ಮಹಾಲಕ್ಷ್ಮಿ ಸ್ತೋತ್ರ ಅಥವಾ ಮಹಾಲಕ್ಷ್ಮಿ ಅಷ್ಟಕ ಎಂದುಗುರುತಿಸಲ್ಪಡುವ ಈ ಸ್ತೋತ್ರ ಅತ್ಯಂತ ಪವಿತ್ರ ಮತ್ತು ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ದೇವತೆಗಳ ರಾಜನಾದ ಇಂದ್ರ ದೇವನು ಸಂಪತ್ತಿನ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪ್ರಸನ್ನಗೊಳಿಸಲು ಈ ಸ್ತೋತ್ರವನ್ನು ರಚಿಸಿ, ಪ್ರಾರ್ಥನೆ ಮಾಡಿದನು.
ಮುಖ್ಯವಾಗಿ ಪುರಾಣಗಳಲ್ಲಿ ಇಂದ್ರ ಕೃತವಾಗಿ ಎರಡು ಪ್ರಮುಖ ಲಕ್ಷ್ಮೀ ಪ್ರಾರ್ಥನೆಗಳು ಕಂಡುಬರುತ್ತವೆ ಮೊದಲನೆಯದು ಬ್ರಹ್ಮವೈವರ್ತ ಪುರಾಣದ "ನಮಃ ಕಮಲವಾಸಿನ್ಯೈ" ಎಂದು ಆರಂಭವಾಗುವ ದೀರ್ಘ ಸ್ತೋತ್ರ, ಮತ್ತೊಂದು ಪ್ರಸಿದ್ಧ ಲಕ್ಷ್ಮಿ ಅಷ್ಟಕ ಪದ್ಮಪುರಾಣದ ಅತ್ಯಂತ ಜನಪ್ರಿಯ "ನಮಸ್ತೇಽಸ್ತು ಮಹಾಮಾಯೇ" ಎಂದು ಆರಂಭವಾಗುವ ಮಹಾಲಕ್ಷ್ಮ್ಯಷ್ಟಕಮ್ ಸರ್ವೇ ಸಾಮಾನ್ಯ ಎಲ್ಲ ಜನರಿಗೂ ತಿಳಿದ ಮತ್ತು ಹೆಚ್ಚು ಜನರಿಂದ ಪಠಿಸಲ್ಪಡುವ ಶಕ್ತಿ ಶಾಲಿ ಮಂತ್ರವಾಗಿದೆ.
ಇಂದ್ರ ಕೃತ ಮಹಾಲಕ್ಷ್ಮಿ ಸ್ತೋತ್ರದ ಹಿನ್ನೆಲೆ:
ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಒಮ್ಮೆ ದೂರ್ವಾಸ ಮುನಿಗಳ ಶಾಪದಿಂದಾಗಿ ಇಂದ್ರದೇವನು ತನ್ನ ಐಶ್ವರ್ಯ, ವೈಭವ ಮತ್ತು ಸ್ವರ್ಗದ ಸಂಪತ್ತನ್ನೆಲ್ಲ ಕಳೆದುಕೊಂಡು ದರಿದ್ರನಾಗುತ್ತಾನೆ ಮತ್ತು ಎಲ್ಲ ದೇವತೆಗಳ ತೇಜಸ್ಸು ಕೂಡ ಕ್ಷೀಣವಾಗುತ್ತದೆ. ಇಂದ್ರನು ತನ್ನ ತಪ್ಪುಗಳನ್ನು ಕ್ಷಮಿಸುವಂತೆ ಬೇಡುತ್ತಾ ಭಕ್ತಿಪೂರ್ವಕವಾಗಿ ಮಹಾಲಕ್ಷ್ಮಿ ದೇವಿಯನ್ನು ಸ್ತುತಿಸುತ್ತಾನೆ. ಇಂದ್ರನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷಳಾಗುವ ಲಕ್ಷ್ಮಿ ದೇವಿಯು, ಅವನಿಗೆ ಮರಳಿ ಸಂಪತ್ತನ್ನು ಕರುಣಿಸುತ್ತಾಳೆ. ಈ ಹಿನ್ನೆಲೆಯಲ್ಲಿ, ಕಳೆದುಕೊಂಡ ಸಂಪತ್ತು ಮತ್ತು ಗೌರವವನ್ನು ಮರಳಿ ಪಡೆಯಲು ಇದು ಅತ್ಯಂತ ಪ್ರಭಾವಶಾಲಿ ಸ್ತೋತ್ರವಾಗಿದೆ.
