ಗುರು ಜಗನ್ನಾಥ ದಾಸರ ಮೊದಲ ಹೆಸರು ಸ್ವಾಮಿರಾಯ ಆಚಾರ್ಯ, ಇವರು ಹುಟ್ಟಿದ್ದು 1836ರಲ್ಲಿ ದುರ್ಮುಖಿನಾಮ ಸಂವತ್ಸರ, ಮಾರ್ಗಶಿರ ಶುದ್ಧ ಪಂಚಮಿಯಂದು ಜನಿಸಿದರು ತಂದೆಯವರ ಹೆಸರು ವೆಂಕಟಗಿಯಾಚಾರ್ಯರು. ಇವರು ಮಂತ್ರಾಲಯ ರಾಘವೇಂದ್ರರ ಪರಮ ಭಕ್ತರು. ಗುರುರಾಜರ ಪ್ರೇರಣೆಯಂತೆ, ಗೋಪಾಲದಾಸರ ವಂಶಜರಾದ ಶ್ರೀಕೃಷ್ಣದಾಸರಿಂದ (ನೆಂಟ ಪೆತ್ತ ತಂದೆ ಗೋಪಾಲವಿಠಲ) “ಗುರುಜಗನ್ನಾಥವಿಠಲ” ಎಂಬ ಅಂಕಿತ ಪಡೆದು ಹರಿದಾಸನಾದನು. ಅಂದಿನಿಂದ ಪಂಡಿತವರ್ಗದಲ್ಲಿ “ಕೋಶಿಗಿ ಆಚಾರ್ಯರೆಂತಲೂ, ದಾಸಸಾಹಿತ್ಯಾ ಭಿಮಾನಿಗಳ ಮಧ್ಯದಲ್ಲಿ ಗುರುಜಗನ್ನಾಥದಾಸರೆಂತಲೂ, ಆತ್ಮೀಯರ ಮಧ್ಯದಲ್ಲಿ “ಕೋಶಿಗಿಮುತ್ಯಾ” ಎಂತಲೂ ಪ್ರಸಿದ್ಧರಾದರು. ನಿರಂತರ ಆಚಾರ್ಯಮಧ್ವರ ಗ್ರಂಥಗಳ ಅವಲೋಕನೆ, ಪಾಠಪ್ರವಚನ, ಭಗವದಾರಾಧನೆ, ಜ್ಞಾನಿಗಳ ಸೇವೆ, ಪಿತೃಸೇವೆ, ಗ್ರಂಥಗಳ ರಚನೆ ಇವುಗಳೇ ದಾಸರ ನಿತ್ಯಕಾರ್ಯಗಳಾಗಿದ್ದವು.
ಗುರು ಜಗನ್ನಾಥ ದಾಸರು ತಮ್ಮ ರಚನೆಗಳಲ್ಲಿ ‘ಗುರು ಜಗನ್ನಾಥ ವಿಠಲ’ ಹಾಗೂ ವರದ ವಿಠಲ, ವರದೇಶ ವಿಠಲ, ಆನಂದ ವಿಠಲ, ವರೇಂದ್ರ ವಿಠಲ, ಸುಂದರ ವಿಠಲ ಮುಂತಾದ ಅಂಕಿತಗಳನ್ನು ಬಳಸಿರುತ್ತಾರೆ.
ಗುರು ಜಗನ್ನಾಥ ದಾಸರು ರಚಿಸಿದ ಶ್ರೀ ವರದೇಂದ್ರ ತೀರ್ಥ ಗುರುವರ್ಯ ಕರಾವಲಂಬನ ಸ್ತೋತ್ರಂ, ಶ್ರೀ ಜಗನ್ನಾಥ ದಾಸ ಕರಾವಲಂಬನ ಸ್ತೋತ್ರ, ಶ್ರೀ ಲಕ್ಷ್ಮಿ ಹೃದಯ ಸ್ತೋತ್ರಂ, ಮತ್ತು "ಇಂದು ನೋಡಿದೆ ಆನಂದತೀರ್ಥ" ಮುಂತಾದ ಕೀರ್ತನೆಗಳು ಮತ್ತು ಕೃತಿಗಳು ಅತ್ಯಂತ ಪ್ರಸಿದ್ಧವಾಗಿವೆ.
