ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ

Upayuktha
0



ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸದೆ ಇರುವ ಜಾಗತಿಕ ಹಾಗೂ ರಾಷ್ಟ್ರೀಯ ರಾಜಕಾರಣ ಕೇವಲ ಭಯ ಭೀತಿಯಿಂದ ಕೂಡಿದ್ದು, ಜಾಗತಿಕ ಸಹೋದರತ್ವ ಇಂದು ಮರೆಯಾಗಿದೆ ಎಂದು ಮಹಾತ್ಮ ಗಾಂಧೀಜಿಯವರ ಮೊಮ್ಮಗ ಶ್ರೀಕೃಷ್ಣ ಗಜಾನನ ಕುಲಕರ್ಣಿ ಅವರು ವಿಷಾದ ವ್ಯಕ್ತಪಡಿಸಿದರು. 


ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ತುಳು ಅಧ್ಯಯನ ಪೀಠ , ಕುಂಬ್ರ ಜತ್ತಪ್ಪ ರೈ ಪ್ರತಿಷ್ಟಾನ ಕಜೆಮಾರು ಕೆದಂಬಾಡಿ ಪುತ್ತೂರು, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ʼಗಾಂಧಿ ಮತ್ತು ವಿಶ್ವಶಾಂತಿʼ ವಿಷಯದ ಕುರಿತು ಅವರು ಮಾತನಾಡಿದರು. 


ಪುತ್ತೂರು ಕಜೆಮಾರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಟಾನದ ಸಂಸ್ಥಾಪಕ ಕೆ. ಪ್ರಮೋದ್‌ ಕುಮಾರ್‌ ರೈ ಅವರ ಸಂಪಾದಕತ್ವದಲ್ಲಿ ಮೂಡಿಬಂದ ತುಳು ಪುಸ್ತಕ ʼಗಾಂಧಿ ಪಚ್ಚೆದ ಸಾದಿಡ್-ಜತ್ತಪ್ಪ ರೈ ಜೀವನಗಾಥೆʼ ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಅವರು, ಸತ್ಯ ಎಂದು ಎಡಪಂಥೀಯ ಚಿಂತನೆ, ಬಲಪಂಥೀಯ ಚಿಂತನೆ, ತಟಸ್ಥ ಚಿಂತನೆ, ಗಾಂಧಿ ಚಿಂತನೆ ಹಾಗೂ ಎಲ್ಲಾ ರೂಪದ ಸಿದ್ಧಾಂತಗಳನ್ನೂ ಮೀರಿದ್ದು ಎಂದು ಅಭಿಪ್ರಾಯಪಟ್ಟರು. 


ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಢೇ ಪಿ.ಕೃಷ್ಣ, ಸೇವೆ ಮತ್ತು ತ್ಯಾಗ ಹಾಗೂ ಸತ್ಯ ಮತ್ತು ಅಹಿಂಸೆಯ ತತ್ವದಡಿ ಭಾರತವನ್ನು ಕಟ್ಟಿದ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಕರೆನೀಡಿದರು. 


ಯಾವುದೇ ರೀತಿಯ ಮೋಸ ವಂಚನೆ ಸುಳ್ಳು ಹೇಳದೆ ಧೈರ್ಯವಾಗಿರುವುದೇ ಸತ್ಯ ಹಾಗೂ ಯಾವುದೇ ಮತಪಂಥವಿಲ್ಲದೆ ಎಲ್ಲರನ್ನೂ ಪ್ರೀತಿಸುವುದೇ ಅಹಿಂಸೆ ಎಂಬುದು ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ಪರಿಕಲ್ಪನೆಯಾಗಿದ್ದು, ಮೂಲಭೂತವಾದಿಗಳು, ಹಿಂಸಾವಾದಿಗಳು ಹಾಗೂ ಕೋಮುವಾದಿಗಳನ್ನು ಗಾಂಧಿ ವಿರೋಧಿಸಿದ್ದರು ಎಂದು ತಿಳಿಸಿದ ಅವರು ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಮಾಹಿತಿಗಳಿಗೆ ಬದಲಾಗಿ ಪುಸ್ತಕಗಳನ್ನು ಓದಿ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಕರೆನೀಡಿದರು. 


ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನಿವೃತ್ತ ಕುಲಪತಿ ಪ್ರೊ. ಬಿ.ಎ.ವಿವೇಕ್‌ ರೈ ಅವರು ಮಾತನಾಡಿ, ಹಣ, ಅಹಂಕಾರ, ಜಾತಿ ರಾಜಕಾರಣದಲ್ಲಿ ಬಳಲುತ್ತಿರುವ ವರ್ತಮಾನದ ಭಾರತಕ್ಕೆ ಮಹಾತ್ಮ ಗಾಂಧಿಯವರ ಆದರ್ಶವೇ ಪರಿಹಾರವಾಗಿದ್ದು, ಯಾವುದೇ ಹುದ್ದೆಯಲ್ಲಿದ್ದರೂ ನಿಮ್ಮ ನಿಮ್ಮ ಕರ್ತವ್ಯದಲ್ಲಿ ಬದ್ಧತೆ, ಪ್ರಾಮಾಣಿಕತೆ, ಸರಳತೆಯನ್ನು ರೂಢಿಸಿಕೊಂಡರೆ ಅದುವೇ ಗಾಂಧಿವಾದವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಪ್ಪಂನ ದ್ರಾವಿಡಿಯನ್‌ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎಲ್.ಸಿ.ಮಲ್ಲಯ್ಯ, ಭಾಷಾ ಸಾಮರಸ್ಯದ ಕುರಿತು ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಡಿಜಿಪಿ ಆರ್.ಚೇತನ್‌, ಬೆಂಗಳೂರು ಗಾಂಧಿ ಭವನ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಪುತ್ತೂರು ಕಜೆಮಾರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಟಾನದ ಸಂಸ್ಥಾಪಕ ಕೆ. ಪ್ರಮೋದ್‌ ಕುಮಾರ್‌ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯವಂತ ನಾಯಕ್‌ ಅತಿಥಿಗಳನ್ನು ಸ್ವಾಗತಿಸಿದರು. ಮಂಗಳೂರು ವಿವಿ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಶೇಷಪ್ಪ ಅಮಿನ್‌ ಕೆ ವಂದಿಸಿದರು. ಮಂಗಳೂರು ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯದರ್ಶಿ ವಾರುಣಿ ನಾಗರಾಜ್‌ ಅವರು ಕಾರ್ಯಕ್ರಮ ನಿರೂಪಿಸಿದರು.   



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top