ್ರುಣ್ಯವಾಗಲಿ ಸ್ವಲ್ಪವೂ ಇರದಂತೆ ಜೀವರು ಮಾಡಿದ ಉಪಾಸನದ ಅನುಗುಣವಾಗಿ ಫಲಗಳೀವ ನೀನು ಶ್ರೀನಿವಾಸ ದಯಾನಿಧೆ
ಒಂದೇ ರೂಪದಿಂದ ಬೇರೆ ಬೇರೆಯವರಲ್ಲಿ ಸನ್ನಿಧಾನ ಇಟ್ಟು ಸರ್ವ ಜೀವರಿಗೂ ಬಂಧಮೋಕ್ಷಪ್ರಧನೆನಿಸಿ ಸಲಹುವ ಸ್ವಾಮಿ ಶ್ರೀನಿವಾಸ ದಯಾನಿಧೆ
ಜ್ಞಾನಿಗಳರಸನಾದ ನೀನು ಅಜ್ಞಾನಿಗಳೊಳಗೆ ಅಜ್ಞಾನಿ ಯಾದವ ನಾನು, ನನ್ನಂತ ಅಜ್ಞಾನಿಗೆ ಸುಜ್ಞಾನವ ಕೊಟ್ಟು ಪಾಲಿಸೋ ಶ್ರೀನಿವಾಸ ದಯಾನಿಧೆ
ಬಿಂಬ ಮೂರುತಿಯಾದ ನಿನ್ನನ್ನು ನಂಬಿರುವೆ ಎನ್ನ
ಹೃದಯದೊಳಗೆ ಪ್ರಕಾಶಿಸುತ್ತಿರು ಪ್ರತಿದಿನವೂ ಶ್ರೀನಿವಾಸ ದಯಾನಿಧೆ
ಪರಮಾತ್ಮ ನಿನ್ನ ಹೊರತು ನನಗೆ ಅನ್ಯರಿಂದ ಆಗಬೇಕಿರುವುದು ಏನೂ ಇಲ್ಲ ನಿನ್ನ ಸ್ತುತಿಸುವ ಸುಖಕ್ಕೆ ಸಮಾನದ್ದು ಯಾವುದೂ ಇಲ್ಲ ಶ್ರೀನಿವಾಸ ದಯಾನಿಧೆ
ಘನ್ನ ಮಹಿಮನಾದ ನಿನ್ನ ಬಿಟ್ಟು ಬೇರೆ ಯಾವ ಬಯಕೆಯು ಇಲ್ಲ ಸದಾ ನಿನ್ನ ಧ್ಯಾನದೊಳಿಗೆ ಇರುವಂತೆ ಈ ವಿಚಾರವನ್ನು ನಾನು ಮರೆಯದೇ ಇರುವಂತೆ ಮಾಡು ಶ್ರೀನಿವಾಸ ದಯಾನಿಧೆ
ನನಗೆ ದುರ್ಜನ ಸಂಗ ಬಿಡಿಸಿ ಸಾಧು
ಸಜ್ಜನರ ಸೇವೆಯೊಳಗಿರುವಂತ ಬುದ್ಧಿ ನೀಡೋ ಶ್ರೀನಿವಾಸ ದಯಾನಿಧೆ
ಎಷ್ಟೇ ಜನ್ಮಗಳನ್ನು ಕೊಟ್ಟರೂ ಚಿಂತೆಯು ಇಲ್ಲ
ನಿನ್ನ ದಾಸನೆಂಬ ಭಾಗ್ಯವ ಕೊಟ್ಟು ಸಲಹು ಸ್ವಾಮಿ ಶ್ರೀನಿವಾಸ ದಯಾನಿಧೆ
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ ನೀನೇ ಸದಾ ಕಾಲ
ನಿನ್ನ ಸ್ಮರಣೆಯ ಕೊಟ್ಟು ನಿನ್ನ ನಾಮ ಸ್ಮರಣೆಯನ್ನು ಮರೆಯದಂತೆ ಕರುಣಿಸೋ ಶ್ರೀನಿವಾಸ ದಯಾನಿಧೆ
ಚಂಚಲವಾದ ಮನೋ ಭಾವ ತೊಲಗಿಸಿ ನಿನ್ನ ಪಾದ
ವನಜದಲ್ಲಿರಿಸಯ್ಯ ಎಂದಿದೆಗೂ ನಿನ್ನ ಪಾದ ಸೇವೆ ಮಾಡುವೆ ಶ್ರೀನಿವಾಸ ದಯಾನಿಧೆ
ಎಲ್ಲ ಇಂದ್ರಿಯಗಳಿಂದ ಮಾಡುವ ಕೆಲಸಗಳೆಲ್ಲವೂ ನಿನ್ನ ಸೇವೆಯಾಗುವಂತೆ ಭಕ್ತಿಯ ಕೊಡು ಸ್ವಾಮಿ ಶ್ರೀನಿವಾಸ ದಯಾನಿಧೆ
ಬುಧ್ಧಿಪೂರ್ವಕವಾಗಿ ಗುರು ಮಧ್ವಮತವ ತಿಳಿ
ದಿದ್ದವನೆ ಜ್ಞಾನವೃಧ್ಧನೋ ಅಂತಹ ಮಧ್ವ ಮತ ಅನುಸರಿಸಿ ನಡೆಯುವ ಬುದ್ಧಿ ಪಾಲಿಸೋ ಶ್ರೀನಿವಾಸ ದಯಾನಿಧೆ
ಹರಿಯೇ ಸರ್ವೋತ್ತಮ ಸರ್ವ ಜೀವಗಳೆಲ್ಲ ಅವನ ದಾಸರು ಎಂಬ ತಾರತಮ್ಯ ಭೇಧ ಜ್ಞಾನವನೀಯೋ ಶ್ರೀನಿವಾಸ ದಯಾನಿಧೆ
ಗುರುಗಳ ಕರುಣ ಸ್ಥಿರವಾಗಿ ಇರುವ ಭಕ್ತರಿಗೆ
ಹರಿ ನಿನ್ನ ಅನುಗ್ರಹವಾಗುವುದೋ ಶ್ರೀನಿವಾಸ ದಯಾನಿಧೆ
ನಿನ್ನ ಭಕ್ತರಿಗಲ್ಲದೆ ಅನ್ಯರು ಬಲ್ಲರೆ
ಘನ್ನಮತದ ಸುಖ ಸವಿಯನ್ನೂ ಶ್ರೀನಿವಾಸ ದಯಾನಿಧೆ
ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕೆ ಬರಲಿ
ಬೇರೆಯಾವ ಬಯಕೆಯೂ ಬರದಂತೆ ಮನಸ್ಸಿಗೆ ಬುದ್ದಿಯ ಕೊಡದಿರೋ ಶ್ರೀನಿವಾಸ ದಯಾನಿಧೆ
ಸ್ಥುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ
ಪ್ರತಿದಿನ ಸುಖ ಅಭಿವೃಧ್ಧಿಯೋ ಶ್ರೀನಿವಾಸ ದಯಾನಿಧೆ
ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ಗುರುಗಳು ದೊರೆ ನೀನೇ ಮೂರು ಲೋಕ ಕ್ಕೆ ಗುರು ಶ್ರೀಶವಿಠಲ ನಮೋ ಶ್ರೀನಿವಾಸ ದಯಾನಿಧೆ
- ಮಾಧುರಿ ದೇಶಪಾಂಡೆ, ಬೆಂಗಳೂರು