ಗುರು ಜಗನ್ನಾಥ ದಾಸರು 20-10-1918 ಕಾಳಯುಕ್ತಿ ಸಂವತ್ಸರ, ಆಶ್ವಯುಜ ಬಹುಳ ಪಾಡ್ಯದಂದು ಹರಿಪಾದ ಸೇರಿದರು.
ನವರಾತ್ರಿ ದಿವಸಗಳಲ್ಲಿ ಹೆಚ್ಚಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇಚ್ಛಿಸುವವರು ಲಕ್ಷ್ಮಿ ಹೃದಯ ಸ್ತೋತ್ರವನ್ನು ಪಾರಾಯಣ ಮಾಡುತ್ತಾರೆ. ಸಾಮಾನ್ಯವಾಗಿ ಕನ್ನಡದ ಗುರು ಜಗನ್ನಾಥದಾಸ ವಿರಚಿತ ಲಕ್ಷ್ಮಿ ನಾರಾಯಣ ಹೃದಯವನ್ನು ಪಾರಾಣ ಮಾಡುತ್ತಾರೆ. ಸಿರಿ ಸಂಪತ್ತು ಮತ್ತು ನೆಮ್ಮದಿಯ ಪ್ರಾಪ್ತಿಗಾಗಿ ಲಕ್ಷ್ಮಿ ಹೃದಯದ ಪಾರಾಯಣವನ್ನು ಮಾಡಲಾಗುತ್ತದೆ. ಸಂಸ್ಕೃತದಲ್ಲಿರುವ ಲಕ್ಷ್ಮಿ ಹೃದಯದ ಪಾರಾಯಣ ಮಾಡುವ ಮೊದಲಿಗೆ ನಾರಾಯಣ ವರ್ಮದ ಪಾರಾಯಣ ನಂತರ ಲಕ್ಷ್ಮಿ ಹೃದಯ ಪಾರಾಯಣ ಪುನಃ ನಾರಾಯಣ ವರ್ಮವನ್ನು ಪಠಿಸಲಾಗುತ್ತದೆ. ಆದರೆ ಕನ್ನಡದ ಗುರು ಜಗನ್ನಾಥ ದಾಸರಿಂದ ವಿರಚಿತ ಲಕ್ಷ್ಮಿ ಹೃದಯ ಪಾರಾಯಣವು ಮೊದಲಿಗೆ ವೆಂಕಟೇಶ ಸ್ತವರಾಜ ನಂತರ ಲಕ್ಷ್ಮಿ ಹೃದಯ ಪುನಃ ವೆಂಕಟೇಶ ಸ್ತವರಾಜದ ಪಾರಾಯಣವಾಗಿದೆ.
ಲಕ್ಷ್ಮಿ ಹೃದಯದ ಪಾರಾಯಣವನ್ನು ಪ್ರತಿ ಶುಕ್ರವಾರ ಸಂಧ್ಯಾ ಸಮಯದಲ್ಲಿ ವಿಶೇಷವಾಗಿ ಮಾಡುತ್ತಾರೆ. ಲಕ್ಷ್ಮಿ ಹೃದಯದ ಪಾರಾಐಣದಿಂದ ಕಷ್ಟ ಕಾರ್ಪಣ್ಯಗಳು ಮತ್ತು ದಾರಿದ್ರ್ಯ ಶಮನವಾಗುತ್ತದೆ. ಲಕ್ಷ್ಮಿ ಹೃದಯವು 108 ಶ್ಲೋಕಗಲನ್ನು ಒಳಗೊಂಡಿದ್ದು ಸ್ತೋತ್ರದ ಕನೆಯಲ್ಲಿ ಫಲಶೃತಿಯನ್ನು ಹೇಳುತ್ತಾರೆ. ಲಕ್ಷ್ಮೀ ದೇವಿಯ ಪ್ರಾರ್ಥನೆ ಲಕ್ಷ್ಮೀ ಹೃದಯದಲ್ಲಿ ಮಾಡಲಾಗಿದೆ.
