ಕಟಪಾಡಿ: ರಕ್ತದಾನ ಮಹಾದಾನ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಬಿರದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು.
ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಸಂಯುಕ್ತ ಆಶ್ರಯದಲ್ಲಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ಟೌನ್ ಹಾಗೂ ಭಾರತೀಯ ರೆಡ್ ಕ್ರಾಸ್ ರಕ್ತನಿಧಿ, ಕುಂದಾಪುರ ಇವರ ಸಹಯೋಗದೊಂದಿಗೆ ಅಕ್ಟೋಬರ್ 10ರಂದು ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ರಕ್ತನಿಧಿ, ಕುಂದಾಪುರದ ಅಧ್ಯಕ್ಷರಾದ ಜಯಕರ್ ಶೆಟ್ಟಿ ಅವರು, ರಕ್ತದಾನದ ಮಹತ್ವ ಹಾಗೂ ಅದರ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದರು. ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಶ್ರೇಷ್ಠ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲರಾದ ಪ್ರೊ. ವಿಘ್ನೇಶ್ ಶೆಣೈ ಬಿ. ಅವರು ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಮಿಡ್ಟೌನ್ ಅಧ್ಯಕ್ಷರಾದ ಡಾ. ರಾಮಚಂದ್ರ ಪಟ್ಕರ್, ಲಯನ್ಸ್ ಕ್ಲಬ್ ಉಡುಪಿ ಮಿಡ್ಟೌನ್ ಕಾರ್ಯದರ್ಶಿ ಲಯನ್ ಜೀವಂದಾಸ್ ಶೆಟ್ಟಿ , ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಲ್ ದೀಪ್ ವೈ, ತ್ರಿಶಾ ವಿದ್ಯಾ ಕಾಲೇಜಿನ ಅಕಾಡೆಮಿಕ್ ಮ್ಯಾನೇಜರ್ ಡಾ. ಶಾಂತಪ್ರಿಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಚೇತನಾ ಸುನಿಲ್ ಮತ್ತು ಪ್ರೊ. ಆಶಿಕಾ ಪಾಟೀಲ್ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ಧೀರಜ್ ಬೆಳ್ಳಾರೆ ಮತ್ತು ಪ್ರೊ. ಯಶಸ್ವಿ ಎಸ್. ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕರಿಸಿದರು.
ವಿದ್ಯಾರ್ಥಿಗಳು ಉತ್ಸಾಹದಿಂದ ರಕ್ತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿದರು. 100ಕ್ಕೂ ಅಧಿಕ ವಿದ್ಯಾರ್ಥಿಗಳ ರಕ್ತದಾನವು ಶಿಬಿರದ ಯಶಸ್ಸಿಗೆ ಸಾಕ್ಷಿಯಾಯಿತು. ವಿದ್ಯಾರ್ಥಿನಿ ಅಮೀನಾ ನಿರೂಪಿಸಿ, ಮೇಘ ಸ್ವಾಗತಿಸಿ, ಸುಷ್ಮಾ ವಂದಿಸಿದರು.

