ಕನ್ನಡ ನಾಡಿನ ಅವಧೂತ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠರಾದ ವರದಾಪುರದ ಶ್ರೀ ಶ್ರೀಧರ ಸ್ವಾಮಿಗಳ ಕುರಿತಾದ 'ಶ್ರೀಧರ ಮಹಾತ್ಮೆ' ಒಂದು ಅಪರೂಪದ ಕೃತಿ. ಈ ಗ್ರಂಥದಲ್ಲಿ ಶ್ರೀಧರ ಸ್ವಾಮಿಗಳ ದಿವ್ಯ ವ್ಯಕ್ತಿತ್ವ, ಭಕ್ತರ ಜೊತೆಗಿನ ಅವರ ನಿಕಟ ಸಂಬಂಧಗಳು ಹಾಗೂ ಅವರ ತಾಯಿ ಹೃದಯದ ಪ್ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಈ ಬೃಹತ್ ಕೃತಿಯು ಭಕ್ತರ ಜೀವನದಲ್ಲಿ ನಡೆದ ಪರಿವರ್ತನೆಗಳು ಮತ್ತು ಸ್ವಾಮಿಗಳೆಡೆಗೆ ಅವರು ತೋರುವ ಅನನ್ಯ ಗೌರವವನ್ನು ಬಿಂಬಿಸುವ 324 ನಿಜ ಘಟನೆಗಳನ್ನು ಒಳಗೊಂಡಿದೆ. 600ಕ್ಕೂ ಹೆಚ್ಚು ಪುಟಗಳಿರುವ ಈ ಗ್ರಂಥವನ್ನು ಲೇಖಕರಾದ ಜಿ.ಟಿ. ಶ್ರೀಧರ ಶರ್ಮ ಅವರು ಎಲ್ಲರೂ ಸರಾಗವಾಗಿ ಓದುವಂತಹ ಸುಂದರ ಶೈಲಿಯಲ್ಲಿ ರಚಿಸಿದ್ದಾರೆ.
ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ಪಾರಾಯಣ ಮಾಡಲೇಬೇಕಾದ ಉತ್ತಮ ಕೃತಿ ಇದಾಗಿದೆ. ಇಲ್ಲಿನ ಪ್ರತಿಯೊಂದು ಕಥೆಯನ್ನು ಮಕ್ಕಳಿಗೆ ಓದಿ ಹೇಳುವುದರಿಂದ ಅವರ ವ್ಯಕ್ತಿತ್ವವನ್ನೂ ಧನಾತ್ಮಕವಾಗಿ ರೂಪಿಸಬಹುದು. ಇದು ಕೇವಲ ಒಬ್ಬ ಧಾರ್ಮಿಕ ಪುರುಷನ ಜೀವನ ಕಥೆಯಷ್ಟೇ ಅಲ್ಲ, ಬದಲಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ವ್ಯಕ್ತಿತ್ವ ವಿಕಸನ ಗ್ರಂಥವೂ ಹೌದು. ಆಧ್ಯಾತ್ಮಿಕ ಸಾಧಕರನ್ನು ಅರಸಿ ಎಲ್ಲೆಂದೋ ಅಲೆಯುವ ನಮಗೆ, ನಮ್ಮ ಸುತ್ತಮುತ್ತಲೇ ಇರುವ ನಿಜವಾದ ಸಿದ್ಧಿಪುರುಷರು ಕೆಲವೊಮ್ಮೆ ಅರಿವಿರುವುದಿಲ್ಲ. ವರದಾಪುರದ ಶ್ರೀಧರ ಸ್ವಾಮಿಗಳ ಕುರಿತು ಅನೇಕರಿಗೆ ಇಂದಿಗೂ ಸಂಪೂರ್ಣವಾಗಿ ತಿಳಿದಿಲ್ಲ. ಅಂತಹ ಶ್ರೇಷ್ಠ ಅವಧೂತರ ಪರಿಚಯವನ್ನು ನಾಡಿನಾದ್ಯಂತ ಪಸರಿಸುವ ಮಹತ್ವದ ಕೆಲಸವನ್ನು ಈ ಕೃತಿ ಮಾಡಿದೆ. ಇಂತಹ ಅತ್ಯಮೂಲ್ಯ ಕೃತಿಯನ್ನು ಕನ್ನಡ ಲೋಕಕ್ಕೆ ನೀಡಿದ ಲೇಖಕರು ನಿಜಕ್ಕೂ ಅಭಿನಂದನಾರ್ಹರು. ಈ ಪುಸ್ತಕ ಬೇಕಾಗಿರುವವರು ಲೇಖಕರನ್ನು ನೇರವಾಗಿ ಸಂಪರ್ಕಿಸಬಹುದು.
ಲೇಖಕರ ಸಂಪರ್ಕ ಸಂಖ್ಯೆ: 9480473568

