ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ 'ಉದಯಂ-2026'- ಫ್ರೆಶರ್ಸ್ ಡೇ

Upayuktha
0


ಪುತ್ತೂರು: "ಮಾನವ ಜೀವನದಲ್ಲಿ ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಅದರೊಂದಿಗೆ ಸಮಾಜಕ್ಕೆ ಒಳಿತಾಗುವ ಮತ್ತು ದೇಶಕ್ಕೆ ಹಿತವಾಗುವ ಸತ್ಕಾರ್ಯಗಳನ್ನೂ ಮಾಡಬೇಕು" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಹಾಗೂ ಸೋಲಾರ್ ಉದ್ಯಮಿ ಸೂರಜ್ ಕುಮಾರ್ ಕರೆ ನೀಡಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ 'ಉದಯಂ-2026' ಫ್ರೆಶರ್ಸ್ ಡೇ (ಸ್ವಾಗತ ಸಮಾರಂಭ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಇಂಜಿನಿಯರಿಂಗ್ ಎಂದರೆ ಕೇವಲ ವಿದ್ಯಾಭ್ಯಾಸವಲ್ಲ, ಅದೊಂದು ವಿಶಿಷ್ಟ ಮನಸ್ಥಿತಿ. ಆ ಮನಸ್ಥಿತಿಗೆ ನಿರ್ದಿಷ್ಟ ಗುರಿಯನ್ನು ಜೋಡಿಸಿಕೊಂಡಾಗ ಮಾತ್ರ ನಾವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ. ವಿದ್ಯಾರ್ಥಿಗಳು ತಾವು ಎಲ್ಲೇ ಹೋದರೂ, ಯಾವುದೇ ಉದ್ಯೋಗದಲ್ಲಿದ್ದರೂ ತಮ್ಮತನವನ್ನು ಬಿಟ್ಟುಕೊಡದೆ, ದೇಶದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವ ಕಾಯಕದಲ್ಲಿ ಸದಾ ನಿರತರಾಗಬೇಕು ಎಂದು ಅವರು ಸಲಹೆ ಮಾಡಿದರು.


ತಾಳ್ಮೆ ಮತ್ತು ಸಮಯಪಾಲನೆ ಯಶಸ್ಸಿನ ಮಂತ್ರ

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ದೇವಿಚರಣ್ ರೈ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ತಾಳ್ಮೆ ಮತ್ತು ಸಮಯಪಾಲನೆ ಅತ್ಯಂತ ಅವಶ್ಯಕ. ಜೀವನದಲ್ಲಿ ಒಳ್ಳೆಯದಾಗಬೇಕಾದರೆ ಸತ್ಕರ್ಮಗಳನ್ನು ಮಾಡಬೇಕು. ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಉತ್ತಮವಾಗಿ ಓದುವುದೇ ಅತ್ಯುತ್ತಮ ಸತ್ಕರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.


ಜ್ಞಾನ, ವರ್ತನೆ ಮತ್ತು ಕೌಶಲಗಳ ತ್ರಿವೇಣಿ ಸಂಗಮ

ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಚಿಪ್ಪಾರ್ ಮಾತನಾಡಿ, ಜ್ಞಾನ, ವರ್ತನೆ ಮತ್ತು ಕೌಶಲ ಎಂಬ ಮೂರು ಅಂಶಗಳು ಮನುಷ್ಯನ ಜೀವನದ ಉನ್ನತಿಗೆ ಬುನಾದಿಯಾಗಿದೆ ಎಂದರು. ಪುಸ್ತಕದಿಂದ ಪಡೆದ ಜ್ಞಾನ, ಸರಿಯಾದ ಅಭ್ಯಾಸದಿಂದ ರೂಢಿಸಿಕೊಂಡ ಉತ್ತಮ ವರ್ತನೆ ಹಾಗೂ ಇವೆರಡರ ಜೊತೆಗೆ ಸೂಕ್ತ ಕೌಶಲವಿದ್ದರೆ ಮನುಷ್ಯ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಸಾಧ್ಯ ಎಂದರು.


ಅಂತ್ಯವಿಲ್ಲದ ಅವಕಾಶಗಳ ಆಗರ ಇಂಜಿನಿಯರಿಂಗ್

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ. ಕಲ್ಲಾಜೆ ಮಾತನಾಡಿ, "ಕೆಲವರು ದೊಡ್ಡ ಕನಸುಗಳೊಂದಿಗೆ ಇಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದರೆ, ಇನ್ನು ಕೆಲವರು ಹೆತ್ತವರ ಆಶೋತ್ತರಗಳಿಗಾಗಿ ಸೇರಿರಬಹುದು. ಆದರೆ ಪ್ರತಿಯೊಬ್ಬರ ಮುಖ್ಯ ಧ್ಯೇಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಪಡೆದುಕೊಳ್ಳುವುದೇ ಆಗಿರಬೇಕು" ಎಂದರು. ಇಂಜಿನಿಯರಿಂಗ್ ಕ್ಷೇತ್ರವು ಅಂತ್ಯವಿಲ್ಲದ ಅವಕಾಶಗಳ ಆಗಾರವಾಗಿದ್ದು, ಇಲ್ಲಿ ವಿವಿಧ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ನುಡಿದರು.


ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ

ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 'ವಿಸಿಎಲ್ ಕ್ರಿಕೆಟ್ ಲೀಗ್' ಪಂದ್ಯಾಟದಲ್ಲಿ ವಿಜೇತರಾದ ವಿದ್ಯಾರ್ಥಿ ತಂಡಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಮೂಲವಿಜ್ಞಾನ ವಿಭಾಗದ ಸಂಯೋಜಕರಾದ ಡಾ. ಶ್ವೇತಾಂಬಿಕಾ.ಪಿ, ಪ್ರೊ. ತೇಜಸ್ವಿನಿ.ಎಲ್.ಪಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ. ಶ್ರೀನಿಧಿ.ಎ ಮತ್ತು ಪ್ರೊ. ನಿಶಾ.ಜಿ.ಆರ್ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಅನೂಷಾ ರೈ ಸ್ವಾಗತಿಸಿ, ಕೀರ್ತನ ವಂದಿಸಿದರು. ಶ್ರೀನಿವಾಸ್ ಹೆಗ್ಡೆ ಮತ್ತು ಆಶಿತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top