ಮಂಗಳೂರು ದಸರಾ ಎಂದರೆ ಕರಾವಳಿ ಕರ್ನಾಟಕದ ಜನರಿಗೆ ವಿಶೇಷವಾದ ಹಬ್ಬ. ನವರಾತ್ರಿಯ ಸಂದರ್ಭದಲ್ಲಿ ಮಂಗಳೂರು ನಗರವು ದೀಪಗಳ ಬೆಳಕಿನಿಂದ ಕಂಗೊಳಿಸುತ್ತದೆ. ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದಿಂದ ಕೂಡಿರುವ ಈ ಹಬ್ಬವನ್ನು ನೋಡಲು ಸಾವಿರಾರು ಜನರು ಆಗಮಿಸುತ್ತಾರೆ.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ದಸರಾ ಉತ್ಸವವು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಮಂಗಳೂರಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಇಲ್ಲಿ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಸುಂದರವಾಗಿ ಅಲಂಕರಿಸಿ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದ ಆಕರ್ಷಕ ಅಲಂಕಾರ ಮತ್ತು ಬಣ್ಣಬಣ್ಣದ ವಿದ್ಯುತ್ ದೀಪಗಳು ಭಕ್ತರ ಮನಸ್ಸನ್ನು ಸೆಳೆಯುತ್ತವೆ.
ಮಂಗಳೂರು ದಸರಾ ಎಂದಾಕ್ಷಣ ನೆನಪಾಗುವುದು ಹುಲಿವೇಷ, ಚೆಂಡೆ ಮತ್ತು ವಿವಿಧ ಜನಪದ ಕಲಾ ಪ್ರದರ್ಶನಗಳು. ಕಲಾವಿದರು ಹುಲಿವೇಷ ಧರಿಸಿ ತಾಸೆಯ ನಾದಕ್ಕೆ ತಕ್ಕಂತೆ ಕುಣಿಯುವ ದೃಶ್ಯವು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ನಗರದ ವಿವಿಧ ಭಾಗಗಳಲ್ಲಿ ದಸರಾ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಆಚರಣೆಗಳು ಕರಾವಳಿಯ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತವೆ.
ವಿಜಯದಶಮಿಯ ದಿನ ಮಂಗಳೂರು ದಸರಾ ಉತ್ಸವವು ಮತ್ತಷ್ಟು ಕಳೆಗಟ್ಟುತ್ತದೆ. ಕುದ್ರೋಳಿ ಕ್ಷೇತ್ರದಿಂದ ಹೊರಡುವ ಭವ್ಯ ಶೋಭಾಯಾತ್ರೆಯು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಅಲಂಕೃತ ವಾಹನಗಳಲ್ಲಿ ದೇವರ ಮೂರ್ತಿಗಳನ್ನು ಕೂರಿಸಿ ಮೆರವಣಿಗೆ ನಡೆಸಲಾಗುತ್ತದೆ. ದಾರಿಯುದ್ದಕ್ಕೂ ಜನರು ಸೇರಿ ದೇವರ ದರ್ಶನ ಪಡೆಯುತ್ತಾರೆ. ದೀಪಗಳ ಬೆಳಕು, ಸಂಗೀತ ಮತ್ತು ಭಕ್ತರ ಸಂಭ್ರಮ ಇಡೀ ನಗರಕ್ಕೆ ಹಬ್ಬದ ವಾತಾವರಣವನ್ನು ನೀಡುತ್ತದೆ.
ಮಂಗಳೂರು ದಸರಾ ಕೇವಲ ಧಾರ್ಮಿಕ ಹಬ್ಬವಲ್ಲ. ಇದು ಜನರನ್ನು ಒಗ್ಗೂಡಿಸುವ, ನಮ್ಮ ಸಂಪ್ರದಾಯಗಳನ್ನು ಉಳಿಸುವ ಮತ್ತು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಾಂಸ್ಕೃತಿಕ ಆಚರಣೆಯಾಗಿದೆ. ವಿವಿಧ ಪ್ರದೇಶಗಳಿಂದ ಬರುವ ಜನರು ಒಟ್ಟಾಗಿ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆಯನ್ನು ಸಾರುವ ಈ ಹಬ್ಬವು ಪ್ರತಿವರ್ಷ ಜನರ ಮನಸ್ಸಿನಲ್ಲಿ ಮರೆಯಲಾಗದ ನೆನಪುಗಳನ್ನು ಮೂಡಿಸುತ್ತದೆ.
Harshitha Gowda
ಪತ್ರಿಕೋದ್ಯಮ ವಿಭಾಗ
SDM College Ujire