ದೇವಿಯ ಸ್ತುತಿ ಮತ್ತು ರೂಪ ವರ್ಣನೆಯು ಲಕ್ಷ್ಮಿ ಹೃದಯದಲ್ಲಿ ಕಾಣುತ್ತದೆ. ಭಕ್ತನು ಲಕ್ಷ್ಮೀ ದೇವಿಯ ದಿವ್ಯ ಪಾದಗಳನ್ನು ಭಜಿಸುತ್ತಾನೆ. ಆಕೆ ಸ್ವರ್ಣಕಾಂತಿಯಂತೆ ಹೊಳೆಯುವವಳು, ಚಂದ್ರನ ತಂಗುದಲಿ ಹುಟ್ಟಿದವಳು, ಪೀತವಸನ ಧರಿಸಿದವಳು ಮತ್ತು ಸರ್ವಾಭರಣಗಳಿಂದ ಶೋಭಿಸುವವಳು ಎಂದೆಲ್ಲ ವರ್ಣಿಸುತ್ತಾನೆ.
ಜಗತ್ತಿನ ಮಾತೆಯಾದ ಲಕ್ಷ್ಮಿಯು ಇಷ್ಟಾರ್ಥವನ್ನು ಪ್ರದಾನಮಾಡುವವಳಾಗಿದ್ದಾಳೆ. ಮಹಾಲಕ್ಷ್ಮಿಯು ಮೂರು ಲೋಕಗಳಿಗೆ ತಾಯಿ, ಶ್ರೀಹರಿಯ ವಾಮಾಂಕದಲ್ಲಿ (ಎಡಭಾಗದಲ್ಲಿ) ನೆಲೆಸಿದವಳು. ಭಕ್ತರ ಸಕಲ ಇಷ್ಟಾರ್ಥಗಳನ್ನು, ಜ್ಞಾನ ಮತ್ತು ಸಂಪತ್ತನ್ನು ಕರುಣಿಸುವ ಕಲ್ಪವೃಕ್ಷದಂತವಳು ಎಂದು ಪ್ರಾರ್ಥಿಸುತ್ತಾರೆ.
ಶ್ರೀಹರಿಯು ಎಲ್ಲಾ ಜೀವಿಗಳ ಹೃದಯದಲ್ಲೂ ನೆಲೆಸಿರುವಂತೆ, ಲಕ್ಷ್ಮಿಯೂ ಸರ್ವವ್ಯಾಪಿಯಾಗಿ ಭಕ್ತರ ಮನಸ್ಸಿನಲ್ಲಿ ನೆಲೆಸುತ್ತಾಳೆ ಎಂದು ಸ್ತುತಿಸುತ್ತಾರೆ.
"ನನ್ನ ಮನಸ್ಸು ಎನ್ನುವ ಸರೋವರದಲ್ಲಿ ನಿನ್ನ ಪಾದಪದ್ಮಗಳು ಸದಾ ಇರಲಿ. ನನ್ನ ಅಜ್ಞಾನದ ಕತ್ತಲೆಯನ್ನು, ದಾರಿದ್ರ್ಯದ ದುಃಖವನ್ನು ಕಳೆದು ಕರುಣೆಯ ಅಭಿಷೇಕ ಮಾಡು" ಎಂದು ದೇವಿಯನ್ನು ಪ್ರಾರ್ಥನೆ ಮಾಡುತ್ತಾರೆ. ಬ್ರಹ್ಮ ತನ್ನ ಲೇಖನಿಯಿಂದ ಬರೆದ ಹಣೆಬರಹ ತಿದ್ದಿ ನನಗೆ ಅನುಗ್ರಹಿಸು ಎಂದು ಬೇಡುತ್ತಾರೆ.