ಸ್ತೋತ್ರ:
ಇಂದ್ರ ಉವಾಚ -
ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ।
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 1 ॥
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ ।
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 2 ॥
ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ ।
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 3 ॥
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ।
ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 4 ॥
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ ।
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 5 ॥
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ ।
ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 6 ॥
ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ।
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 7 ॥
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ ।
ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 8 ॥
ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ ।
ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ॥
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ ।
ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ॥
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ ।
ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ॥
[ಇತಿ ಶ್ರೀ ಇಂದ್ರಕೃತಂ ಮಹಾಲಕ್ಷ್ಮ್ಯಷ್ಟಕಸ್ತೋತ್ರಂ ಸಂಪೂರ್ಣಂ]
ಫಲ:
ಲಕ್ಷ್ಮೀ ಅಷ್ಟಕ ಸ್ತೋತ್ರವನ್ನು ಭಕ್ತಿಯಿಂದ ಪ್ರತಿ ನಿತ್ಯ ಪಠಿಸುವುದರಿಂದ ಭಕ್ತರು ಆರ್ಥಿಕ ಸಂಕಷ್ಟಗಳು, ಸಾಲಗಳು ಮತ್ತು ಬಡತನವನ್ನು ಮೀರಿ ನಿಲ್ಲಲು ಹಾಗೂ ಕಳೆದುಕೊಂಡ ಸಂಪತ್ತನ್ನು ಮರಳಿ ಪಡೆಯಲು ಸಹಾಯವಾಗುತ್ತದೆ. ಸ್ತೋತ್ರವು ಸಂಪತ್ತು, ಜ್ಞಾನ, ಸೌಭಾಗ್ಯ ಮತ್ತು ಆಧ್ಯಾತ್ಮಿಕ ಮುಕ್ತಿಯನ್ನು ನೀಡುವ ದೇವತೆಯನ್ನು ಆವಾಹಿಸುತ್ತದೆ. ಅಷ್ಟ ಲಕ್ಷ್ಮೀ ರೂಪಗಳನ್ನು ಆರಾಧಿಸುತ್ತದೆ.
ಪ್ರತಿದಿನ ಈ ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತವೆ, ಭಯವು ನಿವಾರಣೆಯಾಗುತ್ತದೆ ಮತ್ತು ಮನೆಯಲ್ಲಿ ಶಾಂತಿ, ಸಾಮರಸ್ಯ ಹಾಗೂ ಒಳಿತನ್ನು ತರುತ್ತದೆ. ವಿಶೇಷವಾಗಿ ಶುಕ್ರವಾರದ ಪೂಜೆಗಳು, ದೀಪಾವಳಿ, ವರಲಕ್ಷ್ಮಿ ವ್ರತ ಮತ್ತು ಪ್ರತಿದಿನದ ಬೆಳಗಿನ ಪ್ರಾರ್ಥನೆಗಳ ಸಂದರ್ಭದಲ್ಲಿ ಇದನ್ನು ತಪ್ಪದೇ ಹೇಳುತ್ತಾರೆ.
ದಿನಕ್ಕೆ 1 ಬಾರಿ ಹೇಳುವುದರಿಂದ ಮಹಾಪಾಪಗಳನ್ನು ನಾಶಪಡಿಸುತ್ತದೆ (ಮಹಾಪಾಪ ವಿನಾಶನಮ್).
ದಿನಕ್ಕೆ 2 ಬಾರಿ ಪಠಿಸುವುದರಿಂದ ಸಂಪತ್ತು ಮತ್ತು ಆಹಾರ ಧಾನ್ಯಗಳೊಂದಿಗೆ ಆಶೀರ್ವದಿಸುತ್ತದೆ (ಧನ ಧಾನ್ಯ ಸಮನ್ವಿತಃ).
ದಿನಕ್ಕೆ 3 ಬಾರಿ ಪರಾಯಣ ಮಾಡುವುದರಿಂದ ಪ್ರಮುಖ ಶತ್ರುಗಳನ್ನು ನಾಶಪಡಿಸುತ್ತದೆ ಮತ್ತು ನಿರಂತರ ಅನುಗ್ರಹ ಮತ್ತು ವರಗಳನ್ನು ತರುತ್ತದೆ (ಮಹಾಶತ್ರು ವಿನಾಶನಮ್).
- ಮಾಧುರಿ ದೇಶಪಾಂಡೆ, ಬೆಂಗಳೂರು