ಲಕ್ಷ್ಮಿ-ನಾರಾಯಣರ ಕೃಪೆ ಸದಾ ಇರಲೆಂದು ಬೇಡಿಕೊಳ್ಳಲಾಗುತ್ತದೆ. ಈ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಪಠಿಸುವುದರಿಂದ ಅಥವಾ ಶ್ರವಣ ಮಾಡುವುದರಿಂದ ಸಕಲ ಪಾಪಗಳು ನಶಿಸಿ, ಅಚಲವಾದ ಸಂಪತ್ತು, ನೆಮ್ಮದಿ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ.
ಪಾರಾಯಣ ಫಲ
ಶ್ರೀ ಗುರು ಜಗನ್ನಾಥ ದಾಸರು ವಿರಚಿಸಿರುವ ಶ್ರೀ ಲಕ್ಷ್ಮೀ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ದೇವಿಯ ಕೃಪೆಯಿಂದ ಸಕಲ ಸಂಪತ್ತು, ಐಶ್ವರ್ಯ ಮತ್ತು ಮನಶಾಂತಿ ಲಭಿಸುತ್ತದೆ.
ಧನ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿ ಧನ-ಧಾನ್ಯಗಳ ಕೊರತೆ ನೀಗಿ, ಆರ್ಥಿಕ ಸಮೃದ್ಧಿ ಉಂಟಾಗುತ್ತದೆ.
ಎಲ್ಲ ರೀತಿಯ ದಾರಿದ್ರ್ಯ ಹಾಗೂ ಶೋಕ ಶಮನವಾಗುತ್ತದೆ. ಮನಸ್ಸಿನಲ್ಲಿದ್ದ ದುಃಖ, ಬಡತನ ಮತ್ತು ಅಜ್ಞಾನದ ಕತ್ತಲೆಯು ದೂರವಾಗುತ್ತದೆ.
ಲಕ್ಷ್ಮೀ ದೇವಿಯು ಭಕ್ತರ ಇಷ್ಟಾರ್ಥಗಳನ್ನೂ ನೆರವೇರಿಸುತ್ತಾಳೆ. ಭಕ್ತರು ಬೇಡಿದ ಸಕಲ ಸತ್ಫಲಗಳನ್ನು ಹಾಗೂ ಇಷ್ಟಾರ್ಥಗಳನ್ನು ಈ ಸ್ತೋತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ದೊರೆಯುತ್ತದೆ.
ಸಕಲ ಸುಜ್ಞಾನ ಜೊತೆಗೆ ಜೀವನದಲ್ಲಿ ಸುಖ ಸಮೃದ್ಧಿ ದೊರೆಯುತ್ತದೆ. ನಿರ್ಮಲವಾದ ಬುದ್ಧಿ, ವಾಕ್ ಚಾತುರ್ಯ ಅನಂತವಾದ ಸುಖ-ಸೌಭಾಗ್ಯಗಳು ಪ್ರಾಪ್ತವಾಗುತ್ತವೆ.
ಶ್ರೀಹರಿಯ ಪ್ರೀತಿ ಪಾತ್ರರಾಗುತ್ತಾರೆ ಭಕ್ತಿ ಮತ್ತು ಜ್ಞಾನಪೂರ್ವಕವಾಗಿ ಪಠಿಸುವುದರಿಂದ ಭಗವಂತನಾದ ಶ್ರೀ ಹರಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.
- ಮಾಧುರಿ ದೇಶಪಾಂಡೆ, ಬೆಂಗಳೂರು


